ತನ್ನ ನೈಸರ್ಗಿಕ ಸೌಂದರ್ಯದಿಂದಲೇ ಜಾಗತಿಕವಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುವ ಲಕ್ಷದ್ವೀಪ ಈಗ ಮತ್ತೊಂದು ಪ್ರಮುಖ ಬದಲಾವಣೆಗೆ ಸಾಕ್ಷಿಯಾಗಿದೆ. ಅರಬ್ಬಿ ಸಮುದ್ರದ ಜಲರಾಶಿಯ ನಡುವೆ ಕರಾವಳಿಯ ಹಸಿರು ಹೊದ್ದು ಮಲಗಿರುವ ಲಕ್ಷದ್ವೀಪ, ಕೇವಲ ಪ್ರಕೃತಿ ಸೌಂದರ್ಯದ ನೆಲೆಯಲ್ಲ. ಅದು ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಬೇರುಗಳು ಮತ್ತು ಕಟ್ಟುನಿಟ್ಟಾದ ಸಾಮಾಜಿಕ ನಿಯಮಗಳಿಗೆ ಹೆಸರಾದ ಭೂಮಿ. ದಶಕಗಳಿಂದಲೂ ಇಲ್ಲಿನ ಜನಜೀವನ ಅತ್ಯಂತ ಸರಳ ಹಾಗೂ ಸಾಂಪ್ರದಾಯಿಕ ಚೌಕಟ್ಟಿನಲ್ಲೇ ಸಾಗುತ್ತಾ ಬಂದಿದೆ.
ಇದೀಗ ಬದಲಾಗುತ್ತಿರುವ ಜಾಗತಿಕ ಆರ್ಥಿಕತೆ ಮತ್ತು ಪ್ರವಾಸೋದ್ಯಮದ ಪೈಪೋಟಿ ಈ ನಿಶ್ಶಬ್ದ ಕರಾವಳಿಯಲ್ಲೂ ಹೊಸ ಬಿರುಗಾಳಿಯೊಂದನ್ನು ಎಬ್ಬಿಸಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಮತ್ತು ಆರ್ಥಿಕತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ದಶಕಗಳಿಂದ ಜಾರಿಯಲ್ಲಿದ್ದ ಮದ್ಯ ನಿಷೇಧ ಕಾಯ್ದೆಯನ್ನು ಇದೀಗ ತೆರವುಗೊಳಿಸಲಾಗಿದೆ. ಇದರ ಬೆನ್ನಲ್ಲೇ ಮಾಲ್ಡೀವ್ಸ್ ಮಾದರಿಯಲ್ಲಿ ಲಕ್ಷದ್ವೀಪವನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಸದ್ಯ ಈ ಹೊಸ ಆದೇಶವು ದ್ವೀಪದ ಸಾಮಾಜಿಕ ಮತ್ತು ಆರ್ಥಿಕ ವಲಯದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ಪರ-ವಿರೋಧ ಚರ್ಚೆಗಳಿಗೆ ಕಾರಣವಾಗಿದೆ.
ಈ ಮೊದಲು ಲಕ್ಷದ್ವೀಪದಲ್ಲಿ ಮದ್ಯ ನಿಷೇಧ ಹೇರಿದ್ದು ಯಾಕೆ?
1970ರ ದಶಕದಲ್ಲಿ ಲಕ್ಷದ್ವೀಪದಲ್ಲಿ ಮದ್ಯದ ಬಳಕೆಯಿಂದಾಗಿ ಕೌಟುಂಬಿಕ ಕಲಹಗಳು, ಹಿಂಸೆ ಮತ್ತು ಸಾರ್ವಜನಿಕ ಶಾಂತಿಗೆ ಧಕ್ಕೆಯುಂಟಾಗುತ್ತಿತ್ತು. ಇದರಿಂದ ಬೇಸತ್ತ ಸ್ಥಳೀಯ ಮಹಿಳೆಯರು ಮತ್ತು ಸಾಮಾಜಿಕ ಮುಖಂಡರು ದ್ವೀಪದಲ್ಲಿ ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ದೊಡ್ಡ ಮಟ್ಟದ ಪ್ರತಿಭಟನೆ ಮಾಡಿದ್ದರು.
ಲಕ್ಷದ್ವೀಪದ ಒಟ್ಟು ಜನಸಂಖ್ಯೆಯಲ್ಲಿ ಶೇ.96ಕ್ಕಿಂತ ಹೆಚ್ಚು ಜನ ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇಸ್ಲಾಂ ಧರ್ಮದಲ್ಲಿ ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸಿರುವುದರಿಂದ, ಸ್ಥಳೀಯರ ಧಾರ್ಮಿಕ ಭಾವನೆಗಳು, ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಜೀವನ ಪದ್ಧತಿಯನ್ನು ಗೌರವಿಸುವ ನಿಟ್ಟಿನಲ್ಲಿ 1979ರಲ್ಲಿ ಈ ಐತಿಹಾಸಿಕ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
1977 ರಿಂದ 1979ರ ಅವಧಿಯಲ್ಲಿ ಭಾರತದ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿಯವರು ದೇಶಾದ್ಯಂತ ಮದ್ಯ ನಿಷೇಧ ತರಬೇಕು ಎಂಬ ಬಲವಾದ ಆಶಯ ಹೊಂದಿದ್ದರು. ಅವರ ಅಧಿಕಾರಾವಧಿಯ ಕೊನೆಯ ಭಾಗದಲ್ಲಿ ಲಕ್ಷದ್ವೀಪದಲ್ಲಿ ಈ ಕಾಯ್ದೆಯನ್ನು ತರಲಾಯಿತು. ಅಂದಿನಿಂದ ಲಕ್ಷದ್ವೀಪದಲ್ಲಿ ಕಟ್ಟುನಿಟ್ಟಾದ ಮದ್ಯ ನಿಷೇಧವನ್ನು ಹೇರಲಾಗಿತ್ತು. ಭಾರತದ ರಾಜ್ಯಗಳ ಪೈಕಿ ಗುಜರಾತ್ ಬಿಟ್ಟರೆ, ಸಂಪೂರ್ಣ ಮದ್ಯ ನಿಷೇಧ ಹೊಂದಿದ್ದ ಏಕೈಕ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪವಾಗಿತ್ತು.
ಆಗ ಜಾರಿಯಾಗಿದ್ದ ಮದ್ಯ ನಿಷೇಧ ಕಾನೂನಿನ ಪ್ರಕಾರ, ದ್ವೀಪದಲ್ಲಿ ಮದ್ಯ ಮಾರಾಟ, ಸಂಗ್ರಹಣೆ ಮತ್ತು ಬಳಕೆ ಸಂಪೂರ್ಣ ಅಪರಾಧವಾಗಿತ್ತು. ಕೇವಲ ಜನವಸತಿ ಇಲ್ಲದ ‘ಬಂಗಾರಂ’ ದ್ವೀಪದ ರೆಸಾರ್ಟ್‌ನಲ್ಲಿ ಮಾತ್ರ ಪ್ರವಾಸಿಗರಿಗಾಗಿ ಮದ್ಯ ಬಳಕೆಗೆ ಸಣ್ಣ ವಿನಾಯಿತಿ ನೀಡಲಾಗಿತ್ತು. ಉಳಿದಂತೆ ಇಡೀ ದ್ವೀಪಸಮೂಹದಲ್ಲಿ ಇದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿತ್ತು. ಇದರಿಂದಾಗಿ ಲಕ್ಷದ್ವೀಪವು ಭಾರತದಲ್ಲೇ ಅತ್ಯಂತ ಕಡಿಮೆ ಅಪರಾಧ ಪ್ರಮಾಣ ಹೊಂದಿರುವ ಪ್ರದೇಶವಾಗಿ ಹೊರಹೊಮ್ಮಿತ್ತು. ಇಲ್ಲಿನ ಶಾಂತಿ, ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಮದ್ಯ ನಿಷೇಧವು ಪ್ರಮುಖ ಕಾರಣವಾಗಿತ್ತು.
ಇದೀಗ ನಿಷೇಧ ತೆರವುಗೊಳಿಸಿದ್ದು ಯಾಕೆ?
ಲಕ್ಷದ್ವೀಪದಲ್ಲಿ ಕಳೆದ 47 ವರ್ಷಗಳಿಂದ (ಸುಮಾರು 5 ದಶಕಗಳಿಂದ) ಜಾರಿಯಲ್ಲಿದ್ದ ಮದ್ಯ ನಿಷೇಧ ಕಾಯ್ದೆಯನ್ನು 2026ರ ಮೇ 29ರಂದು ಅಧಿಕೃತ ಗೆಜೆಟ್ ಅಧಿಸೂಚನೆ ಹೊರಡಿಸುವ ಮೂಲಕ ತೆರವುಗೊಳಿಸಲಾಯಿತು.
ಲಕ್ಷದ್ವೀಪವು ಒಂದು ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ ಅಲ್ಲಿನ ಕಾನೂನು ರೂಪಿಸುವ ಸಂಪೂರ್ಣ ಅಧಿಕಾರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ .ಹೀಗಾಗಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನದ 240ನೇ ವಿಧಿಯಡಿ ನೀಡಿರುವ ಅಧಿಕಾರವನ್ನು ಬಳಸಿ, ಹೊಸ ‘ಲಕ್ಷದ್ವೀಪ ಅಬಕಾರಿ ನಿಯಂತ್ರಣ ಕಾಯ್ದೆ 2026’ಕ್ಕೆ ಅಂಕಿತ ಹಾಕಿದ್ದಾರೆ.
ಲಕ್ಷದ್ವೀಪದ ಸ್ಥಳೀಯ ಆಡಳಿತ ಮತ್ತು ಅದರ ಮುಖ್ಯಸ್ಥರಾದ ಅಡ್ಮಿನಿಸ್ಟ್ರೇಟರ್ ಪ್ರಫುಲ್ ಪಟೇಲ್ ಅವರು ಈ ಹೊಸ ನಿಯಮಗಳನ್ನು ದ್ವೀಪದಲ್ಲಿ ಜಾರಿಗೆ ತರುವ ಮತ್ತು ಲೈಸೆನ್ಸ್ ನೀಡುವ, ನಿಯಂತ್ರಿಸುವ ಜವಾಬ್ದಾರಿಯನ್ನು ಮಾತ್ರ ಹೊಂದಿರುತ್ತಾರೆ. ಆದರೆ ಕಾಯ್ದೆಯನ್ನು ರದ್ದುಗೊಳಿಸುವ ಮೂಲ ತೀರ್ಮಾನ ಕೇಂದ್ರ ಸರ್ಕಾರದ್ದಾಗಿದೆ.
ಅಂತಾರಾಷ್ಟ್ರೀಯ ಮಟ್ಟದ ಪ್ರವಾಸೋದ್ಯಮದ ಪೈಪೋಟಿ:
ಕೇಂದ್ರ ಸರ್ಕಾರವು ಲಕ್ಷದ್ವೀಪವನ್ನು ಮಾಲ್ಡೀವ್ಸ್ ಮಾದರಿಯಲ್ಲಿ ಜಾಗತಿಕ ಮಟ್ಟದ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ದೊಡ್ಡ ಮಟ್ಟದ ಯೋಜನೆಗಳನ್ನು ಹಮ್ಮಿಕೊಂಡಿದೆ. ಮದ್ಯದ ಮೇಲಿದ್ದ ಕಠಿಣ ನಿಯಮಗಳು ವಿದೇಶಿ ಮತ್ತು ದೇಶೀಯ ಪ್ರವಾಸಿಗರನ್ನು ಸೆಳೆಯಲು ಒಂದು ದೊಡ್ಡ ಅಡ್ಡಿಯಾಗಿತ್ತು. ಪ್ರವಾಸಿಗರಿಗೆ ಜಾಗತಿಕ ಗುಣಮಟ್ಟದ ಆತಿಥ್ಯ ನೀಡುವ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಆದಾಯ ಹೆಚ್ಚಳ ಮತ್ತು ಪ್ರಾದೇಶಿಕ ಅಭಿವೃದ್ಧಿ
ಇಷ್ಟು ವರ್ಷಗಳ ಕಾಲ ಮದ್ಯ ನಿಷೇಧವಿದ್ದ ಕಾರಣ ಸರ್ಕಾರಕ್ಕೆ ಯಾವುದೇ ಅಬಕಾರಿ ಆದಾಯ ಇರಲಿಲ್ಲ. ಈಗ ಹೊಸ ಕಾಯ್ದೆಯಡಿ ಮದ್ಯದ ಮೇಲೆ ಭಾರಿ ಪ್ರಮಾಣದ ತೆರಿಗೆ ವಿಧಿಸಲಾಗಿದೆ.
ವಿದೇಶಿ ಮತ್ತು ಭಾರತೀಯ ನಿರ್ಮಿತ ವಿದೇಶಿ ಮದ್ಯದ ಮೇಲೆ 400%, ಬೀಯರ್ ಮೇಲೆ 200% ಹಾಗೂ ವೈನ್ ಮೇಲೆ 80% ಅಬಕಾರಿ ಸುಂಕ ವಿಧಿಸಲಾಗಿದೆ. ಇದರಿಂದ ಬರುವ ಭಾರಿ ಆದಾಯವನ್ನು ದ್ವೀಪದ ಮೂಲಸೌಕರ್ಯ, ರಸ್ತೆ, ಆಸ್ಪತ್ರೆ ಹಾಗೂ ಕರಾವಳಿ ಅಭಿವೃದ್ಧಿಗೆ ಬಳಸಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ.
ಅಕ್ರಮ ತಡೆ
ನಿಷೇಧವಿದ್ದಾಗಲೂ ಕಳ್ಳಮಾರ್ಗದ ಮೂಲಕ ಮದ್ಯ ಸಾಗಣೆಯಾಗುವ ಆತಂಕವಿರುತ್ತಿತ್ತು. ಹೀಗಾಗಿ ಸಂಪೂರ್ಣ ನಿಷೇಧ ಹೇರುವ ಬದಲಿಗೆ, ಅದನ್ನು ಸರ್ಕಾರದ ಕಠಿಣ ನಿಯಂತ್ರಣದಲ್ಲಿ ಮುಕ್ತಗೊಳಿಸುವುದು ಉತ್ತಮ ಎಂಬ ತೀರ್ಮಾನಕ್ಕೆ ಬರಲಾಗಿದೆ.
ಹೊಸ ನಿಯಮದ ಪ್ರಕಾರ, ಖಾಸಗಿಯವರಿಗೆ ಮುಕ್ತವಾಗಿ ಮದ್ಯ ಮಾರಲು ಅವಕಾಶವಿಲ್ಲ. ಬದಲಿಗೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ಅಧಿಕೃತ ಏಜೆನ್ಸಿಗಳಿಗೆ ಮಾತ್ರ ಲೈಸೆನ್ಸ್ ನೀಡಲಾಗುತ್ತದೆ.
ನಿಷೇಧ ತೆರವಾಗಿದ್ದರೂ ಸ್ಥಳೀಯರ ಹಿತದೃಷ್ಟಿಯಿಂದ ಕೆಲವು ಕಠಿಣ ನಿಬಂಧನೆಗಳನ್ನು ಹೇರಲಾಗಿದೆ:
ಸ್ಥಳೀಯರು ವಾಸಿಸುವ ವಸತಿ ಪ್ರದೇಶಗಳು ಅಥವಾ ಸಣ್ಣ ಪಟ್ಟಣಗಳಲ್ಲಿ ಮದ್ಯದ ಅಂಗಡಿಗಳನ್ನು ತೆರೆಯುವಂತಿಲ್ಲ. ಕೇವಲ ಅನುಮೋದಿತ ರೆಸಾರ್ಟ್‌ಗಳು, ಹೋಟೆಲ್‌ಗಳು, ಐಷಾರಾಮಿ ಬೀಚ್‌ಗಳು ಮತ್ತು ಅಂತಾರಾಷ್ಟ್ರೀಯ ಕ್ರೂಸ್‌ಗಳಲ್ಲಿ ಮಾತ್ರ ಮದ್ಯಕ್ಕೆ ಅವಕಾಶವಿರುತ್ತದೆ.
ಶಾಲೆ, ಆಸ್ಪತ್ರೆ ಮತ್ತು ಪ್ರಾರ್ಥನಾ ಮಂದಿರಗಳಿಂದ ಕನಿಷ್ಠ 50 ಮೀಟರ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ ಹಾಗೂ 21 ವರ್ಷದೊಳಗಿನವರಿಗೆ ಮದ್ಯ ಮಾರಾಟ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಲಕ್ಷದ್ವೀಪವನ್ನು ಮಾಲ್ಡೀವ್ಸ್ ಮಾದರಿಯ ವಿಶ್ವದರ್ಜೆಯ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರವು ಯೋಜನೆಯನ್ನು ರೂಪಿಸಿದೆ. ಭೌಗೋಳಿಕವಾಗಿ ಲಕ್ಷದ್ವೀಪ ಮತ್ತು ಮಾಲ್ಡೀವ್ಸ್ ಎರಡೂ ಒಂದೇ ರೀತಿಯ ದ್ವೀಪಗಳಾಗಿರುವುದರಿಂದ, ಮಾಲ್ಡೀವ್ಸ್‌ನ ಯಶಸ್ವಿ ಪ್ರವಾಸೋದ್ಯಮ ಮಾದರಿಯನ್ನು ಇಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ.
ವಾಟರ್ ವಿಲ್ಲಾಗಳ ಅಭಿವೃದ್ಧಿ:
ಮಾಲ್ಡೀವ್ಸ್‌ನ ಪ್ರಮುಖ ಆಕರ್ಷಣೆಯೇ ಸಮುದ್ರದ ನೀರಿನ ಮೇಲೆ ನಿರ್ಮಿಸಲಾದ ಐಷಾರಾಮಿ ವಿಲ್ಲಾಗಳು. ಇದೇ ಮಾದರಿಯಲ್ಲಿ ಲಕ್ಷದ್ವೀಪದ ಕಡ್ಮತ್, ಸುಹೇಲಿ ಮತ್ತು ಮಿನಿಕಾಯ್ ದ್ವೀಪಗಳಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಪರಿಸರಸ್ನೇಹಿ ‘ವಾಟರ್ ವಿಲ್ಲಾ’ಗಳನ್ನು ನಿರ್ಮಿಸಲು ಟಾಟಾ ಗ್ರೂಪ್‌ನಂತಹ ಪ್ರಮುಖ ಸಂಸ್ಥೆಗಳಿಗೆ ನೀಡಲಾಗಿದೆ.
ವಿಮಾನ ನಿಲ್ದಾಣಗಳ ಮೇಲ್ದರ್ಜೀಕರಣ
ಪ್ರಸ್ತುತ ಲಕ್ಷದ್ವೀಪದ ಅಗತ್ತಿ ದ್ವೀಪದಲ್ಲಿ ಮಾತ್ರ ಸಣ್ಣ ವಿಮಾನ ನಿಲ್ದಾಣವಿದೆ. ದೊಡ್ಡ ವಿಮಾನಗಳು ಲ್ಯಾಂಡ್ ಆಗಲು ಸಾಧ್ಯವಾಗದ ಕಾರಣ ಪ್ರವಾಸಿಗರಿಗೆ ಸಂಪರ್ಕ ಸಮಸ್ಯೆ ಇತ್ತು. ಈಗ ಅಗತ್ತಿ ಏರ್‌ಪೋರ್ಟ್ ರನ್‌ವೇಯನ್ನು ವಿಸ್ತರಿಸಲಾಗುತ್ತಿದೆ. ಇದರೊಂದಿಗೆ ಮಿನಿಕಾಯ್ ದ್ವೀಪದಲ್ಲಿ ಹೊಸದಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಇದರಿಂದ ಮೆಟ್ರೋ ನಗರಗಳಿಂದ ನೇರ ವಿಮಾನ ಸಂಪರ್ಕ ಸಾಧ್ಯವಾಗಲಿದೆ.
ಐಷಾರಾಮಿ ಕ್ರೂಸ್ ವ್ಯವಸ್ಥೆ:
ಕೊಚ್ಚಿ ಮತ್ತು ಮಂಗಳೂರಿನಿಂದ ಲಕ್ಷದ್ವೀಪಕ್ಕೆ ದೊಡ್ಡ ದೊಡ್ಡ ಐಷಾರಾಮಿ ಹಡಗುಗಳ ಸಂಚಾರವನ್ನು ಹೆಚ್ಚಿಸಲಾಗುತ್ತಿದೆ. ಪ್ರವಾಸಿಗರು ಹಡಗಿನಲ್ಲೇ ವಾಸ್ತವ್ಯ ಹೂಡಿ, ದ್ವೀಪಗಳಿಗೆ ಭೇಟಿ ನೀಡಿ ಮರಳುವಂತಹ ಸೌಲಭ್ಯಗಳನ್ನು ವಿಸ್ತರಿಸಲಾಗುತ್ತಿದೆ.
ನಿಯಮಗಳ ಸಡಿಲಿಕೆ
ವಿದೇಶಿ ಪ್ರವಾಸಿಗರನ್ನು ಆಕರ್ಷಿಸಲು ಇದ್ದ ಪ್ರಮುಖ ಅಡೆತಡೆಗಳನ್ನು ನಿವಾರಿಸಲಾಗುತ್ತಿದೆ:
ಮದ್ಯ ನಿಷೇಧ ತೆರವು: ಮಾಲ್ಡೀವ್ಸ್‌ನ ರೆಸಾರ್ಟ್‌ಗಳಂತೆಯೇ ಪ್ರವಾಸಿ ವಲಯಗಳಲ್ಲಿ ಮದ್ಯದ ಲಭ್ಯತೆಗೆ ಅವಕಾಶ ನೀಡಲಾಗಿದೆ.
ಪರಿಸರ ಸಮತೋಲನಕ್ಕೆ ಆದ್ಯತೆ: ಮಾಲ್ಡೀವ್ಸ್‌ನಂತೆ ಅಭಿವೃದ್ಧಿಪಡಿಸುವಾಗ ಲಕ್ಷದ್ವೀಪದ ಸೂಕ್ಷ್ಮ ಹವಳದ ಬಂಡೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಕಟ್ಟುನಿಟ್ಟಾದ ನಿಯಮಗಳನ್ನು ರೂಪಿಸಲಾಗಿದೆ. ಇಲ್ಲಿ “High-value, Low-volume” ಮಾದರಿಯನ್ನು ಬಳಸಲಾಗುತ್ತಿದೆ. ಅಂದರೆ, ಅತಿಯಾದ ಜನಸಂದಣಿಗೆ ಅವಕಾಶ ನೀಡದೆ, ಗುಣಮಟ್ಟದ ಐಷಾರಾಮಿ ಪ್ರವಾಸೋದ್ಯಮಕ್ಕೆ ಮಾತ್ರ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
