ಬೆಂಗಳೂರು: ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ (Karnataka bandh) ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೀದರ್, ಉತ್ತರ ಕನ್ನಡ, ಗದಗ, ಯಾದಗಿರಿ ವಿಜಯಪುರ, ಧಾರವಾಡ ಮತ್ತು ಹಾಸನ ಸೇರಿದಂತೆ ಬಹುತೇಕ ಕಡೆ ಬಸ್, ಆಟೋ ಹಾಗೂ ಖಾಸಗಿ ವಾಹನಗಳ ಸಂಚಾರ ಎಂದಿನಂತೆ ಮುಂದುವರಿದಿದ್ದು, ಅಂಗಡಿ-ಮುಂಗಟ್ಟುಗಳು ಕೂಡ ತೆರೆದಿವೆ.
ಬೀದರ್:
ಜಿಲ್ಲೆಯಲ್ಲಿ ಬಂದ್‌ಗೆ ಯಾವುದೇ ಪರಿಣಾಮ ಕಂಡುಬಂದಿಲ್ಲ. ಬಸ್, ಆಟೋ, ಖಾಸಗಿ ವಾಹನಗಳ ಸಂಚಾರ ಹಾಗೂ ವ್ಯಾಪಾರ-ವಹಿವಾಟು ಎಂದಿನಂತೆ ನಡೆಯುತ್ತಿದೆ. ಹೋಟೆಲ್‌ಗಳು ಕೂಡ ಎಂದಿನಂತೆ ತೆರೆದಿವೆ.
ಉತ್ತರ ಕನ್ನಡ:
ಗಡಿ ಜಿಲ್ಲೆಯಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಾಹನ ಸಂಚಾರ ಸಹಜವಾಗಿದೆ. ಪ್ರಮುಖ ಸಂಘಟನೆಗಳಿಂದ ಬಂದ್‌ಗೆ ಬೆಂಬಲ ಸಿಕ್ಕಿಲ್ಲ.
ಗದಗ:
ಜಿಲ್ಲೆಯಲ್ಲಿ ಬಂದ್‌ನ ಯಾವುದೇ ಪರಿಣಾಮ ಕಂಡುಬಂದಿಲ್ಲ. ಅಂಗಡಿ-ಮುಂಗಟ್ಟುಗಳು, ವ್ಯಾಪಾರ-ವಹಿವಾಟು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಎಂದಿನಂತೆ ನಡೆದಿದೆ. ಯಾವುದೇ ಪ್ರಮುಖ ಪ್ರತಿಭಟನೆ ಕೂಡ ಕಂಡುಬಂದಿಲ್ಲ. ಇದನ್ನೂ ಓದಿ: ಹೊರ ಬರಲ್ಲ ಎಂದು ಹಠ ಹಿಡಿದ ವಾಟಾಳ್ ಮನೆಯಂಗಳದಲ್ಲೇ ವಶ
ಯಾದಗಿರಿ:
ಬಂದ್‌ಗೆ ಯಾವುದೇ ಸಂಘಟನೆಗಳು ಬೆಂಬಲ ನೀಡದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಜನಜೀವನ ಸಹಜವಾಗಿದೆ. ಬಸ್, ಆಟೋ ಹಾಗೂ ಖಾಸಗಿ ವಾಹನಗಳು ಸಂಚರಿಸುತ್ತಿದ್ದು, ಅಂಗಡಿ-ಮುಂಗಟ್ಟುಗಳು ತೆರೆದಿವೆ. ಶಾಲಾ-ಕಾಲೇಜುಗಳಿಗೂ ವಿದ್ಯಾರ್ಥಿಗಳು ಎಂದಿನಂತೆ ತೆರಳುತ್ತಿದ್ದಾರೆ.
ವಿಜಯಪುರ:
ಜಿಲ್ಲೆಯಲ್ಲಿ ಬಂದ್‌ಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರಿಗೆ ಬಸ್‌ಗಳು ಹಾಗೂ ಖಾಸಗಿ ವಾಹನಗಳು ಎಂದಿನಂತೆ ಸಂಚರಿಸುತ್ತಿದ್ದು, ಅಂಗಡಿ-ಮುಂಗಟ್ಟುಗಳು ತೆರೆದಿವೆ. ಬಂದ್ ಹಿನ್ನೆಲೆಯಲ್ಲಿ ಪ್ರಮುಖ ವೃತ್ತಗಳಲ್ಲಿ ಮಾತ್ರ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಧಾರವಾಡ:
ನಗರದಲ್ಲಿ ಕೂಡ ಬಂದ್‌ನ ಪರಿಣಾಮ ಕಾಣಿಸಲಿಲ್ಲ. ಬಸ್‌ಗಳು, ಖಾಸಗಿ ವಾಹನಗಳು ಹಾಗೂ ಜನರ ಸಂಚಾರ ಎಂದಿನಂತೆ ಇದೆ. ಬಹುತೇಕ ಅಂಗಡಿ-ಮುಂಗಟ್ಟುಗಳು ತೆರೆದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಕೆಲವೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಹಾಸನ:
ಇಲ್ಲಿಯೂ ಕೂಡ ಬಂದ್‌ಗೆ ಯಾವುದೇ ಬೆಂಬಲ ಕಂಡುಬಂದಿಲ್ಲ. ಜನಜೀವನ ಸಹಜವಾಗಿದ್ದು, ಬಸ್ ಮತ್ತು ಆಟೋ ಸಂಚಾರಕ್ಕೆ ಯಾವುದೇ ವ್ಯತ್ಯಯವಾಗಿಲ್ಲ. ಹಾಸನದಿಂದ ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ವಿವಿಧ ಭಾಗಗಳಿಗೆ ಬಸ್‌ಗಳು ಎಂದಿನಂತೆ ಸಂಚರಿಸುತ್ತಿವೆ. ಒಟ್ಟಾರೆ, ಈ ಜಿಲ್ಲೆಗಳಲ್ಲಿ ಕರ್ನಾಟಕ ಬಂದ್‌ಗೆ ಹೆಚ್ಚಿನ ಬೆಂಬಲ ಸಿಗದ ಹಿನ್ನೆಲೆಯಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ಮುಂದುವರಿದಿದೆ. ಇದನ್ನೂ ಓದಿ: ಹೋಟೆಲ್ ಬಳಿಕ ಈಗ ಹಾಸ್ಟೆಲ್, ಪಿಜಿಗಳ ಸರದಿ – ಫುಡ್ ಟೆಸ್ಟ್‌ಗೆ ಖಾದರ್ ಸೂಚನೆ
ಬಾಗಲಕೋಟೆ:
ಬೆಳಿಗ್ಗೆಯಿಂದಲೇ ನಗರದಲ್ಲಿ ಸಾರಿಗೆ ವ್ಯವಸ್ಥೆ ಸಹಜ ಸ್ಥಿತಿಯಲ್ಲಿದ್ದು, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ಗಳು ಹಾಗೂ ಆಟೋರಿಕ್ಷಾಗಳು ಎಂದಿನಂತೆ ಸಂಚರಿಸುತ್ತಿವೆ.

