Recent News

ಗುಜರಾತ್‍ ನಲ್ಲಿ ಬಿಜೆಪಿ ಗೆದ್ರೂ ಅಮಿತ್ ಶಾ ಸೋತು ಬಿಟ್ರು!

ಗಾಂಧಿನಗರ: ಬಿಜೆಪಿ ಗುಜರಾತ್ ನಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಿದ್ದರೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಈ ಚುನಾವಣೆಯಲ್ಲಿ ಸೋತಿದ್ದಾರೆ.

ಹೌದು. 2014ರ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೇವೆ ಎಂದು ಪಣ ತೊಟ್ಟಿದ್ದ ಅಮಿತ್ ಶಾ ಈ ಹಿಂದೆ ಮಾಧ್ಯಮಗಳ ಜೊತೆ ಮಾತನಾಡುವಾಗ ಈ ಬಾರಿ 150ಕ್ಕೂ ಹೆಚ್ಚು ಸ್ಥಾನ ಗೆದ್ದೆ ಗೆಲ್ಲುತ್ತೇವೆ. ಈ ವಿಶ್ವಾಸ ನಮಗೆ ಇದೆ ಎಂದು ಹೇಳಿದ್ದರು.

ಆದರೆ ಈ ಚುನಾವಣೆಯ ಮೂಲಕ ಮತ್ತೊಮ್ಮೆ ಬಿಜೆಪಿ ಆಡಳಿತಕ್ಕೆ ಏರಿದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆ ಸ್ಥಾನವನ್ನು ಪಡೆದುಕೊಂಡಿದೆ. ಆದರೆ ಕಾಂಗ್ರೆಸ್ ತನ್ನ ಶೇಖಡವಾರು ಮತ ಗಳಿಕೆಯನ್ನು ಹೆಚ್ಚು ಮಾಡಿಕೊಂಡಿದೆ.

ಮತ ಎಣಿಕೆಯ ಆರಂಭದಲ್ಲಿ ಬಿಜೆಪಿ ಮುನ್ನಡೆಗಳಿಸಿದ್ದರೂ 9 ಗಂಟೆಯ ವೇಳೆಗೆ ಕಾಂಗ್ರೆಸ್ ಭಾರೀ ಸ್ಪರ್ಧೆ ಕೊಟ್ಟಿತ್ತು. ಒಂದು ಹಂತದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಬಿಜೆಪಿಗಿಂತಲೂ ಮುನ್ನಡೆ ಸಾಧಿಸಿದ್ದಾಗ ಸರಳ ಬಹುಮತ ಪಡೆಯುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ 10 ಗಂಟೆಯ ನಂತರ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬಿಜೆಪಿ ಅಭ್ಯರ್ಥಿಗಳು ಹಿಂದಿಕ್ಕಿ ಜಯಭೇರಿ ಬಾರಿಸಿದ್ದಾರೆ.

ಲೋಕಸಭಾ ಚುನಾವಣೆಯ ವೇಳೆ ಉತ್ತರಪ್ರದೇಶ ಉಸ್ತುವಾರಿ ಹೊತ್ತಿದ್ದ ಅಮಿತ್ ಶಾ 80 ಸ್ಥಾನಗಳ ಪೈಕಿ 71 ಸ್ಥಾನಗಳನ್ನು ಗೆದ್ದುಕೊಟ್ಟಿದ್ದರು. ಆದರೆ ಇಲ್ಲಿ ಅಮಿತ್ ಶಾ ಅವರ 150 ಮಿಷನ್ ವಿಫಲವಾಗಿದೆ.

ಕಳೆದ ವರ್ಷದ ಕೊನೆಯಲ್ಲಿ ನೋಟ್ ಬ್ಯಾನ್ ಮತ್ತು ಈ ವರ್ಷ ಜಿಎಸ್‍ಟಿ ಜಾರಿಯಾದ ಬಳಿಕ ಮೋದಿ ವಿರುದ್ಧ ವರ್ತಕರು ಸಿಟ್ಟಾಗಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಹೀಗಾಗಿ ಈ ಚುನಾವಣೆಯನ್ನು ಗಂಭೀರವಾಗಿ ಸ್ವೀಕರಿಸಿದ ನರೇಂದ್ರ ಮೋದಿ ಚುನಾವಣೆ ದಿನಾಂಕ ಪ್ರಕಟವಾಗುವ ಮೊದಲೇ ಸರ್ದಾರ್ ಸರೋವರ್ ಜಲಾಶಯ ಉದ್ಘಾಟನೆ ಮತ್ತು ಬುಲೆಟ್ ರೈಲು ಯೋಜನೆಗೆ ಶಂಕುಸ್ಥಾಪನೆ ಮಾಡಲು ಬಂದಿದ್ದ ಜಪಾನ್ ಪ್ರಧಾನಿ ಶಿಂಜೋ ಅಬೆ ಜೊತೆ ಸೇರಿ ರೋಡ್ ಶೋ ನಡೆಸಿದ್ದರು. ಮೋದಿ ಜೊತೆ ರೋಡ್ ಶೋ ನಡೆಸಿರುವುದು ಗುಜರಾತ್ ಚುನಾವಣೆಯ ಪ್ರಚಾರ ತಂತ್ರ ಎಂದು ಕಾಂಗ್ರೆಸ್ ಟೀಕಿಸಿತ್ತು.

ಆಂತರಿಕ ಸಮೀಕ್ಷೆಯಲ್ಲಿ ಬಿಜೆಪಿಗೆ ಹಿನ್ನಡೆಯಾಗಲಿದೆ ಎನ್ನುವುದನ್ನು ಅರಿತ ಚಾಣಕ್ಯ ಅಮಿತ್ ಶಾ ಬಿಜೆಪಿ ದೊಡ್ಡ ನಾಯಕರನ್ನು ಪ್ರಚಾರಕ್ಕೆ ಇಳಿಸುವ ತಂತ್ರ ಹೂಡಿದರು. ಅಷ್ಟೇ ಅಲ್ಲದೇ ಗುಜರಾತ್ ಚುನಾವಣೆಯ ಹಿನ್ನೆಲೆಯಲ್ಲಿ ಚಳಿಗಾಲದ ಅಧಿವೇಶನ ಸಹ ಮುಂದಕ್ಕೆ ಹೋಗಿತ್ತು.

ಪರಿಸ್ಥಿತಿ ಕಠಿಣವಾಗಿದೆ ಎನ್ನುವುದನ್ನು ಅರಿತು ಪ್ರಧಾನಿ ಮೋದಿ ಅವರೇ ತವರಿನ ಕ್ಷೇತ್ರದಲ್ಲಿ ಪ್ರಚಾರಕ್ಕೆ ಧುಮುಕಿದರು. 2014ರ ಲೋಕಸಭಾ ಚುನಾವಣೆಯ ಬಳಿಕ ವಿವಿಧ ವಿಧಾನಸಭಾ ಚುನಾವಣೆಯಲ್ಲಿ ಮೋದಿ ಪ್ರಚಾರ ನಡೆಸಿದ್ದಾರೆ. ಆದರೆ ಇಷ್ಟೊಂದು ಪ್ರಮಾಣದಲ್ಲಿ ಮೋದಿ ಪ್ರಚಾರ ನಡೆಸಲಿಲ್ಲ. ಅಷ್ಟೇ ಅಲ್ಲದೇ ಕೇಂದ್ರದ ಮಂತ್ರಿಗಳು ಸಹ ಇಲ್ಲಿ ಪ್ರಚಾರ ನಡೆಸಿ ಜನರನ್ನು ಸೆಳೆಯುವ ತಂತ್ರಗಾರಿಕೆ ಫಲ ಕೊಟ್ಟಿದೆ.

ನೋಟ್ ಬ್ಯಾನ್ ಬಳಿಕ ಆಭರಣ ಉದ್ಯಮಿಗಳು, ಅಕ್ರಮ ಹಣ ಸಕ್ರಮ ಮಾಡುವ ದಂಧೆಯಲ್ಲಿ ಭಾಗಿಯಾಗಿದ್ದಾರೆಂಬ ಸಂಶಯದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ- 2002 ಅನ್ನು ಆಭರಣ ಖರೀದಿ ವ್ಯವಹಾರಗಳಿಗೆ ವಿಸ್ತರಿಸಿತ್ತು. ವಿಸ್ತರಿಸಿದ ಪರಿಣಾಮ 50 ಸಾವಿರ ರೂ. ಮೇಲ್ಪಟ್ಟ ಚಿನ್ನಖರೀದಿ ವೇಳೆ ಗ್ರಾಹಕರು ಪಾನ್‍ಕಾರ್ಡ್ ವಿವರ ನೀಡಬೇಕಿತ್ತು. ಜೊತೆಗೆ ವ್ಯಾಪಾರಿಗಳು ಭಾರೀ ಮೌಲ್ಯದ ಖರೀದಿ ಬಗ್ಗೆ ದಾಖಲೆ ಇಟ್ಟುಕೊಳ್ಳುವುದರ ಜತೆಗೆ ಅದನ್ನು ಹಣಕಾಸು ಗುಪ್ತ ಚರ ಇಲಾಖೆಗೆ ಸಲ್ಲಿಸಬೇಕಿತ್ತು. ಆದರೆ ಇದೇ ಅಕ್ಟೋಬರ್ ನಲ್ಲಿ 50 ಸಾವಿರ ರೂ. ಮೇಲ್ಪಟ್ಟ ಚಿನ್ನಾಭರಣಗಳ ಖರೀದಿಗೆ ಪಾನ್‍ಕಾರ್ಡ್ ಕಡ್ಡಾಯಗೊಳಿಸಿದ್ದ ಕಾನೂನನ್ನು ಕೇಂದ್ರ ಸರ್ಕಾರ ಹಿಂಪಡೆದಿತ್ತು. ಇನ್ನು ಮುಂದೆ 2 ಲಕ್ಷ ರು. ವರೆಗಿನ ಚಿನ್ನಾಭರಣ ಖರೀದಿಗೆ ಪಾನ್‍ಕಾರ್ಡ್ ಕಡ್ಡಾಯ ಇರುವುದಿಲ್ಲ. ಅದಕ್ಕೆ ಮೇಲ್ಪಟ್ಟ ಮೊತ್ತದ ಖರೀದಿಗೆ ಮಾತ್ರವೇ ಪಾನ್ ಕಡ್ಡಾಯ ಎಂದು ಸರ್ಕಾರ ತಿಳಿಸಿತ್ತು. ಗುಜರಾತ್ ಚುನಾವಣೆಯಲ್ಲಿ ವ್ಯಾಪಾರಿಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಕೇಂದ್ರ ಕೈಗೊಂಡಿದೆ ಎನ್ನುವ ಮಾತು ಅಂದು ಕೇಳಿ ಬಂದಿತ್ತು

Leave a Reply

Your email address will not be published. Required fields are marked *