ನವದೆಹಲಿ: ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಬಳಿಕ ನರೇಂದ್ರ ಮೋದಿ(Narendra Modi ಅವರ ಸರದಿ ಬರಲಿದೆ. ಇವರೆಲ್ಲರ ವಿರುದ್ಧ ಕಾನೂನಾತ್ಮಕ ತನಿಖೆ ನಡೆದೇ ತೀರುತ್ತದೆ, ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ(Rahul Gandhi) ಎಚ್ಚರಿಸಿದ್ದಾರೆ.
ದೆಹಲಿಯ ರಾಮಲೀಲ ಮೈದಾನದಲ್ಲಿ ನಡೆದ ‘INDIA’ ಮೈತ್ರಿಕೂಟದ ಬೃಹತ್ ಪ್ರತಿಭಟನಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಚುನಾವಣಾ ಆಯೋಗದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಕಬಳಿಸಿ ಸಂವಿಧಾನವನ್ನು ನಾಶಮಾಡಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಅವರು ಗುಡುಗಿದರು.
ಇದು ಕೇವಲ ಒಂದು ರಾಜಕೀಯ ಪಕ್ಷದ ಧ್ವನಿಯಲ್ಲ, ಇಡೀ ದೇಶದ ಸಕಲ ವರ್ಗದ ಜನರ ಒಕ್ಕೊರಲ ಧ್ವನಿ. ಈ ಧ್ವನಿಯನ್ನು ಅಡಗಿಸಲು ನಾವು ಬಿಡುವುದಿಲ್ಲ. ನೀವು ಎಷ್ಟೇ ಬಲಾಢ್ಯರಾಗಿದ್ದರೂ ಸಂವಿಧಾನಕ್ಕಿಂತ ಯಾರೂ ದೊಡ್ಡವರಲ್ಲ. ಎಲ್ಲರಿಗಿಂತ ಸಂವಿಧಾನವೇ ಸರ್ವೋಚ್ಛ ಎಂದು ಆಕ್ರೋಶ ಹೊರಹಾಕಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಬಂಗಾಳ, ಮಧ್ಯಪ್ರದೇಶ, ಹರಿಯಾಣ, ಮಹಾರಾಷ್ಟ್ರ, ಕರ್ನಾಟಕ ಹಾಗೂ ಛತ್ತೀಸ್ಗಢ ಸೇರಿದಂತೆ ದೇಶಾದ್ಯಂತ ಇವಿಎಂ (EVM) ಹಾಗೂ ಮತದಾರರ ಪಟ್ಟಿಯ ಮೂಲಕ ‘ಜನಾದೇಶದ ಕಳ್ಳತನ’ ನಡೆದಿದೆ ಎಂದು ಗಂಭೀರ ಆರೋಪ ಮಾಡಿದರು.
ದೇಶಾದ್ಯಂತ ಶೇ. 15ರಷ್ಟು, ಅಂದರೆ ಬರೋಬ್ಬರಿ 13.5 ಕೋಟಿಗೂ ಹೆಚ್ಚು ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ. ಸಾಮಾನ್ಯ ಕಳ್ಳತನಕ್ಕೆ ಜೈಲು ಶಿಕ್ಷೆಯಾಗುತ್ತದೆ, ಆದರೆ ಬಿಜೆಪಿ ಇಡೀ ದೇಶದ ಜನರ ಅಭಿಪ್ರಾಯವನ್ನೇ ಅಪಹರಿಸಿದೆ ಎಂದರು.
ದೇಶದ ಎಲ್ಲಾ ಸಾಂವಿಧಾನಿಕ ಸ್ವಾಯತ್ತ ಸಂಸ್ಥೆಗಳು ಮೋದಿ, ಅಮಿತ್ ಶಾ ಅಥವಾ ಆರ್ಎಸ್ಎಸ್ನ ಖಾಸಗಿ ಆಸ್ತಿಯಲ್ಲ. ಇವು ದೇಶದ ಪ್ರತಿಯೊಬ್ಬ ನಾಗರಿಕನಿಗೆ ಸೇರಿದ್ದು. ಆದರೆ ಪ್ರಸ್ತುತ ಸರ್ಕಾರ ಇಡೀ ವ್ಯವಸ್ಥೆಯನ್ನು ಕೇವಲ 2–3 ಉದ್ಯಮಿಗಳ ಕೈಗೊಂಬೆಯಾಗಿಸಿದೆ. ಲಕ್ಷಾಂತರ ಕೋಟಿ ರೂಪಾಯಿಗಳ ಉದ್ಯಮಿಗಳಸಾಲ ಮನ್ನಾ ಆಗುತ್ತದೆ, ಆದರೆ ಅನ್ನದಾತ ರೈತರ ಸಾಲ ಮನ್ನಾ ಆಗುವುದಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಾವು ಯಾರನ್ನೂ ದ್ವೇಷಿಸುವುದಿಲ್ಲ. ನಮಗೆ ನರೇಂದ್ರ ಮೋದಿ, ಅಮಿತ್ ಶಾ ಅಥವಾ ಜ್ಞಾನೇಶ್ ಕುಮಾರ್ ಮೇಲೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ನಮಗೆ ಯಾರೂ ಶತ್ರುಗಳಿಲ್ಲ. ನಾವು ದ್ವೇಷದ ಬದಲು ಪ್ರೀತಿಯ ಅಂಗಡಿ ತೆರೆಯುವವರು ಮತ್ತು ಅಹಿಂಸೆಯನ್ನು ನಂಬುವವರು. ನಮಗೆ ಪ್ರತಿಯೊಬ್ಬ ಭಾರತೀಯನ ಧ್ವನಿ ಧರ್ಮಕ್ಕಿಂತಲೂ ಮಿಗಿಲಾದುದು. ಹಿಂಸೆ ಅಥವಾ ದ್ವೇಷದ ಮೂಲಕವಲ್ಲ, ಪ್ರೀತಿಯಿಂದಲೇ ಹೋರಾಡುತ್ತೇವೆ. ಆದರೆ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆತ್ಮವನ್ನು ನಾಶಮಾಡಲು ಬಿಡುವುದಿಲ್ಲ ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು.
