ಕರ್ನಾಟಕದಲ್ಲಿ ಈ ಭಾರಿ ಮಳೆ ಕೊರತೆಯಿಂದ ಜಲಾಶಯಗಳಿಗೆ ಬರುವ ಒಳಹರಿವಿನ ಕೊರತೆ ಉಂಟಾಗಿದೆ. ಇದರಿಂದ ಜಲಾಶಯಗಳ ಒಡಲು ಬರಿದಾಗುತ್ತಿದೆ. ಇದರಿಂದಾಗಿ ಆಣೆಕಟ್ಟು ನಿರ್ಮಾಣದ ವೇಳೆ ಮುಳುಗಡೆಯಾದ ದೇವಾಲಯಗಳು ಹಾಗೂ ಕೆಲವು ಸ್ಮಾರಕಗಳು ಜನರಿಗೆ ದರ್ಶನ ಕೊಡುತ್ತಿವೆ. ಹೀಗೆ ಹತ್ತು ಹಲವು ವರ್ಷಗಳಿಂದ ನೀರಲ್ಲಿ ಮುಳುಗಿ ತಮ್ಮ ಸೌಂದರ್ಯವನ್ನು ನೀರಲ್ಲಿ ಮುಚ್ಚಿಟ್ಟುಕೊಂಡು ಈಗ ಜನರಿಗೆ ಕಾಣಸಿಗುತ್ತಿರುವ ಅಂತಹ ಪ್ರಮುಖ ದೇವಾಲಯಗಳು ಹಾಗೂ ಸ್ಮಾರಕಗಳ ಬಗ್ಗೆ ಈ ಬರಹದಲ್ಲಿ ಬೆಳಕು ಚೆಲ್ಲಲಾಗಿದೆ.
51 ವರ್ಷಗಳ ಬಳಿಕ ಮತ್ತೆ ದರ್ಶನಕೊಟ್ಟ ವಿಠ್ಠಲ
ಈ ವರ್ಷ ಮುಂಗಾರು ಮಳೆ ಕೈ ಕೊಟ್ಟ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶಯ ಬರಿದಾಗುವ ಹಂತಕ್ಕೆ ತಲುಪಿದ್ದು, ಕಳೆದ 51 ವರ್ಷಗಳಿಂದ ಡ್ಯಾಮ್‌ನಲ್ಲಿ ಮುಳುಗಡೆಯಾಗಿದ್ದ ವಿಠ್ಠಲ ಈ ವರ್ಷ ಜನರಿಗೆ ದರ್ಶನಕೊಟ್ಟಿದ್ದಾನೆ.

ಹಿಡಕಲ್ ಜಲಾಶಯದಲ್ಲಿ ಮುಳುಗಡೆಯಾಗಿದ್ದ ವಿಠ್ಠಲ ದೇವಸ್ಥಾನ ಜಲಾಶಯ ನಿರ್ಮಾಣವಾದಗಿನಿಂದ ಇದು ಎರಡನೇ ಬಾರಿ ಕಾಣಸಿಗುತ್ತಿದೆ. 2023 ರಲ್ಲಿ ಜಲಾಶಯ ಖಾಲಿಯಾದ ಹಿನ್ನೆಲೆ 48 ವರ್ಷಗಳ ಬಳಿಕ ಗೋಚರವಾಗಿತ್ತು. ದೇವಸ್ಥಾನ ಈಗ ಮತ್ತೆ 2026 ರಲ್ಲಿಗೋಚರಿಸುತ್ತಿದೆ.
1928 ರಲ್ಲಿ ನಿರ್ಮಾಣವಾಗಿರುವ ಹುಕ್ಕೇರಿ ತಾಲೂಕಿನ ಹುನ್ನೂರು ಗ್ರಾಮದ ದೇವಸ್ಥಾನ 1978 ರಲ್ಲಿ ಹಿಡಕಲ್ ಜಲಾಶಯದಲ್ಲಿ ಮುಳುಗಡೆಯಾಗಿತ್ತು. ಕಳೆದ 51 ವರ್ಷಗಳಿಂದ ನೀರಲ್ಲಿ ಮುಳುಗಡೆಯಾಗಿದ್ದರೂ ದೇವಸ್ಥಾನಕ್ಕೆ ಯಾವುದೇ ಧಕ್ಕೆ ಆಗಿಲ್ಲ. ಮಣ್ಣಿನಿಂದ ನಿರ್ಮಾಣವಾಗಿರುವ ವಿಠ್ಠಲನ ವಿಗ್ರಹಕ್ಕೂ ಯಾವುದೇ ಧಕ್ಕೆ ಆಗದೇ ಇರುವುದು ವಿಶೇಷ.

ಕೆಆರ್‌ಎಸ್ – ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯ
ಮಂಡ್ಯ ಜಿಲ್ಲೆಯ ಬೋರೆಆನಂದೂರು ಗ್ರಾಮದ ಸಮೀಪ ಕೆಆರ್‌ಎಸ್ ಡ್ಯಾಂ (KRS) ಹಿನ್ನೀರಿನಲ್ಲಿ ವರ್ಷಗಳ ಕಾಲ ಮುಳುಗಿದ್ದ ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನ ಜನರಿಗೆ ಕಾಣಿಸುತ್ತಿದೆ. ಡ್ಯಾಂ ನೀರಿನ ಮಟ್ಟ ಕುಸಿದ ಪರಿಣಾಮ ದೇವಸ್ಥಾನ ಗೋಚರಿಸಿದೆ. ಈ ವಿಚಾರ ತಿಳಿದು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ಕೆಆರ್‌ಎಸ್ ಡ್ಯಾಂ ನಿರ್ಮಾಣದ ವೇಳೆ ದೇವಸ್ಥಾನದ ಮೂರ್ತಿಯನ್ನು ಮಜ್ಜಿಗೆಪುರಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ ದೇವಸ್ಥಾನದ ಕಟ್ಟಡ ಮಾತ್ರ ಅಲ್ಲಿಯೇ ಉಳಿದಿತ್ತು. ಸಾಮಾನ್ಯವಾಗಿ ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ 90 ಅಡಿಗಿಂತ ಕೆಳಗೆ ಇಳಿದಾಗ ಈ ದೇವಸ್ಥಾನ ಗೋಚರಿಸುತ್ತದೆ. ಈ ಬಾರಿಯೂ ನೀರಿನ ಮಟ್ಟ ಕುಸಿದ ಹಿನ್ನೆಲೆಯಲ್ಲಿ ದೇವಸ್ಥಾನ ಮತ್ತೆ ಕಾಣಿಸುತ್ತಿದೆ.
ಶೆಟ್ಟಿಹಳ್ಳಿ ರೋಸರಿ ಚರ್ಚ್
ಇದು 1860ರಲ್ಲಿ ಫ್ರೆಂಚ್ ಮಿಷನರಿಗಳಿಂದ ನಿರ್ಮಿಸಲ್ಪಟ್ಟ 160ಕ್ಕೂ ಹೆಚ್ಚು ವರ್ಷಗಳ ಹಳೆಯ ಗಾಥಿಕ್ ಶೈಲಿಯ ವಾಸ್ತುಶಿಲ್ಪವಾಗಿದೆ. 1979ರಲ್ಲಿ ಹೇಮಾವತಿ ಅಣೆಕಟ್ಟು ನಿರ್ಮಾಣದಿಂದ ಈ ಚರ್ಚ್ ನೀರಿನಲ್ಲಿ ಮುಳುಗಡೆಯಾಯಿತು. ನಂತರ ಈ ಸ್ಥಳವು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಈ ಚರ್ಚನ್ನು ‘ಮುಳುಗಿದ ಚರ್ಚ್’ ಅಥವಾ ‘ತೇಲುವ ಚರ್ಚ್’ ಎಂದು ಕರೆಯಲಾಗುತ್ತದೆ. ಬೇಸಿಗೆಯಲ್ಲಿ ನೀರು ಕಡಿಮೆಯಾದಾಗ ಈ ಚರ್ಚ್ ಜನರಿಗೆ ನೋಡಲು ಸಿಗುತ್ತದೆ.

ಮಡೇನೂರು ಡ್ಯಾಮ್
ವಿದ್ಯುತ್ ಉತ್ಪಾದನೆಗಾಗಿಯೇ ನಿಮಾಣಗೊಂಡು ಕೇವಲ 16 ವರ್ಷಗಳಲ್ಲಿ ಮತ್ತೊಂದು ಜಲಾಶಯದ ಒಡಲೊಳಗೆ ಸೇರಿದ ಮಡೆನೂರು ಜಲಾಶಯ ಇದೀಗ ಎಲ್ಲರ ಕಣ್ಣಿಗೆ ಗೋಚರಿಸುತ್ತಿದೆ.
ರಾಜ್ಯದ ಅತಿದೊಡ್ಡ ಜಲಾಶಯ ಎಂಬ ಖ್ಯಾತಿ ಪಡೆದ ಲಿಂಗನಮಕ್ಕಿ ಜಲಾಶಯದೊಳಗೆ ಮುಳುಗಿ ಅರ್ಧ ಶತಮಾನ ದಾಟಿದರೂ ಸುಸ್ಥಿರವಾಗಿರುವ ಹಿರೇಭಾಸ್ಕರ ಜಲಾಶಯವು ಅಂದಿನ ಕಾರ್ಯ ಕೌಶಲ್ಯದ ಮಾದರಿಯಾಗಿ ಇಂದಿಗೂ ನಿಂತಿದೆ.
ಹಿರೇಭಾಸ್ಕರ ಡ್ಯಾಂ 1948 ರಲ್ಲಿ ನಿರ್ಮಾಣವಾಗಿ ಚಾಲನೆ ನೀಡಲಾಯ್ತು. ಆದರೆ, ರಾಜ್ಯವು ಬೆಳೆದಂತೆ ವಿದ್ಯುತ್ ಬೇಡಿಕೆಯು ಹೆಚ್ಚಾಯಿತು. ಇದರ ಪರಿಣಾಮ ಇನ್ನಷ್ಟು ಅಭಿವೃದ್ಧಿಯತ್ತ ಹೆಜ್ಜೆ ಇಟ್ಟ ಸರ್ಕಾರ 156 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯದ ಲಿಂಗನಮಕ್ಕಿ ಜಲಾಶಯ ನಿರ್ಮಾಣ ಮಾಡಿ, 1035 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಶರಾವತಿ ವಿದ್ಯುದಾಗರಕ್ಕೆ ನೀರು ಹರಿಸಲಾಯಿತು.

ಇದರಿಂದಾಗಿ ಮಡೆನೂರು ಡ್ಯಾಂ ನಿರ್ಮಾಣಗೊಂಡು ಕೇವಲ 16 ವರ್ಷಗಳಲ್ಲಿ (1964) ಲಿಂಗನಮಕ್ಕಿ ಹಿನ್ನೀರಿನಲ್ಲಿ ಮುಳುಗಿ ತನ್ನ ಸೇವೆಯನ್ನ ಸ್ಥಗಿತಗೊಳಿಸಿತು. ಇದೀಗ ಸಾಮಾನ್ಯವಾಗಿ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಲಿಂಗನಮಕ್ಕಿಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತಿದ್ದಂತೆ ಈ ಜಲಾಶಯ ಗೋಚರಿಸುತ್ತದೆ. ಈ ವರ್ಷ ಇಲ್ಲಿಯವರೆಗೂ ಮಳೆ ಆಗದ ಕಾರಣ ನೀರಿನ ಮಟ್ಟ ಕುಸಿದಿದ್ದು ಡ್ಯಾಮ್ ಇನ್ನೂ ಗೋಚರಿಸುತ್ತಿದೆ.
ಆರು ದಶಕಗಳ ಕಾಲ ನೀರಿನಲ್ಲಿ ಮರೆಯಾದ ಜಲಾಶಯದ ಅಸ್ತಿತ್ವ ಗೋಚರಿಸಿರುವುದು ವಿಶೇಷ. ಆದರೆ, ಸುರಕ್ಷತೆ ದೃಷ್ಟಿಯಿಂದ ಅರಣ್ಯ ಇಲಾಖೆ ಈಚೆಗೆ ಇಲ್ಲಿಗೆ ಸಾರ್ವಜನಿಕರಿಗೆ ನಿಷೇಧ ಹೇರಿದೆ.
ಕಬಿನಿ ಜಲಾಶಯ
ಕಬಿನಿ ಜಲಾಶಯ ನಿರ್ಮಾಣವಾದ ಸಂದರ್ಭದಲ್ಲಿ 33 ಹಳ್ಳಿಗಳು ಮುಳುಗಡೆ ಆದವು. ಹಿನ್ನೀರಿನಲ್ಲಿ ಕಿತ್ತೂರು, ಸೋಗಹಳ್ಳಿ, ಹೊಸಳ್ಳಿ, ಮಗ್ಗೆ, ಮಳಲಿ, ಕಾರಾಪುರ, ಎನ್.ಬೆಳತ್ತೂರು, ಗುಂಡತ್ತೂರು, ಎನ್.ಬೇಗೂರು, ಗೆಂಡತ್ತೂರು, ಬೀರಂಬಳ್ಳಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಿದ್ದವು. ಇವುಗಳಲ್ಲಿ ಕಿತ್ತೂರು ದೊಡ್ಡ ಗ್ರಾಮ. ಇಲ್ಲಿದ್ದ ಗಂಗಾಧರೇಶ್ವರ, ಭವಾನಿಶಂಕರ, ಸೋಮೇಶ್ವರ, ಬಾಣೇಶ್ವರ, ಗೌರಿಶಂಕರ, ಸಪ್ತಮಾತೃಕಾ ವೈಷ್ಣೋದೇವಿ ದೇವಸ್ಥಾನ, ಮಾಂಕಳಮ್ಮ ಸೇರಿದಂತೆ ಇನ್ನೂ ಅನೇಕ ಸಣ್ಣ ಪುಟ್ಟ ದೇವಾಲಯದ ಪಳೆಯುಳಿಕೆಗಳು ನೀರಿನಲ್ಲಿ ಕಾಣುತ್ತಿವೆ.
ಮಳಲಿಯ ವೇಣುಗೋಪಾಲಸ್ವಾಮಿ, ಮಗ್ಗೆ ಗ್ರಾಮದಲ್ಲಿದ್ದ ಬಾಣೇಶ್ವರ ಸ್ವಾಮಿ ದೇವಸ್ಥಾನ, ಈಗಿನ ತೆರಣಿಮುಂಟಿ ಗ್ರಾಮದ ಸನಿಹ ಇರುವ ಶ್ರೀ ರವಿರಾಮೇಶ್ವರ ದೇವಸ್ಥಾನದ ಬಲ ಭಾಗದಲ್ಲಿ ಜೈನ ಬಸದಿಗಳು, ಪಾರ್ಶ್ವನಾಥ ದೇವಾಲಯ ಮತ್ತು ಎಡಭಾಗಕ್ಕೆ ಕನ್ನಡಿ ಪದ್ಮಾವತಿ ದೇವಸ್ಥಾನದ ಪಳೆಯುಳಿಕೆ ಕಾಣುತ್ತಿವೆ. ಈಗಿನ ಪುನರ್ವಸತಿ ಮಗ್ಗೆ ಗ್ರಾಮದಲ್ಲಿ ಬಾಣೇಶ್ವರ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರಗೊಂಡಿದೆ.
ತೆರಣಿಮುಂಟಿ ಗ್ರಾಮದಲ್ಲಿರುವ ಶ್ರೀ ರವಿರಾಮೇಶ್ವರ ದೇವಸ್ಥಾನಕ್ಕೆ ಸುಮಾರು 2000 ವರ್ಷಗಳ ಇತಿಹಾಸ ಇದೆ. ಇಂದಿನ ತೆರಣಿಮುಂಟಿ ಗ್ರಾಮವು ಜೈನರ ಕಾಲದಲ್ಲಿ ಕೀರ್ತಿಪುರ ಎಂದು ಕರೆಯಲಾಗುತ್ತಿತ್ತು. ಇಂದಿಗೂ ನೂರಾರು ಜೈನ ಬಸದಿಗಳು ಕಬಿನಿ ನದಿ ದಂಡೆಯಲ್ಲಿ ಕಾಣಸಿಗುತ್ತವೆ.
ವೇಣುಗೋಪಾಲಸ್ವಾಮಿ ದೇವಸ್ಥಾನ
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜಸಾಗರ (KRS) ಜಲಾಶಯದ ಹಿನ್ನೀರಿನಲ್ಲಿ ಕಂಗೊಳಿಸುವ ವೇಣುಗೋಪಾಲಸ್ವಾಮಿ ದೇವಸ್ಥಾನ ಕಾವೇರಿ ನದಿಯ ಒಡಲಿನಲ್ಲಿ ಸುಮಾರು 70 ವರ್ಷಗಳ ಕಾಲ ಮುಳುಗಡೆಯಾಗಿತ್ತು. ನಂತರ ಯಥಾವತ್ತಾಗಿ ಪುನರ್ ನಿರ್ಮಾಣಮಾಡಲಾಗಿದೆ.
12ನೇ ಶತಮಾನದ ಹೊಯ್ಸಳ ವೈಭವ
ಈ ದೇವಸ್ಥಾನದ ಇತಿಹಾಸವು 12ನೇ ಶತಮಾನಕ್ಕೆ ಸೇರಿದ್ದಾಗಿದೆ. ಹೊಯ್ಸಳ ರಾಜವಂಶದ ಪ್ರಸಿದ್ಧ ದೊರೆ ವಿಷ್ಣುವರ್ಧನನ ಕಾಲದಲ್ಲಿ (ಮೈಸೂರಿನ ಸೋಮನಾಥಪುರ ದೇವಸ್ಥಾನ ನಿರ್ಮಾಣವಾದ ಸರಿಸುಮಾರು ಅದೇ ಅವಧಿಯಲ್ಲಿ) ಈ ಭವ್ಯ ಗುಡಿಯನ್ನು ನಿರ್ಮಿಸಲಾಯಿತು. ಇದು ಕಾವೇರಿ ನದಿ ತೀರದಲ್ಲಿದ್ದ ‘ಕಣ್ಣಂಬಾಡಿ’ ಎಂಬ ಐತಿಹಾಸಿಕ ಮತ್ತು ಸಮೃದ್ಧ ಗ್ರಾಮದ ಕೇಂದ್ರಬಿಂದುವಾಗಿತ್ತು. ಕಲ್ಲಿನ ಭವ್ಯ ಕೆತ್ತನೆಗಳು, ವಿಶಾಲವಾದ ಪ್ರಾಂಗಣ ಹಾಗೂ ಹೊಯ್ಸಳ ಶೈಲಿಯ ವಾಸ್ತುಶಿಲ್ಪ ಈ ದೇವಸ್ಥಾನದ ಹೆಮ್ಮೆಯಾಗಿದೆ.
1930ರ ದಶಕದ ವೇಳೆಗೆ ಕೆಆರ್‌ಎಸ್ ಜಲಾಶಯ ಸಂಪೂರ್ಣವಾಗಿ ಭರ್ತಿಯಾದಾಗ, ವೇಣುಗೋಪಾಲಸ್ವಾಮಿ ದೇವಸ್ಥಾನವು ಕಾವೇರಿ ನದಿಯ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿಹೋಯಿತು. ಮುಂದಿನ ಏಳು ದಶಕಗಳ ಕಾಲ ಈ ದೇವಸ್ಥಾನವು ಕಾವೇರಿಯ ಒಡಲಲ್ಲೇ ಮೌನವಾಗಿ ನೆಲೆಸಿತ್ತು. ಮಂಡ್ಯ ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಾಗಿ, ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ಗಣನೀಯವಾಗಿ ಕುಸಿದಾಗ ಮಾತ್ರ ದೇವಸ್ಥಾನದ ಮೇಲ್ಭಾಗದ ಗೋಪುರ ಕಣ್ಣಿಗೆ ಕಾಣಿಸುತ್ತಿತ್ತು. ಈ ಅಪರೂಪದ ದೃಶ್ಯವನ್ನು ನೋಡಲು ಸಾವಿರಾರು ಭಕ್ತರು ಮತ್ತು ಪ್ರವಾಸಿಗರು ಜಲಾಶಯದ ಹಿನ್ನೀರಿನತ್ತ ಧಾವಿಸುತ್ತಿದ್ದರು.
ದಶಕಗಳ ಕಾಲ ನೀರಿನಲ್ಲಿದ್ದರೂ ದೇವಸ್ಥಾನದ ಕಲ್ಲುಗಳು ಮತ್ತು ಕೆತ್ತನೆಗಳು ಹಾಳಾಗದೆ ಸುಸ್ಥಿತಿಯಲ್ಲಿದ್ದವು. ಈ ಐತಿಹಾಸಿಕ ಸ್ಮಾರಕವನ್ನು ರಕ್ಷಿಸಲು ‘ಖೋಡೆ ಫೌಂಡೇಶನ್’ನ ಶ್ರೀ ಹರಿ ಖೋಡೆ ಅವರು ಮುಂದಾದರು. ಮೈಸೂರು ರಾಜವಂಶಸ್ಥರ ಮತ್ತು ಸರ್ಕಾರದ ಅನುಮತಿಯೊಂದಿಗೆ 2003ರಲ್ಲಿ ಈ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯ ಆರಂಭವಾಯಿತು.
ಪ್ರಸ್ತುತ ಮರುಜನ್ಮ ಪಡೆದಿರುವ ವೇಣುಗೋಪಾಲಸ್ವಾಮಿ ದೇವಸ್ಥಾನವು ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದಾಗಿದೆ. ಮೂರು ಕಡೆ ಕಾವೇರಿ ಹಿನ್ನೀರಿನಿಂದ ಆವೃತವಾಗಿರುವ ಈ ಜಾಗವು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ.
