ಹಾಯ್ ಚಂದ್ರನ ಚೂರು!
ನೀನು ಹೃದಯಕ್ಕೆ ಇಳಿದಿದ್ದು ಮಲ್ಲಿಗೆ ಹೂ ಅರಳುವ ಹೊತ್ತಲ್ಲಿ! ಆ ಸಂಜೆ ದರ್ಗಾದಿಂದ ನಾನು ವಾಪಸ್ ಆಗುವಾಗ ನಿನ್ನ ಮನೆ ಅಂಗಳದಲ್ಲಿ ಪಾರಿವಾಳಗಳಿಗೆ ಕಾಳು ಹಾಕ್ತಿದ್ದೆ ನೀನು. ನನ್ನನ್ನ ನೋಡಿಯೂ ನೋಡದಂತೆ ತಲೆ ಕೆಳಗೆ ಹಾಕಿಕೊಂಡು ನಿನ್ನ ಕೆಲಸ ಮುಂದುವರಿಸಿದ್ದೆ. ಅದ್ಯಾಕೋ ಸ್ವಲ್ಪ ದೂರ ಹೋದಾಗ ಹಿಂತಿರುಗಿ ನೋಡ್ಬೇಕು ಅನ್ನಿಸ್ತು. ನೋಡಿದ್ರೆ.. ನೀನು ಕದ್ದು ನನ್ನನ್ನ ನೋಡ್ತಿದ್ದೆ. ಅದಾದ ಮೇಲೆ ನೀನು ಕಾಣಿಸ್ತಿಯ ಅಂತ ಅದೇ ರಸ್ತೆಯಲ್ಲಿ ನನ್ನ ಓಡಾಟದ ಸಂಖ್ಯೆಯೂ ಹೆಚ್ಚಾಯ್ತು!
ನೀನು ಎದುರಿಗೆ ಸಿಕ್ಕಾಗಲೆಲ್ಲ ಸುಮ್ನೆ ಏನಾದ್ರೂ ನೆಪ ಮಾಡ್ಕೊಂಡು ಮಾತಾಡಿಸ್ತಿದ್ದೆ. ಆಗೆಲ್ಲ ಪರದೆಗಳ ನಡುವೆ ಕತ್ತಲೆ ಮುಚ್ಚಿದ ಆಕಾಶದಲ್ಲಿ ಎರಡು ನಕ್ಷತ್ರದಂತ ಕಣ್ಣುಗಳು, ಬಿದಿಗೆ ಚಂದ್ರನಂತೆ ಹೊಳೆವ ನಿನ್ನ ಸಣ್ಣ ಮುಖ ಮಾತ್ರ ಕಾಣ್ತಿತ್ತು. ಎಷ್ಟೋ ಸಲ ಮುಖ ತೋರ್ಸೇ ಅಂತ ಹೇಳಿದ್ರೆ ಏಯ್ ಅಂತ ಹೊರಟು ಬಿಡ್ತಿದ್ದೆ.
ದರ್ಗಾದಲ್ಲಿ ನಡೆವ ವಿಶೇಷ ಪ್ರಾರ್ಥನೆಗಳಿಗೆ ಬರುತ್ತಿದ್ದ ನಿನ್ನನ್ನ ಕಣ್ತುಂಬಿಕೊಳ್ಳೋಕೆ ಊರಿಗೆ ಮುಂಚೆ ಬಂದು ಕೂರ್ತಿದ್ದೆ. ಆಗೆಲ್ಲ ನನಗೆ ನಿನ್ನೊಂದಿಗೆ ಮಾತಾಡೋಕೆ ಏಕಾಂತ ಬೇಕು ಅಂತಾನೇ ಪ್ರಾರ್ಥಿಸ್ತಿದ್ದೆ. ಕೊನೆಗೂ ಆ ದಿನ ಬಂತು.. ಆದಿನ ನನಗೆಷ್ಟು ಖುಷಿ ಕೊಟ್ಟಿತ್ತು ಅಂದ್ರೆ, ಪ್ರಪಂಚದ ಎಲ್ಲಾ ಖುಷಿಗಳನ್ನು ಒಟ್ಟು ಹಾಕಿದ್ರೂ ಅದಕ್ಕೆ ನನ್ನ ಆ ಸಂಭ್ರಮ ಸರಿ ಆಗೋಕೆ ಸಾಧ್ಯವೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಸಂಭ್ರಮಿಸಿದ್ದೆ.

ಅವತ್ತು ನನ್ನ ಫ್ರೆಂಡ್ ಇಲ್ಲೇ ಹೋಗ್ಬರ್ತಿನಿ ಅಂತ ನನ್ನ ಕೂರಿಸಿ ಹೋಗಿದ್ದ. ಸುಮಾರು ಒಂದು ಗಂಟೆ ಆದ್ರೂ ಪುಣ್ಯಾತ್ಮ ಬಂದಿರಲಿಲ್ಲ. ಅವನಿಗಾಗಿ ಕಾದು ಕಾದು ಸಾಕಾಗಿತ್ತು. ಅಷ್ಟರಲ್ಲೇ ಕೈಯಲ್ಲೊಂದು ಬ್ಯಾಗ್ ಹಿಡ್ಕೊಂಡು ನೀನು ಬರ್ತಿರೋದು ನೋಡ್ದೇ. ನಾನಿರೋ ಅಂಗಡಿಗೆ ಬಂದಿದ್ರೆ ಅಂತ ಅಂದ್ಕೊಳ್ತಾ ಇರ್ಬೇಕಾದ್ರೆ, ʻ1 ಲೀಟರ್ ಹಾಲು ಕೊಡಿʼ ಅಂತ ಬಂದಿದ್ದೆ ನೀನು! ಹಾಲು ಕೊಡುವಾಗ ಕೈ ಹಿಡ್ಕೊಂಡು ಮಾತಾಡ್ಸೋಣ ಅನ್ನೋ ಯೋಚನೆ ಬಂತು.. ಆದ್ರೆ ಧೈರ್ಯ ಸಾಕಾಗಲಿಲ್ಲ.
ಆದ್ರೆ ನೀನೇ ದುಡ್ಡು ಕೊಡದೇ ಸತಾಯಿಸಿ, ಮಾತಾಡೋ ಹಾಗೆ ಮಾಡ್ದೆ. ಆ ಮಾತು ಎಲ್ಲೋ ಹೋಗಿ ಕೊನೆಗೆ ಪ್ರೀತಿಯ ವಿಚಾರಕ್ಕೆ ಬಂದು ತಲುಪಿತ್ತು! ʻನೀನೇ ನನಗಿಂತ ಹೆಚ್ಚು ಹತ್ತಿರದಿಂದ ದೇವರನ್ನ ಪ್ರಾರ್ಥನೆ ಮಾಡ್ತಿಯ ಅಲ್ವಾ.. ದೇವ್ರ ಹತ್ರ ನೀನೇ ನನ್ನನ್ನ ಬೇಡ್ಕೋ..ʼ ಅಂತ ಹೇಳಿ ಮುಕ್ತಾಯವಿಲ್ಲದ ಮಾತೊಂದನ್ನ ಆಡಿ ಹೊರಟು ಹೋಗಿದ್ದೆ.
ಈಗ ಆ ಪ್ರಾರ್ಥನೆ ಫಲಿಸುವ ಹೊತ್ತೇನೋ ಎಂಬ ನಂಬಿಕೆ ನನ್ನದು. ಈಗೊಂದು ಕೆಲಸ ಅಂತ ಕೈಯಲ್ಲಿದೆ. ನಿನ್ನ ನಿರೀಕ್ಷೆಗಳಂತೆ ನಾನಿದ್ದೀನಿ ಅನ್ನೋ ಧೈರ್ಯ. ನಿನ್ನೊಳಗೂ ಅದೇ ಆಸೆಗಳು, ಒಲವು ಈಗಲೂ ತುಂಬಿದೆ ಅಂತ ನನ್ನ ಅಂತರಾಳ ಹೇಳ್ತಿದೆ. ನಿನ್ನ ಒಪ್ಪಿಗೆ ಇದ್ರೆ ಮನೆಯಲ್ಲಿ ಮಾತಾಡ್ಲಾ?
ನಿನ್ನ ಒಲವಿನ ಒಪ್ಪಿಗೆಗಾಗಿ ಕಾಯುವ ಪ್ರೇಮ ಫಕೀರ

