ಭಾರತ ಯಾವುದನ್ನೂ ಕ್ಷಮಿಸಲ್ಲ – ʻಸಿಂಧೂರʼ ಸಮರಕ್ಕೆ 1 ವರ್ಷ, ವಿಶೇಷ ವಿಡಿಯೋ ಹಂಚಿಕೊಂಡ ವಾಯುಪಡೆ

– ಉಗ್ರರ ವಿರುದ್ಧ ಗುಡುಗಿದ ಮೋದಿ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terror Attack) ಪಾಕ್‌ ಮೂಲದ ಉಗ್ರರು ನಡೆಸಿದ ನರಮೇಧಕ್ಕೆ ಪ್ರತೀಕಾರವಾಗಿ ಭಾರತ ನಡೆಸಿದ ʻಆಪರೇಷನ್‌ ಸಿಂಧೂರʼ ವಿಶೇಷ ಕಾರ್ಯಾಚರಣೆಗೆ 1 ವರ್ಷ ಪೂರ್ಣಗೊಂಡಿದೆ. ಈ ಹೊತ್ತಿನಲ್ಲೇ ಪಾಕ್‌ ವಿರುದ್ಧ ತೀರಿಸಿಕೊಂಡ ಪ್ರತೀಕಾರ ಹಾಗೂ ಭಾರತೀಯ ಮೂರು ಸೇನೆಗಳ ಪರಾಕ್ರಮವನ್ನು ನೆನಪಿಸುವ ವಿಶೇಷ ವಿಡಿಯೋವೊಂದನ್ನು ಭಾರತೀಯ ವಾಯುಪಡೆ ಹಂಚಿಕೊಂಡಿದೆ.

ಎಕ್ಸ್‌ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಭಾರತೀಯ ವಾಯುಪಡೆ, ಆಪರೇಷನ್ ಸಿಂಧೂರ ನ್ಯಾಯ ದೊರಕಿಸಿದೆ. ಈ ಕಾರ್ಯ ನಿಖರವಾಗಿದ್ದು, ನೆನಪಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಬರೆದುಕೊಂಡಿದೆ. ಅಲ್ಲದೇ, ಭಾರತ ಯಾವುದನ್ನೂ ಮರೆಯುವುದಿಲ್ಲ-ಭಾರತ ಯಾವುದನ್ನೂ ಕ್ಷಮಿಸುವುದಿಲ್ಲ, ಆಪರೇಷನ್ ಸಿಂಧೂರ ಮುಂದುವರಿಯುತ್ತದೆ ಎಂದು ವಾಯುಪಡೆ ಎಚ್ಚರಿಸಿದೆ.

ಅಲ್ಲದೇ ವಾಯುಪಡೆ ಹಂಚಿಕೊಂಡ ಇದೇ ವಿಡಿಯೋನಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಉಗ್ರರ ವಿರುದ್ಧ ಗುಡುಗಿದ್ದಾರೆ. ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಮತ್ತು ಅವರ ಬೆಂಬಲಿಗರನ್ನ ಗುರುತಿಸಿ, ಪತ್ತೆಮಾಡಿ ಶಿಕ್ಷಿಸುತ್ತದೆ ಎಂದು ಹೇಳಿದ್ದಾರೆ.

ʻಸಿಂಧೂರʼ ಪ್ರತೀಕಾರಕ್ಕೆ ಪತರುಗುಟ್ಟಿದ ಪಾಕ್‌!
ದಶಕಗಳಿಂದ ಭಾರತದ ಮಣ್ಣಿನಲ್ಲಿ ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನಾ ಕೃತ್ಯಗಳಿಗೆ ಕೇವಲ ಮೌಖಿಕ ಎಚ್ಚರಿಕೆ ನೀಡುವ ಬದಲು, ನೇರವಾಗಿ ತಿರುಗೇಟು ಕೊಡುವ ಕೆಲಸವನ್ನು ಭಾರತ ಈ ಕಾರ್ಯಾಚರಣೆ ಮೂಲಕ ಸಾಬೀತು ಮಾಡಿತ್ತು. ಹಾಗಾಗಿ ಪಾಕಿಸ್ತಾನವು ಭಯೋತ್ಪಾದಕ ಸಂಘಟನೆಗಳನ್ನು ತನ್ನ ಪರೋಕ್ಷ ಯುದ್ಧದ ದಾಳಗಳಾಗಿ ಬಳಸಿಕೊಳ್ಳುತ್ತಿರುವುದನ್ನ ಎದುರಿಸುವಲ್ಲಿ, ‘ಆಪರೇಷನ್ ಸಿಂಧೂರ’ ಭಾರತದ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ.

2025ರ ಮೇ 7ರಂದು ಆರಂಭವಾದ ಈ ಕಾರ್ಯಾಚರಣೆಯು, ಪಾಕಿಸ್ತಾನದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳ ವಿರುದ್ಧ ನಡೆದ ತೀವ್ರಗತಿಯ ಮತ್ತು ನಿಖರ ಅಭಿಯಾನವಾಗಿತ್ತು. ಇದು ಸಂಘರ್ಷವು ಮಿತಿಮೀರದಂತೆ ಎಚ್ಚರವಹಿಸಿ ಶತ್ರುವಿಗೆ ಗರಿಷ್ಠ ಹಾನಿ ಉಂಟುಮಾಡುವಂತೆ ವಿನ್ಯಾಸಗೊಳಿಸಲಾದ ಭಾರತದ ಸಂಘಟಿತ ಮಿಲಿಟರಿ ಸಾಮರ್ಥ್ಯದ ಪ್ರದರ್ಶನವಾಗಿತ್ತು. 1 ವರ್ಷದ ನಂತರ, ಇದು ಭಾರತದ ಬೆಳೆಯುತ್ತಿರುವ ‘ಕಾರ್ಯತಂತ್ರದ ಪ್ರಬುದ್ಧತೆ’ಗೆ ಸಾಕ್ಷಿಯಾಗಿ ನಿಂತಿದೆ.

ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ಎದುರಾಳಿಯನ್ನು ಹೊಣೆಗಾರರನ್ನಾಗಿ ಮಾಡುವುದು ಮತ್ತು ಪರಿಸ್ಥಿತಿಯನ್ನು ಹತೋಟಿಯಲ್ಲಿಟ್ಟುಕೊಂಡೇ ಅಚಲ ಸಂಕಲ್ಪ ಹಾಗೂ ದೃಢ ಉದ್ದೇಶದೊಂದಿಗೆ ತಿರುಗೇಟು ನೀಡುವ ಸಾಮರ್ಥ್ಯವನ್ನು ಭಾರತ ಸಾಬೀತುಪಡಿಸಿದೆ. ಈ ಎಲ್ಲ ದೃಶ್ಯಗಳನ್ನು ನೆನಪಿಸುವ 1:28 ನಿಮಿಷದ ವಿಡಿಯೋವನ್ನು ಭಾರತೀಯ ವಾಯುಪಡೆ ಹಂಚಿಕೊಂಡಿದೆ.

ಹೇಗಿತ್ತು ಕಾರ್ಯಾಚರಣೆ?
ದಾಳಿ ನಡೆಸುವುದಕ್ಕೂ ಮುನ್ನಾ ದಿನ ಯುದ್ಧಪೀಡಿತ ಸಂದರ್ಭದಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಅನ್ನೋದರ ಬಗ್ಗೆ ದೇಶಾದ್ಯಂತ ಮಾಕ್‌ ಡ್ರಿಲ್‌ ನಡೆಸಲು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿದ್ದರು. ಆದ್ರೆ ಅಸಲಿ ಆಟವೇ ಬೇರೆಯಾಗಿತ್ತು. ಆಪರೇಷನ್ ಸಿಂಧೂರ್ (Operation Sindoor) ಹೆಸರಿನಲ್ಲಿ ಭಾರತ ಮೇ 7 – 8 ರ ತಡರಾತ್ರಿ 1:44 ಕ್ಕೆ ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿರುವ ಉಗ್ರರ 9 ಅಡಗುತಾಣಗಳ ಮೇಲೆ ಏರ್‌ ಸ್ಟ್ರೈಕ್‌ (Air Strike) ನಡೆಸಿತ್ತು. ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ (ಜೆಇಎಂ) ಪ್ರಧಾನ ಕಚೇರಿ, ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾದ ನೆಲೆ, ಸಿಯಾಲ್‌ಕೋಟ್‌ನ ಮೆಹಮೂನಾ ಜೋಯಾ, ಸವಾಯಿ ನಲಾ ಮತ್ತು ಮುಜಫರಾಬಾದ್‌ನ ಸೈಯದ್ ನಾ ಬಿಲಾಲ್, ಕೋಟ್ಲಿಯ ಗುಲ್ಪುರ್ ಮತ್ತು ಅಬ್ಬಾಸ್, ಭಿಂಬರ್‌ನ ಬರ್ನಾಲಾ ಮತ್ತು ಸರ್ಜಲ್‌ನಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಿತ್ತು.

ಪಾಕ್‌ ಪ್ರತಿದಾಳಿ ನಡೆಸುತ್ತಿದ್ದಂತೆ ತನ್ನ ಪರಾಕ್ರಮವನ್ನು ತೀವ್ರಗೊಳಿಸಿದ ಸೇನೆ ಭಯಂಕರ ಬ್ರಹ್ಮೋಸ್‌ ಅಸ್ತ್ರ ಪ್ರಯೋಗಿಸಿತು. ರಫಿಕಿ, ಚಕ್ಲಾಲಾ, ರಹೀಮ್ ಯಾರ್ ಖಾನ್, ಸುಕ್ಕೂರ್ ಮತ್ತು ಸಿಯಾಲ್‌ಕೋಟ್‌ನಲ್ಲಿರುವ ರೆಡಾರ್‌ ಸ್ಥಾಪನೆಗಳು, ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು ಹಾಗೂ ಮದ್ದುಗುಂಡು ಡಿಪೋಗಳನ್ನೇ ಛಿದ್ರಮಾಡಿತು. ಇದು ಭಾರತೀಯ ವಾಯುಪಡೆ ಶೌರ್ಯ ಸಾಹಸಕ್ಕೆ ಹಿಡಿದ ಕನ್ನಡಿಯಾಗಿತ್ತು.

ಅಷ್ಟೇ ಅಲ್ಲ, ಗಡಿಯಾಚೆಗಿನ ಭಯೋತ್ಪಾದನೆ ವಿರುದ್ಧ ಸುದೀರ್ಘ ಅಭಿಯಾನ ನಡೆಸಿದ ಪಾಕಿಸ್ತಾನ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನದ ಮಾನ ಕಳಚಿತು.

Share This Article