ಬೆಂಗಳೂರು: ಗ್ರಾಮೀಣಾಭಿವೃದ್ಧಿ ಇಲಾಖೆ ಎಇಇ ಅಕ್ರಮ ಖಂಡಿಸಿ ಕೆಪಿಎಸ್‌ಸಿ (KPSC) ಹಾಗೂ ಕೆಪಿಸಿಸಿ (KPCC) ಕಚೇರಿ ಎದುರು ಜೆಡಿಎಸ್ ಪ್ರತಿಭಟನೆ (JDS Protest) ನಡೆಸಿ, ಹೈಡ್ರಾಮಾ ಮಾಡಿದ್ದಾರೆ.
ಕೆಪಿಎಸ್‌ಸಿ ಅಕ್ರಮ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಎಇಇ ಹುದ್ದೆಗಳ ಅಕ್ರಮವನ್ನು ಖಂಡಿಸಿ ಜೆಡಿಎಸ್ ಮಾಜಿ ಎಂಎಲ್‌ಸಿ ಜಿಬಿಎ ಅಧ್ಯಕ್ಷ ರಮೇಶ್ ಗೌಡ ನೇತೃತ್ವದಲ್ಲಿ ಕಾರ್ಯಕರ್ತರು ಹಾಗೂ ನಾಯಕರು ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಪ್ರತಿಭಟನೆಯಲ್ಲಿ ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇದನ್ನೂ ಓದಿ: KPSC Scam | ಕಡ್ಲೆಪುರಿಯಂತೆ ಸಿಕ್ಕಸಿಕ್ಕವರಿಗೆ ಪ್ರಶ್ನೆಪತ್ರಿಕೆ ಸೇಲ್ – ಕೋಟಿಗೆ ಶುರುವಾದ ಡೀಲ್ ಕೊನೆಗೆ 40 ಲಕ್ಷಕ್ಕೆ ಇಳಿಕೆ!
ಕೆಪಿಸಿಸಿ ಕಚೇರಿ ರಸ್ತೆಯಲ್ಲಿ ಬ್ಯಾರಿಗೇಡ್‌ಗಳನ್ನು ಹಾಕಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಈ ವೇಳೆ ಕಚೇರಿಗೆ ಮುತ್ತಿಗೆ ಹಾಕಲು ಹೊರಟ ಜೆಡಿಎಸ್ ಕಾರ್ಯಕರ್ತರನ್ನು ಪೊಲೀಸರು ತಡೆದಾಗ ವಾಗ್ವಾದ ನಡೆಯಿತು. ಬಳಿಕ ಪಿಸಿಸಿ ಕಚೇರಿಗೆ ನುಗ್ಗಲು ಯತ್ನಿಸಿದ ಜೆಡಿಎಸ್ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು.
ಮತ್ತೊಂದೆಡೆ, ಕೆಪಿಎಸ್‌ಸಿ ಅಕ್ರಮ ಖಂಡಿಸಿ ಜೆಡಿಎಸ್ ಕಾನೂನು ಘಟಕದಿಂದ 12 ಗಂಟೆಗೆ ಕೆಪಿಎಸ್‌ಸಿ ಕಚೇರಿಗೆ ಮುತ್ತಿಗೆ ಹಾಕಲು ಸಿದ್ಧತೆ ನಡೆಸಲಾಗಿತ್ತು. ಈ ಹಿನ್ನೆಲೆ ಕೆಪಿಎಸ್‌ಸಿ ಕಚೇರಿ ಬಳಿಯೂ ಸಹ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಈ ವೇಳೆ ಕೆಪಿಎಸ್‌ಸಿ ಕಚೇರಿ ಬಳಿ ಆಗಮಿಸಿದ MLC ಶರವಣ, ಪ್ರತಿಭಟನೆಗೆ ಅವಕಾಶ ಕೊಡುವಂತೆ ಒತ್ತಾಯಿಸಿದರು. ಆದರೆ ಇಲ್ಲಿ ಅವಕಾಶ ಇಲ್ಲ ಎಂದ ಪೊಲೀಸರೊಂದಿಗೆ ಮಾತಿನ ಚಕಮಕಿ ಏರ್ಪಟ್ಟಿತು. ರಸ್ತೆ ಮಧ್ಯೆ ಕೂತು ಪ್ರತಿಭಟನೆಗೆ ಮುಂದಾದ ಶರವಣ ಅವರನ್ನು ಪೊಲೀಸರು ವಶಕ್ಕೆ ಪಡೆದು, ಪೊಲೀಸ್ ಜೀಪ್‌ನಲ್ಲಿ ಕರೆದುಕೊಂಡು ಹೋದರು.ಇದನ್ನೂ ಓದಿ: KPSC ಹಗರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿಕೆಟ್ ಪತನವಾಗುತ್ತೆ – ಆರ್. ಅಶೋಕ್ ಹೊಸ ಬಾಂಬ್
