Connect with us

Dharwad

ಸ್ವಕ್ಷೇತ್ರದ ಮೇಲಿನ ಪ್ರೀತಿಯಿಂದ ಸಚಿವ ಸಂಪುಟ ವಿಳಂಬ – ರೇವಣ್ಣ ಬಾಂಬ್

Published

on

ಹುಬ್ಬಳ್ಳಿ: ಆಪರೇಷನ್ ಕಮಲ ವಿಚಾರ ಕುರಿತಂತೆ ತನಿಖೆ ಮಾಡಬೇಡಿ ಎಂದು ಬಸವರಾಜ್ ಬೊಮ್ಮಾಯಿ ಮನವಿ ಮಾಡಿದ್ದರು. ಹೀಗಾಗಿ ನಾವು ಅದರ ತನಿಖೆ ಮಾಡಲಿಲ್ಲ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಸೇರಿ ಮೂರ್ನಾಲ್ಕು ಜನ ಆಪರೇಷನ್ ಕಮಲದ ಕುರಿತು ತನಿಖೆ ಮಾಡಬೇಡಿ ಎಂದು ಮನವಿ ಮಾಡಿದ್ದರು ಎಂದು ತಿಳಿಸಿದ್ದಾರೆ.

ಶಿವಮೊಗ್ಗ ಹಾಗೂ ಶಿಕಾರಿಪುರಕ್ಕೆ ಎರಡು ಸಾವಿರ ಕೋಟಿ ರೂಪಾಯಿ ಅನುದಾನ ಕೊಡಬೇಕಾಗಿತ್ತು. ಹೀಗಾಗಿ ಸಚಿವ ಸಂಪುಟ ವಿಳಂಬ ಮಾಡಿದ್ದಾರೆ. ಶಿಕಾರಿಪುರ ಏತ ನೀರಾವರಿಯೊಂದಕ್ಕೆ 850 ಕೋಟಿ ರೂ. ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಎರಡು ಸಾವಿರ ಕೋಟಿ ರೂ ನೀಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ನೆರೆಯಿಂದ ಇಷ್ಟೊಂದು ನಷ್ಟವಾಗಿದ್ದರೂ ಅನುದಾನಕ್ಕೆ ದುಡ್ಡಿಲ್ಲ. ತಮ್ಮ ಕ್ಷೆತ್ರಕ್ಕೆ ಹಣ ನೀಡಲು ಮಾತ್ರ ಅವರ ಖಜಾನೆ ತುಂಬಿದೆ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ಸಮ್ಮಿಶ್ರ ಸರಕಾರದಲ್ಲಿ ರಾಮನಗರ, ಹಾಸನ, ಮಂಡ್ಯ ಭಾಗಗಳಿಗೆ ನೂರಾರು ಕೋಟಿ ರೂಪಾಯಿ ಕೊಟ್ಟಿದನ್ನೇ ದೊಡ್ಡ ದೊಡ್ಡ ರಾದ್ದಾಂತ ಮಾಡಿದರು. ಕೇವಲ 22 ದಿನದಲ್ಲಿ ಸುಮಾರು 2000 ಕೋಟಿ ರೂ. ಹಣ ನೀಡಿದ್ದಾರೆ. ನಮ್ಮ ಅವಧಿಯಲ್ಲಿ ನಮ್ಮ ಭಾಗಕ್ಕೆ ಹಾಗೂ ಶಿವಮೊಗ್ಗ ಜಿಲ್ಲೆಗೆ ನೀಡಿದ ಅನುದಾನ ಕುರಿತು ಚರ್ಚೆಗೆ ಸಿದ್ಧ ಎಂದು ತಿಳಿಸಿದರು.

ಯಡಿಯೂರಪ್ಪ ಹಾಗೂ ಈಶ್ವರಪ್ಪ ಅಳಿಯರಿಂದ ಎಷ್ಟು ಹಣ ಪಡೆದಿದ್ದೇನೆ? ಅವರು ಕೇಳಿದವರನ್ನೇ ಅವರ ಜಿಲ್ಲೆಗೆ ಕೊಟ್ಟಿದ್ದೇನೆ. ಅವರು ಕೊಟ್ಟಿರುವ ಶಿಫಾರಸು ಪತ್ರಗಳ ಬಂಡಲ್ ನನ್ನ ಬಳಿಯಿದೆ. ಯಡಿಯೂರಪ್ಪ ಅವರ ಆಡಿಯೋ ಬಿಡುಗಡೆಯಾದಾಗ ಬಸವರಾಜ ಬೊಮ್ಮಾಯಿ ಸೇರಿದಂತೆ ಇತರೆ ಬಿಜೆಪಿ ನಾಯಕರು ಬಂದು ದ್ವೇಷದ ರಾಜಕಾರಣ ಬೇಡ ಎಂದು ಮನವಿ ಮಾಡಿದರು. ಆದರೆ ಯಡಿಯೂರಪ್ಪ ಅಧಿಕಾರಕ್ಕೆ ಬಂದ ಕ್ಷಣದಿಂದ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಫೋನ್ ಕದ್ದಾಲಿಕೆ ಸಿಬಿಐ ಸೇರಿದಂತೆ ಇತರೆ ಯಾವುದೇ ತನಿಖೆ ನೀಡಲಿ. ಯಾವುದಕ್ಕೂ ಹೆದರುವ ಪ್ರಶ್ನೆಯಿಲ್ಲ ಎಂದು ಖಡಕ್ಕಾಗಿ ತಿಳಿಸಿದರು.

ಬಿ ಎಸ್ ಯಡಿಯೂರಪ್ಪ ಅವರು ಏಕಾಂಗಿಯಾಗಿ ರಾಜ್ಯದಲ್ಲಿ ಪ್ರವಾಸ ಮಾಡಿದ್ದಾರೆ. ಪಾಪ ಅವರೊಬ್ಬರೇ ಓಡಾಡಿದ್ದಾರೆ. ಈವಾಗ ಮಂತ್ರಿ ಮಂಡಳ ವಿಸ್ತರಣೆ ಮಾಡಿದ್ದಾರೆ. ಈಗಲಾದರೂ ಈ ಭಾಗದ ಜನರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅವರ ಕೈಯಲ್ಲಿ ಇವೆ. ಜೆಡಿಎಸ್ ಪಕ್ಷವನ್ನು ಮುಳುಗುತ್ತದೆ ಎಂದು ಎರಡೂ ರಾಷ್ಟ್ರೀಯ ಪಕ್ಷಗಳು ಅಂದುಕೊಂಡಿದ್ದವೆ. ಆದರೆ ನಾವು ಜನರ ನಡುವೆ ಕೆಲಸ ಮಾಡುತ್ತೇವೆ. ಮಂಡ್ಯ ಚುನಾವಣೆಯಲ್ಲಿ ನಮನ್ನು ಯಾರು ಸೋಲಿಸಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ನಾವು ಯಾವುದೇ ಚಕಾರ ಎತ್ತಿಲ್ಲ. ದೇವೇಗೌಡರು ಈ ರೀತಿಯ ರಾಜಕೀಯ ನೋಡಿದ್ದಾರೆ. ನಾವು ಯಾವುದೇ ತನಿಖೆಗೆ ತಲೆಕೆಡಿಸಿಕೊಂಡಿಲ್ಲ ಎಂದರು.