ಬೆಂಗಳೂರು: ಪ್ರಜಾಸೇವೆ ಇಲಾಖೆ ಮೂಲಕ ರಾಜ್ಯದಲ್ಲಿ ಸಾರ್ವಜನಿಕ ಕುಂದುಕೊರತೆಗಳನ್ನು ತ್ವರಿತವಾಗಿ ಪರಿಹರಿಸಲು ಮತ್ತು ಆಡಳಿತದಲ್ಲಿ ಸುಧಾರಣೆ ತರಲು ಸರ್ಕಾರ ಮುಂದಾಗಿದೆ ಎಂದು ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಹರ್ಷ ಗುಪ್ತಾ (Harsha Gupta) ಅವರು ತಿಳಿಸಿದರು.
ವಿಕಾಸಸೌಧದಲ್ಲಿ ಪ್ರಜಾಸೇವಾ ಅಭಿಯಾನ ಕಾರ್ಯಕ್ರಮ ಮತ್ತು ಪ್ರಜಾಸೇವಾ ಇಲಾಖೆಯ ರಚನೆ, ಸ್ವರೂಪ ಹಾಗೂ ಕಾರ್ಯವೈಖರಿ ಕುರಿತಂತೆ ಮಾಹಿತಿ ನೀಡುವ ಸಲುವಾಗಿ ಪತ್ರಿಕಾಗೋಷ್ಠಿಯನ್ನು ನಡೆಸಿದರು. ಇದೇ ಸೆಪ್ಟೆಂಬರ್ 5ರಂದು ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ನಡೆದ ಪ್ರಜಾ ಸೇವಾ ಅಭಿಯಾನದಲ್ಲಿ 26,387 ಕುಂದುಕೊರತೆಯು ನೋಂದಣೆಯಾಗಿದ್ದು, ಅದರಲ್ಲಿ 13,872 ಕುಂದುಕೊರತೆಗಳಿಗೆ ಪರಿಹಾರವನ್ನು ಒದಗಿಸಲಾಗಿದೆ. ಉಳಿದ 12,514 ಕುಂದುಕೊರತೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು. ಇದನ್ನೂ ಓದಿ: PDO ಪರೀಕ್ಷೆಯಲ್ಲಿ ಭಾರೀ ಅಕ್ರಮ – ಮಾಜಿ ಸಿಎಂ ಹರೀಶ್ ರಾವತ್ ಪಿಎ ಮನೆ ಮೇಲೆ ಇಡಿ ದಾಳಿ
ಕಂದಾಯ ಇಲಾಖೆಯಿಂದ ಅತಿ ಹೆಚ್ಚು ಕುಂದುಕೊರತೆ ಬಂದಿದ್ದು, ಅವುಗಳಲ್ಲಿ ಹೆಚ್ಚು ವೃದ್ಧಾಪ್ಯವೇತನಗಳಿಗೆ ಸಂಬಂಧಿಸಿದ್ದಾಗಿದೆ. ಇತ್ತೀಚಿಗೆ ಪಿಂಚಣಿಯಲ್ಲಿ ಅನರ್ಹರನ್ನು ಪರಿಷ್ಕರಣೆ ಮಾಡಲಾಗುತ್ತಿರುವುದರಿಂದ ಈ ವಿಚಾರದಲ್ಲಿ ಹೆಚ್ಚಿನ ಮನವಿ ಬಂದಿವೆ. ಹಾಗೆಯೇ ಪಡಿತರ ಚೀಟಿಗೆ ಸದಸ್ಯರನ್ನು ಸೇರಿಸುವ ವಿಚಾರದಲ್ಲೂ ಹೆಚ್ಚಿನ ಮನವಿಗಳು ಬಂದಿವೆ ಎಂದು ಹೇಳಿದರು.
ಸರ್ಕಾರದ ಆದೇಶದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (DPAR) ಇಲಾಖೆಯ ಆಡಳಿತ ಸುಧಾರಣೆ ವಿಭಾಗ, ಸಕಾಲ ಮಿಷನ್ ಮತ್ತು ಸಾರ್ವಜನಿಕ ಕುಂದುಕೊರತೆಗಳ ಪರಿಹಾರ ವಿಭಾಗಗಳನ್ನು ಈ ನೂತನ ‘ಪ್ರಜಾಸೇವೆ’ ಇಲಾಖೆಯಲ್ಲಿ ವಿಲೀನಗೊಳಿಸಲಾಗಿದೆ. ‘ಇ-ಆಫೀಸ್’ ಮತ್ತು ನ್ಯಾಯಾಲಯದ ಪ್ರಕರಣಗಳ ಉಸ್ತುವಾರಿಗಾಗಿ ಇರುವ ‘ಸಿಸಿಎಂಎಸ್’ (CCMS) ವ್ಯವಸ್ಥೆಯನ್ನು ಈ ಇಲಾಖೆಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಗಣೇಶನಿಗಿಂತ ಮೊದಲೇ ಆಗಮಿಸುವ ಸ್ವರ್ಣಗೌರಿ; ಹೆಣ್ಣುಮಕ್ಕಳು ಸಂಭ್ರಮದಿಂದ ಆಚರಿಸುವ ಹಬ್ಬ
ಈಗಾಗಲೇ ಸೇವಾ ಸಿಂಧು ಪೋರ್ಟಲ್‌ನಲ್ಲಿ 898 ಸೇವೆಗಳಿವೆ. ಇದಲ್ಲದೆ ವಿವಿಧ ಇಲಾಖೆಗಳಿಂದ ಇನ್ನು ಸುಮಾರು 2,456 ಸೇವೆಗಳನ್ನು ಗುರುತಿಸಲಾಗಿದೆ. ಅದರಲ್ಲಿ 2,300 ಸೇವೆಗಳು ಈಗಾಗಲೇ ಆನ್ಲೈನ್ ಇದ್ದು, ಉಳಿದ 156 ಸೇವೆಗಳನ್ನು ಆನ್ಲೈನ್ ಮಾಡಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಸರ್ಕಾರದ ಈ ಎಲ್ಲಾ ಸೇವೆಗಳನ್ನು ‘ಸಕಾಲ’ ಯೋಜನೆಯಡಿ ತರುವ ಗುರಿ ಹೊಂದಲಾಗಿದೆ ಎಂದರು.
ಸಾರ್ವಜನಿಕರು ಸಲ್ಲಿಸುವ ಕುಂದುಕೊರತೆ ಅರ್ಜಿಗಳನ್ನು ತ್ವರಿತವಾಗಿ ವರ್ಗೀಕರಣ ಮಾಡಲು ಹಾಗೂ ಪಿಡಿಎಫ್ ದಾಖಲೆಗಳನ್ನು ಓದಿ, ಸರಿಯಾದ ವಿಭಾಗಕ್ಕೆ ವರ್ಗಾಯಿಸಲು ‘ಎಐ’ ಸಾಫ್ಟ್‌ವೇರ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಈ ವ್ಯವಸ್ಥೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಲು ಇನ್ನು ಸ್ವಲ್ಪ ದಿನಗಳ ಕಾಲಾವಕಾಶ ಬೇಕಾಗುತ್ತದೆ. ಇದನ್ನೂ ಓದಿ: 7 ವರ್ಷಗಳ ಬಳಿಕ ಫಸ್ಟ್ ಟೈಮ್ ಭಾರತಕ್ಕೆ ಜಿನ್‌ಪಿಂಗ್ – ಶೃಂಗಸಭೆಗಾಗಿ ದೆಹಲಿಗೆ ಆಗಮನ
ಪ್ರತಿ ಶನಿವಾರ ಜನಸ್ಪಂದನಾ ಸಭೆಗಳನ್ನು ನಡೆಸುವುದು ಕಡ್ಡಾಯವಾಗಿದ್ದು, 1ನೇ ಮತ್ತು 3ನೇ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಹಾಗೂ 2ನೇ ಮತ್ತು 4ನೇ ಶನಿವಾರ ಶಾಸಕರ ಅಧ್ಯಕ್ಷತೆಯಲ್ಲಿ ಹೋಬಳಿ ಮಟ್ಟದಲ್ಲಿ ಸಭೆಗಳು ನಡೆಯಲಿವೆ. ಸಾರ್ವಜನಿಕರಿಂದ ಸ್ವೀಕರಿಸುವ ಪ್ರತಿಯೊಂದು ಅರ್ಜಿಯನ್ನು ಆನ್‌ಲೈನ್ ಸಿಸ್ಟಮ್‌ನಲ್ಲಿ ಕಡ್ಡಾಯವಾಗಿ ನಮೂದಿಸಿ, ಸ್ವೀಕೃತಿ ನೀಡಲಾಗುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ಅಧ್ಯಕ್ಷತೆಯಲ್ಲಿನ ಜನಸ್ಪಂದನಾ ಸಭೆಯಲ್ಲಿ ಸ್ವೀಕರಿಸಲಾಗಿರುವ ಎಲ್ಲಾ ಅರ್ಜಿಗಳು ಮತ್ತು ದೂರುಗಳನ್ನು ಪ್ರತಿ ಬುಧವಾರ ಬೆಳಿಗ್ಗೆ 9 ರಿಂದ 11 ಗಂಟೆಗೆ ತಹಸೀಲ್ದಾರ್ ಮತ್ತು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳಿಂದ, ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಹಾಯಕ ಆಯುಕ್ತರಿಂದ ಹಾಗೂ ಮಧ್ಯಾಹ್ನ 3 ರಿಂದ ಸಂಜೆ 5 ಗಂಟೆಯವರೆಗೆ ಜಿಲ್ಲಾಧಿಕಾರಿಗಳಿಂದ ನಡೆಯುವ ಪರಿಶೀಲನಾ ಸಭೆಯಲ್ಲಿ ಸಾರ್ವಜನಿಕರು ತಮ್ಮ ದೂರಿನ ಇತ್ಯರ್ಥವನ್ನು ಪರಿಶೀಲಿಸಬಹುದು. ಈ ಮೂರು ಹಂತದ ಪರಿಶೀಲನಾ ಸಭೆಯಲ್ಲಿಯೂ ತಮ್ಮ ದೂರಿಗೆ ದೊರೆತ ಇತ್ಯರ್ಥದಿಂದ ತೃಪ್ತರಾಗದವರು ಖುದ್ದು ಹಾಜರಾಗಿ ತಮ್ಮ ಅಹವಾಲನ್ನು ಮಂಡಿಸಬಹುದು. ಆಗ ಇಲಾಖಾ ಅಧಿಕಾರಿಯ ಸಮ್ಮುಖದಲ್ಲಿಯೇ ಅವರ ದೂರನ್ನು ಇತ್ಯರ್ಥಗೊಳಿಸಲಾಗುವುದೆಂದು ತಿಳಿಸಿದರು.ಇದನ್ನೂ ಓದಿ: ತಮಿಳುನಾಡಿಗೆ 8 ಸಾವಿರ ಕ್ಯೂಸೆಕ್ ನೀರು ನಿತ್ಯ; ʻಪಬ್ಲಿಕ್ ಟಿವಿʼ ರಿಯಾಲಿಟಿ ಚೆಕ್‌ನಲ್ಲಿ ಸತ್ಯ ಬಹಿರಂಗ
ದೂರುಗಳ ಪರಿಶೀಲನೆಗೆ ಅನುಕೂಲವಾಗಲು ಪ್ರತ್ಯೇಕ:
ಎರಡು ಸರತಿ (ಕ್ಯೂ) ಸಾಲನ್ನು ವ್ಯವಸ್ಥೆಯನ್ನು ಮಾಡಲಾಗಿದ್ದು, ಮೊದಲ ಬಾರಿಗೆ ದೂರು ನೀಡುವವರಿಗೆ ಮತ್ತು ಈಗಾಗಲೇ ದೂರು ನೀಡಿ ಪರಿಹಾರ ಸಿಗದವರಿಗೆ ಪ್ರತ್ಯೇಕ ಸಾಲುಗಳ ವ್ಯವಸ್ಥೆ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿಗಳ ಲಾಗಿನ್‌ಗೆ ವಿಶೇಷ ಅಧಿಕಾರ ನೀಡಲಾಗಿದ್ದು, 21 ದಿನಗಳಾದರೂ ದೂರು ಇತ್ಯರ್ಥವಾಗದಿದ್ದಲ್ಲಿ, ಅವರ ಲಾಗಿನ್ ಮೂಲಕ ಹಿರಿಯ ಅಧಿಕಾರಿಗಳು ಪ್ರಕರಣವನ್ನು ಮರುಪರಿಶೀಲನೆಗೆ ಕಳುಹಿಸಬಹುದು ಅಥವಾ ಅಂತಿಮವಾಗಿ ಕ್ಲೋಸ್ ಮಾಡಬಹುದು.ಇದನ್ನೂ ಓದಿ: ಕೂಡಗಿ ಪೊಲೀಸರ ಬೇಟೆ – 8 ನಿಮಿಷದಲ್ಲಿ 19 ಲಕ್ಷ ದೋಚಿ ಪರಾರಿಯಾಗಿದ್ದ ಕಳ್ಳರ ಗ್ಯಾಂಗ್ ಅಂದರ್
ಪ್ರಸ್ತುತ ಸೇವಾ ಸಿಂಧು ಪೋರ್ಟಲ್‌ನಲ್ಲಿ ಲಭ್ಯವಿರುವ 898 ಸೇವೆಗಳ ಜೊತೆಗೆ, ಈಗಾಗಲೇ ಗುರುತಿಸಲಾಗಿರುವ ಒಟ್ಟು 2,456 ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಯಡಿಯಲ್ಲಿ ತರಲು ನಿರ್ಧರಿಸಲಾಗಿದೆ. ನಾಗರಿಕರಿಗೆ
ಸಿಂಗಲ್ ಸೈನ್-ಆನ್ ಮೂಲಕ ಎಲ್ಲಾ ಸರ್ಕಾರಿ ಸೇವೆಗಳನ್ನು ಪಡೆಯಲು ಒಂದೇ ಬಾರಿಯ ಲಾಗಿನ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಹಾಗೆಯೇ ಯೋಜನೆಗಳ ಹುಡುಕಾಟ ಮತ್ತು ಅರ್ಜಿ ಪ್ರಕ್ರಿಯೆಯನ್ನು ಸುಲಭಗೊಳಿಸಲು AI ತಂತ್ರಜ್ಞಾನವನ್ನು ಬಳಸಲಾಗುತ್ತದೆ. ಸಾರ್ವಜನಿಕರು ಧ್ವನಿ ಅಥವಾ ಬರಹ ಮೂಲಕ ತಮ್ಮಗೆ ಬೇಕಾಗಿರುವ ಯೋಜನೆಗಳನ್ನು ತಿಳಿದುಕೊಳ್ಳಬಹುದು ಎಂದು ಹೇಳಿದರು.
ದಾಖಲೆಗಳನ್ನು ಪದೇ ಪದೇ ಅಪ್‌ಲೋಡ್ ಮಾಡುವುದನ್ನು ತಪ್ಪಿಸಲು ಡಿಜಿ ಲಾಕರ್ (DigiLocker) ಸಂಪರ್ಕ ಕಲ್ಪಿಸಲಾಗುತ್ತಿದ್ದು, ನೀಡಲಾಗುವ ಪ್ರಮಾಣಪತ್ರಗಳಿಗೆ ನೈಜತೆ ಪರಿಶೀಲನೆಗಾಗಿ ‘QR ಕೋಡ್’ ನೀಡಲಾಗುವುದೆಂದರು.
ಅಕ್ಟೋಬರ್ 2ಕ್ಕೆ ನಮ್ಮ ಸೇವಾ ಆ್ಯಪ್ ಬಿಡುಗಡೆ ಮಾಡಲು ಸಿದ್ಧತೆ:
ನಾಗರಿಕರು ತಮ್ಮ ಮೊಬೈಲ್‌ನಲ್ಲೇ ಎಲ್ಲಾ ಸೇವೆಗಳನ್ನು ಸಂಪೂರ್ಣವಾಗಿ ಹಣರಹಿತ, (cashless) ಕಾಗದರಹಿತ (Paperless) ಮತ್ತು ಸಂಪರ್ಕರಹಿತವಾಗಿ (Contactless) ಪಡೆಯಲು ‘ನಮ್ಮ ಸೇವೆ’ ಎಂಬ ಮೊಬೈಲ್ ಆ್ಯಪ್ ಅನ್ನು ಅಕ್ಟೋಬರ್ 2 ರಂದು ಲೋಕಾರ್ಪಣೆ ಮಾಡುವ ಗುರಿ ಹೊಂದಲಾಗಿದೆ. ಹಾಗೆಯೇ
WhatsApp ಚಾಟ್‌ಬಾಟ್ ಮೂಲಕ ನಾಗರಿಕರು ತಮ್ಮ ದೂರುಗಳನ್ನು ಸರಳವಾಗಿ ವಾಟ್ಸಾಪ್ ಚಾಟ್‌ಬಾಟ್ ಮೂಲಕ ಸಲ್ಲಿಸುವ ವ್ಯವಸ್ಥೆಯನ್ನು ಮಾಡಲಾಗುವುದು. ಸಾರ್ವಜನಿಕರು ನೀಡುವ ಆಡಿಯೋ ಅಥವಾ ಪಠ್ಯ ಸಂದೇಶದ ಸ್ಥಳ (Location) ಆಧರಿಸಿ, ಎಐ ತಂತ್ರಜ್ಞಾನ ವ್ಯವಸ್ಥೆಯು ಸಂಬಂಧಪಟ್ಟ ಅಧಿಕಾರಿಗಳಿಗೆ ನೇರವಾಗಿ ದೂರು ತಲುಪಿಸಲಿದೆ. ಒಟ್ಟಿನಲ್ಲಿ ಜನಸೇವಾ ಇಲಾಖೆಯನ್ನು ಜನಸ್ನೇಹಿ ಇಲಾಖೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಕನಿಷ್ಠ ರಸ್ತೆ ಸೌಕರ್ಯವೂ ಇಲ್ಲದೇ ಜನ ಕಂಗಾಲು – ಮಲೆಮಹದೇಶ್ವರ ಬೆಟ್ಟದ ಗ್ರಾಮಗಳ ಗೋಳು..!

