ಮಡಿಕೇರಿ: ಐದು ತಿಂಗಳ ಬಳಿಕ ಕೊಡಗಿನ ಹಾರಂಗಿ ಹಾಗೂ ಮತ್ತಿಗೋಡು ಆನೆ ಶಿಬಿರಗಳು (Harangi elephant Camp) ಪ್ರವಾಸಿಗರ ವೀಕ್ಷಣೆಗೆ ಮತ್ತೆ ಮುಕ್ತವಾಗಿವೆ. ಪ್ರವಾಸಿಗರ (Kodagu) ಸುರಕ್ಷತೆಗಾಗಿ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿಗೆ ತಂದಿದೆ.
ದುಬಾರೆ ಆನೆ ಶಿಬಿರದಲ್ಲಿ ಆನೆಗಳ ಸಂಘರ್ಷಕ್ಕೆ ಪ್ರವಾಸಿ ಮಹಿಳೆಯೊಬ್ಬರು ಬಲಿಯಾದ ಬೆನ್ನಲ್ಲೇ ಭದ್ರತಾ ಕಾರಣಕ್ಕೆ ಈ ಶಿಬಿರಗಳನ್ನು ಬಂದ್ ಮಾಡಲಾಗಿತ್ತು. ಇದೀಗ ಶಿಬಿರಗಳು ಓಪನ್ ಆಗಿದ್ದು, ಪ್ರವಾಸಿಗರ ಸುರಕ್ಷತೆಗಾಗಿ ಅರಣ್ಯ ಇಲಾಖೆ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿಗೆ ತಂದಿದೆ. ಆನೆಗಳಿಂದ 10 ಮೀಟರ್ ಅಂತರ ಕಡ್ಡಾಯ ಮಾಡಲಾಗಿದ್ದು, ಆನೆಗಳನ್ನು ಮುಟ್ಟುವುದು ಹಾಗೂ ಹತ್ತಿರದಿಂದ ಸೆಲ್ಫಿ ತೆಗೆದುಕೊಳ್ಳುವುದಕ್ಕೂ ಬ್ರೇಕ್ ಹಾಕಲಾಗಿದೆ.
ಐದು ತಿಂಗಳ ಬಳಿಕ ಮತ್ತೆ ಪ್ರವಾಸಿಗರ ಕಲರವ…
ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾಗಿರುವ ಹಾರಂಗಿ ಹಾಗೂ ಮತ್ತಿಗೋಡು ಆನೆ ಶಿಬಿರಗಳು ಇದೀಗ ಪ್ರವಾಸಿಗರ ವೀಕ್ಷಣೆಗೆ ಪುನಃ ಮುಕ್ತವಾಗಿವೆ. ಐದು ತಿಂಗಳ ಹಿಂದೆ ದುಬಾರೆ ಆನೆ ಶಿಬಿರದಲ್ಲಿ ನಡೆದಿದ್ದ ಭೀಕರ ದುರಂತದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಈ ಆನೆ ಶಿಬಿರಗಳನ್ನು ಬಂದ್ ಮಾಡಿತ್ತು. ಆನೆಗಳ ನಡುವೆ ದಿಢೀರ್ ಸಂಘರ್ಷ ನಡೆದ ವೇಳೆ ಪ್ರವಾಸಿ ಮಹಿಳೆಯೊಬ್ಬರು ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದರು.
ಈ ಘಟನೆ ಪ್ರವಾಸಿಗರ ಸುರಕ್ಷತೆ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ದುರಂತದ ಬಳಿಕ ಇದೀಗ ಶಿಬಿರಗಳು ಮತ್ತೇ ಪ್ರಾರಂಭವಾಗಿವೆ. ಆದರೆ, ಈ ಬಾರಿ ಅರಣ್ಯ ಇಲಾಖೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಪ್ರವಾಸಿಗರು ಆನೆಗಳಿಂದ ಕನಿಷ್ಠ 10 ಮೀಟರ್ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ. ಆನೆಗಳನ್ನು ಮುಟ್ಟುವಂತಿಲ್ಲ. ಅವುಗಳಿಗೆ ನೀರು ಹಾಕುವುದು, ಸ್ನಾನ ಮಾಡಿಸುವುದು ಸೇರಿದಂತೆ ಆನೆಗಳೊಂದಿಗೆ ನೇರ ಸಂಪರ್ಕಕ್ಕೂ ನಿರ್ಬಂಧ ಹೇರಲಾಗಿದೆ. ಇನ್ನು ಆನೆಗಳ ಬಳಿಗೆ ತೆರಳಿ ಸೆಲ್ಫಿ ಅಥವಾ ಫೋಟೋ ತೆಗೆದುಕೊಳ್ಳುವುದಕ್ಕೂ ಅವಕಾಶವಿಲ್ಲ. ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್ – ಮಾಫಿ ಸಾಕ್ಷಿ ಪ್ರದೋಷ್ ವಿರುದ್ಧ ದೂರು
ಪ್ರವಾಸಿಗರು ಅರಣ್ಯ ಇಲಾಖೆಯ ಸಿಬ್ಬಂದಿ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆನೆಗಳು ಎಷ್ಟೇ ಶಾಂತವಾಗಿ ಕಂಡರೂ ಅವುಗಳ ವರ್ತನೆ ಯಾವ ಕ್ಷಣದಲ್ಲಿ ಬದಲಾಗುತ್ತದೆ ಅನ್ನೋದು ಹೇಳಲಾಗದು. ಹೀಗಾಗಿ ಆನೆ ವೀಕ್ಷಣೆ ಮಾಡುವಾಗ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಪ್ರವಾಸಿಗರ ಜವಾಬ್ದಾರಿಯೂ ಹೌದು. ಆದರೆ, ಅರಣ್ಯ ಇಲಾಖೆಯ ಈ ಕಟ್ಟುನಿಟ್ಟಿನ ನಿಯಮಗಳ ಬಗ್ಗೆ ಕೆಲ ಪ್ರಾಣಿ ಪ್ರಿಯರು ಪ್ರಶ್ನೆ ಎತ್ತಿದ್ದಾರೆ.ಇದನ್ನೂ ಓದಿ: ಶೇಖ್ ಹಸೀನಾ ಪಕ್ಷದ 7 ನಾಯಕರಿಗೆ ಮರಣದಂಡನೆ ವಿಧಿಸಿದ ಕೋರ್ಟ್

