ನಲ್ಮೆಯ ಗೆಳೆಯ
ಹೃದಯಕ್ಕೆ ಪ್ರೀತಿಯ ಗಂಧದ ಚೆಂದದ ಪರಿಮಳ ಇಟ್ಟು, ಕಣ್ಣಿಗೆ ಕಾಣದಂತೆ ಎಲ್ಲಿ ಮಾಯವಾದೆ? ಯಾರು ನೀನು? ಎದೆ – ಎದೆಯ ಭಾವಗಳ ನಡುವೆಯೂ ಯಾಕೆ ಈ ಅಪರಿಚಿತತೆ ನಮಗೆ?
ಕಂಡು ಕಾಣದಂತೆ, ನೋಡಿಯೂ ನೋಡದಂತೆ, ನಕ್ಕು ನಗದಂತೆ ಸಾಗುವ ನಿನ್ನ ಒಲವಿನ ಕಳ್ಳಾಟ ಅದ್ಯಾಕೆ? ಓಲವಿಗಾಗಿ ಅದೆಷ್ಟು ಕೈ ಚಾಚಿದ್ದೇನೆ, ಕಾಣ್ತಿಲ್ವಾ ನಿನಗೆ? ಕೈಚಾಚಿದಷ್ಟು ಯಾಕೆ ದೂರ ಆಗುವಷ್ಟು ಮರಿಚಿಕೆ ಆಗೋದು ನೀನು?
ನಾನೆಲ್ಲೋ ಕಳೆದುಹೋಗಿದ್ದೇನೆ ಅನ್ಸುತ್ತೆ ಕಣೋ. ನನ್ನನ್ನು ಕದ್ದವನು ನೀನೇ ಅಂತ ಗೊತ್ತು. ಏಕಾಂತದಲ್ಲಿ ಕದ್ದು ಮುಚ್ಚಿ ಬಿಗಿದಪ್ಪುವ ನಿನ್ನ ತೋಳುಗಳು ನಿಜವೇ ಆಗಬೇಕಿತ್ತು! ಅಂತಹ ನೂರು ಆಹ್ವಾನ ನನ್ನ ಬಳಿ ಇವೆ. ಅವೆಲ್ಲವನ್ನೂ ನಿನಗೆ ಹೇಗೆ ತಲುಪಿಸಲಿ?
ಈ ಎಲ್ಲಾ ಮಾತುಗಳನ್ನು ಎದೆಯಾಳದಿಂದಲೇ ಎಂದೋ ನಿನಗೆ ತಲುಪಿಸಿಯಾಗಿದೆ. ಮತ್ತೇನು ಬಾಕಿ ಇದೆ ಹೇಳು, ಹೇಳೋಕೆ? ಈ ಪದಗಳು, ಪತ್ರ ಎಲ್ಲಾ ಔಪಚಾರಿಕ.. ಎದೆಯ ಅಂಚೆ ಪೆಟ್ಟಿಗೆಗೆ ಬೀಳುವ ಪತ್ರಗಳಿಗೆ ಯಾವ ಕಾಗದವೂ ಬೇಡ, ಯಾವ ಶಾಯಿಯೂ ಬೇಡ. ಆದರೂ ಈ ಪತ್ರ ಬರೆಯಬೇಕು ಅನ್ಸಿದ್ದು, ನೀನು ನನ್ನವನಾಗು ಅಂತ ನೇರವಾಗಿ ಕೇಳೋಕೆ.
ಮನೆಯಲ್ಲಿ ನನಗಾಗಿ ಹುಡುಗನನ್ನು ಹುಡುಕ್ತಾ ಇದಾರೆ. ನೀನು ಯಾರನ್ನಾದ್ರೂ ಪ್ರೀತಿಸ್ತಿದಿಯಾ ಅಂತಾನೂ ಕೇಳ್ತಿದಾರೆ. ನೋಡು ತುಂಬಾ ತಡ ಮಾಡ್ಬೇಡ. ನಾನು ಅವರಿಗೆ ಏನು ಉತ್ತರ ಹೇಳಲಿ?
ಇಂತಿ
ನಿನ್ನೊಲವಿನ ಉತ್ತರಕ್ಕಾಗಿ ಕಾದು ಕುಳಿತವಳು

