– Offer Closes Soon – ಕೆಪಿಎಸ್‌ಸಿಯ ಇನ್ನಷ್ಟು ಕರ್ಮಕಾಂಡ ಬಯಲು
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (KPSC Scam)ದ ಪಶುವೈದ್ಯಕೀಯ ನೇಮಕಾತಿ ಹಗರಣ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ತಂಡ ಮತ್ತಷ್ಟು ಕರ್ಮಕಾಂಡಗಳನ್ನ ಬಯಲಿಗೆಳೆದಿದೆ. ತನಿಖೆ ವೇಳೆ ಸೀಜನ್ ಆಫರ್ ಸೇಲ್ ಅನ್ನೋ ರೀತಿ ಸರ್ಕಾರಿ ಹುದ್ದೆಯನ್ನ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ಹೌದು. ಪಶುವೈದ್ಯಾಧಿಕಾರಿ ಹುದ್ದೆಗೆ ಕಳೆದ ಜುಲೈನಲ್ಲಿ ಅಧಿಸೂಚನೆ ಪ್ರಕಟವಾಗಿತ್ತು. ಆಗ ಜುಲೈ–ಆಗಸ್ಟ್‌ನಲ್ಲಿ ಇದೇ ಹುದ್ದೆಗೆ 1.10 ಕೋಟಿವರೆಗೆ ಡೀಲ್ ನಡೆದಿತ್ತು ಎನ್ನಲಾಗಿದೆ. ನಿರೀಕ್ಷಿತ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಸಿಗದ ಹಿನ್ನೆಲೆ ಡೀಲ್ ಮೊತ್ತ 90 ಲಕ್ಷ ರೂ. ನಂತರ 80 ಲಕ್ಷ ರೂ.ಗೆ ಇಳಿಕೆ ಮಾಡಲಾಗಿತ್ತು. ಕೊನೆಗೆ ಇದೇ ಹುದ್ದೆಯನ್ನ 40 ಲಕ್ಷ ರೂ.ಗೆ ಮಾರಾಟ ಮಾಡಲು ಮಾತುಕತೆ ನಡೆದಿತ್ತು ಎನ್ನುವ ಸ್ಫೋಟಕ ರಹಸ್ಯ ಬಯಲಾಗಿದೆ.

ಕಳೆದ ಜನವರಿ 9ರ ಪರೀಕ್ಷೆಗೆ ಮುನ್ನವೇ, ಡಿಸೆಂಬರ್ 25ರ ವೇಳೆಗೆ ಡೀಲ್ ಕುದುರಿಸಲು ಪ್ರಯತ್ನ ನಡೆದಿತ್ತು. 2025ರ ಡಿಸೆಂಬರ್ 20 ರಂದು ಮೊಹಮ್ಮದ್ ಸುಹೇಲ್ ಬಂಡೇಕೋಳ್‌ಗೆ 40 ಲಕ್ಷಕ್ಕೆ ಡೀಲ್ ಮಾಡಲಾಗಿತ್ತು. ಮಧ್ಯವರ್ತಿಗಳು ಮುಂಗಡವಾಗಿ 20 ಲಕ್ಷ ರೂ. ಪಡೆದಿದ್ದರು. ಕೊನೆಯ ಕ್ಷಣದವರೆಗೂ ‘Offer closes Soon’ ಎಂಬ ರೀತಿಯಲ್ಲಿ ಡೀಲ್ ಮುಂದುವರಿದಿತ್ತು. ಒಟ್ಟು 21 ಅಭ್ಯರ್ಥಿಗಳೊಂದಿಗೆ ಡೀಲ್ ಕುದುರಿಸಲು ಪ್ರಯತ್ನ ನಡೆದಿದೆ ಅನ್ನೊ ಮಾಹಿತಿ ತನಿಖೆಯಲ್ಲಿ ಹೊರಬಿದ್ದಿದೆ.
ಕನ್ನಾಳಿ ವಿರುದ್ಧ ಗಂಭೀರ ಆರೋಪ
ಇನ್ನೂ ಕೆಪಿಎಸ್‌ಸಿ ಹಗರಣ ಮಧ್ಯವರ್ತಿ ಬಸವರಾಜ್ ಕನ್ನಾಳಿ ವಿರುದ್ಧ ಕೂಡ ಗಂಭೀರ ಆರೋಪ ಕೇಳಿಬಂದಿದೆ. ʻನಾನು MLA ಆಗ್ತೀನಿ, ನೀನು ಹೆದರಬೇಡ’ ಎಂದು ಬಸವರಾಜ್ ಕನ್ನಾಳಿ ಹೇಳಿದ್ದನಂತೆ. ಪ್ರಶ್ನೆಪತ್ರಿಕೆ ಡೀಲ್ ಮಾಡಿ ಹಣ ಸಂಪಾದಿಸೋಣ, ಈಗಾಗಲೇ ಹಲವು ನಾಯಕರೊಂದಿಗೆ ನಂಟು ಬೆಳೆಸಿಕೊಂಡಿದ್ದೇನೆ, ಈ ಬಾರಿ ಟಿಕೆಟ್ ಪಡೆದು MLA ಆಗುತ್ತೇನೆ ಎಂದು ಹೇಳಿಕೊಂಡಿದ್ದನಂತೆ. ಬಸವರಾಜ್ ಮಾತನ್ನ ನಂಬಿ IAS ಅಧಿಕಾರಿ ಗ್ಯಾನೇಂದ್ರ ಅವರು ಪ್ರಶ್ನೆಪತ್ರಿಕೆ ನೀಡಿದ್ದರಂತೆ ಅನ್ನೋ ಆರೋಪ ಕೇಳಿಬಂದಿದೆ.

ಪ್ರಶ್ನೆಪತ್ರಿಕೆ ಪಡೆದು ಸಿಕ್ಕ ಸಿಕ್ಕವರಿಗೆ ಮಾರಾಟ ಮಾಡಲಾಗಿದೆ. 29 ಅಭ್ಯರ್ಥಿಗಳಿಂದ 40 ಲಕ್ಷ ರೂ., 50 ಲಕ್ಷ ರೂ. ಹಾಗೂ 80 ಲಕ್ಷ ರೂ. ನಂತೆ ಮುಂಗಡ ಹಣ ಪಡೆದಿದ್ದಾರೆ. ಆದಾಗ್ಯೂ ವಿಚಾರಣೆ ವೇಳೆ ತಮ್ಮ ಕೈಗೆ ಯಾವುದೇ ಹಣ ಬಂದಿಲ್ಲ ಎಂದು ಗ್ಯಾನೇಂದ್ರ ಹೇಳಿದ್ದಾರೆ. ಬಸವರಾಜ್ ಹಾಗೂ ಗ್ಯಾನೇಂದ್ರ ನಡುವೆ ಆತ್ಮೀಯ ಸ್ನೇಹವಿತ್ತು. ಭಾಲ್ಕಿಯಲ್ಲಿ AC ಹಾಗೂ CEO ಆಗಿದ್ದ ಅವಧಿಯಿಂದಲೇ ಇಬ್ಬರ ನಡುವೆ ನಿಕಟ ಸ್ನೇಹವಿತ್ತು. ಇದೇ ಆತ್ಮೀಯತೆಯ ಹಿನ್ನೆಲೆಯಲ್ಲಿ ಪ್ರಶ್ನೆಪತ್ರಿಕೆ ಪಡೆದು ಅಭ್ಯರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ್ದಾರೆ ಎಂದು ಉನ್ನತ ತನಿಖಾ ಮೂಲಗಳು ತಿಳಿಸಿವೆ.
KPSC ಹಗರಣದ ಹಿಂದೆ ಎಷ್ಟು ದೊಡ್ಡ ಜಾಲ?
ಕೋಟಿಯಿಂದ ಆರಂಭವಾದ ಡೀಲ್ 40 ಲಕ್ಷಕ್ಕೆ ಇಳಿದಿದ್ದು ಹೇಗೆ? 21 ಅಭ್ಯರ್ಥಿಗಳ ಜೊತೆಗಿನ ಡೀಲ್‌ನ ಸಂಪೂರ್ಣ ಜಾಲದ ಹಿಂದೆ ಇನ್ನೂ ಯಾರೆಲ್ಲಿದ್ದಾರೆ ಎಂಬುದರ ಕುರಿತು CID ತನಿಖೆ ಮುಂದುವರಿದಿದೆ.
