ಉತ್ತರಾಖಂಡದ ಯಮನೋತ್ರಿ ಉಗಮವಾಗುವ ಯಮುನಾ ನದಿ ( Yamuna River)ಕೇವಲ 2% ಮಾತ್ರ ದೆಹಲಿಯ ನಗರ ಪ್ರದೇಶದ ಮೂಲಕ ಹರಿಯುತ್ತದೆ. ಆದರೆ ನದಿಯ ಮಾಲಿನ್ಯದ 80% ಹೆಚ್ಚು ಪಾಲನ್ನು ದೆಹಲಿ ಹೊಂದಿದೆ. ವಿಪರ್ಯಾಸವೆಂದರೆ, ಅದು ನಗರದ ಕುಡಿಯುವ ನೀರಿನ ಮೂಲವಾದ ನಂತರ ಅದರ ಸ್ಥಿತಿ ತೀವ್ರ ಹದಗೆಡಲು ಪ್ರಾರಂಭವಾಗಿದೆ. ಇದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಮಾಲಿನ್ಯ ತಡೆಯಲು ಇಲ್ಲಿಯ ವರೆಗೆ ಸರ್ಕಾರಗಳು ಕೋಟಿಗಟ್ಟಲೆ ಹಣ ಖರ್ಚು ಮಾಡಿವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ದೆಹಲಿ ಪ್ರವೇಶಿಸುವ ಮುನ್ನ ಯಮುನಾ ನದಿ ಹರಿಯಾಣಲ್ಲಿ (Haryana) 22 ಕಿ.ಮೀ ಹರಿದು ಅತಿ ಹೆಚ್ಚು ಮಾಲೀನವಾಗುತ್ತೆ. ಇದನ್ನ ತಡೆಯಲು ಹರಿಯಾಣ ಸರ್ಕಾರ ಹಲವು ಕ್ರಮ ಕೈಗೊಂಡಿದೆ. ಆ ಕ್ರಮಗಳೇನು? ಸರ್ಕಾರ ಇಲ್ಲಿವರೆಗೂ ಕೈಗೊಂಡ ಕ್ರಮಗಳು ವಿಫಲವಾಗಿದ್ದು ಯಾಕೆ? ಈ ನೂತನ ನೀತಿ ಮಾಲಿನ್ಯ ತಡೆಗಟ್ಟ ಬಲ್ಲದೇ ಎಂಬ ಬಗ್ಗೆ ಇಲ್ಲಿ ವಿವರಿಸಲಾಗಿದೆ.
STP ಮೂಲಕ ಸಂಸ್ಕರಣೆ
ದೆಹಲಿಯಲ್ಲಿ ಯಮುನಾ ನದಿಗೆ ಸೇರುವ ಕೊಳಚೆ ನೀರನ್ನು Sewage Treatment Plant – STP ಮೂಲಕ ಸಂಸ್ಕರಿಸಿ ನದಿಗೆ ಬಿಡುವ ಯೋಜನೆ ರೂಪಿಸಲಾಗಿದೆ. 100% ಸಂಸ್ಕರಣೆಯ ಗುರಿ ಹೊಂದಿದ್ದು, ಪಾಣಿಪತ್, ಸೋನಿಪತ್, ಫರಿದಾಬಾದ್, ಯಮುನಾನಗರ, ಕರ್ನಾಲ್ ನಗರಗಳಿಂದ ಯಮುನಾಕ್ಕೆ ಸೇರುವ ಎಲ್ಲ ಚರಂಡಿ ನೀರನ್ನು STP ಮೂಲಕ ಸಂಸ್ಕರಿಸಿ ಬಿಡಲು ತೀರ್ಮಾನಿಸಲಾಗಿದೆ.

– ಹೊಸ STP: 2023-25ರಲ್ಲಿ 60+ ಹೊಸ STPಗಳನ್ನು ನಿರ್ಮಿಸಲಾಗಿದೆ. ಪಾಣಿಪತ್‌ನಲ್ಲಿ 3 ದೊಡ್ಡ STP ನಿರ್ಮಾಣ.
– ಅಸ್ತಿತ್ವದಲ್ಲಿರುವ STP ಅಪ್‌ಗ್ರೇಡ್: ಹಳೆಯ ಘಟಕಗಳನ್ನು ಹೊಸ ತಂತ್ರಜ್ಞಾನಕ್ಕೆ ಅಪ್‌ಗ್ರೇಡ್ ಮಾಡಲಾಗುತ್ತಿದೆ.
– CETP – ಸಾಮಾನ್ಯ ತ್ಯಾಜ್ಯ ಸಂಸ್ಕರಣಾ ಘಟಕ: ಪಾಣಿಪತ್, ಸೋನಿಪತ್, ಕುಂಡ್ಲಿ ಕೈಗಾರಿಕಾ ಪ್ರದೇಶಗಳಲ್ಲಿ CETP ಕಡ್ಡಾಯ. ಡೈ, ಟೆಕ್ಸ್‌ಟೈಲ್, ಕೆಮಿಕಲ್ ಕಾರ್ಖಾನೆಗಳ ತ್ಯಾಜ್ಯ ನೇರವಾಗಿ ನದಿಗೆ ಬಿಡದಂತೆ ಕ್ರಮಕೈಗೊಳ್ಳಲು ಸರ್ಕಾರ ಮುಂದಾಗಿದೆ.
ಸಂಸ್ಕರಣಾ ಘಟಕಗಳು (STPs): ಕೈಗಾರಿಕಾ ತ್ಯಾಜ್ಯ ಮತ್ತು ಒಳಚರಂಡಿ ನೀರು ನದಿಯನ್ನು ಸೇರುವುದನ್ನು ತಡೆಯಲು ರಾಜ್ಯದಲ್ಲಿ ಈಗಾಗಲೇ 91 ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ. ಹೆಚ್ಚುವರಿಯಾಗಿ 88 MLD ಸಾಮರ್ಥ್ಯದ ಹೊಸ ಘಟಕಗಳನ್ನು ನಿರ್ಮಿಸಲಾಗುತ್ತಿದೆ.
ಕೊಳಚೆ ನೀರು ಸಂಸ್ಕರಣೆ & ಮರುಬಳಕೆ: ಯಮುನಾ ನಗರ, ರೊಹ್ಟಕ್ ಮತ್ತು ಗುರಗ್ರಾಮ್‌ನಂತಹ ಪ್ರಮುಖ ನಗರಗಳಲ್ಲಿ ಬೃಹತ್ STPs ಗಳನ್ನು ಸ್ಥಾಪಿಸಲಾಗುತ್ತಿದೆ. ಸಂಸ್ಕರಿಸಿದ ನೀರನ್ನು ಕೃಷಿ ಮತ್ತು ನೀರಾವರಿ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ.
ಕೈಗಾರಿಕಾ ತ್ಯಾಜ್ಯ ನಿರ್ವಹಣೆ: ನದಿಗೆ ಕಲುಷಿತ ನೀರನ್ನು ಹರಿಸುವ ಕೈಗಾರಿಕೆಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದ್ದು, ಸಾಮಾನ್ಯ ಸಂಸ್ಕರಣಾ ಘಟಕಗಳ (CETPs) ಮೂಲಕವೇ ತ್ಯಾಜ್ಯ ನೀರು ಶುದ್ಧೀಕರಣಗೊಳ್ಳುವುದನ್ನು ಖಾತ್ರಿಪಡಿಸಲಾಗುತ್ತಿದೆ.
ನೈಜ-ಸಮಯದ ಮೇಲ್ವಿಚಾರಣೆ: ಕೇಂದ್ರ ಸರ್ಕಾರದ ನಮಾಮಿ ಗಂಗೆ ಯೋಜನೆಯಡಿ ದೆಹಲಿ ಮತ್ತು ಉತ್ತರ ಪ್ರದೇಶದೊಂದಿಗೆ ಸಮನ್ವಯ ಸಾಧಿಸಿ, ನದಿಯ ನೀರಿನ ಗುಣಮಟ್ಟ ಮತ್ತು ಡ್ರೈನ್‌ಗಳನ್ನು ಹರಿಯಾಣ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು (Haryana State Pollution Control Board) ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ.
ನೈರ್ಮಲ್ಯ ಜಾಲ ವಿಸ್ತರಣೆ: ಯಮುನಾ ಜಲಾನಯನ ಪ್ರದೇಶದ 34 ಪಟ್ಟಣಗಳಲ್ಲಿ ಒಳಚರಂಡಿ ಜಾಲವನ್ನು (Sewerage network) ಶೇಕಡಾ 99 ಕ್ಕಿಂತ ಹೆಚ್ಚು ಪೂರ್ಣಗೊಳಿಸಲಾಗಿದೆ.
ದೆಹಲಿ ಜಲ ಮಂಡಳಿ ವ್ಯಾಪ್ತಿಯಲ್ಲಿ 37 ಕೊಳಚೆ ನೀರು ಸಂಸ್ಕರಣಾ ಘಟಕ ಕಾರ್ಯನಿರ್ವಹಿಸುತ್ತಿವೆ. ಈ STPಗಳ ಮೂಲಕವೇ ಗಣನೀಯ ಪ್ರಮಾಣದಲ್ಲಿ ಸಂಸ್ಕರಿಸದ ನೀರು ಯಮುನಾ ನದಿಗೆ ಬಿಡಲಾಗುತ್ತಿದೆ ಎಂದು ಪರಿಸರ ಹೋರಾಟಗಾರ ಪಂಕಜ್ ಕುಮಾರ್ ಆರೋಪಿಸಿದ್ದಾರೆ.
ಕೋರ್ಟ್ ಮಧ್ಯಪ್ರವೇಶ
ಕಳೆದ ವರ್ಷ ಜುಲೈ 28ರಂದು ವಿಶೇಷ ಸಮಿತಿ ಎಲ್ಲಾ 37 STPಗಳನ್ನು ಪರಿಶೀಲಿಸಿ ಕೋರ್ಟ್‌ಗೆ ವರದಿ ಸಲ್ಲಿಸಿದೆ. ಸಂಸ್ಕರಿಸದ ಕೊಳಚೆ ನೀರು ನದಿಗೆ ಹರಿಯುವುದನ್ನು ತಡೆಯಲು ಸಾಕಷ್ಟು ಕೆಲಸ ಮಾಡಬೇಕಾಗಿದೆ ಎಂದು ಸಮಿತಿ ಹೇಳಿದೆ. ದೆಹಲಿ ಹೈಕೋರ್ಟ್ ಈ ಬಗ್ಗೆ ಕ್ರಿಯಾ ಯೋಜನೆ ರೂಪಿಸಲು ಆದೇಶಿಸಿದೆ. ಸಭೆ ನಡೆಸಿ, DJB, MCD, DSIIDC, DPCC ಅಧಿಕಾರಿಗಳು ಸೇರಿ ಸಮಸ್ಯೆ ಪರಿಹಾರಕ್ಕೆ ಸಭೆ ಮಾಡಬೇಕು ಎಂದು ಸೂಚಿಸಿದೆ.
ಯುಮುನಾ ನದಿಗೆ ಈ ಬಾರಿ ಮೀಸಲಿಟ್ಟ ಹಣ
2025-26ರ ಕೇಂದ್ರ ಬಜೆಟ್: ಜಲ ಶಕ್ತಿ ಸಚಿವಾಲಯಕ್ಕೆ ಒಟ್ಟು 98,713 ಕೋಟಿ ರೂ. ಮೀಸಲಿಡಲಾಗಿದೆ.
ನಮಾಮಿ ಗಂಗೆ: ಇದರಲ್ಲಿ ಯಮುನಾ ಸೇರಿದಂತೆ ಗಂಗಾ ಜಲಾನಯನ ಪ್ರದೇಶಕ್ಕೆ 3,000 ಕೋಟಿ ರೂ. ಮೀಸಲಿಡಲಾಗಿದೆ. ಯಮುನಾಗೆ ಪ್ರತ್ಯೇಕ ಮೊತ್ತ ಘೋಷಣೆ ಆಗಿಲ್ಲ. ಗಂಗಾ ಉಪನದಿ ಯೋಜನೆಗಳಡಿ ಹಣ ಬಿಡುಗಡೆ ಆಗುತ್ತದೆ.
ದೆಹಲಿ ಸರ್ಕಾರ 2025-26 ದೆಹಲಿ ಬಜೆಟ್‌ನಲ್ಲಿ ಯಮುನಾ ಸ್ವಚ್ಛತೆಗೆ 500 ಕೋಟಿ ರೂ. ಘೋಷಣೆ ಮಾಡಲಾಗಿದೆ.

2025-26 ಹರಿಯಾಣ ಬಜೆಟ್‌ನಲ್ಲಿ ಯಮುನಾ ನದಿಗೆ ಅನುದಾನ
ಕೊಳಚೆ ನೀರು ಸಂಸ್ಕರಣೆ: ಹರಿಯಾಣ ಶಹರಿ ವಿಕಾಸ್ ಪ್ರಾಧಿಕರಣ – HSVP ಮೂಲಕ 620 ಕೋಟಿ ರೂ. ಹಣವನ್ನು ಪಾಣಿಪತ್, ಸೋನಿಪತ್, ಫರಿದಾಬಾದ್‌ನಲ್ಲಿ 15 ಹೊಸ STP ನಿರ್ಮಾಣಕ್ಕೆ ಮೀಸಲಿಡಲಾಗಿದೆ. ಈ ನಗರಗಳ ಕೊಳಚೆ ನೇರವಾಗಿ ಯಮುನಾ ಸೇರುವುದನ್ನು ತಡೆಯುವ ಉದ್ದೇಶವನ್ನು ಇದು ಹೊಂದಿದೆ.
ನಮಾಮಿ ಗಂಗೆ – ಹರಿಯಾಣ ಪಾಲು: ಕೇಂದ್ರ + ರಾಜ್ಯ 70:30 ಅನುಪಾತದಲ್ಲಿ 2025-26ಕ್ಕೆ ಹರಿಯಾಣಕ್ಕೆ 280 ಕೋಟಿ ರೂ. ಹಣ ಬಿಡುಗಡೆ ಆಗಿದೆ. ಯಮುನಾ ಕಿನಾರೆ ಪಟ್ಟಣಗಳ STP ಅಪ್‌ಗ್ರೇಡ್‌ಗೆ ಈ ಹಣ ಬಳಕೆ ಮಾಡಲಾಗಿದೆ.
2025-26ರಲ್ಲಿ ಹರಿಯಾಣದಿಂದ ಯಮುನಾ ಸ್ವಚ್ಛತೆಗೆ 1,050 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.
ಯಮುನೆಯನ್ನು ಮೊದಲು ಅವಲಂಬಿಸಿರದ ದೆಹಲಿ
ಮದ್ಯಕಾಲದಲ್ಲಿ ಕುಡಿಯುವ ನೀರಿಗಾಗಿ ದೆಹಲಿಯಲ್ಲಿ ಯಮುನಾ ನದಿಯನ್ನು ಅವಲಂಬಿಸಿರಲಿಲ್ಲ. ತೆರೆದ ಬಾವಿಗಳು ಮತ್ತು ಬಾವಿಗಳನ್ನು ನೀರಿಗಾಗಿ ಬಳಸಲಾಗುತ್ತಿತ್ತು. ನದಿ ನೀರು ಆರೋಗ್ಯಕ್ಕೆ ಹಾನಿಕಾರಕ ಎಂದು ನಂಬಲಾಗಿತ್ತು.
ಫಿರೋಜ್‌ಶಾ ತುಘಲಕ್ ಹರಿಯಾಣದ ಹಿಸಾರ್‌ನಿಂದ ಫಿರೋಜಾಬಾದ್‌ಗೆ ನದಿಯ ನೀರನ್ನು ತರಲು ಕಾಲುವೆ ಯೋಜನೆ ಪ್ರಾರಂಭಿಸಿದ. ನಂತರ ಈ ಯೋಜನೆಯನ್ನು ಮೊಘಲ್ ಚಕ್ರವರ್ತಿ ಷಹಜಹಾನ್ ಪೂರ್ಣಗೊಳಿಸಿದ. ಅದಾಗಿಯೂ ಜನರು ನದಿಯ ನೀರನ್ನು ಕುಡಿಯಲು ಬಳಕೆ ಮಾಡುತ್ತಿರಲಿಲ್ಲ. ಆಗಲೂ ಕುಡಿಯುವ ನೀರಿಗಾಗಿ ಬಾವಿಗಳನ್ನು ಅವಲಂಬಿಸಿದ್ದರು.
ನೀರಾವರಿ, ಮೀನುಗಾರಿಕೆ, ಸ್ನಾನದ ಉದ್ದೇಶಗಳಿಗಾಗಿ ಮಾತ್ರ ನದಿ ನೀರನ್ನು ಬಳಸಲಾಗುತ್ತಿತ್ತು. ಯಮುನಾ ನದಿಯು ಸ್ಫಟಿಕ ಶಿಲೆಯ ಬಂಡೆಯ ಮೇಲೆ ಹರಿಯುತ್ತದೆ. ಸ್ಫಟಿಕ ಶಿಲೆಯಲ್ಲಿ ಮೈಕಾ ಮತ್ತು ಸಿಲಿಕಾ ಇರುತ್ತದೆ. ಆ ಕಾಲದ ಜನರಿಗೆ ಇದು ತಿಳಿದಿರಲಿಲ್ಲ, ಆದರೆ ಆ ನೀರನ್ನು ಕುಡಿದವರು ಅನಾರೋಗ್ಯದಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ನದಿ ನೀರನ್ನು ಬಳಕೆ ಮಾಡುತ್ತಿರಲಿಲ್ಲ.
ಮಾಲಿನ್ಯದ ಆರಂಭ
1881 ರ ಸುಮಾರಿಗೆ ಬ್ರಿಟಿಷರು ನದಿಪಾತ್ರಕ್ಕೆ ಬಾವಿಗಳನ್ನು ತೋಡಿದ ಬಳಿಕ ನೀರನ್ನು ಬಳಸಲಾಗುತ್ತಿತ್ತು. 1890 ರಲ್ಲಿ, ಬ್ರಿಟಿಷರು ಒಳಚರಂಡಿ ವ್ಯವಸ್ಥೆಯನ್ನು ಪರಿಚಯಿಸಿದರು. ಸಂಸ್ಕರಿಸದ ಒಳಚರಂಡಿ ನೀರನ್ನು ಚಂದ್ರವಾಲ್ ಜಲಮಂಡಳಿಯ ಕೆಳಭಾಗದ ನದಿಗೆ ಬಿಡಲು ಪ್ರಾರಂಭಿಸಿದರು. ಹೀಗೆ ಯಮುನಾ ನದಿ ಮಾಲಿನ್ಯ ಪ್ರಾರಂಭವಾಯಿತು.

ಮಾಲಿನ್ಯ & ರಾಜಕೀಯ
ಯಮುನಾ ನದಿಯ ಮಾಲಿನ್ಯವು ಯಾವಾಗಲೂ ದೆಹಲಿಯ ರಾಜಕೀಯದಲ್ಲಿ ಪ್ರಮುಖ ವಿಷಯವಾಗಿದೆ. ಚುನಾವಣಾ ಪ್ರಣಾಳಿಕೆಗಳಲ್ಲಿ, ರಾಜಕೀಯ ಪಕ್ಷಗಳು ನದಿಯನ್ನು ಸ್ವಚ್ಛಗೊಳಿಸಲು ಪ್ರತಿಜ್ಞೆ ಮಾಡುತ್ತವೆ. ಸತತ ಸರ್ಕಾರಗಳು ನದಿಯನ್ನು ಮಾಲಿನ್ಯದಿಂದ ಮುಕ್ತಗೊಳಿಸುವ ಯೋಜನೆಗಳನ್ನು ರೂಪಿಸುತ್ತಾ ಬಂದಿವೆ.
ದೆಹಲಿಯಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ಪಕ್ಷಗಳು ಯಮುನೆಯ ಮಾಲಿನ್ಯದ ಬಗ್ಗೆ ಗಮನ ಸೆಳೆದಿದ್ದವು. ನಗರದ ಜೀವನದಿ ವಿಷಕಾರಿ ಹೊಳೆಯಾಗಿ ಮಾರ್ಪಟ್ಟಿದೆ ಎಂದು ವಿಷಾದಿಸಿದ್ದವು. ಈ ಸಮಸ್ಯೆಗೆ ರಾಜಕೀಯ ಪಕ್ಷಗಳು ಪರಸ್ಪರ ದೂಷಿಸಿದ್ದವು. ಪ್ರತಿ ಪಕ್ಷವೂ ನದಿಯನ್ನು ಸ್ವಚ್ಛಗೊಳಿಸುವ ಭರವಸೆ ನೀಡಿದ್ದವು.

ಮುಖ್ಯಮಂತ್ರಿ ರೇಖಾ ಗುಪ್ತಾ ಹಾಗೂ ದೆಹಲಿಯ ಸಚಿವರು ಫೆಬ್ರವರಿ 20 ರಂದು ಪ್ರಮಾಣವಚನ ಸ್ವೀಕರಿಸಿದ ಸ್ವಲ್ಪ ಸಮಯದ ನಂತರ ನದಿಯ ದಡದಲ್ಲಿ ಆರತಿ ಮಾಡಿದ್ದರು. ಇದು ಯಮುನಾ ನದಿಯನ್ನು ಸ್ವಚ್ಛಗೊಳಿಸುವ ಸರ್ಕಾರದ ಪ್ರತಿಜ್ಞೆಗೆ ಅನುಗುಣವಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ‘ಕಾಕ್ರೋಚ್ ಜನತಾ ಪಾರ್ಟಿ’ಯ (ಜಿರಳೆ ಜನತಾ ಪಕ್ಷ) ಬೆಂಬಲಿಗ ಯುವಕರು ‘ಜಿರಳೆ’ಗಳಂತೆ ವೇಷ ಧರಿಸಿ ಯಮುನಾ ನದಿಯಲ್ಲಿ ಕಸವನ್ನು ಸ್ವಚ್ಛಗೊಳಿಸುವ ಮೂಲಕ ಮಾಲಿನ್ಯದ ಕಡೆಗೆ ಜನರ ಗಮನ ಸೆಳೆದಿದ್ದರು.
ಮಾಲಿನ್ಯದಿಂದ ನೊರೆ ಉಕ್ಕುವ ನದಿ
ದೆಹಲಿ ಬಳಿ ಯಮುನಾ ನದಿಯಲ್ಲಿ ನೊರೆ ಉಕ್ಕುವುದು ಪ್ರತಿವರ್ಷವೂ ನಡೆಯುವ ವಿದ್ಯಮಾನವಾಗಿದೆ. ನದಿಯನ್ನು ಸ್ವಚ್ಛಗೊಳಿಸಲು ಈಗಾಗಲೇ ಸಾವಿರಾರು ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೂ ಮಾಲಿನ್ಯದಿಂದ ನೊರೆ ಉಕ್ಕುವುದು ಸ್ವಲ್ಪವೂ ಕಡಿಮೆಯಾಗಿಲ್ಲ.

ನದಿಗೆ ಸಂಸ್ಕರಿಸದ ತ್ಯಾಜ್ಯ
ಹೋಟೆಲ್ನವರು ಸಂಸ್ಕರಿಸದ ಕಸವನ್ನು ನದಿಗೆ ಎಸೆಯುತ್ತಾರೆ. ಅಲ್ಲದೆ ನದಿ ಪಕ್ಕದಲ್ಲೇ ಅನಧಿಕೃತ ನಿರ್ಮಾಣಗಳು ನದಿಗೆ ಅಪಾಯವನ್ನುಂಟುಮಾಡುತ್ತಿವೆ. ಅಂತಹ ಕಟ್ಟಡ ಚಟುವಟಿಕೆಗಳನ್ನು ನಿರ್ಬಂಧಿಸಲು ಜಾರಿಗೊಳಿಸಲಾದ ಎಲ್ಲಾ ಕಾನೂನುಗಳು ನಿರರ್ಥಕವಾಗಿವೆ.
ಸಂಸ್ಕರಿಸದ ತ್ಯಾಜ್ಯವನ್ನು ನೇರವಾಗಿ ನದಿಗೆ ಪಂಪ್ ಮಾಡಲಾಗುತ್ತದೆ. ಕೃಷಿಗೆ ಬಳಸುವ ಕೀಟನಾಶಕಗಳು ಸಹ ನದಿ ಸೇರುತ್ತಿವೆ. ಇದು ಯುಟ್ರೋಫಿಕೇಷನ್ಗೆ ಕಾರಣವಾಗುತ್ತಿದೆ. ಇದು ಕಳೆ ಸಸ್ಯಗಳು ಮತ್ತು ಆಲ್ಗಲ್ ಹೂವು ಬೆಳೆಯಲು ಕಾರಣವಾಗುತ್ತಿದೆ.
‘ಯಮುನಾ ಕ್ರಿಯಾ ಯೋಜನೆ’ ಎಂಬ ನದಿ ಸ್ವಚ್ಛತಾ ಕಾರ್ಯಕ್ರಮವನ್ನು 1993 ರಲ್ಲಿ ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ಯೋಜನೆಯಾಗಿ ಪ್ರಾರಂಭಿಸಲಾಯಿತು. ಕೇಂದ್ರ ಪರಿಸರ ಸಚಿವಾಲಯಕ್ಕೆ 2012-13ನೇ ಸಾಲಿನ ವರದಿಯಲ್ಲಿ ಪರಿಸರ ಮತ್ತು ಅರಣ್ಯಗಳ ಸಂಸದೀಯ ಸಮಿತಿಯು ಗಂಗಾ ಮತ್ತು ಯಮುನಾವನ್ನು ಸ್ವಚ್ಛಗೊಳಿಸುವ ಅಭಿಯಾನ ವಿಫಲವಾಗಿದೆ ಎಂದು ಹೇಳಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ “ನಮಾಮಿ ಗಂಗೆ ಕಾರ್ಯಕ್ರಮದ” ಭಾಗವಾಗಿ ಯಮುನಾವನ್ನು ಸ್ವಚ್ಛಗೊಳಿಸಲು ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಆದರೆ ಇದರಿಂದ ಯಾವುದೇ ಉಪಯೋಗವಾಗಿಲ್ಲ.
