ಚಿಕ್ಕಮಗಳೂರು: ಶಾಶ್ವತ ಬರಗಾಲಕ್ಕೆ ತುತ್ತಾದ ಕಡೂರು (Kadur) ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೆ ಚಿಕ್ಕಮಗಳೂರು ಮಾಜಿ ಶಾಸಕ ವೈ.ಎಸ್.ವಿ.ದತ್ತ (Y.S.V. Dutta) ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕಡೂರಿನಲ್ಲಿ ಪಾದಯಾತ್ರೆ ನಡೆಸಿ ಅವರು ಮಾತನಾಡಿದರು, ಈ ವೇಳೆ, ಕಡೂರು ತಾಲೂಕನ್ನು ಮೊದಲ ಪಟ್ಟಿಯಲ್ಲೇ ಬರಪೀಡಿತ ತಾಲೂಕು ಎಂದು ಘೋಷಿಸದೇ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಕಳೆದ 40 ದಿನಗಳಿಂದ ನಿರಂತರವಾಗಿತಾಲೂಕಿನ ಏಳು ಹೋಬಳಿಗಳ ನೂರಾರು ಹಳ್ಳಿಗಳಲ್ಲಿ ನಿರಂತರ ಪ್ರವಾಸ ಮಾಡಿ, ಒಣಗಿದ ಕೆರೆಕಟ್ಟೆಗಳು, ಮೇವಿಲ್ಲದೆ ಸಾಯುತ್ತಿರುವ ಜಾನುವಾರುಗಳು ಹಾಗೂ ಕುಡಿಯುವ ನೀರಿಗಾಗಿ ಜನರ ಪರದಾಟದ ನೈಜ ಸ್ಥಿತಿ ಬಗ್ಗೆ ಸಮೀಕ್ಷೆ ನಡೆಸಿ ಸರ್ಕಾರದ ಗಮನಕ್ಕೆ ತರಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಶಾಸಕರು ಕೂಡ ತಾಲೂಕಿನ ಸ್ಥಿತಿಗತಿ ವೀಕ್ಷಿಸಿದ್ದರು. ಆದರೆ ಬರಪೀಡಿತ ತಾಲೂಕು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ:ಈ ಬಾರಿ ದಸರಾ ಮೆರವಣಿಗೆಯ ರೂಪವನ್ನೇ ಬದಲಾಯಿಸುತ್ತೇವೆ: ಸಿಎಂ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಕಡೂರಿನಲ್ಲಿ ಅದೇ ಪಕ್ಷದ ಶಾಸಕರು ಇರೋದ್ರಿಂದ ಕಡೂರನ್ನ ಸುಲಭವಾಗಿ ಮೊದಲ ಪಟ್ಟಿಯಲ್ಲೇ ಬರಪೀಡಿತ ತಾಲೂಕು ಎಂದು ಘೋಷಿಸುತ್ತಾರೆಂಬ ಭರವಸೆ ಇತ್ತು. ಆದರೆ, ಚಿಕ್ಕಮಗಳೂರು ಜಿಲ್ಲೆಯಲ್ಲೇ ತೀವ್ರ ಬರದ ಪರಿಸ್ಥಿತಿ ಎದುರಿಸುತ್ತಿರುವ ಕಡೂರನ್ನ ಕೈಬಿಟ್ಟು, ನರಸಿಂಹರಾಜಪುರ ಮತ್ತು ಕೊಪ್ಪ ತಾಲೂಕುಗಳನ್ನು ಮೊದಲ ಪಟ್ಟಿಯಲ್ಲೇ ಬರದ ತಾಲೂಕು ಪಟ್ಟಿಗೆ ಸೇರಿಸಿರುವುದು ಕಡೂರಿನ ಜನರಿಗೆ ಹಾಗೂ ರೈತರಿಗೆ ಮಾಡಿದ ದೊಡ್ಡ ಅವಮಾನವಾಗಿದೆ.
ಕಡೂರಿನ ಜನರು ಎಷ್ಟೇ ತೊಂದರೆ ಅನುಭವಿಸಿದರೂ ಸಹಿಸಿಕೊಳ್ಳುತ್ತಾರೆ ಎಂಬ ಉದಾಸೀನ ಭಾವನೆ ಸರ್ಕಾರಕ್ಕಿದೆ. ಹಿಂದೆಯೂ ಪಾದಯಾತ್ರೆ ನಡೆಸಿದ ಮೇಲೆಯೇ ಸರ್ಕಾರ ಕಡೂರನ್ನು ಬರಪೀಡಿತ ಎಂದು ಘೋಷಿಸಿತ್ತು. ಈಗ ಅನಿವಾರ್ಯವಾಗಿ 7ನೇ ಬಾರಿ ಪಾದಯಾತ್ರೆ ಮೂಲಕ ಹೋರಾಟಕ್ಕಿಳಿಯಬೇಕಾಗಿದೆ ಎಂದು ಸರ್ಕಾರ ನಿರ್ಲಕ್ಷ್ಯ ಧೋರಣೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಅನ್ಯ ರಾಜ್ಯಕ್ಕೆ ಅಕ್ರಮವಾಗಿ ಪಡಿತರ ಸಾಗಾಟ; 9 ಲಕ್ಷಕ್ಕೂ ಹೆಚ್ಚು ಮೌಲ್ಯದ ಅಕ್ಕಿ ವಶಕ್ಕೆ
