ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಜಾರಿ ನಿರ್ದೇಶನಾಲಯಕ್ಕೆ (Enforcement Directorate) ನೀಡಲಾಗಿರುವ ಅಧಿಕಾರಗಳನ್ನು ಎತ್ತಿಹಿಡಿದಿದ್ದ 2022ರ ಸುಪ್ರೀಂ ಕೋರ್ಟ್ ತೀರ್ಪಿನ ಮರುಪರಿಶೀಲನೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನ ಜನವರಿಯಲ್ಲಿ ನಡೆಸುವುದಾಗಿ ಸುಪ್ರೀಂ ಕೋರ್ಟ್ (Supreme Court) ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠದ ಮುಂದೆ ಈ ಅರ್ಜಿಗಳ ವಿಚಾರಣೆ ಪ್ರಸ್ತಾಪವಾಯಿತು. ಅರ್ಜಿಗಳ ವಿಚಾರಣೆಗೆ ಸಾಧ್ಯವಾದಷ್ಟು ಬೇಗ ದಿನಾಂಕ ನಿಗದಿಪಡಿಸುವಂತೆ ವಕೀಲರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಜನವರಿಯಲ್ಲಿ ವಿಚಾರಣೆ ನಡೆಸಬಹುದು ಎಂದು ತಿಳಿಸಿತು. ವಿಚಾರಣೆಯ ನಿಖರ ದಿನಾಂಕವನ್ನ ನಂತರ ಪ್ರಕಟಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಹೇಳಿದರು.
2 ಪ್ರಮುಖ ವಿಚಾರಗಳ ಮೇಲೆ ಆಕ್ಷೇಪ
2022ರ ತೀರ್ಪಿನ ಮರುಪರಿಶೀಲನೆಗೆ ಸಂಬಂಧಿಸಿದಂತೆ ಮುಖ್ಯವಾಗಿ ಎರಡು ವಿಚಾರಗಳು ಚರ್ಚೆಯಲ್ಲಿವೆ. ಮೊದಲನೆಯದು, ಬಂಧಿತ ಆರೋಪಿಗೆ ಜಾರಿ ನಿರ್ದೇಶನಾಲಯದ ತನಿಖಾ ಪ್ರಕರಣ ಮಾಹಿತಿ ವರದಿ (ECRI) ಪ್ರತಿಯನ್ನ ನೀಡುವ ವಿಚಾರ. 2ನೇಯದು, ಪಿಎಂಎಲ್ಎ ಕಾಯ್ದೆಯ ಸೆಕ್ಷನ್ 24ರ ಅಡಿಯಲ್ಲಿ ಸಾಕ್ಷ್ಯ ಒದಗಿಸುವ ಹೊಣೆಗಾರಿಕೆಯನ್ನು ಆರೋಪಿಯ ಮೇಲೆಯೇ ಹೊರಿಸಿರುವುದು.
ಕಳೆದ ವರ್ಷ ಜುಲೈ 31ರಂದು ಸುಪ್ರೀಂ ಕೋರ್ಟ್, ಮರುಪರಿಶೀಲನಾ ಅರ್ಜಿಗಳನ್ನು ವಿಚಾರಣೆಗೆ ಸ್ವೀಕರಿಸಬಹುದೇ ಎಂಬ ಪ್ರಾಥಮಿಕ ಪ್ರಶ್ನೆಯನ್ನು ಮೊದಲು ಪರಿಶೀಲಿಸುವುದಾಗಿ ಹೇಳಿತ್ತು. ಇಡಿ ಪರವಾಗಿ ಮೂರು ಪ್ರಾಥಮಿಕ ಆಕ್ಷೇಪಗಳನ್ನು ಮಂಡಿಸಲಾಗಿತ್ತು. ಮರುಪರಿಶೀಲನೆ ಕೋರಿ ಅರ್ಜಿ ಸಲ್ಲಿಸಿರುವವರು ನ್ಯಾಯಾಲಯದ ಪರಿಶೀಲನೆಗಾಗಿ 13 ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಆದರೆ, ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, 2022ರ ಆಗಸ್ಟ್ನಲ್ಲಿ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದ್ದ ಎರಡು ನಿರ್ದಿಷ್ಟ ವಿಚಾರಗಳ ವ್ಯಾಪ್ತಿಯಲ್ಲೇ ಮರುಪರಿಶೀಲನಾ ವಿಚಾರಣೆ ನಡೆಯಬೇಕು ಎಂದು ವಾದಿಸಿದ್ದರು.
2022ರಲ್ಲಿ ಇಡಿ ಅಧಿಕಾರ ಎತ್ತಿಹಿಡಿದಿದ್ದ ಸುಪ್ರೀಂ
2022ರ ಜುಲೈನಲ್ಲಿ 200ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಪಿಎಂಎಲ್ಎ ಅಡಿಯಲ್ಲಿ ಇಡಿಗೆ ನೀಡಲಾಗಿರುವ ಹಲವು ಅಧಿಕಾರಗಳನ್ನು ಎತ್ತಿಹಿಡಿದಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸುವುದು, ಅಕ್ರಮ ಹಣಕ್ಕೆ ಸಂಬಂಧಿಸಿದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಹಾಗೂ ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆ ನಡೆಸುವ ಅಧಿಕಾರವನ್ನು ನ್ಯಾಯಾಲಯ ಮಾನ್ಯ ಮಾಡಿತ್ತು.
ಇಡಿ ಅಧಿಕಾರಿಗಳು ಸಾಮಾನ್ಯ ಪೊಲೀಸ್ ಅಧಿಕಾರಿಗಳಲ್ಲ ಎಂದು ಹೇಳಿದ್ದ ನ್ಯಾಯಾಲಯ, ಇಸಿಐಆರ್ ಅನ್ನು ಎಫ್ಐಆರ್ಗೆ ಸಮಾನವಾಗಿ ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಪ್ರತಿಯೊಂದು ಪ್ರಕರಣದಲ್ಲೂ ಆರೋಪಿಗೆ ಇಸಿಐಆರ್ ಪ್ರತಿಯನ್ನು ನೀಡುವುದು ಕಡ್ಡಾಯವಲ್ಲ. ಬಂಧನದ ಸಂದರ್ಭದಲ್ಲಿ ಬಂಧನಕ್ಕೆ ಕಾರಣಗಳನ್ನು ತಿಳಿಸಿದರೆ ಸಾಕು ಎಂದು ತೀರ್ಪಿನಲ್ಲಿ ಹೇಳಿತ್ತು. ಅಲ್ಲದೇ, ಪಿಎಂಎಲ್ಎ ಕಾಯ್ದೆಯ ಸೆಕ್ಷನ್ 45ರ ಅಡಿಯಲ್ಲಿ ಜಾಮೀನು ಮಂಜೂರು ಮಾಡಲು ವಿಧಿಸಲಾಗಿರುವ ಎರಡು ಷರತ್ತುಗಳನ್ನೂ ಸುಪ್ರೀಂಕೋರ್ಟ್ ಸಮರ್ಥಿಸಿತ್ತು.


