ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಿಸಿಬಿ (CCB) ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಅವರಿಂದ ಮೊಬೈಲ್ ಫೋನ್, ನೋಟ್‌ಬುಕ್ ಹಾಗೂ ಪೆನ್ ಡ್ರೈವ್ ಜಪ್ತಿ ಮಾಡಲಾಗಿದೆ. ಜೈಲಿನ ಒಳಗಿನ ಅಕ್ರಮಗಳಿಗೆ ನೆರವಾಗುತ್ತಿದ್ದ ಸಿಬ್ಬಂದಿಗೆ ಚೋಕ್ ನೀಡಲು ಸಿಸಿಬಿ (CCB) ಹಿರಿಯ ಅಧಿಕಾರಿಗಳು ರೂಪಿಸಿದ್ದ ‘ಪಕ್ಕಾ ಪ್ಲಾನ್’ ಯಶಸ್ವಿಯಾಗಿದೆ.

ಇಲ್ಲಿಯವರೆಗೆ ಸಿಕ್ಕಿ ಬೀಳದ್ದು ಹೇಗೆ?
ಕಳೆದ ಆಗಸ್ಟ್ 6 ರಂದು ಸಿಸಿಬಿ ಪೊಲೀಸರು ಜೈಲಿನ ಮೇಲೆ ದಾಳಿ ನಡೆಸಿದ್ದರೂ ಯಾವುದೇ ನಿಷೇಧಿತ ವಸ್ತುಗಳು ಸಿಕ್ಕಿರಲಿಲ್ಲ. ಸಿಸಿಬಿ ತಂಡ ಎಂಟ್ರಿ ನೀಡುತ್ತಿದ್ದಂತೆ ಜೈಲಿನ ಮುಖ್ಯ ದ್ವಾರದಲ್ಲಿದ್ದ ಸಿಬ್ಬಂದಿ ಒಳಗಿದ್ದ ಕೈದಿಗಳಿಗೆ ಸೌಂಡ್ ಅಥವಾ ಕೋಡ್ ಸಿಗ್ನಲ್ ಮೂಲಕ ಸುಳಿವು ನೀಡುತ್ತಿದ್ದರು.
ದಾಳಿಗೆ ತೆರಳುತ್ತಿದ್ದ ಪ್ರತಿಯೊಬ್ಬ ಅಧಿಕಾರಿಗೆ ಸೀಲ್ ಹಾಕಿ ಒಳಗೆ ಕಳುಹಿಸಲು ಕನಿಷ್ಠ 30 ನಿಮಿಷ ತೆಗೆದುಕೊಳ್ಳಲಾಗುತ್ತಿತ್ತು. ಈ ಸಮಯದೊಳಗೆ ಒಳಗಿದ್ದ ಕೈದಿಗಳು ಮೊಬೈಲ್ ಹಾಗೂ ಇತರ ವಸ್ತುಗಳನ್ನು ಬಚ್ಚಿಡುತ್ತಿದ್ದರು.
ಈ ಬಾರಿ ಸಿಕ್ಕಿ ಬಿದ್ದಿದ್ದು ಹೇಗೆ?
120 ಅಧಿಕಾರಿಗಳ ಬೃಹತ್ ಪಡೆಯನ್ನು ಹೊರಗೆ ನಿಲ್ಲಿಸಿ, ಸಿಸಿಬಿಯ ಇಬ್ಬರು ಡಿಸಿಪಿ (DCP) ಶ್ರೇಣಿಯ ಅಧಿಕಾರಿಗಳು ಜೈಲು ಅಧಿಕಾರಿಗಳ ಜೊತೆ ಸಭೆ ನಡೆಸುವ ನೆಪದಲ್ಲಿ ಜೈಲಿನ ಒಳಗೆ ಪ್ರವೇಶಿಸಿದರು.
ಡಿಸಿಪಿಗಳ ಕಾರಿನಲ್ಲೇ ರಹಸ್ಯವಾಗಿ ಇಬ್ಬರು ಇನ್‌ಸ್ಪೆಕ್ಟರ್‌ಗಳು ಜೈಲಿನ ಆವರಣ ಪ್ರವೇಶಿಸಿದ್ದರು. ಈ ಪೈಕಿ ಒಬ್ಬರು ಜೈಲಿನ ಕಂಟ್ರೋಲ್ ರೂಮ್‌ಗೆ ತೆರಳಿ ಅಲ್ಲಿಂದ ಒಳಗಿನ ಬ್ಯಾರಕ್‌ಗಳಿಗೆ ಯಾವುದೇ ಮೆಸೇಜ್ ಅಥವಾ ವಾಕಿ-ಟಾಕಿ ಸಂದೇಶ ಹೋಗದಂತೆ ತಡೆದರು. ಎರಡನೇ ಇನ್ಸ್‌ಪೆಕ್ಟರ್ ನೇರವಾಗಿ ಸಿಸಿಟಿವಿ ಕಮಾಂಡೆಂಟ್ ಸೆಂಟರ್‌ಗೆ ತೆರಳಿ ಇಡೀ ಕಂಟ್ರೋಲ್ ಸಿಸ್ಟಮ್ ಅನ್ನು ತಮ್ಮ ವಶಕ್ಕೆ ಪಡೆದರು.
ಜೈಲಿನ ಆಂತರಿಕ ಸಂಪರ್ಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕಡಿತಗೊಳಿಸಿದ ನಂತರವಷ್ಟೇ ಹೊರಗೆ ಕಾಯುತ್ತಿದ್ದ 120 ಜನರ ಸಿಸಿಬಿ ತಂಡ ಏಕಾಏಕಿ ಜೈಲಿನೊಳಗೆ ಎಂಟ್ರಿ ಕೊಟ್ಟಿತು. ಇದನ್ನೂ ಓದಿ: ಶಾಲೆ, ಸರ್ಕಾರಿ ಜಾಗಗಳಲ್ಲಿ ಅನುಮತಿ ಕಡ್ಡಾಯ – ಆರ್‌ಎಸ್‌ಎಸ್ ಕಾರ್ಯಕ್ರಮಗಳಿಗೆ ಸರ್ಕಾರ ಅಂಕುಶ?
ಪ್ರಜ್ವಲ್ ಹೇಳಿದ್ದೇನು?
ತಂಡವು ನೇರವಾಗಿ ಪ್ರಜ್ವಲ್ ರೇವಣ್ಣ ಅವರಿದ್ದ ಸೆಲ್‌ಗೆ ತೆರಳಿ ಪರಿಶೀಲನೆ ನಡೆಸಿದಾಗ ಸ್ಮಾರ್ಟ್‌ಫೋನ್, ಪೆನ್ ಡ್ರೈವ್, ನೋಟ್‌ಬುಕ್ ಪತ್ತೆಯಾಗಿವೆ. ಮೊದಲು ಈ ಫೋನ್ ನನ್ನದೇ ಎಂದಿದ್ದ ಪ್ರಜ್ವಲ್ ಪಾಸ್‌ವರ್ಡ್ ಕೇಳುತ್ತಿದ್ದಂತೆ ಯೂ ಟರ್ನ್ ಹೊಡೆದಿದ್ದಾರೆ. ಮೊಬೈಲ್ ಪಾಸ್‌ವರ್ಡ್ ಓಪನ್ ಮಾಡುವಂತೆ ಸೂಚಿಸಿದಾಗ ತಕ್ಷಣವೇ ಅಲರ್ಟ್ ಆದ ಪ್ರಜ್ವಲ್ ಇದು ನನ್ನದ್ದಲ್ಲ ನನಗೇ ಗೊತ್ತಿಲ್ಲ, ನನ್ನದಲ್ಲ ಎಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲೋಕ್ ಕುಮಾರ್ ಬಿಸಿ
ಜೈಲಿನೊಳಗೆ ನಿಷೇಧಿತ ವಸ್ತುಗಳು ಸರಬರಾಜಾಗಲು ಸಹಕರಿಸಿದ ಜೈಲಿನ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಡಿಜಿಪಿ ಅಲೋಕ್ ಕುಮಾರ್ (Alok Kumar) ಮುಂದಾಗಿದ್ದಾರೆ. ಜೈಲು ಸಿಬ್ಬಂದಿಗೆ ನೋಟಿಸ್ ಜಾರಿಯಾಗುವ ಸಾಧ್ಯತೆಯಿದ್ದು, ಪ್ರಜ್ವಲ್ ರೇವಣ್ಣ ಅವರಿಗೆ ಜೈಲಿನಲ್ಲಿ ನೀಡಲಾಗುತ್ತಿದ್ದ ವಿಶೇಷ ಸೌಲಭ್ಯಗಳ ಕುರಿತು ತನಿಖೆ ತೀವ್ರಗೊಂಡಿದೆ.
