– ಯಾವುದೇ ಕಾರ್ಯಕ್ರಮಕ್ಕೆ ಪೊಲೀಸ್ ಸಮ್ಮತಿ ಕಡ್ಡಾಯ
– ಈ ಅಧಿವೇಶನದಲ್ಲೇ ಮಸೂದೆ ಮಂಡನೆ
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ಮತ್ತು ಸರ್ಕಾರದ(Karnataka Government) ಮಧ್ಯೆ ಮತ್ತೊಂದು ಹಂತದಲ್ಲಿ ಸಂಘರ್ಷ ಆರಂಭವಾಗುವ ಎಲ್ಲಾ ಲಕ್ಷಣಗಳು ಕಾಣಿಸತೊಡಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ನಿಯಂತ್ರಣ ಮಾಡಲು ಸರ್ಕಾರ ಹೊಸ ಕಾಯ್ದೆ ತರಲು ಮುಂದಾಗಿದೆ. ಗುರುವಾರ ನಡೆದ ಸಂಪುಟ ಸಭೆಯಲ್ಲಿ (Cabinet Meeting) ಮಸೂದೆಗೆ ಒಪ್ಪಿಗೆ ಸಿಕ್ಕಿದ್ದು ಈ ಅಧಿವೇಶನದಲ್ಲೇ ಮಂಡನೆ ಮಾಡಲು ಮುಂದಾಗಿದೆ.
ಕರ್ನಾಟಕ ಸರ್ಕಾರಿ ಆವರಣಗಳ ಹಾಗೂ ಸಾರ್ವಜನಿಕ ಸ್ವತ್ತುಗಳ ಬಳಕೆ ನಿಯಂತ್ರಣ ಮಸೂದೆ – 2026 (Karnataka Regulation of Use of Government Premises and Public Property Bill, 2026) ಮಂಡಿಸಲು ಸಂಪುಟ ಅನುಮತಿ ನೀಡಿದೆ. ಹೊಸ ಕಾಯ್ದೆ ಬಗ್ಗೆ ಮಾತನಾಡಿರುವ ಡಿಕೆ ಶಿವಕುಮಾರ್, ಯಾರೇ ಆದರೂ ಬೀದಿಯಲ್ಲಿ ಸಭೆ, ಸಮಾರಂಭ, ಕಾರ್ಯಕ್ರಮ ಮಾಡಲು ಸಾಧ್ಯವೇ? ಇಂಥದ್ದಕ್ಕೆಲ್ಲ ಕಡಿವಾಣ ಹಾಕಬೇಕಲ್ವಾ ಎಂದು ಪ್ರಶ್ನಿಸಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಮಸೂದೆಯಲ್ಲಿ ಏನಿದೆ?
ಸರ್ಕಾರಿ ಶಾಲೆ ಕಾಲೇಜು, ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಂಘಟನೆ, ಸಂಸ್ಥೆಗಳು ಯಾವುದೇ ಧಾರ್ಮಿಕ, ರಾಜಕೀಯ ಕಾರ್ಯಕ್ರಮ ಆಯೋಜನೆಗೆ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯವಾಗಲಿದೆ. ಕಾರ್ಯಕ್ರಮಕ್ಕೆ ಅನುಮತಿ ನೀಡಬೇಕೇ ಬೇಡವೋ ಎಂಬ ಅಧಿಕಾರವನ್ನ ಪೊಲೀಸರಿಗೆ ನೀಡಲಾಗುತ್ತದೆ. ನಿಯಮ ಮೀರಿದರೆ ಜೈಲು ಶಿಕ್ಷೆ, ದಂಡ ವಿಧಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಆರ್‌ಎಸ್‌ಎಸ್ ನಿಯಂತ್ರಣ ಹೇಗೆ?
ಆರಂಭದಿಂದಲೂ ಆರ್‌ಎಸ್‌ಎಸ್ ಅನ್ನು ನೋಂದಣಿ ಮಾಡಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳುತ್ತಿದ್ದು ನಮ್ಮದು ಸ್ವಯಂಸೇವಕ ವ್ಯಕ್ತಿಗಳ ಗುಂಪಾಗಿರುವುದರಿಂದ ಅನುಮತಿ ಪಡೆಯಬೇಕೆಂಬ ನಿಯಮ ಸಂವಿಧಾನದಲ್ಲಿ ಎಲ್ಲೂ ಇಲ್ಲ ಎನ್ನುವುದು ಆರ್‌ಎಸ್‌ಎಸ್ ವಾದ. ಈಗ ಯಾವುದೇ ಕಾರ್ಯಕ್ರಮ ನಡೆಸಲು ಸಂಘ-ಸಂಸ್ಥೆಗಳ ಮುಖ್ಯಸ್ಥರೇ ಅನುಮತಿ ಪತ್ರ ನೀಡಬೇಕು ಎಂಬ ನಿಯಮವನ್ನು ವಿಧೇಯಕದಲ್ಲಿ ಪ್ರಸ್ತಾಪಿಸಿದ್ದು, ಸ್ಥಳೀಯವಾಗಿ ಸಂಘಟನೆಯ ಮುಖ್ಯಸ್ಥರು ಎಂಬುದನ್ನು ಖಚಿತಪಡಿಸಿಕೊಂಡೇ ಪೊಲೀಸರು ಅನುಮತಿ ನೀಡುವ ಸಾಧ್ಯತೆ ಇದೆ. ಅಥವಾ ಸಂಬಂಧಿಸಿದ ದಾಖಲೆಗಳನ್ನು ಕೊಡದಿದ್ದರೆ ಅನುಮತಿ ನಿರಾಕರಿಸುವ ಸಾಧ್ಯತೆಗಳೂ ಇವೆ.
ಆರ್‌ಎಸ್‌ಎಸ್ ಶಾಲಾ-ಕಾಲೇಜುಗಳ ಆಟದ ಮೈದಾನದಲ್ಲಿ ಸೆಲ್ಫ್ ಡಿಫೆನ್ಸ್ ಜಾಗೃತಿ, ಸಾಂಸ್ಕೃತಿಕ ಕಾರ್ಯಕ್ರಮ, ದೇಶಭಕ್ತಿ ಕಾರ್ಯಕ್ರಮ ಸೇರಿ ಹಲವು ಕಾರ್ಯಕ್ರಮ ಆಯೋಜಿಸುತ್ತಿತ್ತು. ಈ ಹಿಂದೆ ಶಾಲಾ-ಕಾಲೇಜು ಪ್ರಾಂಶುಪಾಲರ ಹಂತದಲ್ಲಿ ಅನುಮತಿ ಪಡೆದು ಕಾರ್ಯಕ್ರಮ ನಡೆಸುತ್ತಿತ್ತು. ಆದರೆ ಇನ್ನು ಮುಂದೆ ಪೊಲೀಸರಿಂದ ಅನುಮತಿ ಪಡೆಯಬೇಕಾಗುತ್ತದೆ. ಅಂದರೆ ಪರೋಕ್ಷವಾಗಿ ಅನುಮತಿ ನಿಯಂತ್ರಣವನ್ನು ಸರ್ಕಾರವೇ ಮಾಡಲಿದೆ.

ವಿಜಯದಶಮಿ ಸೇರಿದಂತೆ ಹಲವು ಹಿಂದೂ ಧಾರ್ಮಿಕ ಹಬ್ಬಗಳ ಸಮಯದಲ್ಲಿ ಆರ್‌ಎಸ್‌ಎಸ್ ರಸ್ತೆಯಲ್ಲಿ ಪಥಸಂಚಲನ ಮಾಡುತ್ತಿತ್ತು. ಈ ಮಸೂದೆ ಕಾಯ್ದೆಯಾದರೆ ಈ ಪಥ ಸಂಚಲನಕ್ಕೆ ಜಿಲ್ಲಾ ಮಟ್ಟದಲ್ಲೇ ಅನುಮತಿ ಪಡೆಯುವುದು ಕಡ್ಡಾಯವಾಗುತ್ತದೆ.
ಚಿತ್ತಾಪುರದಿಂದ ವಿವಾದ ಆರಂಭ:
ಕಳೆದ ವರ್ಷ ಪ್ರಿಯಾಂಕ್ ಖರ್ಗೆ ಪ್ರತಿನಿಧಿಸುವ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥ ಸಂಚಲನ ವಿಚಾರದಲ್ಲಿ ಜಟಾಪಟಿ ಸೃಷ್ಟಿಯಾಗಿತ್ತು. ಹಲವು ಬಾರಿ ಪಥಸಂಚಲನಕ್ಕೆ ಅನುಮತಿ ನೀಡುವಂತೆ ಕೋರಿ ಆರ್‌ಎಸ್‌ಎಸ್ ಮನವಿ ಸಲ್ಲಿಸಿದರೂ ಅದು ತಿರಸ್ಕೃತವಾಗುತ್ತಿತ್ತು.
ಬೆನ್ನಲ್ಲೇ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಪಡೆಯಬೇಕೆಂದು ಆದೇಶ ಜಾರಿ ಮಾಡಿತ್ತು. ಈ ಆದೇಶದಡಿ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಅಥವಾ ಮೆರವಣಿಗೆಗೆ ಪೂರ್ವಾನುಮತಿ ಕಡ್ಡಾಯಗೊಳಿಸಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಆರ್‌ಎಸ್‌ಎಸ್ ಹೈಕೋರ್ಟ್ ಮೊರೆ ಹೋಗಿ ಕೊನೆಗೆ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿತ್ತು.
The Cabinet has approved The Karnataka Regulation of Use of Government Premises and Public Property Bill, 2026.
The Bill seeks to regulate and govern the use of Government premises and public property by private individuals, organizations, associations and societies. It provides…
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) August 13, 2026
ಪ್ರಿಯಾಂಕ್ ಖರ್ಗೆ ಹೇಳಿದ್ದೇನು?
ಕರ್ನಾಟಕ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿ ಬಳಕೆ ನಿಯಂತ್ರಣ ಮಸೂದೆ 2026 ಅನ್ನು ಸಚಿವ ಸಂಪುಟ ಅನುಮೋದಿಸಿದೆ. ಖಾಸಗಿ ವ್ಯಕ್ತಿಗಳು, ಸಂಸ್ಥೆಗಳು, ಸಂಘಗಳು ಮತ್ತು ಸಂಘಗಳಿಂದ ಸರ್ಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿಯ ಬಳಕೆಯನ್ನು ನಿಯಂತ್ರಿಸಲು ಮತ್ತು ನಿಯಂತ್ರಿಸಲು ಈ ಮಸೂದೆ ಪ್ರಯತ್ನಿಸುತ್ತದೆ. ಸರ್ಕಾರಿ ಭೂಮಿಗಳು, ಕಟ್ಟಡಗಳು, ಆಟದ ಮೈದಾನಗಳು, ಉದ್ಯಾನವನಗಳು, ರಸ್ತೆಗಳು ಮತ್ತು ಇತರ ಸಾರ್ವಜನಿಕ ಸ್ವತ್ತುಗಳ ರಕ್ಷಣೆ, ಸಂರಕ್ಷಣೆ ಮತ್ತು ಜವಾಬ್ದಾರಿಯುತ ಬಳಕೆಯನ್ನು ಖಚಿತಪಡಿಸಿಕೊಳ್ಳಲು, ದುರುಪಯೋಗವನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಪ್ರಯೋಜನ ಮತ್ತು ಒಳಿತಿಗಾಗಿ ಅವುಗಳನ್ನು ರಕ್ಷಿಸುವಾಗ ಕಾನೂನು ಚೌಕಟ್ಟನ್ನು ಇದು ಒದಗಿಸುತ್ತದೆ.
ಯಾವುದೇ ನಿರ್ದಿಷ್ಟ ಸಂಸ್ಥೆ, ಸಂಘ, ಸಂಸ್ಥೆ, ಸಮಾಜ, ಕ್ಲಬ್, ಯೂನಿಯನ್, ಸಿಂಡಿಕೇಟ್ ಅಥವಾ ಎನ್‌ಜಿಒಗಳನ್ನು ಮೊಟಕುಗೊಳಿಸುವುದು ಅಥವಾ ನಿಗ್ರಹಿಸುವುದು ಎಂದು ಎಲ್ಲರೂ ಏಕೆ ಭಾವಿಸುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

