ಬೆಂಗಳೂರು: ರಾಜ್ಯದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆ ನಡೆಯುತ್ತಿದ್ದು ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ವೋ ಎನ್ನುವ ಪ್ರಶ್ನೆ, ಆತಂಕ ನಿಮ್ಮನ್ನು ಕಾಡುತ್ತಿರಬಹುದು. ಆದರೆ ನೀವು ಚಿಂತೆ ಮಾಡಬೇಕಾದ ಅಗತ್ಯವಿಲ್ಲ.
ಚುನಾವಣಾ ಆಯೋಗ ಎಸ್‌ಐಆರ್ ಪ್ರಕ್ರಿಯೆಯ ಬಳಿಕ ವೆಬ್‌ಸೈಟ್ ರೂಪಿಸಿದೆ. ಈ ವೆಬ್‌ಸೈಟ್‌ನಲ್ಲಿ ನೀವು ನಿಮ್ಮ ಎಪಿಕ್ ನಂಬರ್ ನಮೂದಿಸುವ ಮೂಲಕ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸಬಹುದು. ಒಂದು ವೇಳೆ ಈ ಸೈಟ್‌ನಲ್ಲಿ ಹೆಸರು ASDDO ಪಟ್ಟಿಗೆ ಸೇರ್ಪಡೆಯಾಗಿದ್ದರೆ ಮತದಾರರು ಫಾರ್ಮ್-6 ಸಲ್ಲಿಸಿ ಹೆಸರನ್ನು ಸೇರಿಸಬಹುದು. ನೀವು ಕರ್ನಾಟಕದ ಯಾವುದೇ ಭಾಗದಲ್ಲಿದ್ದರೂ ಫಾರ್ಮ್ – 6 (Form 6) ಭರ್ತಿ ಮಾಡುವ ಮೂಲಕ ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರಿಸಬಹುದು.
ಏನಿದು ASDDO ಪಟ್ಟಿ?
ರಾಜ್ಯದಲ್ಲಿ ಒಟ್ಟು 1.11 ಕೋಟಿ ಮತದಾರರು ASDDO ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ASDDO(ಗೈರು, ಸ್ಥಳಾಂತರಗೊಂಡವರು, ಮೃತರು, ನಕಲಿ ಮತ್ತು ಇತರರು – Absentee, Shifted, Dead, Duplicate, and Others) ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನೀವು ಭಯ ಪಡುವ ಅಗತ್ಯವಿಲ್ಲ. ಇದನ್ನೂ ಓದಿ: ರಾಜ್ಯದಲ್ಲಿ SIR ಅವಧಿ ವಿಸ್ತರಣೆ – ಆ.17 ರ ವರೆಗೆ ಬಿಎಲ್‌ಒ ಮನೆ ಮನೆ ಭೇಟಿ


ASDDO ಪಟ್ಟಿಯಲ್ಲಿ ಹುಡುಕೋದು ಹೇಗೆ?
– ಮೊದಲು ನೀವು https://karnataka-asddo-lookup.vercel.app/ ವೆಬ್‌ಸೈಟಿಗೆ ಹೋಗಬೇಕು
– ಇಲ್ಲಿ ನಿಮ್ಮ ಎಪಿಕ್ ನಂಬರ್(ವೋಟರ್ ಐಡಿ) ನಂಬರ್ ಎಂಟ್ರಿ ಮಾಡಬೇಕು.
– ಎಂಟ್ರಿ ಮಾಡಿದಾಗ ಒಳ್ಳೆಯ ಸುದ್ದಿ – ಈ ಗುರುತಿನ ಚೀಟಿ ತೆಗೆದುಹಾಕಿದ ಪಟ್ಟಿಯಲ್ಲಿ ಇಲ್ಲ ಎಂಬ ಸಂದೇಶ ಬಂದರೆ ನಿಮ್ಮ ಹೆಸರು ಡಿಲೀಟ್ ಆಗಿಲ್ಲ ಎನ್ನುವುದು ದೃಢಪಡುತ್ತದೆ.
– ಈ ಪಟ್ಟಿ ತೆಗೆದುಹಾಕುವಿಕೆಗಳನ್ನು ಮಾತ್ರ ಒಳಗೊಂಡಿದೆ. ನಿಮ್ಮ ಹೆಸರು ಪ್ರಸ್ತುತ ಮತದಾರರ ಪಟ್ಟಿಯಲ್ಲಿ ಇದೆಯೇ ಎಂದು ಖಚಿತಪಡಿಸಿಕೊಳ್ಳಲು voters.eci.gov.in ನೋಡಿ ಅಥವಾ ನಿಮ್ಮ BLO ಅವರನ್ನು ವಿಚಾರಿಸಬಹುದು. ಇದನ್ನೂ ಓದಿ: ರಾಜ್ಯದಲ್ಲಿ 1.11 ಕೋಟಿ ಜನರು ಮತದಾರರ ಪಟ್ಟಿಯಿಂದ ಔಟ್?
ASDDO ಪಟ್ಟಿಯಲ್ಲಿದ್ದರೆ ಏನು?
ವೋಟರ್ ಐಡಿ ಸಂಖ್ಯೆಯನ್ನು ಹಾಕಿದಾಗ ಈ ಎಪಿಕ್ ಸಂಖ್ಯೆ ASDDO ಪಟ್ಟಿಯಲ್ಲಿದ್ದರೆ ನೀವು ನಿಮ್ಮ ಮತಗಟ್ಟೆ ವ್ಯಾಪ್ತಿಯ ಸಹಾಯಕ ಮತದಾರರ ನೋಂದಣಾಧಿಕಾರಿ ಅಥವಾ ಮತದಾರರ ನೋಂದಣಾಧಿಕಾರಿಗೆ ಕರೆ ಮಾಡಿ ತಮ್ಮ ಗಣತಿ ನಮೂನೆಯನ್ನು ರೋಲ್‌ಬ್ಯಾಕ್ ಮಾಡಲು ಮನವಿ ಸಲ್ಲಿಸಬೇಕು ಅಥವಾ 1950 ವೋಟರ್ ಹೆಲ್ಪ್‌ಲೈನ್‌ಗೆ ಕರೆ ಮಾಡಿ ಸಂಪರ್ಕಿಸಬಹುದು.
ಚುನಾವಣಾ ವೆಬ್‌ಸೈಟ್‌ನಲ್ಲಿ ಹುಡುಕೋದು ಹೇಗೆ?
voters.eci.gov.in ವೆಬ್‌ಸೈಟ್‌ಗೆ ಹೋಗಬೇಕು. ಇಲ್ಲಿ ನಿಮಗೆ ಮೂರು ಆಯ್ಕೆಗಳು ಇರುತ್ತದೆ. ಒಂದನೇಯದ್ದು ವೋಟರ್ ಐಡಿ ಸಂಖ್ಯೆಯ ಮೂಲಕ ಹುಡುಕುವುದು. ಒಂದು ವೇಳೆ ಎಪಿಕ್ ನಂಬರ್ ಕಳೆದು ಹೋಗಿದ್ದರೂ ನೀವು ನಿಮ್ಮ ಹೆಸರನ್ನು ಹುಡುಕಬಹುದು.
ಇಲ್ಲಿ ನೀವು ʼವಿವರಗಳುʼ ಆಯ್ಕೆ ಮಾಡಿ ರಾಜ್ಯ, ಹೆಸರು, ಭಾಷೆ, ಹೆಸರು, ಹುಟ್ಟಿದ ದಿನಾಂಕ, ಸಂಬಂಧಿಯ ಹೆಸರು(ಪೋಷಕರ ಹೆಸರು) ಜಿಲ್ಲೆ, ವಿಧಾನಸಭಾ ಕ್ಷೇತ್ರವನ್ನು ನಮೂದಿಸುವ ಮೂಲಕ ಹುಡುಕಬಹುದು.
ಮೂರನೇಯದ್ದು ಮೊಬೈಲ್ ನಂಬರ್ ಮೂಲಕವೂ ಸರ್ಚ್ ಮಾಡಬಹುದು. ಆದರೆ ವೋಟರ್ ಐಡಿಗೆ ಮೊಬೈಲ್ ನಂಬರ್ ಲಿಂಕ್ ಆಗಿದ್ದರೆ ಮಾತ್ರ ಇಲ್ಲಿ ಸರ್ಚ್ ಆಗುತ್ತದೆ.


