ಚಿಕ್ಕಮಗಳೂರು: ಕಾಫಿನಾಡು ಹಾಗೂ ಮಲೆನಾಡು ಭಾಗದಲ್ಲಿ ಪುಷ್ಯ ಮಳೆ ಅಬ್ಬರ ಮುಂದುವರಿದಿದೆ. ಧಾರಾಕಾರ ಮಳೆಯಿಂದ ಶೃಂಗೇರಿ ತಾಲೂಕಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ತುಂಗಾ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ.
ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಗುಡ್ಡ ಕುಸಿತ ಸಂಭವಿಸಿದ್ದು, ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಶೃಂಗೇರಿ ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ನಿರಂತರ ಮಳೆ ಸುರಿಯುತ್ತಿದೆ. ತುಂಗಾ ನದಿಯ ನೀರಿನ ಮಟ್ಟ ವೇಗವಾಗಿ ಏರಿಕೆಯಾಗಿದ್ದು, ಪಟ್ಟಣದ ಹಲವು ಪ್ರದೇಶಗಳು ಜಲಾವೃತವಾಗಿವೆ. ಕೆಇಬಿ ವೃತ್ತದ ಆಟೋ ನಿಲ್ದಾಣ, ಪ್ಯಾರಲಲ್ ರಸ್ತೆ, ಸೇರಿದಂತೆ ಹಲವು ರಸ್ತೆಗಳ ಮೇಲೆ ನೀರು ಹರಿದಿದ್ದು, ಜನರು ಆತಂಕದಲ್ಲಿ ದಿನ ಕಳೆಯುವಂತಾಗಿದೆ.
ನದಿ ನೀರಿನ ಮಟ್ಟ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿರುವುದರಿಂದ ಪ್ರವಾಹ ಭೀತಿ ಹೆಚ್ಚಿದೆ. ಮಳೆ ಇದೇ ರೀತಿ ಮುಂದುವರಿದರೆ ಇನ್ನಷ್ಟು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಮುಳ್ಳಯ್ಯನಗಿರಿ ತಪ್ಪಲಿನ ದತ್ತಪೀಠ ಮಾರ್ಗದ ಕವಿಕಲ್ ಗಂಡಿ ಬಳಿ ಭೂಮಿಯ ತೇವಾಂಶ ಹೆಚ್ಚಾದ ಪರಿಣಾಮ ಗುಡ್ಡ ಕುಸಿದಿದೆ. ಕಾಂಕ್ರೀಟ್ ತಡೆಗೋಡೆ ನಿರ್ಮಾಣ ನಡೆಯುತ್ತಿದ್ದ ಸ್ಥಳದಲ್ಲೇ ಈ ಘಟನೆ ಸಂಭವಿಸಿದೆ.ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿಗೆ ವಿಜಯಲಕ್ಷ್ಮಿ ಭೇಟಿ; ದರ್ಶನ್ ಜೊತೆ ಅರ್ಧ ಗಂಟೆ ಮಾತುಕತೆ
ಗುಡ್ಡ ಕುಸಿತದಿಂದ ರಸ್ತೆಯ ಮೇಲೆ ಮಣ್ಣು ಬಿದ್ದಿದ್ದರೂ, ಅಧಿಕಾರಿಗಳು ತಕ್ಷಣವೇ ತೆರವು ಕಾರ್ಯಾಚರಣೆ ನಡೆಸಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಅತ್ತಿಗುಂಡಿ, ಮಹಲ್ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಮಳೆ ಹೆಚ್ಚಾದರೆ ಮತ್ತಷ್ಟು ಗುಡ್ಡ ಕುಸಿಯುವ ಭೀತಿ ಇದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರು ಅಗತ್ಯ ಎಚ್ಚರಿಕೆ ವಹಿಸಿ ಸಂಚರಿಸಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.ಇದನ್ನೂ ಓದಿ: ಶಾಲಾ-ಕಾಲೇಜುಗಳ 50 ಮೀಟರ್ ವ್ಯಾಪ್ತಿಯಲ್ಲಿ ಜಂಕ್‌ಫುಡ್ ನಿಷೇಧ: ಖಾದರ್ ಆದೇಶ
