ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ CWRC, CWMA ಆದೇಶ ವಿರೋಧಿಸಿ ರಾಜ್ಯದಲ್ಲಿ ಭುಗಿಲೆದ್ದಿರುವ ರೈತರ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಕನ್ನಡ ಪರ ಸಂಘಟನೆಗಳು ಹಾಗೂ ರೈತಸಂಘಟನೆಗಳು ಮುಂದಾಗಿವೆ. ಹೀಗಾಗಿ ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹಿಸಿ ಆಗಸ್ಟ್ 13 ರಂದು ಅಖಂಡ ಕರ್ನಾಟಕ ಬಂದ್‌ಗೆ ಕನ್ನಡಪರ ಸಂಘಟನೆಗಳು ಕರೆ ನೀಡಿವೆ.

ಇಂದು ಖಾಸಗಿ ಹೋಟೆಲ್‌ನಲ್ಲಿ ಕನ್ನಡ ಒಕ್ಕೂಟಗಳ ಸಭೆ ನಡೆಸಿದ ಬಳಿಕ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj)
ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಆಗಸ್ಟ್ 13 ರಂದು ಅಖಂಡ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿದ್ದಾರೆ. ಅಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ಸಂಪೂರ್ಣ ಕರ್ನಾಟಕ ಬಂದ್‌ಗೆ ಕರೆ ನೀಡಿದ್ದಾರೆ.
ವಿಮಾನಗಳೂ ನಿಲ್ಲಬೇಕು
ಕನ್ನಡಿಗರು ಯಾರು ವಿರೋಧ ಮಾಡದೇ, ನೈತಿಕ ಬೆಂಬಲ ಎನ್ನದೇ ಸಂಪೂರ್ಣ ಬೆಂಬಲ ಕೊಡಬೇಕು. ಆಸ್ಪತ್ರೆ, ಅಂಬುಲೆನ್ಸ್‌ಗೆ ವಿನಾಯಿತಿ ಇದೆ. ಇನ್ನುಳಿದಂತೆ ಸಂಪೂರ್ಣ ಬೆಂಬಲ ಕೊಡಬೇಕು. ರೈತರು ಭಾಗವಹಿಸಬೇಕು. ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿ ಸಂಪೂರ್ಣ ಬೆಂಬಲ ನೀಡಿದೆ, ರಾಜ್ಯ ಸರ್ಕಾರಿನೌಕರರು, ಕಾರ್ಮಿಕರು ಹೋಟೆಲ್ ಸಂಘ, ಎಪಿಎಂಸಿ, ಲಾರಿ ಮಾಲೀಕರು ಆಟೋ ಚಾಲಕರು ಎಲ್ಲರೂ ಬಂದ್‌ಗೆ ಬೆಂಬಲ ಕೊಡ್ತಾರೆ. ಎಲ್ಲರಿಗೂ ಗಂಭೀರವಾಗಿ ಬಂದ್‌ಗೆ ಬೆಂಬಲ ಕೊಡಲು ಕೇಳ್ತಾ ಇದ್ದೇವೆ. ಮಾಲ್‌ಗಳು ಚಿತ್ರ ಮಂದಿರಗಳು, ಬಸ್ ಮಾಲೀಕರು ಎಲ್ಲರ ಜೊತೆಗೂ ಮಾತಾನಾಡಿ ಬಂದ್‌ಗೆ ಬೆಂಬಲ ಕೋರುತ್ತೇವೆ. ಒಲಾ ಉಬರ್ ಎಲ್ಲವೂ ಬಂದ್ ಆಗುತ್ತೆ ಎಂದರಲ್ಲದೇ ವಿಮಾನಗಳೂ ಕೂಡ ನಿಲ್ಲಬೇಕು ಎಂದು ಒತ್ತಾಯಿಸಿದ್ದಾರೆ.
ತಮಿಳುನಾಡು ಸಿಎಂ- ಕರ್ನಾಟಕದ ಸಿಎಂ ಇಬ್ಬರು ಹೀರೋಗಳಾಗೋಣ ಅಂತ ತೀರ್ಮಾನ ಮಾಡಿದಂತೆ ಕಾಣ್ತಿದೆ. ಈಗ ಅವ್ರು ಇಲ್ಲಿ ಬಂದು ನೀರು ಬಿಡಿ ಅಂತಾರಾ? ಸುಪ್ರೀಂ ಕೋರ್ಟ್ ನಿಲುವು ಬಾರದೇ ನಿಮ್ಮ ಮಾತುಕತೆ ಅಜೆಂಡಾ ಏನು..? ರೈತರು ಕನ್ನಡ ಸಂಘಟನೆಯವರನ್ನ ಮೊದಲು ಕರೆಯಿರಿ, ಶಾಸನ ಸಭೆ ತುರ್ತು ಕರೆಯಿರಿ, ಸರ್ವ ಪಕ್ಷಗಳ ಸಭೆ ಯಾಕ್ರೀ ಬೇಕು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆ.3 ರಂದು ಏರ್‌ಪೋರ್ಟ್‌ಗೆ ಮುತ್ತಿಗೆ
ವಿಜಯ್ ಅವರು ಆಗಸ್ಟ್ 3 ರಂದು ಕರ್ನಾಟಕಕ್ಕೆ ಬರುತ್ತಿದ್ದಾರೆ, ಅವರು ನೀರು ಬೇಡ ಅನ್ನೋ ತೀರ್ಮಾನ ಮಾಡಿ ಬಂದ್ರೆ ಸ್ವಾಗತ, ಇಲ್ಲದಿದ್ರೆ ಆಗಸ್ಟ್ 3 ರಂದು ಬೆಂಗಳೂರು ಏರ್‌ಪೋರ್ಟ್‌ಹೆ ಮುತ್ತಿಗೆ ಹಾಕುತ್ತೇವೆ. ಹಾಗಾಗು ವಿಜಯ್ ಅವರು ತಮಿಳುನಾಡಿನಲ್ಲಿಯೇ ತೀರ್ಮಾನ ಬರಬೇಕು, ಇಲ್ಲದಿದ್ರೆ ಕರ್ನಾಟಕಕ್ಕೆ ಬರೋದೇ ಬೇಡ, ಬಂದ್ರೆ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಾಯಿಚಪಲಕ್ಕೆ ಬಂದ್ ಕರೆಯುತ್ತಾರೆ ಅನ್ನೋ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಂತೆಂಥವರು ನನ್ನ ಗೌರವದಿಂದ ನೋಡ್ತಾರೆ. ಈ ರೀತಿಯಾಗಿ ಟೀಕೆ ಸರಿಯಲ್ಲ. ಹೌದು. ನಂಗೆ ಚಟ, ನಿಜಲಿಂಗಪ್ಪ ಕಾಲದಿಂದ ಹೋರಾಟ ಮಾಡಿಕೊಂಡು ಬಂದವನು ನಾನು, ನಾನೇನು ಕಡ್ಲೆಕಾಯಿ ತಿನ್ನೋಕೆ ಬಂದಿಲ್ಲ ಎಂದಿದ್ದಾರೆ.
