ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರನ್ನು ನೇಮಿಸಿಕೊಳ್ಳಲು ಪಾಕ್ ಮೂಲದ ಭಯೋತ್ಪಾದಕರ ಗುಂಪುಗಳು ಪೋರ್ನ್ ಸೈಟ್‌ಗಳನ್ನು ಬಳಸುತ್ತಿವೆ ಎಂದು ವರದಿಯಾಗಿದೆ.
ಭಯೋತ್ಪಾದಕರು ಸಂದೇಶಗಳು ಹಾಗೂ ಸೂಚನೆಗಳನ್ನು ರವಾನಿಸಲು ಮತ್ತು ಭೂಗತ ಹ್ಯಾಂಡ್ಲರ್‌ಗಳನ್ನು ಸಂಪರ್ಕಿಸಲು ವಯಸ್ಕರ ಸೈಟ್‌ಗಳಲ್ಲಿ ರಹಸ್ಯ ಚಾಟ್ ರೂಮ್‌ಗಳನ್ನು ಬಳಸುತ್ತಿದ್ದಾರೆ. ವಾಟ್ಸಾಪ್, ಫೇಸ್‌ಬುಕ್ ಮೆಸೆಂಜರ್ ಮತ್ತು ಸಿಗ್ನಲ್‌ನಂತಹ ವೇದಿಕೆಗಳನ್ನು ಭಯೋತ್ಪಾದಕರು ಮತ್ತು ಪಾಕಿಸ್ತಾನ ಮೂಲದ ನಿರ್ವಾಹಕರು ಮೊದಲು ಬಳಕೆ ಮಾಡುತ್ತಿದ್ದರು. ಭದ್ರತಾ ಸಂಸ್ಥೆಗಳು ಈ ಬಗ್ಗೆ ಭಾರೀ ನಿಗಾ ಇಡುತ್ತಿರುವುದರಿಂದ ಅಶ್ಲೀಲ ಸೈಟ್ ಮತ್ತು ಡೇಟಿಂಗ್ ವೇದಿಕೆಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಭಾರತದ ಭದ್ರತಾ ಸಂಸ್ಥೆಗಳು ತಿಳಿಸಿವೆ.
ಭಾರತದಲ್ಲಿ ನಿಷೇಧಿಸಲಾದ ಮತ್ತು VPN ಗಳ ಮೂಲಕ ಅಕ್ರಮವಾಗಿ ಪ್ರವೇಶಿಸಬಹುದಾದ ವೇದಿಕೆಗಳನ್ನು ಉಗ್ರರು ಬಳಸುತ್ತಿದ್ದಾರೆ. ಈ ಮೂಲಕ, ಭಯೋತ್ಪಾದಕ ನಿರ್ವಾಹಕರು ತಮ್ಮ ಗುರುತನ್ನು ಮರೆಮಾಚುತ್ತಿದ್ದಾರೆ. ಈ ಮೂಲಕ ಕಣ್ಗಾವಲು ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಭದ್ರತಾ ಪಡೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಕೋಟೆಕ್ಸ್ ಮತ್ತು ಕೋನಿಯನ್‌ನಂತಹ ಟೋರ್-ಆಧಾರಿತ ಅಪ್ಲಿಕೇಶನ್‌ಗಳನ್ನು ಗುರುತುಗಳನ್ನು ಮರೆಮಾಡಲು ಮತ್ತು ಟ್ರ್ಯಾಕಿಂಗ್ ತಪ್ಪಿಸಲು ವ್ಯಾಪಕವಾಗಿ ಬಳಸಲಾಗುತ್ತಿದೆ. ಇತರ ಅತಿ ಖಾಸಗಿ ಅಪ್ಲಿಕೇಶನ್‌ಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್, ಸಂದೇಶಗಳ ಸ್ವಯಂ ಡಿಲೀಟ್ ಆಯ್ಕೆಗಳನ್ನು ನೀಡುತ್ತವೆ. ಮೊಬೈಲ್ ಸಂಖ್ಯೆ ಅಥವಾ ಸಿಮ್ ಕಾರ್ಡ್ ಇಲ್ಲದೆ ಸಹ ಇವುಗಳನ್ನು ಬಳಸಬಹುದಾಗಿದೆ.
ಈ ಅಪ್ಲಿಕೇಶನ್‌ಗಳು ನಿಧಾನಗತಿಯ 2G ಮತ್ತು EDGE ನೆಟ್‌ವರ್ಕ್‌ಗಳಲ್ಲಿಯೂ ಸಹ ಕಾರ್ಯನಿರ್ವಹಿಸುತ್ತವೆ. ಇದರಿಂದ ಕಳಪೆ ಸಂಪರ್ಕ ಹೊಂದಿರುವ ದೂರದ ಪ್ರದೇಶಗಳಿಗೂ ಸಂದೇಶ ರವಾನೆ ಸಾಧ್ಯವಿದೆ. ಈ ಸೌಲಭ್ಯ ಹೆಚ್ಚು ಅಪಾಯಕಾರಿ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಸಾಂಪ್ರದಾಯಿಕ ಸಂವಹನ ಮಾರ್ಗಗಳ ಮೇಲೆ ಭಾರತೀಯ ಭದ್ರತಾ ಏಜೆನ್ಸಿಗಳು ನಡೆಸಿದ ಸರಣಿ ದಾಳಿಗಳಿಂದ ಪಾಕಿಸ್ತಾನದ ಗುಪ್ತಚರ ಸಂಸ್ಥೆ, ISI ಈ ತಂತ್ರ ಬಳಸುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ತನ್ನ ಹಿಡಿತ ಇಟ್ಟುಕೊಳ್ಳಲು ಈ ಮಾರ್ಗ ಬಳಸಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪಾಕ್ ಪ್ರಾಯೋಜಿತ ಭಯೋತ್ಪಾದನೆಯಲ್ಲಿ ಇದು ಹೊಸ ಮತ್ತು ತೀರಾ ಕೆಳಮಟ್ಟದ ತಂತ್ರವಾಗಿದೆ. ಇದರಿಂದ ದುರ್ಬಲ ಯುವಕರು ಸುಲಭವಾಗಿ ಬಲೆಗೆ ಬೀಳಲಿದ್ದಾರೆ. ಇದಕ್ಕೆ ಪ್ರತಿತಂತ್ರ ಹೆಣೆಯಲಾಗುತ್ತಿದೆ ಎಂದು ಭದ್ರತಾ ಸಂಸ್ಥೆಗಳು ತಿಳಿಸಿವೆ.
