Connect with us

Latest

ಪೌರತ್ವ ತಿದ್ದುಪಡಿ ಮಸೂದೆಗೆ ಇಮ್ರಾನ್ ಖಾನ್ ಆಕ್ರೋಶ

Published

on

ಇಸ್ಲಾಮಾಬಾದ್: ಪೌರತ್ವ ತಿದ್ದುಪಡಿ ಮಸೂದೆ ಕುರಿತು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದು, ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಇಮ್ರಾನ್ ಖಾನ್, ಭಾರತದ ಪೌರತ್ವ ಮಸೂದೆಯು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನನ್ನು ಉಲ್ಲಂಘಿಸುತ್ತದೆ. ಅಲ್ಲದೆ ಎರಡು ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಒಪ್ಪಂದಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ದೂರಿದ್ದಾರೆ.

ಬಿಜೆಪಿ ಹಾಗೂ ಆರ್‌ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಪೌರತ್ವ  ಮಸೂದೆಯು ಹಿಂದೂ ರಾಷ್ಟ್ರದ ಭಾಗವಾಗಿದೆ. ಅದೇ ರೀತಿಯಾಗಿ ಇದನ್ನು ನಿರ್ಮಿಸಲಾಗಿದೆ ಎಂದು ಹರಿಹಾಯ್ದಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಪಾಸ್ ಆಗಿದ್ದು, ಬುಧವಾರ ರಾಜ್ಯಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ. ಕೇಂದ್ರ ಸರ್ಕಾರಕ್ಕೆ ರಾಜ್ಯಸಭೆಯಲ್ಲಿ ಬಹುಮತವಿಲ್ಲ. ಆದರೂ ಸಹ ತಟಸ್ಥವಾಗಿರುವ ಪಕ್ಷಗಳನ್ನು ಸೆಳೆಯಲು ಸರ್ಕಾರ ಮುಂದಾಗಿದೆ.

 ಮಸೂದೆಗೆ ಈಶಾನ್ಯ ರಾಜ್ಯಗಳು ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ವಿಪಕ್ಷಗಳು ಸಹ ಈ ಕುರಿತು ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿವೆ. ಕಾಂಗ್ರೆಸ್ ಹಾಗೂ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೇರಿದಂತೆ ಇತರೆ ವಿರೋಧ ಪಕ್ಷಗಳು ಪೌರತ್ವ ತಿದ್ದುಪಡಿ ಮಸೂದೆ  ಅಸಂವಿಧಾನಿಕವಾಗಿದೆ ಎಂದು ದೂರಿವೆ.

ಪೌರತ್ವ ತಿದ್ದುಪಡಿ ಮಸೂದೆಯನ್ನು ಸೋಮವಾರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದ್ದು, ಪಾಸ್ ಸಹ ಆಗಿದೆ. ಆದರೆ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಭಾರೀ ಗದ್ದಲ ಎಬ್ಬಿಸಿದ್ದು, ಎಐಎಂಐಎಂ ನಾಯಕ ಅಸಾದುದ್ದಿನ್ ಓವೈಸಿ ಲೋಕಸಭೆಯಲ್ಲಿ ಮಸೂದೆಯ ಪ್ರತಿಯನ್ನೇ ಹರಿದು ಹಾಕುವ ಮೂಲಕ ತೀವ್ರ ಚರ್ಚೆಗೆ ಕಾರಣರಾಗಿದ್ದಾರೆ.

ಈಶ್ವಾನ್ಯ ರಾಜ್ಯಗಳಲ್ಲಿಯೂ ಸಹ ಈ ಕುರಿತು ಜನಾಕ್ರೋಶ ಹೆಚ್ಚಾಗುತ್ತಿದೆ. ಅಕ್ರಮ ವಲಸಿಗರನ್ನು ಧಾರ್ಮಿಕ ಆಧಾರದ ಮೇಲೆ ಹೊರತಾಗಿಯೂ ಗಡಿಪಾರು ಮಾಡುವ 1985ರ ಅಸ್ಸಾಂ ಒಪ್ಪಂದವನ್ನು ರದ್ದುಗೊಳಿಸಿ, ಮಸೂದೆಯನ್ನು ಅಂಗೀಕಾರ ಮಾಡಲಾಗುತ್ತಿದೆ ಎಂದು ಈಶಾನ್ಯ ರಾಜ್ಯಗಳಲ್ಲಿ ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

Click to comment

Leave a Reply

Your email address will not be published. Required fields are marked *