ಚಾಮರಾಜನಗರ: ಆಗಸ್ಟ್ 15 ರಂದು ಕಾವೇರಿ ವನ್ಯಜೀವಿ ಧಾಮದಲ್ಲಿ ನಡೆದ ಮೂವರ ಸಾವಿಗೆ ಕಾರಣವಾದ ಶೂಟೌಟ್(Hanur Shootout) ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ತಿರುವು ಸಿಕ್ಕಿದೆ.
ಮೈಸೂರಿನ ಕೆ ಆರ್ ಆಸ್ಪತ್ರೆಯಲ್ಲಿ ನಡೆದ ಮೃತರ ಮರಣೋತ್ತರ ಪರೀಕ್ಷೆಯ (Post-Mortem) ವರದಿ ಹೊರಬಿದ್ದಿದ್ದು, ಘಟನೆ ಅತ್ಯಂತ ಸಮೀಪದಿಂದ ನಡೆದಿದೆ ಎಂಬ ಅಂಶ ದೃಢಪಟ್ಟಿದೆ. ಇದು ಸ್ಥಳೀಯ ರೈತರು ಮತ್ತು ಮೃತರ ಕುಟುಂಬಸ್ಥರ ವಾದಕ್ಕೆ ಭಾರೀ ಬಲ ತಂದಿದೆ.
ಮೃತರ ಬಟ್ಟೆ ಮತ್ತು ಚರ್ಮದ ಮೇಲೆ ಗನ್‌ಪೌಡರ್ ಕಲೆಗಳು, ಹೊಗೆಯ ಕಪ್ಪು ಕಲೆಗಳು ಹಾಗೂ ಸುಟ್ಟ ಗಾಯಗಳು ಪತ್ತೆಯಾಗಿವೆ. ಇದು ಅತ್ಯಂತ ಸಮೀಪದಿಂದ ಗುಂಡು ಹಾರಿಸಿರುವುದನ್ನು ಸ್ಪಷ್ಟಪಡಿಸಿದೆ.
ಎಡ ಎದೆ ಭಾಗಕ್ಕೆ ತಗುಲಿದ ಗುಂಡಿನ ತೀವ್ರತೆಗೆ 2, 3 ಮತ್ತು 4ನೇ ಪಕ್ಕೆಲುಬುಗಳು ಮುರಿದುಹೋಗಿದ್ದು, ಎಡ ಶ್ವಾಸಕೋಶ ಹಾಗೂ ಹೃದಯ ಸಂಪೂರ್ಣ ಛಿದ್ರಗೊಂಡಿದೆ.ಎದೆಯ ಭಾಗದ ಕುಳಿಯಲ್ಲಿ ಸುಮಾರು 600 ಮಿ.ಲೀ. ರಕ್ತ ಹೆಪ್ಪುಗಟ್ಟಿರುವುದು ಕಂಡುಬಂದಿದೆ.
ತೊಡೆಗೆ ಹೊಡೆದ ಶಾಟ್‌ಗನ್‌ನ ಸೀಸದ ಸಣ್ಣ ಗುಂಡುಗಳು ದೇಹದ ಒಳಹೊಕ್ಕು ಯಕೃತ್ತು ಮತ್ತು ಹೊಟ್ಟೆಯ ಒಳಪದರವನ್ನು ತೂರಿಹೋಗಿವೆ. ಅತಿಯಾದ ರಕ್ತಸ್ರಾವ ಮತ್ತು ಆಘಾತದಿಂದ ಸಾವು ಸಂಭವಿಸಿದೆ ಎಂದು ವರದಿ ದೃಢಪಡಿಸಿದೆ.
ಕುಟುಂಬಸ್ಥರ ವಾದವೇನು?
ದನಗಳನ್ನು ಹುಡುಕಲು ಹೋದ ಅಮಾಯಕರನ್ನು ಅರಣ್ಯ ಸಿಬ್ಬಂದಿ ಹಿಡಿದು, ಉದ್ದೇಶಪೂರ್ವಕವಾಗಿ ಪಾಯಿಂಟ್ ಬ್ಲಾಂಕ್ ರೇಂಜ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಮೊದಲಿನಿಂದಲೂ ಆರೋಪಿಸುತ್ತಿದ್ದರು. ಇದನ್ನೂ ಓದಿ: ಹನೂರು ಎನ್‌ಕೌಂಟರ್ ಪ್ರತಿಕಾರಕ್ಕೆ 10 ಎಕರೆ ಅರಣ್ಯ ಭಸ್ಮ
ವರದಿ ಬಹಿರಂಗಗೊಳ್ಳುತ್ತಿದ್ದಂತೆ ವಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಅರಣ್ಯ ಇಲಾಖೆಯ ಕ್ರಮವನ್ನು ತೀವ್ರವಾಗಿ ಖಂಡಿಸಿವೆ.
ಅರಣ್ಯ ಇಲಾಖೆಯು “ಬೇಟೆಗಾರರು ದಾಳಿ ಮಾಡಿದಾಗ ಆತ್ಮರಕ್ಷಣೆಗಾಗಿ ಪ್ರತಿದಾಳಿ ನಡೆಸಿದೆವು” ಎಂದು ಹೇಳುತ್ತಿದ್ದರೆ, ಗ್ರಾಮಸ್ಥರು “ಇದು ಅಮಾಯಕರ ಹತ್ಯೆ” ಎಂದು ಪ್ರತಿಪಾದಿಸುತ್ತಿದ್ದಾರೆ. ಪ್ರಕರಣದ ಅಂತಿಮ ತನಿಖಾ ವರದಿ ಇನ್ನಷ್ಟೇ ಸಲ್ಲಿಕೆಯಾಗಬೇಕಿದ್ದು, ತನಿಖಾಧಿಕಾರಿಗಳು ಯಾವ ಆಧಾರದ ಮೇಲೆ ವರದಿ ನೀಡುತ್ತಾರೆ ಎಂಬುದರ ಮೇಲೆ ಪ್ರಕರಣದ ಅಂತಿಮ ಸತ್ಯಾಂಶ ತಿಳಿಯಲಿದೆ.
