ಭಾರತದ ಆರ್ಥಿಕತೆ ಹಾಗೂ ಸಂಸ್ಕೃತಿಯಲ್ಲಿ ಚಿನ್ನವು ಅಪರೂಪದ ಮತ್ತು ವಿಶಿಷ್ಟವಾದ ಸ್ಥಾನ ಪಡೆದುಕೊಂಡಿದೆ. ಇದನ್ನು ತಲೆಮಾರುಗಳಿಂದ ಆನುವಂಶಿಕವಾಗಿ ಬಳಸಲಾಗುತ್ತಿದೆ. ಹಬ್ಬ-ಶುಭ ಸಮಾರಂಭಗಳಲ್ಲಿ ಉಡುಗೊರೆಯಾಗಿ, ಮನೆಯ ಆಸ್ತಿಯಾಗಿ, ಆರ್ಥಿಕ ಸಂಕಷ್ಟದ ಸಂದರ್ಭದಲ್ಲಿ ಆಪದ್ಭಾಂದವನಾಗಿ, ಅಲಂಕಾರಿಕ ಆಭರಣವಾಗಿ ಚಿನ್ನವನ್ನು ಭಾರತದಲ್ಲಿ ನೋಡಲಾಗುತ್ತದೆ. ಚಿನ್ನಕ್ಕೂ (Gold) ಹಾಗೂ ಭಾರತೀಯರಿಗೂ ಅವಿನಾಭಾವ ಸಂಬಂಧ ಇದೆ. ಹೀಗಾಗಿ, ಭಾರತದಲ್ಲಿ ಬೇಡಿಕೆಗೆ ತಕ್ಕಂತೆ ಚಿನ್ನದ ಆಮದ ಹೆಚ್ಚಿದೆ. ದೇಶೀಯ ಬೇಡಿಕೆಯು ಸ್ಥಳೀಯ ಪೂರೈಕೆಗಿಂತ ಬಹಳ ಹೆಚ್ಚಾಗಿದೆ. ಹೀಗಾಗಿ, ಭಾರತವು ಪ್ರತಿ ವರ್ಷ 700 ಟನ್‌ಗಿಂತ ಹೆಚ್ಚು ಚಿನ್ನವನ್ನು ಆಮದು ಮಾಡಿಕೊಳ್ಳುತ್ತಿದೆ. ದೇಶದಲ್ಲಿ ಸ್ವಲ್ಪ ಚಿನ್ನವನ್ನಷ್ಟೇ ಗಣಿಗಾರಿಕೆ ಮಾಡಲಾಗುತ್ತಿದೆ. ಆದರೆ, ಆಭರಣ, ಹೂಡಿಕೆ ಬಾರ್‌ಗಳು, ನಾಣ್ಯಗಳು, ಶುಭಸಂದರ್ಭಗಳಲ್ಲಿನ ಖರೀದಿಗಳಲ್ಲಿ ಚಿನ್ನದ ಬಳಕೆ ಪ್ರಮಾಣ ಹೆಚ್ಚಾಗಿರುವುದರಿಂದ ಪೂರೈಕೆ ಸಾಕಾಗುವುದಿಲ್ಲ. ಆದ್ದರಿಂದ ಸಹಜವಾಗಿಯೇ ಹೊರಗಿನಿಂದ ಚಿನ್ನದ ಆಮದ ಜಾಸ್ತಿಯಾಗಿದೆ.
ಮಧ್ಯಪ್ರಾಚ್ಯದ ಯುದ್ಧದಿಂದ ಭಾರತಕ್ಕೆ (India) ಸಂಕಷ್ಟ ಅನುಭವಿಸುತ್ತಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ದೇಶದ ವಿದೇಶಿ ವಿನಿಮಯ ಸಂಗ್ರಹವನ್ನು ರಕ್ಷಿಸಲು ಒಂದು ವರ್ಷದ ವರೆಗೆ ಚಿನ್ನ ಖರೀದಿಯನ್ನು ನಿಲ್ಲಿಸಲು ದೇಶದ ಜನತೆಗೆ ಪ್ರಧಾನಿ ಮೋದಿ (PM Modi) ಕರೆ ನೀಡಿದ್ದಾರೆ. ಪ್ರಧಾನಿ ಮಾತಿಗೆ ಬೆಲೆಕೊಟ್ಟು ಜನರು ಸಹ ಚಿನ್ನದ ಖರೀದಿಯನ್ನು ಮಿತಿಗೊಳಿಸಿದ್ದಾರೆ ಎನ್ನಲಾಗಿದೆ. ಮೋದಿ ಮನವಿ ಬೆನ್ನಲ್ಲೇ ಭಾರತದ ಭೌತಿಕ ಚಿನ್ನದ ಬೇಡಿಕೆ 70% ವರೆಗೆ ಕುಸಿದಿದೆ ಎಂದು ಕೂಡ ಹೇಳಲಾಗುತ್ತಿದೆ. ಜೊತೆಗೆ ಸರ್ಕಾರವು ಚಿನ್ನದ ಆಮದು ಸುಂಕವನ್ನು 6% ರಿಂದ 15% ಕ್ಕೆ ಹೆಚ್ಚಿಸಿದೆ. ಈಗ ಆಷಾಢ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಯಾವುದೇ ಶುಭಕಾರ್ಯಗಳು ನಡೆಯುವುದಿಲ್ಲ. ದೇಶದಲ್ಲಿ ಚಿನ್ನದ ವ್ಯಾಪಾರದಲ್ಲಿ ಗಣನೀಯ ಕುಸಿತಕ್ಕೆ ಇದು ಪ್ರಮುಖ ಕಾರಣ ಎನ್ನಲಾಗಿದೆ. ಇದನ್ನೂ ಓದಿ: ಅಮೆರಿಕ ಪ್ರತೀಕಾರದ ದಾಳಿ – ಇರಾನ್‌ನ ಡ್ರೋನ್‌ಗಳು, ರೇಡಾರ್ ಕೇಂದ್ರಗಳು ಉಡೀಸ್

ದೇಶದಲ್ಲಿ ಚಿನ್ನ ಆಮದು ಹೆಚ್ಚಿದೆ. ಮೇಲೆ ತಿಳಿಸಿದಂತೆ ಪ್ರತಿ ವರ್ಷ ಭಾರತ 700 ಟನ್‌ಗೂ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುತ್ತಿದೆ. ಹೆಚ್ಚಿನ ಪ್ರಮಾಣದ ಚಿನ್ನ ಆಮದನ್ನು ನಿಯಂತ್ರಿಸುವ ಉದ್ದೇಶದಿಂದಲೇ ಪ್ರಧಾನಿ ಮೋದಿ ದೇಶವಾಸಿಗಳಿಗೆ, ಚಿನ್ನ ಖರೀದಿ ಮಿತಿಗೊಳಿಸಲು ಕರೆ ನೀಡಿದ್ದರು. ಮೋದಿ ಕರೆ ಹಿಂದಿನ ಲೆಕ್ಕಾಚಾರ ಏನು? ಇಲ್ಲಿದೆ ವಿಶ್ಲೇಷಣೆ.
ಚಿನ್ನ ಆಮದು; ಟಾಪ್ ದೇಶಗಳಲ್ಲಿ ಭಾರತ
ಹಳದಿ ಲೋಹ ಆಮದು ಮಾಡಿಕೊಳ್ಳುವ ಟಾಪ್ ದೇಶಗಳಲ್ಲಿ ಭಾರತವೂ ಸ್ಥಾನ ಪಡೆದುಕೊಂಡಿದೆ. ಜಗತ್ತಿನಲ್ಲೇ ಅತಿಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ದೇಶ ಸ್ವಿಜರ್ಲೆಂಡ್. ಇದು 105 ಬಿಲಿಯನ್ ಡಾಲರ್‌ಗೂ ಹೆಚ್ಚು ಮೌಲ್ಯದ ಚಿನ್ನ ಖರೀದಿಸುತ್ತದೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಚೀನಾ, ಇಂಗ್ಲೆಂಡ್, ಹಾಂಗ್‌ಕಾಂಗ್ ದೇಶಗಳು ಬರುತ್ತವೆ. ಚಿನ್ನ ಆಮದಿನಲ್ಲಿ ಭಾರತ ನಂ.5 ಸ್ಥಾನ ಪಡೆದುಕೊಂಡಿದೆ. ವಿಶ್ವದ ಅತಿದೊಡ್ಡ ಗ್ರಾಹಕ ಮಾರುಕಟ್ಟೆಗಳಲ್ಲಿ ಭಾರತವೂ ಒಂದಾಗಿದೆ. ಭಾರತವು ಜಾಗತಿಕ ಮಾರುಕಟ್ಟೆಯ ಮೇಲೆ ಹೆಚ್ಚು ಅವಲಂಬಿತವಾಗಿದ್ದು, ವಾರ್ಷಿಕವಾಗಿ 50 ಶತಕೋಟಿ ಡಾಲರ್‌ನಿಂದ 70 ಶತಕೋಟಿ ಡಾಲರ್‌ಗೂ ಹೆಚ್ಚು ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಳ್ಳುತ್ತದೆ. ಇದು ದೇಶದ ಒಟ್ಟು ಆಮದು ಬಿಲ್‌ನ 5% ರಿಂದ 9% ಕ್ಕಿಂತ ಹೆಚ್ಚು. ಒಟ್ಟಾರೆಯಾಗಿ, ಆಮದುಗಳು ಭಾರತದ ಒಟ್ಟು ದೇಶೀಯ ಚಿನ್ನದ ಬಳಕೆಯ ಸರಿಸುಮಾರು 85% ರಿಂದ 90% ರಷ್ಟು ಪೂರೈಸುತ್ತವೆ. ಇದನ್ನೂ ಓದಿ: ಭಾರತಕ್ಕೆ Su-57 ಸ್ಟೆಲ್ತ್ ಫೈಟರ್ ಜೆಟ್ ಆಫರ್ ನೀಡಿದ ಪುಟಿನ್
ಏರಿಕೆ ಕಂಡ ಆಮದು
ಎಸ್‌ಬಿಐ ಸಂಶೋಧನೆಯ ಪ್ರಕಾರ, ದೇಶದ ಅಮೂಲ್ಯ ಲೋಹದ ಆಮದು 2025-26ನೇ ಹಣಕಾಸು ವರ್ಷದಲ್ಲಿ ಸುಮಾರು 72.4 ಶತಕೋಟಿ ಡಾಲರ್‌ಗೆ ಏರಿದೆ. ಇದು ಹಿಂದಿನ ಹಣಕಾಸು ವರ್ಷದಲ್ಲಿ ಸರಿಸುಮಾರು 57.9 ಶತಕೋಟಿ ಡಾಲರ್‌ನಷ್ಟಿತ್ತು. ಬೆಲೆ ಹೆಚ್ಚಾದರೂ ಚಿನ್ನದ ಕಡೆಗಿನ ಜನರ ಆಕರ್ಷಣೆ ಕಡಿಮೆಯಾಗುವುದಿಲ್ಲ. ಹಳದಿ ಲೋಹ ಖರೀದಿಗೆ ಡಾಲರ್‌ನಲ್ಲೇ ಪಾವತಿ ಮಾಡಬೇಕು. ಹೊರಗಡೆಯಿಂದ ಭಾರತಕ್ಕೆ ಹೆಚ್ಚಿನ ಪ್ರಮಾಣದ ಆಮದಿನಿಂದ ವಿದೇಶಿ ವಿನಿಮಯ ಸಂಗ್ರಹ ರಕ್ಷಣೆ ಕಷ್ಟವಾಗಿದೆ. ಆದ್ದರಿಂದ ಪ್ರಧಾನಿ ಮೋದಿ ಅವರು ಭಾರತದ ಜನತೆಗೆ ಮಿತಬಳಕೆಯ ಕರೆ ನೀಡಿದ್ದಾರೆ. ಹೆಚ್ಚಿನ ಆಮದನ್ನು ತಡೆಗಟ್ಟಲು ದೇಶವಾಸಿಗಳು ಮನೆಯಲ್ಲಿರುವ ಚಿನ್ನ ಅಥವಾ ಪೂರ್ವಿಕರ ಅಮೂಲ್ಯ ಲೋಹಗಳನ್ನು ಮರುಬಳಕೆ ಮಾಡುವ ಪ್ರವೃತ್ತಿ ರೂಢಿಸಿಕೊಳ್ಳಬೇಕಿದೆ.

ರೂಪಾಯಿ ಮೌಲ್ಯ ಕುಸಿತ
ಚಿನ್ನದ ಆಮದು ಭಾರತದ ವಿದೇಶಿ ವಿನಿಮಯ ಮೀಸಲು ಕಡಿಮೆಯಾಗುವಂತೆ ಮಾಡುತ್ತದೆ. ಕಚ್ಚಾ ತೈಲ ಖರೀದಿಗೆ ಈಗಾಗಲೇ ಅಪಾರ ಪ್ರಮಾಣದ ಡಾಲರ್ ಖರ್ಚಾಗುತ್ತಿದ್ದು, ಜೊತೆಗೆ ಚಿನ್ನದ ಆಮದಿಗೂ ಡಾಲರ್ ಖರ್ಚಾದರೆ ದೇಶದ ಕರೆಂಟ್ ಅಕೌಂಟ್ ಡೆಫಿಸಿಟ್ (CAD) ಹೆಚ್ಚಾಗಿ ಭಾರತೀಯ ರೂಪಾಯಿಯ ಮೌಲ್ಯ ಮತ್ತಷ್ಟು ಕುಸಿಯುತ್ತದೆ. ಈ ಉದ್ದೇಶದಿಂದಲೇ ಒಂದು ವರ್ಷ ಚಿನ್ನ ಖರೀದಿ ನಿಲ್ಲಿಸುವಂತೆ ದೇಶದ ಜನತೆಗೆ ಪ್ರಧಾನಿ ಮೋದಿ ಕರೆ ನೀಡಿದ್ದರು.
ಯಾವ ವರ್ಷ ಎಷ್ಟು ಆಮದು?
2023-24ರಲ್ಲಿ 45.54 ಬಿಲಿಯನ್ ಯುಎಸ್ ಡಾಲರ್
2022-23ರಲ್ಲಿ 35 ಬಿಲಿಯನ್ ಯುಎಸ್ ಡಾಲರ್
2021-22ರಲ್ಲಿ 46.14 ಬಿಲಿಯನ್ ಯುಎಸ್ ಡಾಲರ್
2020-21ರಲ್ಲಿ 34.62 ಬಿಲಿಯನ್ ಯುಎಸ್ ಡಾಲರ್
2019-20ರಲ್ಲಿ 28.2 ಬಿಲಿಯನ್ ಯುಎಸ್ ಡಾಲರ್
ದಾಖಲೆ ಬರೆದ ಭಾರತದ ಚಿನ್ನದ ಆಮದು ಬಿಲ್!
ಮೇಲೆ ವಿವರಿಸಿದ ಅಂಕಿಅಂಶದಂತೆ, ಭಾರತದ ಚಿನ್ನದ ಆಮದು ಬಿಲ್ ದಾಖಲೆಯ 6.77 ಲಕ್ಷ ಕೋಟಿ ಡಾಲರ್‌ಗೆ ಏರಿದೆ. ಆ ಸಂಖ್ಯೆಯು ಭಾರತೀಯರು ಚಿನ್ನದ ಮೇಲೆ ಎಷ್ಟು ಆಸಕ್ತಿ ಹೊಂದಿದ್ದಾರೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ, ಇದು ಇದುವರೆಗಿನ ಅತ್ಯಧಿಕ ಆಮದು ಬಿಲ್ ಆಗಿದೆ. ಖರೀದಿಯಲ್ಲಿನ ಪ್ರತಿಯೊಂದು ಏರಿಕೆಯು ದೇಶದ ವಿದೇಶಿ ವಿನಿಮಯ ಹೊರಹೋಗುವಿಕೆಯ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಜಾಗತಿಕವಾಗಿ ಚಿನ್ನದ ಬೆಲೆಗಳು ಹೆಚ್ಚಾದಾಗ, ಹೊರೆ ಇನ್ನೂ ವೇಗವಾಗಿ ಬೆಳೆಯುತ್ತದೆ. ಭಾರತವು ವ್ಯವಸ್ಥೆಗೆ ಪ್ರವೇಶಿಸುವ ಹೊಸ ಚಿನ್ನಕ್ಕೆ ಹೆಚ್ಚು ಹಣ ಪಾವತಿಸುತ್ತಲೇ ಇದೆ.

ಭಾರತ ಎಷ್ಟು ಆಮದು ಮಾಡಿಕೊಳ್ಳುತ್ತದೆ ಎಂಬುದರ ಬಗ್ಗೆ ಮಾತ್ರ ಅಲ್ಲ, ತನ್ನ ಅಸ್ತಿತ್ವದಲ್ಲಿರುವ ಸ್ಟಾಕ್ ಅನ್ನು ಹೇಗೆ ಹೆಚ್ಚು ಪರಿಣಾಮಕಾರಿಯಾಗಿ ಬಳಸಬಹುದು ಎಂಬುದರ ಬಗ್ಗೆಯೂ ಗಮನ ಹರಿಸಬೇಕಾಗಿದೆ. ಭಾರತೀಯರು ಚಿನ್ನವನ್ನು ಕೇವಲ ಆರ್ಥಿಕ ದೃಷ್ಟಿಕೋನದಲ್ಲಷ್ಟೇ ನೋಡುತ್ತಿಲ್ಲ. ಅದನ್ನು ಭಾವನಾತ್ಮಕ ಅಂಶವಾಗಿ ಪರಿಗಣಿಸಿದ್ದಾರೆ. ಹೀಗಾಗಿ, ಬೆಲೆ ಏರಿಳಿತಗಳ ಹೊರತಾಗಿಯೂ ಭಾರತದಲ್ಲಿ ಚಿನ್ನದ ಆಮದು ರಚನಾತ್ಮಕವಾಗಿ ಹೆಚ್ಚಾಗಿರುತ್ತದೆ. ಭಾರತದ ಆಮದು-ರಫ್ತು ದತ್ತಾಂಶದಲ್ಲೂ ಇದೇ ಮಾದರಿ ಕಂಡುಬರುತ್ತದೆ. ಚಿನ್ನವು ಬಳಕೆ, ಉಳಿತಾಯ ಮತ್ತು ಸಾಂಸ್ಕೃತಿಕ ನಿರಂತರತೆಯ ಛೇದಕವಾಗಿರುವುದರಿಂದ ಅದು ಹೆಚ್ಚಾಗಿ ದೇಶದ ಪ್ರಮುಖ ಆಮದು ವಸ್ತುಗಳಲ್ಲಿ ಒಂದಾಗಿದೆ. ಇದನ್ನೂ ಓದಿ: ಟ್ರಂಪ್‌ಗೆ ಅಮೆರಿಕ ಸಂಸತ್‌ನಲ್ಲಿ ಹಿನ್ನಡೆ – ಇರಾನ್ ವಿರುದ್ಧದ ಯುದ್ಧಕ್ಕೆ ಬೀಳುತ್ತಾ ಬ್ರೇಕ್?
ಭಾರತೀಯರಲ್ಲಿ ಎಷ್ಟಿದೆ ಚಿನ್ನದ ಗಂಟು?
ದೇಶವು ಪ್ರತಿವರ್ಷ ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದ್ದರೂ ಸಹ, ಭಾರತೀಯ ಮನೆಗಳು ಈಗಾಗಲೇ ಸುಮಾರು 25,000 ಟನ್ ಚಿನ್ನವನ್ನು ಹೊಂದಿವೆ ಎಂದು ಅಂದಾಜಿಸಲಾಗಿದೆ. ವಿಶ್ವದ ಅತಿದೊಡ್ಡ ಚಿನ್ನದ ನಿಕ್ಷೇಪಗಳಲ್ಲಿ ಒಂದು ಈಗಾಗಲೇ ಭಾರತೀಯ ಕುಟುಂಬದ ಲಾಕರ್‌ಗಳು, ಬ್ಯಾಂಕ್ ಕಮಾನುಗಳು ಮತ್ತು ಆನುವಂಶಿಕ ಆಭರಣ ಪೆಟ್ಟಿಗೆಗಳಲ್ಲಿ ಇರಬಹುದು. ಇದು ವಿಶ್ವದ ಒಟ್ಟು ಚಿನ್ನದ ದಾಸ್ತಾನಿನ ಸುಮಾರು 11-14% ರಷ್ಟಿದೆ. 2.4 ರಿಂದ 4 ಟ್ರಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಮೌಲ್ಯದ ಈ ಖಾಸಗಿ ಮೀಸಲು, USA, ಜರ್ಮನಿ, ಇಟಲಿ, ಸ್ವಿಟ್ಜರ್‌ಲ್ಯಾಂಡ್ ಮತ್ತು IMFನ ಒಟ್ಟು ಅಧಿಕೃತ ಮೀಸಲುಗಳಿಗಿಂತಲೂ ಹೆಚ್ಚಿದೆ. ಚಿನ್ನದ ವಿನಿಮಯವು ಚಿಲ್ಲರೆ ವ್ಯಾಪಾರದಿಂದ ಆರ್ಥಿಕ ಕಲ್ಪನೆಗೆ ಚಲಿಸಲು ಪ್ರಾರಂಭಿಸುತ್ತಿರುವುದು ಇದಕ್ಕಾಗಿಯೇ.
ಚಿನ್ನದ ಬೆಲೆ ಎಷ್ಟು? (ಜು.6)
24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 15,273 ರೂ. ಇದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 14,000 ರೂ. ಇದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,55,570 ರೂ. ರಷ್ಟಿದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 1,42,606 ರೂ. ಇದೆ. 18 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 1,16,678 ರೂ. ರಷ್ಟಿದೆ.
