ಬೆಂಗಳೂರು: ನೀರು ಸರಬರಾಜು ವ್ಯವಸ್ಥೆಗಳಲ್ಲಿ ತುರ್ತು ದುರಸ್ತಿ, ಬದಲಾವಣೆ ಹಾಗೂ ನಿರ್ವಹಣಾ ಕಾಮಗಾರಿಗಳನ್ನ ಕೈಗೊಂಡಿರುವ ಹಿನ್ನೆಲೆ ಇದೇ ನವೆಂಬರ್ 25 ರಂದು ಬೆಂಗಳೂರು ನಗರಕ್ಕೆ ಕಾವೇರಿ ನೀರು ಸ್ಥಗಿತಗೊಳ್ಳಲಿದೆ ಎಂದು ಬೆಂಗಳೂರು ಜಲಮಂಡಳಿ (Bengaluru Water Board) ತಿಳಿಸಿದೆ.
ಈ ಸಂಬಂಧ ಪ್ರಕಟಣೆ ಹೊರಡಿಸಿದ್ದು, ಕಾವೇರಿ ನೀರು (Cauvery Water) ಸರಬರಾಜು ಯೋಜನೆಯ ಎಲ್ಲಾ ಹಂತಗಳ ಜಲರೇಚಕ ಯಂತ್ರಗಳ ಸ್ಥಗಿತತೆಯಿಂದ ನೀರಿನ ಸರಬರಾಜಿನಲ್ಲಿ ಬುಧವಾರ (ನ.25) ಉಂಟಾಗಲಿದೆ ಎಂದು ತಿಳಿಸಿದೆ.
ಬೆಂಗಳೂರು ನಗರಕ್ಕೆ ನಿರಂತರವಾಗಿ ಮತ್ತು ಸುಗಮವಾಗಿ ನೀರು ಸರಬರಾಜು ಮಾಡುವ ಉದ್ದೇಶದಿಂದ ಕಾವೇರಿ ಮುಖ್ಯ ಕೆಲಸಗಳ ವಲಯದ ವ್ಯಾಪ್ತಿಯಲ್ಲಿರುವ ಟಿ.ಕೆ. ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿನ ನೀರು ಸರಬರಾಜು ವ್ಯವಸ್ಥೆಗಳಲ್ಲಿ ತುರ್ತು ದುರಸ್ತಿ, ಬದಲಾವಣೆ ಹಾಗೂ ನಿರ್ವಹಣಾ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.
ಈ ಹಿನ್ನೆಲೆ ಕಾವೇರಿ ನೀರು ಸರಬರಾಜು ಯೋಜನೆಯ ಎಲ್ಲಾ ಹಂತಗಳ ಜಲರೇಚಕ ಯಂತ್ರಗಾರಗಳನ್ನು ಬುಧವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸ್ಥಗಿತಗೊಳಿಸಲಾಗುತ್ತದೆ ಎಂದು ಜಲಮಂಡಳಿ ತಿಳಿಸಿದೆ. ಈ ಸಂದರ್ಭದಲ್ಲಿ ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗೋದ್ರಿಂದ ಮುಂಜಾಗ್ರತಾ ಕ್ರಮವಾಗಿ ದೈನಂದಿನ ಅಗತ್ಯಗಳಿಗೆ ಬೇಕಾಗುವಷ್ಟು ನೀರನ್ನ ಸಂಗ್ರಹಿಸಿಟ್ಟುಕೊಳ್ಳುವಂತೆ ಜಲಮಂಡಳಿಯು ಮನವಿ ಮಾಡಿದೆ.

