ಚಾಮರಾಜನಗರ/ಬೆಂಗಳೂರು: ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ನಡೆದ ಎನ್‌ಕೌಂಟರ್ ಪ್ರಕರಣದ (Hanur Encounter) ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ಡಿಜಿಪಿ ಸಲೀಂ ಆದೇಶ ಹೊರಡಿಸಿದ್ದಾರೆ. 4 ಎಫ್‌ಐಆರ್‌ಗಳನ್ನು ಸಿಐಡಿಗೆ (CID) ವರ್ಗಾವಣೆ ಮಾಡಲಾಗಿದೆ.
ರಾಮಪುರ ಠಾಣೆಯಲ್ಲಿ ದಾಖಲಾದ ಅರಣ್ಯಾಧಿಕಾರಿಗಳ ಮೇಲಿನ ಹಲ್ಲೆ ಪ್ರಕರಣ. ಹನೂರು ಠಾಣೆಯಲ್ಲಿ ದಾಖಲಾದ ಮೂವರು ಬೇಟೆಗಾರರ ಎನ್‌ಕೌಂಟರ್ ಪ್ರಕರಣ, ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಗೆ ಸೇರಿದ ವಸ್ತುಗಳಿಗೆ ಹಾನಿ, ಶಿಬಿರಗಳನ್ನು ನಾಶ ಮಾಡಿದ ಪ್ರಕರಣ, ಕೊಳ್ಳೇಗಾಲ ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಅರಣ್ಯಾಧಿಕಾರಿಗಳ ಮೇಲಿನ ಹಲ್ಲೆ ಹಾಗೂ ಅರಣ್ಯ ಇಲಾಖೆ ಶಿಬಿರಗಳ ನಾಶ, ಹಾನಿ ಪ್ರಕರಣಗಳ ತನಿಖೆಯನ್ನ ಸಿಐಡಿಗೆ ವಹಿಸಿ ಆದೇಶ ಹೊರಡಿಸಲಾಗಿದೆ.
ಅರಣ್ಯ ಇಲಾಖೆ ಸಿಬ್ಬಂದಿ (Forest Department) ನಡೆಸಿದ ಶೂಟೌಟ್‌ನಲ್ಲಿ ಅಂಥೋಣಿಸಾಮಿ, ಜಾನ್ ಪೀಟರ್ ಹಾಗೂ ಡೇವಿಡ್ ಕುಮಾರ್ ಹತ್ಯೆಯಾಗಿದ್ದರು. ಈ ಮೂವರೂ ಬೇಟೆಯಾಡುವ ಉದ್ದೇಶದಿಂದಲೇ ಅರಣ್ಯದೊಳಗೆ ಪ್ರವೇಶ ಮಾಡಿದ್ದರು. ಈ ಕಾರಣಕ್ಕಾಗಿಯೇ ನಾಡ ಬಂದೂಕು ತೆಗೆದುಕೊಂಡು ಹೋಗಿದ್ದರು ಎಂದು ಅರಣ್ಯಾಧಿಕಾರಿಗಳು ಆರೋಪಿಸಿದ್ದರು. ಇದನ್ನೂ ಓದಿ: ಹನೂರು ಶೂಟೌಟ್ ಕೇಸ್ | ಹತ್ತಿರದಿಂದಲೇ ಗುಂಡು – ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ?
ಇದಕ್ಕೆ ಪೂರಕವಾಗಿ ಮೂವರ ಶವಗಳ ವೈದ್ಯಕೀಯ ಪರೀಕ್ಷೆ ನಡೆಸುವಾಗ ಸಾಕ್ಷಿಗಳು ದೊರೆತಿದ್ದವು. ಈ ಪೈಕಿ ಅಂಥೋಣಿಸಾಮಿ ಹಾಗೂ ಪೀಟರ್ ಧರಿಸಿದ್ದ ಒಳ ಉಡುಪಿನ ಜೇಬಿನಲ್ಲಿ ನಾಡ ಬಂದೂಕಿಗೆ ಬಳಸುವ ತಲಾ 5 ಅಲ್ಯೂಮಿನಿಯಮ್ ಪ್ರೈಮರ್‌ಗಳು ಪತ್ತೆಯಾಗಿದ್ದವು. ನಾಡ ಬಂದೂಕುಗಳಲ್ಲಿ ಗನ್ ಪೌಡರ್ ಸ್ಫೋಟಿಸಲು ಬಳಸುವ ಅಲ್ಯೂಮಿನಿಯಮ್ ಕ್ಯಾಪ್ / ಪ್ರೈಮರ್ ಬಳಸಲಾಗುತ್ತದೆ.
ಇನ್ನೂ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಮೂವರ ಮರಣೋತ್ತರ ಪರೀಕ್ಷೆಯನ್ನು (Post-Mortem) ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ನಡೆಸಲಾಗಿತ್ತು. ವರದಿಯಲ್ಲಿ ಅತ್ಯಂತ ಸಮೀಪದಿಂದ ನಡೆದಿದೆ ಎಂಬ ಅಂಶ ದೃಢಪಟ್ಟಿದೆ. ಇದು ಸ್ಥಳೀಯ ರೈತರು ಮತ್ತು ಮೃತರ ಕುಟುಂಬಸ್ಥರ ವಾದಕ್ಕೆ ಭಾರೀ ಬಲ ತಂದಿದೆ.
ಮೃತರ ಬಟ್ಟೆ ಮತ್ತು ಚರ್ಮದ ಮೇಲೆ ಗನ್‌ಪೌಡರ್ ಕಲೆಗಳು, ಹೊಗೆಯ ಕಪ್ಪು ಕಲೆಗಳು ಹಾಗೂ ಸುಟ್ಟ ಗಾಯಗಳು ಪತ್ತೆಯಾಗಿವೆ. ಇದು ಅತ್ಯಂತ ಸಮೀಪದಿಂದ ಗುಂಡು ಹಾರಿಸಿರುವುದನ್ನು ಸ್ಪಷ್ಟಪಡಿಸಿದೆ.
ಕುಟುಂಬಸ್ಥರ ವಾದವೇನು?
ದನಗಳನ್ನು ಹುಡುಕಲು ಹೋದ ಅಮಾಯಕರನ್ನು ಅರಣ್ಯ ಸಿಬ್ಬಂದಿ ಹಿಡಿದು, ಉದ್ದೇಶಪೂರ್ವಕವಾಗಿ ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಮೊದಲಿನಿಂದಲೂ ಆರೋಪಿಸುತ್ತಿದ್ದರು.
ಮರಣೋತ್ತರ ವರದಿಯು ಸಮೀಪದಿಂದಲೇ ಗುಂಡು ಹಾರಿಸಲಾಗಿದೆ ಎಂದು ಹೇಳುತ್ತಿರುವುದರಿಂದ, ಕಾರ್ಯಾಚರಣೆಯಲ್ಲಿದ್ದ ಅರಣ್ಯ ಸಿಬ್ಬಂದಿಯನ್ನು ತಕ್ಷಣವೇ ವಶಕ್ಕೆ ಪಡೆದು ತನಿಖೆ ನಡೆಸಬೇಕೆಂದು ಗ್ರಾಮಸ್ಥರು ಹಾಗೂ ರೈತ ಸಂಘಟನೆಗಳು ಪಟ್ಟು ಹಿಡಿದಿವೆ. ವರದಿ ಬಹಿರಂಗಗೊಳ್ಳುತ್ತಿದ್ದಂತೆ ವಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಅರಣ್ಯ ಇಲಾಖೆಯ ಕ್ರಮವನ್ನು ತೀವ್ರವಾಗಿ ಖಂಡಿಸಿವೆ.
ಅರಣ್ಯ ಇಲಾಖೆಯು “ಬೇಟೆಗಾರರು ದಾಳಿ ಮಾಡಿದಾಗ ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದೆವು” ಎಂದು ಹೇಳುತ್ತಿದ್ದರೆ, ಗ್ರಾಮಸ್ಥರು “ಇದು ಅಮಾಯಕರ ಹತ್ಯೆ” ಎಂದು ಪ್ರತಿಪಾದಿಸುತ್ತಿದ್ದಾರೆ. ಪ್ರಕರಣದ ಅಂತಿಮ ತನಿಖಾ ವರದಿ ಇನ್ನಷ್ಟೇ ಸಲ್ಲಿಕೆಯಾಗಬೇಕಿದ್ದು, ತನಿಖಾಧಿಕಾರಿಗಳು ಯಾವ ಆಧಾರದ ಮೇಲೆ ವರದಿ ನೀಡುತ್ತಾರೆ ಎಂಬುದರ ಮೇಲೆ ಪ್ರಕರಣದ ಅಂತಿಮ ಸತ್ಯಾಂಶ ತಿಳಿಯಲಿದೆ. ಇನ್ನೂ ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರಗೊಂಡಿದ್ದು ತನಿಖೆ ಇದನ್ನೂ ಓದಿ: ಶೂಟೌಟ್ ಕೇಸ್: ಮರಣೋತ್ತರ ಪರೀಕ್ಷೆ ವೇಳೆ ಇಬ್ಬರು ಮೃತರ ಬಳಿ ಪ್ರೈಮರ್ ಪತ್ತೆ – ಪ್ರಾಣಿಗಳ ಬೇಟೆಗೆ ಬಂದಿದ್ದಕ್ಕೆ ಸಾಕ್ಷ್ಯ!
