ನವದೆಹಲಿ: ವಿಮಾ ಸೇವೆಗಳನ್ನು ಮತ್ತಷ್ಟು ಪಾರದರ್ಶಕ ಮತ್ತು ಗ್ರಾಹಕಸ್ನೇಹಿಯಾಗಿಸುವ ನಿಟ್ಟಿನಲ್ಲಿ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಹಲವು ಮಹತ್ವದ ಬದಲಾವಣೆಗಳನ್ನು ಪ್ರಸ್ತಾಪಿಸಿದೆ. ಪ್ರಮುಖವಾಗಿ ವಿಮಾ ಏಜೆಂಟ್‌ಗಳು ಹಾಗೂ ವಿತರಕರಿಗೆ ನೀಡುವ ಕಮಿಷನ್‌ಗೆ ಮಿತಿ ನಿಗದಿಪಡಿಸುವ ಪ್ರಸ್ತಾವನೆ ಮಾಡಲಾಗಿದೆ.
IRDAI ಸೆಪ್ಟೆಂಬರ್ 23ರಂದು ‘Recalibrating Economics of Insurance Distribution’ ಎಂಬ ಸಾರ್ವಜನಿಕ ಸಮಾಲೋಚನಾ ಪತ್ರವನ್ನು ಬಿಡುಗಡೆ ಮಾಡಿದ್ದು, ವಿಮಾ ವಿತರಣಾ ವ್ಯವಸ್ಥೆ, ಕಮಿಷನ್, ವೆಚ್ಚ ಹಾಗೂ ಗ್ರಾಹಕರಿಗೆ ಮಾಹಿತಿ ನೀಡುವ ವಿಚಾರದಲ್ಲಿ ಹಲವು ಸುಧಾರಣೆಗಳನ್ನು ಸೂಚಿಸಿದೆ.
ಪಾಲಿಸಿ ಅವಧಿಗೆ ಅನುಗುಣವಾಗಿ ಕಮಿಷನ್
ಪ್ರಸ್ತಾವನೆಯ ಪ್ರಕಾರ ಜೀವ ವಿಮೆಯಲ್ಲಿ ಪಾಲಿಸಿಯ ಪ್ರೀಮಿಯಂ ಪಾವತಿ ಅವಧಿಗೆ ಅನುಗುಣವಾಗಿ ಮೊದಲ ವರ್ಷದ ಕಮಿಷನ್‌ಗೆ ಮಿತಿ ಇರಲಿದೆ.
5 ವರ್ಷಕ್ಕಿಂತ ಕಡಿಮೆ ಅವಧಿಯ ಪಾಲಿಸಿಗಳಿಗೆ ವಿತರಣಾ ಸಂಸ್ಥೆಗಳಿಗೆ ಶೇ.5 ಮತ್ತು ಏಜೆಂಟ್‌ಗಳಿಗೆ ಶೇ.6.25ರಷ್ಟು ಕಮಿಷನ್ ಮಿತಿ ಪ್ರಸ್ತಾಪಿಸಲಾಗಿದೆ.
5 ವರ್ಷದ ಪಾಲಿಸಿಗಳಿಗೆ ಕ್ರಮವಾಗಿ ಶೇ.10 ಮತ್ತು ಶೇ.12.5ರಷ್ಟು ಕಮಿಷನ್ ನಿಗದಿಪಡಿಸುವ ಪ್ರಸ್ತಾವನೆ ಇದೆ. 6ರಿಂದ 8 ವರ್ಷಗಳ ಅವಧಿಯ ಪಾಲಿಸಿಗಳಿಗೆ ವಿತರಣಾ ಸಂಸ್ಥೆಗಳಿಗೆ ಶೇ.14 ಮತ್ತು ಏಜೆಂಟ್‌ಗಳಿಗೆ ಶೇ.17.5ರಷ್ಟು ಮಿತಿ ಇರಲಿದೆ.
9 ವರ್ಷದ ಪಾಲಿಸಿಗಳಿಗೆ ಈ ಮಿತಿ ಶೇ.18 ಮತ್ತು ಶೇ.22.5ರಷ್ಟಿರಲಿದ್ದು, 10 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಪಾಲಿಸಿಗಳಿಗೆ ವಿತರಣಾ ಸಂಸ್ಥೆಗಳಿಗೆ ಶೇ.20 ಹಾಗೂ ಏಜೆಂಟ್‌ಗಳಿಗೆ ಶೇ.25ರಷ್ಟು ಕಮಿಷನ್ ಮಿತಿ ಪ್ರಸ್ತಾಪಿಸಲಾಗಿದೆ. ಇದನ್ನೂ ಓದಿ: ಸಿಕ್ಕಿಂನಲ್ಲಿ ಮಧ್ಯರಾತ್ರಿ ಭೀಕರ ಭೂಕುಸಿತ; ನಾಲ್ವರು ಮೃತ, 128ಕ್ಕೂ ಹೆಚ್ಚು ಜನ ಸ್ಥಳಾಂತರ
ಪಾಲಿಸಿ ದಾಖಲೆಗಳಲ್ಲೇ ಕಮಿಷನ್ ಮಾಹಿತಿ
ಗ್ರಾಹಕರಿಗೆ ವಿಮಾ ಪಾಲಿಸಿಯ ವೆಚ್ಚದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವಂತೆ ಮಾಡಲು ಪಾಲಿಸಿ ದಾಖಲೆಗಳಲ್ಲಿ ಕಮಿಷನ್‌ಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸುವ ಪ್ರಸ್ತಾವನೆಯೂ ಇದೆ.
ವಿಮಾ ಕಂಪನಿಗಳು ಮತ್ತು ದೊಡ್ಡ ವಿತರಣಾ ಸಂಸ್ಥೆಗಳು ತಮ್ಮ ಕಮಿಷನ್ ನೀತಿ ಹಾಗೂ ರಚನೆಯನ್ನು ಸರಳವಾಗಿ ಗ್ರಾಹಕರಿಗೆ ತಿಳಿಸುವಂತೆ ಮಾಡುವುದು ಪ್ರಸ್ತಾವನೆಯ ಪ್ರಮುಖ ಅಂಶವಾಗಿದೆ.
ತಪ್ಪು ವಿಮೆ ಮಾರಾಟಕ್ಕೆ ಕಡಿವಾಣ
ಗ್ರಾಹಕರಿಗೆ ಅಗತ್ಯವಿಲ್ಲದ ವಿಮೆಗಳನ್ನು ಮಾರಾಟ ಮಾಡುವ ಮಿಸ್‌ಸೆಲ್ಲಿಂಗ್‌ಗೆ ಕಡಿವಾಣ ಹಾಕುವುದು ಕೂಡ ಪ್ರಸ್ತಾವನೆಯ ಪ್ರಮುಖ ಉದ್ದೇಶವಾಗಿದೆ.
ವಿಮಾ ವಿತರಣೆಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು, ಕಮಿಷನ್ ಆಧಾರಿತ ತಪ್ಪು ಮಾರಾಟವನ್ನು ನಿಯಂತ್ರಿಸುವುದು ಮತ್ತು ಗ್ರಾಹಕರ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಸೂಚಿಸಲಾಗಿದೆ.
ವಾಹನ ವಿಮೆಯಲ್ಲೂ ಬದಲಾವಣೆ
ಹೊಸ ವಾಹನ ಖರೀದಿಸುವಾಗ ಡಿಜಿಟಲ್ ವೇದಿಕೆಗಳ ಮೂಲಕ ವಿಮೆ ಖರೀದಿಸುವ ಅವಕಾಶ ಕಲ್ಪಿಸುವ ಬಗ್ಗೆಯೂ ಪ್ರಸ್ತಾವನೆ ಇದೆ. ಮೋಟಾರ್ ಥರ್ಡ್ ಪಾರ್ಟಿ ವಿಮೆಯಲ್ಲಿ ವಿತರಕರ ಕಮಿಷನ್ ಅನ್ನು ಕಡಿಮೆ ಮಾಡುವ ಅಥವಾ ನಿರ್ದಿಷ್ಟ ಮಿತಿಗೊಳಿಸುವ ಪ್ರಸ್ತಾವನೆಯೂ ಮಾಡಲಾಗಿದೆ. ಹೊಸ ವಾಹನಗಳ ಮೋಟಾರ್ ಓನ್-ಡ್ಯಾಮೇಜ್ ಸೇರಿದಂತೆ ಕೆಲವು ವಿಭಾಗಗಳಲ್ಲಿ ಏಜೆಂಟ್‌ಗಳು ಮತ್ತು ವಿತರಣಾ ಸಂಸ್ಥೆಗಳಿಗೆ ಪ್ರತ್ಯೇಕ ಕಮಿಷನ್ ಮಿತಿಗಳನ್ನು ಸೂಚಿಸಲಾಗಿದೆ.ಇದನ್ನೂ ಓದಿ: ಇನ್ಮುಂದೆ ಕೃತಕ ಪನೀರ್‌ಗೆ ಅನಲಾಗ್ ಪನೀರ್ ಎಂದು ಹೆಸರು

