Connect with us

Crime

ಕಾರ ಹುಣ್ಣಿಮೆಯಂದು ಎತ್ತು ಗುದ್ದಿ, ಸೈನಿಕನಾಗುವ ಕನಸು ಹೊತ್ತ ಯುವಕ ಸಾವು

Published

on

Share this

ಗದಗ: ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಕಾರಹುಣ್ಣಿಮೆ ಪ್ರಯುಕ್ತ ಕರಿಹರಿಯುವ ಹಬ್ಬದ ಸಂದರ್ಭದಲ್ಲಿ ಎತ್ತು ಗುದ್ದಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ.

ಕೋವಿಡ್-19 ಹಿನ್ನೆಲೆ ಕಾರಹುಣ್ಣಿಮೆ ದಿನ ಎತ್ತುಗಳನ್ನು ಓಡಿಸುವ ಹಬ್ಬ ಆಚರಣೆ ಮಾಡಬಾರದು ಎಂದು ತಾಲೂಕಾಡಳಿತ, ಪೊಲೀಸ್ ಮತ್ತು ಗ್ರಾ.ಪಂ ನವರು ಸೂಚಿಸಿದ್ದರು. ಸರ್ಕಾರದ ನಿಯಮ ಉಲ್ಲಂಘಿಸಿ ಗ್ರಾಮದಲ್ಲಿ ಗುರುವಾರ ಸಂಜೆ ಕರಿ ಹರಿಯುವ ಹಬ್ಬ ಆಚರಣೆ ಮಾಡಿದ್ದರು. ಈ ವೇಳೆ ರಭಸದಿಂದ ಓಡಿ ಬಂದ ಎತ್ತೊಂದು ಗ್ರಾಮದ ಯುವಕ ಕಿರಣಕುಮಾರ್ ಮಲಕಾಜಪ್ಪ ನೆರ್ತಿ (22) ಎಂಬಾತನಿಗೆ ಬಲವಾಗಿ ಗುದ್ದಿದೆ. ತೀವ್ರ ಗಾಯಗೊಂಡ ಯುವಕನನ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ಮೃತ ಯುವಕ ಪದವೀಧರನಾಗಿದ್ದು, ತಂದೆ ನಿವೃತ್ತ ಸೈನಿಕ. ಯುವಕನೂ ತಂದೆಯ ಸೈನಿಕ ಕೋಟಾದಡಿ ಸೈನ್ಯ ಸೇವೆ ಸೇರಲು ದೈಹಿಕ ಪರೀಕ್ಷೆಯಲ್ಲಿ ಪಾಸಾಗಿ ಲಿಖಿತ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದ ಎನ್ನಲಾಗಿದೆ. ಆದರೆ ವಿಧಿಯ ಆಟಕ್ಕೆ ಸೈನಿಕನಾಗುವ ಕನಸು ಹೊತ್ತ ಯುವಕ ಮಸನ ಸೇರಿದ್ದು ವಿಪರ್ಯಾಸ. ಯುವಕನ ಸಾವಿನ ಸುದ್ದಿ ತಿಳಿದು ಇಡೀ ಊರಿಗೆ ಊರೆ ಶೋಕಸಾಗರದಲ್ಲಿ ಮುಳುಗಿದಂತಿದೆ.

ಸೂರಣಗಿ ಗ್ರಾಮದ ದೊಡ್ಡ ಆಂಜನೇಯ ದೇವರ ಗುಡಿಯ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ನಿನ್ನೆ ಕೋವಿಡ್ ನಿಯಮ ಉಲ್ಲಂಘಿಸಿ ಎತ್ತುಗಳನ್ನು ಓಡಿಸುವ ಹಬ್ಬವನ್ನು ಆಯೋಜಿಸಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಜನರೂ ಸೇರಿದ್ದರು. ಕರಿ ಹರಿಯುವ ಹಬ್ಬದಲ್ಲಿ ರಭಸದಿಂದ ಓಡಿ ಬಂದ ಎತ್ತು ತನ್ನನ್ನು ಹಿಡಿಯಲು ಪ್ರಯತ್ನಿಸಿದ ಯುವಕ ಕಿರಣ್ ಕುಮಾರ್ ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಬಲವಾಗಿ ಗುದ್ದಿದ ಪರಿಣಾಮ, ಯುವಕ ಗಂಭೀರವಾಗಿ ಗಾಯಗೊಂಡಿದ್ದ.

ಯುವಕ ಸಾವನ್ನಪ್ಪಿದ್ದರಿಂದ ನಿಯಮ ಮೀರಿ ಕರಿ ಹರಿಯುವ ಹಬ್ಬದಲ್ಲಿ ಪಾಲ್ಗೊಂಡಿದ್ದ ಆರೋಪದಲ್ಲಿ ಗ್ರಾಮದ 21 ಜನರ ವಿರುದ್ಧ ಕೋವಿಡ್ ನಿಯಮಾನುಸಾರ ಪ್ರಕರಣ ದಾಖಲಿಸಲಾಗಿದೆ. ಈ ಕುರಿತು ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *

Advertisement