– 200 ಗ್ರಾಂ ಚಿನ್ನ, 12 ಐಷಾರಾಮಿ ವಾಚ್‌ಗಳು ಜಪ್ತಿ
– ಬ್ಯಾಂಕ್ ಖಾತೆಯಲ್ಲಿದ್ದ 52 ಲಕ್ಷ ಹಣ ಫ್ರೀಜ್
ಡೆಹ್ರಾಡೂನ್: ಕರ್ನಾಟಕದ ಬಳಿಕ ಇದೀಗ ಉತ್ತರಾಖಂಡದಲ್ಲೂ ಪರೀಕ್ಷಾ ಅಕ್ರಮ ಬೆಳಕಿಗೆ ಬಂದಿದೆ. 2016ರಲ್ಲಿ ನಡೆದ ಉತ್ತರಾಖಂಡದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (VPDO) ಪರೀಕ್ಷೆಯಲ್ಲಿನ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಮಹತ್ವದ ಕಾರ್ಯಾಚರಣೆ ನಡೆಸಿದೆ.
ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ (Harish Rawat) ಅವರ ವೈಯಕ್ತಿಕ ಸಹಾಯಕ (PA) ಚಂದನ್ ಸಿಂಗ್ ಜೀನಾ ಅವರ ನಿವಾಸ ಸೇರಿದಂತೆ ಡೆಹ್ರಾಡೂನ್‌ನ ಹಲವು ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಗುರುವಾರ (ಸೆ.10) ನಡೆದ ದಾಳಿ ವೇಳೆ ಚಂದನ್ ಸಿಂಗ್ ಜೀನಾ ನಿವಾಸದಿಂದ 32 ಲಕ್ಷ ರೂ.ನಷ್ಟು ಲೆಕ್ಕಕ್ಕೆ ಸಿಗದ ನಗದು, ಸುಮಾರು 200.5 ಗ್ರಾಂ ಚಿನ್ನದ ನಾಣ್ಯಗಳು ಮತ್ತು ಸರ, ಜೊತೆಗೆ 12 ಐಷಾರಾಮಿ ವಾಚ್‌ಗಳನ್ನ ವಶಪಡಿಸಿಕೊಂಡಿರುವುದಾಗಿ ಇಡಿ ತಿಳಿಸಿದೆ.
ರೋಲೆಕ್ಸ್‌ನಿಂದ ಟಿಸ್ಸಾಟ್‌ವರೆಗೆ ಐಷಾರಾಮಿ ವಾಚ್‌ಗಳು
ಇಡಿ ಮಾಹಿತಿ ಪ್ರಕಾರ, ಜೀನಾ ನಿವಾಸದಲ್ಲಿ ಪತ್ತೆಯಾದ 12 ವಾಚ್‌ಗಳಲ್ಲಿ ರೋಲೆಕ್ಸ್ (Rolex), ರಾಡೋ (Rado), ಪಿಯಾಜೆ (Piaget), ಮೊವಾಡೊ (Movado), ಟಿಸ್ಸಾಟ್ (Tissot) ಹಾಗೂ Casio Edifice ಸೇರಿದಂತೆ ಹಲವು ಪ್ರತಿಷ್ಠಿತ ಬ್ರ್ಯಾಂಡ್‌ಗಳ ವಾಚ್‌ಗಳಿವೆ. ಜೀನಾ ಅವರು ಪ್ರಸ್ತುತ ಮಾಜಿ ಸಿಎಂ ಹರೀಶ್ ರಾವತ್ ಅವರ ಪಿಎ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2014 ರಿಂದ 2017ರ ವರೆಗೆ ಹರೀಶ್ ರಾವತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು OSD (ವಿಶೇಷ ಕರ್ತವ್ಯ ಅಧಿಕಾರಿ) ಆಗಿಯೂ ಕೆಲಸ ಮಾಡಿದ್ದರು.

ಬ್ಯಾಂಕ್ ಖಾತೆಗಳಲ್ಲಿದ್ದ 52.16 ಲಕ್ಷ ಫ್ರೀಜ್
ಚಂದನ್ ಸಿಂಗ್ ಜೀನಾ ಹಾಗೂ ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಲ್ಲಿ ಇದ್ದ ಒಟ್ಟು 52.16 ಲಕ್ಷ ರೂ. ಹಣವನ್ನ ಇಡಿ ಫ್ರೀಜ್ ಮಾಡಿದೆ. ಇದಲ್ಲದೆ, ಜೀನಾ ಅವರ ಮೊಬೈಲ್ ಫೋನನ್ನೂ ವಶಕ್ಕೆ ಪಡೆದಿದ್ದು, ದತ್ತಾಂಶ ಮತ್ತು ಮಾಹಿತಿ ಪರಿಶೀಲನೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಅಷ್ಟೇ ಅಲ್ಲ ತನಿಖೆ ಸಂದರ್ಭದಲ್ಲಿ ಜೀನಾ ಭಾರೀ ಹಣ ಖರ್ಚು ಮಾಡಿರುವುದು ಬೆಳಕಿಗೆ ಬಂದಿದೆ. ಆದ್ರೆ ಹಣದ ಮೂಲದ ಬಗ್ಗೆ ನಿಖರ ಮಾಹಿತಿ ಇಲ್ಲದಿರುವುದು ಹನುಮಾನಕ್ಕೆ ಕಾರಣವಾಗಿದ್ದು, ಈ ಬಗ್ಗೆಯೂ ಇಡಿ ಶೋಧ ಕೈಗೊಂಡಿದೆ ಎಂದು ತಿಳಿಸಿದೆ.
ಮಧ್ಯವರ್ತಿಗಳ ನಿವಾಸಗಳಲ್ಲೂ ಶೋಧ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆಹ್ರಾಡೂನ್‌ನ ಹಲವು ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಲಾಗಿದೆ. UKSSSCಯ ಆಗಿನ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಪರೀಕ್ಷಾ ನಿಯಂತ್ರಕರಿಗೆ ಸಂಬಂಧಿಸಿದ ಸ್ಥಳಗಳು, OMR ಶೀಟ್‌ಗಳ ಜವಾಬ್ದಾರಿ ಹೊಂದಿದ್ದ ಖಾಸಗಿ ಕಂಪ್ಯೂಟರ್ ಏಜೆನ್ಸಿಯ ಮಾಲೀಕರ ನಿವಾಸ ಹಾಗೂ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಮಧ್ಯವರ್ತಿಗಳ ಸ್ಥಳಗಳಲ್ಲೂ ED ಶೋಧ ನಡೆಸಿದೆ.

2016ರ VDO ಪರೀಕ್ಷೆ ಅಕ್ರಮವೇ ತನಿಖೆಯ ಮೂಲ
ಇಡಿಯ ಅಕ್ರಮ ಹಣ ವರ್ಗಾವಣೆ ತನಿಖೆ ಉತ್ತರಾಖಂಡ ಪೊಲೀಸರು ಮತ್ತು ವಿಜಿಲೆನ್ಸ್ ಬ್ಯೂರೋ ದಾಖಲಿಸಿದ್ದ 4 ಎಫ್‌ಐಆರ್ ಆಧಾರದ ಮೇಲೆ ಆರಂಭವಾಗಿದೆ. ಈ ಪ್ರಕರಣಗಳು 2016ರಲ್ಲಿ UKSSSC ನಡೆಸಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿವೆ ಎಂದು ತಿಳಿದುಬಂದಿದೆ.
ಸದ್ಯ ದಾಳಿ ನಡೆಸಿರುವ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಈ ಮಧ್ಯೆ UKSSSCಯ ಮನೆಗೆ ಕೊಂಡೊಯ್ದು ಒಎಂಆರ್ ಉತ್ತರ ಪತ್ರಿಕೆಗಳನ್ನ ಬದಲಾಯಿಸಿರುವ ಆರೋಪ ಕೇಳಿಬಂದಿದ್ದು, ಅದರ ಬಗ್ಗೆಯೂ ತನಿಖೆ ಮುಂದುವರಿದಿದೆ.

