-ಶೃಂಗೇರಿ ಮರು ಎಣಿಕೆ ಅಕ್ರಮ ವಿಚಾರದಲ್ಲಿ ರಾಜೇಗೌಡ ದೂರಿನನ್ವಯ ಕೇಸ್
ಬೆಂಗಳೂರು: ಪಂಚರಾಜ್ಯ ಚುನಾವಣೆ ಮುಗಿದಿದ್ದು, ರಾಜ್ಯದ ಗೊಂದಲಗಳನ್ನ ಹೈಕಮಾಂಡ್ ಬಗೆಹರಿಸುವ ವಿಶ್ವಾಸ ಇದೆ ಅಂತ ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ರಾಜ್ಯ ಕುರ್ಚಿ ಗೊಂದಲ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗೊಂದಲಗಳು ಬಗೆಹರಿಯಲೇಬೇಕು. ನಮ್ಮ ಉದ್ದೇಶ ಆಡಳಿತದ ಮೇಲೆ ಪರಿಣಾಮ ಬೀರಬಾರದು. ಅದಕ್ಕಾಗಿ ಗೊಂದಲ ಬಗೆಹರಿಯಲೇಬೇಕು. ಹೈಕಮಾಂಡ್ ಗೊಂದಲ ಬಗೆಹರಿಸೋ ವಿಶ್ವಾಸ ಇದೆ. ಬಗೆಹರಿಸಲು ಆಗದೇ ಇರೋ ಗೊಂದಲ ಇದಲ್ಲ. ಚುನಾವಣೆಯಲ್ಲಿ ಹೈಕಮಾಂಡ್ ನಾಯಕರು ಬ್ಯುಸಿ ಇದ್ದರು. ಈಗ ಚುನಾವಣೆ ಮುಗಿದಿದೆ. ಆದಷ್ಟು ಬೇಗ ಈ ಗೊಂದಲ ಒಂದು ಹಂತಕ್ಕೆ ಬರುತ್ತದೆ ಅಂತ ನನಗೆ ವಿಶ್ವಾಸ ಇದೆ. ನಮಗೆ ಆಡಳಿತ ಮುಖ್ಯ. ನೀವು ಕಿತ್ತಾಡಿಕೊಳ್ಳಿ ನಮಗೆ ಉತ್ತಮ ಅಡಳಿತ ಕೊಡಿ ಅಂತ ಜನ ಮಾತಾಡ್ತಾರೆ. ಅದಕೋಸ್ಕರ ಬೇಗ ಗೊಂದಲ ಪರಿಹರಿಸ್ತಾರೆ ಅನ್ನಿಸುತ್ತೆ ಎಂದಿದ್ದಾರೆ.
ಸಚಿವ ಸಂಪುಟ ಪುನರ್ ರಚನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇವೆಲ್ಲ ನಾವು ಹೇಳುವ ವಿಚಾರ ಅಲ್ಲ. ನಾವು ಹೇಗೆ ಹೇಳೋಕೆ ಆಗುತ್ತದೆ. ನಮ್ಮ ಅಭಿಪ್ರಾಯ ಹೇಳಿದ್ರೆ ಹೇಗೆ ಆಗುತ್ತದೆ. ಸಿಎಂ, ಅಧ್ಯಕ್ಷರು, ಹೈಕಮಾಂಡ್ ಇವರೆಲ್ಲಾ ಕೂತುಕೊಂಡು ಮಾಡ್ತಾರೆ. 40 ವರ್ಷಗಳಲ್ಲಿ ಇಂತಹ ಸಂದರ್ಭಗಳನ್ನ ನಾನು ನೋಡಿದ್ದೇನೆ. ಹೈಕಮಾಂಡ್ ಇದನ್ನ ತೀರ್ಮಾನ ಮಾಡ್ತಾರೆ. ಕೆಲವು ಸಾರಿ ಸಮಯ ತೆಗೆದುಕೊಳ್ಳುತ್ತದೆ. ನಮ್ಮದು ಈಗ ಹಾಗೆ ಆಗಿದೆ. ಈಗ ಬಗೆಹರಿಸೋ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯ ರಾಜಕೀಯಕ್ಕೆ ಆಹ್ವಾನ ಕೊಟ್ಟ ವಿಚಾರವಾಗಿ ಮಾತನಾಡಿ, ನಾವು ನಮ್ಮ ಅಭಿಪ್ರಾಯ ಹೇಳಿದ್ದೇವೆ. ಅಂತಿಮವಾಗಿ ಹೈಕಮಾಂಡ್ ಅವರು ತೀರ್ಮಾನ ಮಾಡ್ತಾರೆ. ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ. ಹೈಕಮಾಂಡ್ ಏನೇ ತೀರ್ಮಾನ ಮಾಡಿದ್ರು ನಾವೆಲ್ಲರೂ ಬದ್ಧವಾಗಿ ಇರುತ್ತೇವೆ .ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜೇಗೌಡ ದೂರಿನನ್ವಯ ಕೇಸ್:
ಶೃಂಗೇರಿ ಚುನಾವಣೆ ಮರು ಎಣಿಕೆಯಲ್ಲಿ ವೋಟ್‌ನಲ್ಲಿ ಮ್ಯಾನುಪುಲೇಷನ್ ಆಗಿರುವ ಬಗ್ಗೆ ರಾಜೇಗೌಡ ದೂರು ಕೊಟ್ಟಿದ್ದರು. ದೂರಿನನ್ವಯ ಕೇಸ್ ತಗೊಂಡು ಎಫ್‌ಐಆರ್ ದಾಖಲು ಮಾಡಲಾಗಿದೆ. ಎಫ್‌ಐಆರ್‌ಗೆ ಕೋರ್ಟ್ ತಡೆ ನೀಡಿದೆ. ಎರಡು ದಿನ ಆದ ಮೇಲೆ ವಿಚಾರಣೆಗೆ ಬರುತ್ತದೆ. ಕೋರ್ಟ್ ತೀರ್ಮಾನ ಏನು ಅಂತ ನೋಡಿಕೊಂಡು ಮುಂದೆ ತೀರ್ಮಾನ ಮಾಡ್ತೀವಿ. ಚುನಾವಣೆ ಆಯೋಗದವರು ಘೋಷಣೆ ಮಾಡಿ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅದರ ಬಗ್ಗೆ ರಾಜೇಗೌಡ ಕೋರ್ಟ್ ಹೋಗ್ತಾರಾ ನೋಡಬೇಕು ಎಂದಿದ್ದಾರೆ.
ಜೀವರಾಜ್ ಮೇಲೆ ಕೊಟ್ಟಿರೋ ದೂರಿಗೆ ಕೇಸ್ ದಾಖಲು ಮಾಡಿ ತನಿಖೆ ಮಾಡ್ತಾ ಇದ್ದೇವೆ. ಅಧಿಕಾರಿಗಳು ದೂರು ಕೊಟ್ಟಿಲ್ಲ. ರಾಜೇಗೌಡ ಕೊಟ್ಟಿದ್ದಾರೆ. ಯಾರೇ ದೂರು ಕೊಟ್ಟರೂ ದೂರು ತಗೋತೀವಿ ಅದಕ್ಕೆ ಅವಕಾಶ ಇದೆ. ಕ್ರಿಮಿನಲ್ ಪಿತೂರಿ ಅಂತ ಸಿಎಂ ಹೇಳಿದ್ದಾರೆ. ಅದು ಬೇರೆ. ಇದು ಖಾಸಗಿಯಾಗಿ ಕೊಟ್ಟಿರುವ ದೂರು. ಯಾವುದೇ ಕಂಪ್ಲೆAಟ್ ಬಂದರೆ ಅದನ್ನ ಸ್ವೀಕಾರ ಮಾಡಬೇಕು. ಚುನಾವಣೆ ಆಯೋಗದ ಪ್ರೊಸೀಸರ್ ಮೇಲೆ ಲೋಪ ಆಗಿದ್ದರೆ ಆ ಕೇಸ್ ಬೇರೆ ಆಗುತ್ತದೆ ಎಂದು ಹೇಳಿದ್ದಾರೆ.
