ಹಾವೇರಿ: ನಾಡಿನಾದ್ಯಂತ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಆದರೆ ಶಿವಮೊಗ್ಗ, ಕೊಪ್ಪಳ ಮತ್ತು ಹಾವೇರಿ ಜಿಲ್ಲೆಯಲ್ಲಿ ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ.
ನಿರಂತರ ಸುರಿಯುತ್ತಿರುವ ಮಳೆಯಿಂದ ನಗರದಲ್ಲಿನ ಬಹುತೇಕ ರಸ್ತೆಗಳು ನೀರಿನಿಂದ ತುಂಬಿ ಹರಿಯುತ್ತಿವೆ. ಅದರಲ್ಲೂ ಹಾವೇರಿ ನಗರದ ಪ್ರವಾಸಿ ಮಂದಿರದ ಬಳಿ ಇರುವ ಪ್ರಮುಖ ರಸ್ತೆಯಲ್ಲಿ ಸಂಪೂರ್ಣ ನೀರು ಹರಿಯುತ್ತಿದೆ. ರಸ್ತೆ ತುಂಬಿಕೊಂಡು ನೀರು ಹರಿಯುತ್ತಿರುವುದರಿಂದ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ.
Advertisement
Advertisement
ಚರಂಡಿಗಳು ಬ್ಲಾಕ್ ಆಗಿ ಚರಂಡಿ ನೀರು ಸಹ ರಸ್ತೆಗೆ ಬರುತ್ತಿರುವುದರಿಂದ ರಸ್ತೆ ಕೆರೆ ನೀರಿನಂತೆ ತುಂಬಿಕೊಂಡಿದೆ. ಮತ್ತೊಂದೆಡೆ ಹಾನಗಲ್ ತಾಲೂಕಿನ ಬಾಳಂಬೀಡ ಗ್ರಾಮದ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಸವಣೂರು ತಾಲೂಕಿನ ತವರಮೆಳ್ಳಿಹಳ್ಳಿ ಗ್ರಾಮದ ಕೆರೆ ತುಂಬಿ ಕೆರೆಯ ನೀರು ಗ್ರಾಮದ ರಸ್ತೆಗೆ ಹರಿಯುತ್ತಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಕೊಪ್ಪಳದಲ್ಲಿ ನಸುಕಿನ ಜಾವದಿಂದ ಸಿಡಿಲು ಮತ್ತು ಗುಡುಗು ಸಹಿತ ಮಳೆ ಆರಂಭವಾಗಿದ್ದು, ಜಿಟಿ ಜಿಟಿ ಮಳೆಯಿಂದ ಸಾರ್ವಜನಿಕರು, ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
Advertisement
ಇನ್ನೂ ಶಿವಮೊಗ್ಗದಲ್ಲಿ ಇಂದು ಮುಂಜಾನೆಯಿಂದ ನಿರಂತರವಾಗಿ ಮಳೆಯ ಆರ್ಭಟ ಜೋರಾಗಿದೆ. ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ದಸರಾ ಆನೆಗಳ ತಾಲೀಮುಗೂ ತೊಂದರೆಯಾಗಿದೆ. ಮಳೆಯಲ್ಲೂ ಮಾವುತರು ಆನೆಗಳ ರಸ್ತೆ ತಾಲೀಮು ಅಂತ್ಯಗೊಳಿಸಿದ್ದಾರೆ. ನಿರಂತರ ವರ್ಷಧಾರೆಗೆ ದಸರಾ ಯೋಗ ನಡಿಗೆ, ಡೊಳ್ಳು ಸ್ಪರ್ಧೆ ಕೂಡ ರದ್ದಾಗಿದೆ.
Advertisement
ನಾಡಹಬ್ಬ ದಸರಾ ಅಂಗವಾಗಿ ಶಿವಮೊಗ್ಗದಲ್ಲಿ ಯೋಗ ದಸರಾ ಆಯೋಜಿಸಲಾಗಿತ್ತು. ನಗರದ ಕುವೆಂಪು ರಂಗಮಂದಿರದ ಆವರಣದಲ್ಲಿ ನಡೆದ ಯೋಗ ದಸರಾಗೆ ಗ್ರಾಮೀಣಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿ ಯೋಗಾಭ್ಯಾಸ ಮಾಡಿದರು. ಯೋಗ ದಸರಾದಲ್ಲಿ ನೂರಾರು ಮಂದಿ ಯೋಗಪಟುಗಳು ಭಾಗವಹಿಸಿ ಸೂರ್ಯ ನಮಸ್ಕಾರ ಸೇರಿದಂತೆ ಹಲವು ಆಸನಗಳ ಅಭ್ಯಾಸ ನಡೆಸಿದರು. ಆದರೆ ಯೋಗಾಭ್ಯಾಸ ವೇಳೆ ಮಳೆ ಬಂದ ಹಿನ್ನೆಲೆಯಲ್ಲಿ ಯೋಗವನ್ನು ಅರ್ಧಕ್ಕೆ ನಿಲ್ಲಿಸಲಾಯಿತು.