ನವದೆಹಲಿ: ಪುರುಷರ ಅಂಧರ ಕ್ರಿಕೆಟ್ ಏಷ್ಯಾಕಪ್ ಟೂರ್ನಿ (Blind Cricket Asia Cup) ಫೈನಲ್ ಪಂದ್ಯದ ಫಲಿತಾಂಶವು ಈಗ ಭಾರತ (India) ಮತ್ತು ಪಾಕಿಸ್ತಾನ ತಂಡಗಳ ನಡುವಿನ ವಿವಾದಕ್ಕೆ ಕಾರಣವಾಗಿದೆ.
ಹೌದು. ಶುಕ್ರವಾರ (ಇಂದು) ಢಾಕಾದಲ್ಲಿ (Dhaka) ನಡೆದ ಟ್ರೋಫಿ ಪ್ರದಾನ ಸಮಾರಂಭದಲ್ಲಿ ಭಾರತ ತಂಡ ಪಾಲ್ಗೊಳ್ಳಲು ನಿರಾಕರಿಸಿದೆ. ಮಳೆಯಿಂದಾಗಿ ಇಂದು ನಡೆಯಬೇಕಿದ್ದ ಫೈನಲ್ ಪಂದ್ಯವು ರದ್ದಾಯಿತು. ಹೀಗಾಗಿ ಲೀಗ್ ಹಂತದಲ್ಲಿ ಉತ್ತಮ ರನ್ರೇಟ್ ಕಾಯ್ದುಕೊಂಡಿದ್ದ ಪಾಕ್ (Pakistan) ತಂಡವನ್ನ ರೆಫ್ರಿ ಚಾಂಪಿಯನ್ ಎಂದು ಘೋಷಿಸಿದರು. ಬಳಿಕ ಪ್ರತಿಭಟನೆ ಶುರುವಾಯಿತು.
ಆಗಿದ್ದೇನು?
ನಿರಂತರ ಮಳೆಐ ಕಾರಣ ಇಂದು ಬದ್ಧ ವೈರಿಗಳ ನಡುವೆ ನಡೆಯಬೇಕಿದ್ದ ಫೈನಲ್ ಪಂದ್ಯವು ಟಾಸ್ ಇಲ್ಲದೇ ರದ್ದಾಯಿತು. ಈ ಹಂತದಲ್ಲಿ ಉಭಯ ತಂಡಗಳಿಗೆ ಚಾಂಪಿಯನ್ ಪಟ್ಟ ಹಂಚಿಕೆ ಮಾಡಬೇಕಿತ್ತು. ಆದ್ರೆ ಲೀಗ್ ಹಂತದ ಪಂದ್ಯಗಳನ್ನಾಧರಿಸಿ ರನ್ ರೇಟ್ ಮೇಲೆ ಚಾಂಪಿಯನ್ ಆಗಿ ಘೋಷಿಸಲು ನಿರ್ಧರಿಸಲಾಯಿತು.
ಲೀಗ್ನಲ್ಲಿ ಪಾಕಿಸ್ತಾನ ತಂಡವು 3 ಪಂದ್ಯಗಳನ್ನ ಗೆದ್ದು 6 ಅಂಕಗಳನ್ನ ಪಡೆದುಕೊಂಡಿತು. +4.611 ನೆಟ್ ರನ್ರೇಟ್ನೊಂದಿಗೆ ಅಗ್ರಸ್ಥಾನದಲ್ಲಿತ್ತು. ಲೀಗ್ನಲ್ಲಿ 2 ಪಂದ್ಯಗಳಲ್ಲಿ ಗೆದ್ದಿದ್ದ ಭಾರತ 4 ಅಂಕ ಪಡೆದು, +4.400 ನೆಟ್ ರನ್ರೇಟ್ನೊಂದಿಗೆ 2ನೇ ಸ್ಥಾನದಲ್ಲಿತ್ತು. ಹೀಗಾಗಿ ಪಾಕಿಸ್ತಾನ ತಂಡವನ್ನ ಏಕೈಕ ಚಾಂಪಿಯನ್ ಎಂದು ರೆಫ್ರಿ ಘೋಷಿಸಿದ್ರು. ಈ ತೀರ್ಪನ್ನು ಟೀಂ ಇಂಡಿಯಾ ಸಂಪೂರ್ಣವಾಗಿ ಖಂಡಿಸಿತು. ಅಲ್ಲದೇ ಟ್ರೋಫಿ ವಿತರಣಾ ಸಮಾರಂಭವನ್ನೂ ಬಹಿಷ್ಕಾರ ಮಾಡಿತು.
ರನ್ರೇಟ್ ಆಧಾರದಲ್ಲಿ ಅಲ್ಲದೇ, ಎರಡೂ ಫೈನಲಿಸ್ಟ್ಗಳನ್ನ ಜಂಟಿ ಚಾಂಪಿಯನ್ಗಳಾಗಿ ಘೋಷಿಸಬೇಕು ಎಂದು ಪಟ್ಟು ಹಿಡಿದರು. ಅಲ್ಲದೇ, ಭಾರತ ಅಂಧರ ಕ್ರಿಕೆಟ್ ಸಂಘ (CABI) ಕೂಡ, ಈ ನಿರ್ಧಾರವು ಸ್ಪರ್ಧೆಯ ತಾಂತ್ರಿಕ ನಿಯಮಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದೆ.
ಟೂರ್ನಮೆಂಟ್ನ ಸೆಕ್ಷನ್ 27ರ ಅನ್ವಯ ರೆಫ್ರಿ ನಿರ್ಧಾರವು ಸರಿಯಲ್ಲ. ಹೀಗಾಗಿ ಸ್ಪಷ್ಟೀಕರಣವನ್ನು ಪಡೆಯಲು ವಿಶ್ವ ಅಂಧರ ಕ್ರಿಕೆಟ್ ಮಂಡಳಿ (WBCC) ತಾಂತ್ರಿಕ ಸಮಿತಿಯನ್ನು ಸಂಪರ್ಕಿಸಿರುವುದಾಗಿ ಸಂಘವು ತಿಳಿಸಿದೆ. ಜೊತೆಗೆ ಭಾರತ ಮತ್ತು ಪಾಕಿಸ್ತಾನ ತಂಡಗಳನ್ನ ಜಂಟಿ ವಿಜೇತರು ಎಂದು ಘೋಷಿಸುವಂತೆ ಒತ್ತಾಯಿಸಿವೆ.

