ಬೆಂಗಳೂರು: ಬಿಸಿಲ ಧಗೆಯಿಂದ ಕಂಗೆಟ್ಟ ಬೆಂಗಳೂರಿಗೆ ವರುಣ ತಂಪೆರೆದಿದ್ದಾನೆ. ನಗರದ ಹಲವೆಡೆ ಧಾರಾಕಾರ ಮಳೆ ಸುರಿದಿದ್ದು, ವಾಹನ ಸವಾರರು ಪರದಾಡಿದ್ದಾರೆ.
ನಗರದಲ್ಲಿ ಸಾಯಂಕಾಲ ಆಗುತ್ತಿದ್ದಂತೆ ದಟ್ಟ ಮೋಡ ಆವರಿಸಿಕೊಂಡಿತ್ತು. ಅದಾದ ಸ್ವಲ್ಪ ಹೊತ್ತಿನಲ್ಲೇ ಜೋರಾದ ಮಳೆ ಸುರಿದಿದೆ. ವಿಧಾನಸೌಧ, ಶಿವಾಜಿನಗರ, ಮಲ್ಲೇಶ್ವರ ಕಾರ್ಪೊರೇಷನ್ ಭಾಗದಲ್ಲಿ ಭಾರೀ ಮಳೆ ಸುರಿದಿದೆ.
ಇಂದು ಬೆಂಗಳೂರಿಗೆ ಹವಾಮಾನ ಇಲಾಖೆ ಎಲ್ಲೋ ಆಲರ್ಟ್ ಘೋಷಣೆ ಮಾಡಿದೆ. ಮೆಜೆಸ್ಟಿಕ್, ಕೆಆರ್ ಮಾರ್ಕೆಟ್, ಚಾಮರಾಜಪೇಟೆ, ಮಲ್ಲೇಶ್ವರಂ, ಶೇಷಾದ್ರಿಪುರಂ, ಹೆಬ್ಬಾಳ ಸೇರಿದಂತೆ ಹಲವೆಡೆ ಜೋರು ಮಳೆಯಾಗಿದೆ. ರಾಜಾಜಿನಗರ, ಮಲ್ಲೇಶ್ವರಂ ಸೇರಿದಂತೆ ಹಲವೆಡೆ ಗಾಳಿ ಸಮೇತ ಮಳೆಯಾಗಿದೆ.
ಮಳೆ ಅಬ್ಬರಕ್ಕೆ ಟೌನ್ ಹಾಲ್ ಮುಂಭಾಗದ ರಸ್ತೆ ಕೆರೆಯಂತೆ ಕಾಣುತ್ತಿದೆ. ಮಳೆಗೆ ವಾಹನ ಸವಾರರು ಹೈರಾಣಾಗಿದ್ದಾರೆ. ಫ್ರೀಡಂಪಾರ್ಕ್ ಬಳಿ ರಸ್ತೆಗಳು ಜಲಾವೃತಗೊಂಡಿವೆ. ಇದರಿಂದ ಸಂಚಾರ ಕಷ್ಟವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಮುಂದಿನ ಮೂರು ಗಂಟೆಗಳ ಕಾಲ ಭಾರೀ ಮಳೆ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಕನ್ನಡ, ಬೆಂಗಳೂರು, ಬೆಳಗಾವಿ, ಕಲಬುರಗಿ, ವಿಜಯಪುರ, ಧಾರವಾಡ, ಮೈಸೂರು, ತುಮಕೂರು ಹಾಗೂ ರಾಮನಗರದಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ.
ಮಳೆಯಿಂದ ವಿಧಾನಸೌಧದ ಪಕ್ಕದ ಪ್ಯಾಲೇಸ್ ರಸ್ತೆ ಕೆರೆಯಂತಾಗಿದೆ. ವಾಹನ ಸಾವರರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದು ರಸ್ತೆಯೋ ಅಥವಾ ಕೆರೆಯೋ? ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

