ಬಾಗಲಕೋಟೆ: ಡೆತ್‍ನೋಟ್ ಬರೆದು, ನದಿಗೆ ಹಾರಿದ್ದಾಳೆಂಬ ಯುವತಿಯ ಪ್ರಕರಣಕ್ಕೆ ಸಿನಿಮೀಯ ರೀತಿಯಲ್ಲಿ ಟ್ವಿಸ್ಟ್ ಸಿಕ್ಕಿದ್ದು, ಯುವತಿ ಪ್ರಿಯಕರನೊಂದಿಗೆ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾಳೆ.
ಈ ಘಟನೆ ಬಾಗಲಕೋಟೆ ತಾಲೂಕಿನ ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದ್ವಿತೀಯ ಪಿಯುಸಿ ಓದುತ್ತಿದ್ದ ಗಾಯತ್ರಿ ಬಡಿಗೇರ್ (18) ತನ್ನ ಸ್ಕೂಟಿಯನ್ನ ಘಟಪ್ರಭಾ ನದಿ ಸೇತುವೆ ಬಳಿ ಬಿಟ್ಟು ನಾಪತ್ತೆಯಾಗುವ ಮೂಲಕ ತನ್ನ ಮನೆಯವರ ಹಾಗೂ ಪೊಲೀಸರ ದಿಕ್ಕು ತಪ್ಪಿಸಿದ್ದಾಳೆ. ತನಿಖೆ ಕೈಗೊಂಡ ಕಲಾದಗಿ ಪೊಲೀಸರು ಅವಳನ್ನ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
Advertisement
Advertisement
ಏನಿದು ಪ್ರಕರಣ?
ಬೀಳಗಿ ತಾಲೂಕಿನ ಅನಗವಾಡಿ ಬಳಿ ಇರುವ ಘಟಪ್ರಭಾ ಸೇತುವೆ ಬಳಿ ನಿನ್ನೆ (ಶುಕ್ರವಾರ) ಮಧ್ಯಾಹ್ನ ಯುವತಿಯೊಬ್ಬಳು ನಂಬರ್ ಪ್ಲೇಟ್ ಇಲ್ಲದ ಸ್ಕೂಟಿಯಲ್ಲಿ ಬಂದಿದ್ದಳು. ನಂತರ ರಸ್ತೆ ಬದಿ ಸ್ಕೂಟಿ ನಿಲ್ಲಿಸಿ, ಘಟಪ್ರಭಾ ಸೇತುವೆ ಮೇಲಿಂದ ನದಿಗೆ ಹಾರಿದ್ದಾಳೆಂಬ ಸುದ್ದಿ ಹರಡಿತ್ತು. ಈ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದರು. ಪೊಲೀಸರು ಅಲ್ಲಿರುವ ಸ್ಥಳೀಯರನ್ನ ವಿಚಾರಣೆ ಮಾಡಿ ಯುವತಿಯ ಮನೆಯವರಿಗೆ ಮಾಹಿತಿ ತಿಳಿಸಿದ್ದರು.
Advertisement
ಯುವತಿ ಸ್ಕೂಟಿಯಲ್ಲಿ ಬಂದು ನದಿಗೆ ಹಾರಿದ್ದಾಳೆಂದು ಅಲ್ಲಿದ್ದ ಕೆಲವರು ಹೇಳಿದ್ದರು. ಇನ್ನೂ ಕೆಲವರು ಯುವತಿ ನಡೆದುಕೊಂಡು ಗದ್ದನಕೇರಿ ಕ್ರಾಸ್ ಕಡೆಗೆ ಹೋಗಿದ್ದಾಳೆ ಎಂದಿದ್ದರು. ಇದನ್ನರಿತ ಪೊಲೀಸರು ಏನೋ ವಿಷಯ ಅಡಗಿದೆ ಎಂದು ಸ್ಕೂಟಿಯನ್ನ ಪರಿಶೀಲನೆ ಮಾಡಿದಾಗ ಯುವತಿ ಡೆತ್‍ನೋಟ್ ಬರೆದಿಟ್ಟಿದ್ದು ಗೊತ್ತಾಯಿತು. ಅದರಲ್ಲಿ “ನನ್ನ ಸಾವಿಗೆ ನಾನೇ ಕಾರಣ, ಎಲ್ಲರೂ ಕ್ಷಮಿಸಿ ಬಿಡಿ, ನಿಮ್ಮ ಋಣ ಎಂದಿಗೂ ಮರೆಯೋದಿಲ್ಲ, ಬದುಕುವ ಆಸೆ ನನಗಿಲ್ಲ ನಿಮ್ಮ ಪ್ರೀತಿಯ ಗಾಯತ್ರಿ” ಎಂದು ಬರೆದಿದ್ದಳು.
Advertisement
ಪ್ರಕರಣದ ಬೆನ್ನತ್ತಿದ ಪೊಲೀಸರು ಯುವತಿಯ ನಂಬರ್ ಟ್ರೇಸ್ ಮಾಡಿದಾಗ ಹುಬ್ಬಳ್ಳಿಯಲ್ಲಿರುವ ಮಾಹಿತಿ ತಿಳಿಯಿತು. ನಂತರ ಪೊಲೀಸರು ಹುಬ್ಬಳ್ಳಿಗೆ ತೆರಳಿ ರಾತ್ರೋರಾತ್ರಿ ಗಾಯತ್ರಿಯನ್ನ ಪತ್ತೆ ಹಚ್ಚಿದ್ದಾರೆ. ಹುಬ್ಬಳ್ಳಿಯಲ್ಲಿ ಯುವತಿಯ ಜೊತೆ ಪ್ರವೀಣ್ ಎಂಬಾತ ಇರುವುದನ್ನು ಕಂಡ ಪೊಲೀಸರು ಇದು ಲವ್ ಕೇಸ್ ಎಂದು ಖಚಿತ ಮಾಡಿಕೊಂಡಿದ್ದಾರೆ.
ಮನೆಯವರು ಅವಳ ಪ್ರೀತಿಯನ್ನ ಒಪ್ಪದೇ ಇರುವುದಕ್ಕೆ ಸಿನಿಮೀಯ ರೀತಿಯ ಪ್ಲಾನ್ ಮಾಡಿದ ಗಾಯತ್ರಿ ಎಲ್ಲರ ದಾರಿ ತಪ್ಪಿಸಿದ್ದು ಬೆಳಕಿಗೆ ಬಂದಿದೆ. ಸದ್ಯ ಗಾಯತ್ರಿಯನ್ನ ಅವರ ಮನೆಯವರ ಜವಾಬ್ದಾರಿ ಮೇಲೆ ಮನೆಗೆ ಕಳುಹಿಸಿಕೊಡಲಾಗಿದೆ.