– ಮನೆಯಿಂದಲೇ ಗ್ಯಾಸ್ ಸಿಲಿಂಡರ್ ತಂದ ಮುಖ್ಯ ಶಿಕ್ಷಕಿ
ಚಿಕ್ಕಬಳ್ಳಾಪುರ: ಹಾವೇರಿ, ವಿಜಯಪುರದ ಬೆನ್ನಲ್ಲೇ ಈಗ ಚಿಕ್ಕಬಳ್ಳಾಪುರದಲ್ಲೂ (Chikkaballapura) ಬಿಸಿಯೂಟ ಯೋಜನೆ (Mid Day Meal) ಸಂಪೂರ್ಣ ಹಳ್ಳ ಹಿಡಿದಿರುವ ಆತಂಕಕಾರಿ ಸಂಗತಿ ಬಯಲಾಗಿದೆ.
ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಶಾಲೆಗಳಲ್ಲಿ ನಡೆಸಿದ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ನಲ್ಲಿ ಬಿಸಿಯೂಟದ ಅಸಲಿ ಬಂಡವಾಳ ಬಟಾಬಯಲಾಗಿದೆ. ಒಂದೆಡೆ ಅಕ್ಕಿಯೇ ಇಲ್ಲದೆ ಶಿಕ್ಷಕರು ಪಕ್ಕದ ಶಾಲೆಯಿಂದ ಸಾಲ ತರುವ ಪರಿಸ್ಥಿತಿ ಎದುರಾಗಿದ್ದರೆ, ಇನ್ನೊಂದೆಡೆ ಗ್ಯಾಸ್ ಸಿಲಿಂಡರ್ ಇಲ್ಲದೆ ಮುಖ್ಯ ಶಿಕ್ಷಕಿಯೇ ತಮ್ಮ ಮನೆಯಿಂದ ಸಿಲಿಂಡರ್ ತಂದು ಮಕ್ಕಳಿಗೆ ಅಡುಗೆ ಮಾಡಿಸುತ್ತಿದ್ದಾರೆ.
ನಗರದ ವೇಣುಗೋಪಾಲಸ್ವಾಮಿ ದೇವಾಲಯದ ಬಳಿಯಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಕ್ಕಿಯ ತೀವ್ರ ಕೊರತೆ ಎದುರಾಗಿದೆ. ಮಕ್ಕಳಿಗೆ ಊಟ ನಿಲ್ಲಬಾರದು ಅಂತ ಶಿಕ್ಷಕರು ಪಕ್ಕದ ಶಾಲೆಯಿಂದ ಅಕ್ಕಿ ತಂದು ಅಡುಗೆ ಮಾಡುತ್ತಿದ್ದಾರೆ. ಇನ್ನು ಶಾಲೆಯಲ್ಲಿ ಉಳಿದಿರುವ ಅಲ್ಪಸ್ವಲ್ಪ ಅಕ್ಕಿಯ ಮೂಟೆಯೊಳಗೆ ಹುಳುಗಳು ಗೂಡು ಕಟ್ಟಿಕೊಂಡು ಓಡಾಡುತ್ತಿವೆ. ಇಂತಹ ಕಳಪೆ ಅಕ್ಕಿಯನ್ನು ಮಕ್ಕಳಿಗೆ ಹಾಕೋದಾದ್ರೂ ಹೇಗೆ ಅಂತ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.
ಮನೆಯಿಂದಲೇ ಗ್ಯಾಸ್ ಸಿಲಿಂಡರ್ ತಂದ ಮುಖ್ಯ ಶಿಕ್ಷಕಿ
ಇತ್ತ ಜೂನಿಯರ್ ಕಾಲೇಜು ಬಳಿಯಿರುವ ಉರ್ದು ಶಾಲೆಯಲ್ಲಿ ಕಳೆದೊಂದು ತಿಂಗಳಿಂದ ಬಿಲ್ ಪಾವತಿಯಾಗದ ಕಾರಣ ಗ್ಯಾಸ್ ಪೂರೈಕೆ ನಿಂತು ಹೋಗಿದೆ. ಮಕ್ಕಳಿಗೆ ಮಧ್ಯಾಹ್ನದ ಊಟ ತಪ್ಪಬಾರದು ಅನ್ನೋ ಕಾಳಜಿಯಿಂದ ಮುಖ್ಯ ಶಿಕ್ಷಕಿ ಆಯೇಷಾ ಬೇಗಂ ಅವರೇ ತಮ್ಮ ಸ್ವಂತ ಮನೆಯಿಂದ ಗ್ಯಾಸ್ ಸಿಲಿಂಡರ್ ತಂದು ಅಡುಗೆ ಮಾಡಿಸುತ್ತಿದ್ದಾರೆ.ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧದ ’ಸ್ಟಿಂಗ್’ ಕೇಸ್ – ಕೃಪಾ ಆಳ್ವಾ ಸೇರಿ 6 ಮಂದಿ ನಿರೀಕ್ಷಣಾ ಜಾಮೀನು ಅರ್ಜಿ ವಜಾ
ಇಷ್ಟೇ ಅಲ್ಲ, ಕಳೆದ 15 ದಿನಗಳಿಂದ ಶಾಲೆಗಳಿಗೆ ತೊಗರಿಬೇಳೆ ಪೂರೈಕೆಯಾಗಿಲ್ಲ. ಈ ಹಿಂದೆ ಬಂದಿದ್ದ ಬೇಳೆ ಮುಗ್ಗಲು ಹಿಡಿದಿದ್ದರಿಂದ ಅದನ್ನು ವಾಪಸ್ ಕಳುಹಿಸಲಾಗಿತ್ತು. ಮತ್ತೊಂದೆಡೆ, ಸರ್ಕಾರ ಪ್ರತಿ ಮೊಟ್ಟೆಗೆ 6 ರೂಪಾಯಿ ಕೊಡುತ್ತಿದ್ದರೆ, ಮಾರುಕಟ್ಟೆಯಲ್ಲಿ ಮೊಟ್ಟೆ ಬೆಲೆ 7 ರಿಂದ 8 ರೂಪಾಯಿಗೆ ಏರಿದೆ. ಇದರಿಂದ ಮೊಟ್ಟೆ ಖರೀದಿಸಿ ಮಕ್ಕಳಿಗೆ ಹಂಚುವುದು ಶಿಕ್ಷಕರಿಗೆ ದೊಡ್ಡ ತಲೆನೋವಾಗಿದೆ.ಇದನ್ನೂ ಓದಿ: ತಾಜ್ ಮಹಲ್, ನಿಜಾಮುದ್ದೀನ್ ದರ್ಗಾಕ್ಕೆ ಪಾಕ್ ಸಚಿವರ ಭೇಟಿಗೆ ಭಾರತ ನಿರಾಕರಣೆ
