ನಟ ಅನಿರುದ್ಧ್ ಜತ್ಕರ್ (Aniruddha) ನಾಯಕನಾಗಿ ಅಭಿನಯಿಸಿರುವ ಹಾಗೂ ‘ರಾಘು’ ಚಿತ್ರದ ಖ್ಯಾತಿಯ ನಿರ್ದೇಶಕ ಎಂ.ಆನಂದರಾಜ್ ನಿರ್ದೇಶನದ ‘chef ಚಿದಂಬರ’ (Chef Chidambara) ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ವರ್ಕ್ ಬಿರುಸಿನಿಂದ ಸಾಗಿದೆ. ಇತ್ತೀಚಿಗೆ ನಾಯಕಿ ನಿಧಿ ಸುಬ್ಬಯ್ಯ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ಮೋನ ಎಂಬುದು ನಿಧಿ ಸುಬ್ಬಯ್ಯ ಅವರ ಪಾತ್ರದ ಹೆಸರು. ನಿಧಿ ಸುಬ್ಬಯ್ಯ (Nidhi Subbaiah) ಅವರ ಕೈಯಲ್ಲಿ ಬೇಡಿಯಿದ್ದು, ಈ ಚಿತ್ರದಲ್ಲಿ ಅವರ ಪಾತ್ರ ಏನಿರಬಹುದು? ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ.
ಬಹಳ ದಿನಗಳ ನಂತರ ನಿಧಿ ಸುಬ್ಬಯ್ಯ ಅವರು ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ನಿಧಿ ಅವರ ಪೋಸ್ಟರ್ ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಕುತೂಹಲ ಮೂಡಿಸಿರುವ ನಿಧಿ ಅವರ ಪಾತ್ರ ಏನು ಎಂಬುದನ್ನು ಚಿತ್ರದಲ್ಲಿ ನೋಡಬೇಕು ಎನ್ನುತ್ತಾರೆ ನಿರ್ದೇಶಕ ಆನಂದರಾಜ್. ಡಾರ್ಕ್ ಕಾಮಿಡಿ ಜಾನರ್ ನ ಈ ಚಿತ್ರದಲ್ಲಿ ಅನಿರುದ್ಧ್ ಶೆಫ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ.
ದಮ್ತಿ ಪಿಕ್ಚರ್ಸ್ ಲಾಂಛನದಲ್ಲಿ ರೂಪ ಡಿ.ಎನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆ ಗಣೇಶ್ ಪರಶುರಾಮ್ ಬರೆದಿದ್ದಾರೆ. ಉದಯಲೀಲ ಛಾಯಾಗ್ರಹಣ, ರಿತ್ವಿಕ್ ಮುರಳಿಧರ್ ಸಂಗೀತ ನಿರ್ದೇಶನ, ವಿಜೇತ್ ಚಂದ್ರ ಸಂಕಲನ, ‘ವಿಕ್ರಾಂತ್ ರೋಣ’ ಖ್ಯಾತಿಯ ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ಅನಿರುದ್ಧ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ‘ಲವ್ ಮಾಕ್ಟೇಲ್’ ಖ್ಯಾತಿಯ ರೆಚೆಲ್ ಡೇವಿಡ್ ಅಭಿನಯಿಸಿದ್ದಾರೆ. ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್, ಶಿವಮಣಿ ಮುಂತಾದವರು ‘chef ಚಿದಂಬರ’ ಚಿತ್ರದ ತಾರಾಬಳಗದಲ್ಲಿದ್ದಾರೆ.