ನವದೆಹಲಿ: ಭಾರತದಲ್ಲಿ ಅಕ್ಕಿ ಬೆಳೆಯಲು (ಭತ್ತದ ಬೆಳೆ) ಅಪಾರ ಪ್ರಮಾಣದ ನೀರು ಬೇಕಾಗುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಐಐಟಿ ಮದ್ರಾಸ್ ‘ನಿಖರ ಕೃಷಿ’ (Precision Agriculture) ತಂತ್ರಜ್ಞಾನದತ್ತ ಗಮನ ಹರಿಸುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ಪ್ರೊ. ವಿ. ಕಾಮಕೋಟಿ ತಿಳಿಸಿದ್ದಾರೆ.
ಭಾರತದಲ್ಲಿ 1 ಕೆ.ಜಿ. ಅಕ್ಕಿ ಬೆಳೆಯಲು ಸರಾಸರಿ 1,500 ರಿಂದ 2,000 ಲೀಟರ್ ನೀರು ಬೇಕಾಗುತ್ತದೆ. ಪಂಜಾಬ್ ಮತ್ತು ಹರಿಯಾಣದಂತಹ ಪ್ರದೇಶಗಳಲ್ಲಿ ಭೂಗರ್ಭಜಲದ ಹೆಚ್ಚಿನ ಬಳಕೆಯಿಂದ ಈ ಪ್ರಮಾಣ 2,270 ರಿಂದ 2,672 ಲೀಟರ್‌ವರೆಗೆ ಏರಿಕೆಯಾಗುತ್ತದೆ ಎಂದು ವಿವರಿಸಿದ್ದಾರೆ.

ನೀರಿನ ಬಳಕೆ ಕಡಿಮೆ ಮಾಡುವುದು ಹೇಗೆ?
ಐಐಟಿ ಮದ್ರಾಸ್‌ನ ನಿಖರ ಕೃಷಿ ಯೋಜನೆಯಲ್ಲಿ ಮಣ್ಣಿನ ತೇವಾಂಶ ಅಳೆಯುವ ಸೆನ್ಸರ್‌ಗಳು, ಅಗತ್ಯಕ್ಕೆ ತಕ್ಕಂತೆ ನೀರು ಪೂರೈಸುವ ನೀರಾವರಿ ವ್ಯವಸ್ಥೆ ಹಾಗೂ ಉಪಗ್ರಹ ಮತ್ತು ಡ್ರೋನ್ ಚಿತ್ರಗಳ ಬಳಕೆಗೆ ಒತ್ತು ನೀಡಲಾಗುತ್ತಿದೆ. ಅಕ್ಕಿ ಬೆಳೆಯಲ್ಲಿ ‘Alternate Wetting and Drying’ (ಪರ್ಯಾಯವಾಗಿ ಒದ್ದೆಯಾಗುವಿಕೆ ಮತ್ತು ಒಣಗುವಿಕೆ) ವಿಧಾನ ಅಳವಡಿಸುವುದರಿಂದ ಹೊಲವನ್ನ ಸದಾ ನೀರಿನಲ್ಲಿ ಮುಳುಗಿಸಿಡುವ ಬದಲು ಅಗತ್ಯವಿದ್ದಾಗ ಮಾತ್ರ ನೀರು ನೀಡಬಹುದು. ಇದರಿಂದ ನೀರಿನ ಬಳಕೆ ಗಣನೀಯವಾಗಿ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಕಾಮಕೋಟಿ ತಿಳಿಸಿದ್ದಾರೆ.
ದೇಶದ ನೀರಿನ ಭದ್ರತೆಗೆ ಮಹತ್ವ
ಭಾರತದಲ್ಲಿ ಕೃಷಿಯೇ ಬಹುಪಾಲು ಸಿಹಿನೀರನ್ನ ಹೀರಿಕೊಳ್ಳುತ್ತಿದೆ. ಅಕ್ಕಿ ಮತ್ತು ಕಬ್ಬಿನಂತಹ ನೀರು ಹೆಚ್ಚು ಬೇಕಾಗುವ ಬೆಳೆಗಳ ಕೃಷಿಯಲ್ಲಿ ನೀರಿನ ಬಳಕೆಯನ್ನು ಕಡಿಮೆ ಮಾಡುವುದು ಭವಿಷ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಐಐಟಿ ಮದ್ರಾಸ್‌ನ ತಂತ್ರಜ್ಞಾನ, ಸೆನ್ಸರ್, ಡೇಟಾ ಸೈನ್ಸ್ ಮತ್ತು ಕೃತಕ ಬುದ್ಧಿಮತ್ತೆಯ ಪರಿಣತಿಯನ್ನು ಕೃಷಿಗೆ ಬಳಸುವ ಮೂಲಕ ಕಡಿಮೆ ನೀರಿನಲ್ಲಿ ಉತ್ತಮ ಇಳುವರಿ ಪಡೆಯುವ ಹೊಸ ಮಾರ್ಗ ರೂಪಿಸುವ ಗುರಿ ಹೊಂದಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಒಂದು ವೇಳೆ ಈ ಪ್ರಯತ್ನ ಯಶಸ್ವಿಯಾದರೆ, ರೈತರ ಉತ್ಪಾದಕತೆಯ ಜೊತೆಗೆ ದೇಶದ ಭೂಗರ್ಭಜಲ ಸಂರಕ್ಷಣೆಯಲ್ಲೂ ಮಹತ್ವದ ಬದಲಾವಣೆ ತರಬಹುದಾಗಿದೆ.

