– ಚೀನಾದಲ್ಲಿ 43 ಲಕ್ಷ ಕಾರುಗಳು ರೀಕಾಲ್
– ಭೌತಿಕ ಬಟನ್‌ಗಳು ವಾಪಸ್
ಕಾರುಗಳಿಗೆ ಮಾಡರ್ನ್ ಲುಕ್ ಮತ್ತು ಉತ್ತಮ ಮೈಲೇಜ್ ಕೊಡುವ ಉದ್ದೇಶದಿಂದ ಪರಿಚಯಿಸಲಾದ ‘ಫ್ಲಶ್ ಡೋರ್ ಹ್ಯಾಂಡಲ್‌ಗಳು’ (Flush Door Handles) ಇದೀಗ ವಾಹನ ಸವಾರರ ಪಾಲಿಗೆ ಮರಣ ಶಾಸನವಾಗುತ್ತಿದೆ. ಅಪಘಾತದ ವೇಳೆ ಬಾಗಿಲುಗಳು ಲಾಕ್ ಆಗಿ ಪ್ರಯಾಣಿಕರು ಹೊರಬರಲಾರದೆ ಜೀವ ಕಳೆದುಕೊಳ್ಳುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದಂತೆ, ಜಾಗತಿಕ ಮಟ್ಟದಲ್ಲಿ ಇವುಗಳ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಚೀನಾ ಬರೋಬ್ಬರಿ 43 ಲಕ್ಷ ಕಾರುಗಳನ್ನು ಹಿಂಪಡೆದಿದ್ದು 2027 ರಿಂದ ಈ ಹ್ಯಾಂಡಲ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಮುಂದಾಗಿದೆ. ಹೀಗಾಗಿ ಈ ಕಾರಿನ ಡೋರ್ ಜಾರಿಗೆ ತಂದಿದ್ದು ಯಾಕೆ? ಹಿಂಪಡೆದಿದ್ದು ಯಾಕೆ? ಗ್ರಾಹಕರ ವಿರೋಧ ಯಾಕೆ? ಇತ್ಯಾದಿ ವಿಚಾರಗಳನ್ನು ಇಲ್ಲಿ ತಿಳಿಸಲಾಗಿದೆ.
ಬಳಕೆಯಾಗಿದ್ದು ಯಾಕೆ?
ಕಾರಿನ ಮೈಲೇಜ್ ಹೆಚ್ಚಳ ಮತ್ತು ಆಧುನಿಕ ವಿನ್ಯಾಸಕ್ಕಾಗಿ ಫ್ಲಶ್ ಡೋರ್ ಹ್ಯಾಂಡಲ್‌ಗಳನ್ನು (Flush Door Handles) ಹೆಚ್ಚಾಗಿ ಬಳಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಎಲೆಕ್ಟ್ರಿಕ್ ಕಾರುಗಳಲ್ಲಿ (EVs) ಈ ತಂತ್ರಜ್ಞಾನ ಹೆಚ್ಚಾಗಿ ಬಳಕೆಯಾಗುತ್ತಿದೆ.
ಕಾರು ವೇಗವಾಗಿ ಚಲಿಸುವಾಗ ಗಾಳಿಯ ಘರ್ಷಣೆ ಉಂಟಾಗುತ್ತದೆ. ಸಾಮಾನ್ಯ ಹ್ಯಾಂಡಲ್‌ಗಳು ಹೊರಗೆ ಚಾಚಿಕೊಂಡಿರುವುದರಿಂದ ಗಾಳಿಯನ್ನು ತಡೆಯುತ್ತವೆ. ಫ್ಲಶ್ ಹ್ಯಾಂಡಲ್‌ಗಳು ಕಾರಿನ ಬಾಡಿಯೊಂದಿಗೆ ಇರುವುದರಿಂದ ಗಾಳಿ ಸುಲಭವಾಗಿ ಹಾದುಹೋಗುತ್ತದೆ. ಗಾಳಿಯ ನಿರೋಧಕತೆ ಕಡಿಮೆಯಾದಾಗ ಇಂಜಿನ್ ಅಥವಾ ಬ್ಯಾಟರಿಯ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಇದು ಸಾಂಪ್ರದಾಯಿಕ ಕಾರುಗಳಲ್ಲಿ ಮೈಲೇಜ್ ಹೆಚ್ಚಿಸಲು ಮತ್ತು ಎಲೆಕ್ಟ್ರಿಕ್ ಕಾರುಗಳಲ್ಲಿ ಒಂದು ಬಾರಿ ಚಾರ್ಜ್ ಮಾಡಿದರೆ ಬರುವ ದೂರವನ್ನು (Range) ಹೆಚ್ಚಿಸಲು ಸಹಾಯ ಮಾಡುತ್ತದೆ.

ಕಾರು ಹೈವೇಗಳಲ್ಲಿ ವೇಗವಾಗಿ ಹೋಗುವಾಗ ಚಾಚಿಕೊಂಡಿರುವ ಹ್ಯಾಂಡಲ್‌ಗಳಿಂದಾಗಿ ಗಾಳಿಯ ಶಬ್ದ (Wind Noise) ಕ್ಯಾಬಿನ್ ಒಳಗಡೆ ಕೇಳಿಸುತ್ತದೆ. ಫ್ಲಶ್ ಹ್ಯಾಂಡಲ್‌ಗಳು ಈ ಶಬ್ದವನ್ನು ಗಣನೀಯವಾಗಿ ಕಡಿಮೆ ಮಾಡಿ, ಪ್ರಯಾಣವನ್ನು ನಿಶ್ಯಬ್ದವಾಗಿಸುತ್ತವೆ.
ಕಾರು ಲಾಕ್ ಆದಾಗ ಈ ಹ್ಯಾಂಡಲ್‌ಗಳು ಸಂಪೂರ್ಣವಾಗಿ ಒಳಗೆ ಹೋಗಿ ಲಾಕ್ ಆಗುತ್ತವೆ. ಇದರಿಂದ ಕಳ್ಳರು ಹ್ಯಾಂಡಲ್ ಹಿಡಿದು ಬಾಗಿಲು ಮುರಿಯಲು ಸಾಧ್ಯವಾಗುವುದಿಲ್ಲ. ಈ ಎಲ್ಲಾ ಕಾರಣ ಮುಂದಿಟ್ಟುಕೊಂಡು ಕಾರು ಕಂಪನಿಗಳು ಫ್ಲಶ್ ಡೋರ್ ಹ್ಯಾಂಡಲ್ ನೀಡಲು ಆರಂಭಿಸಿದವು.
ಈಗ ವಿರೋಧ ಯಾಕೆ?
ಫ್ಲಶ್ ಡೋರ್ ಹ್ಯಾಂಡಲ್‌ಗಳು ಸಂಪೂರ್ಣವಾಗಿ ಎಲೆಕ್ಟ್ರಾನಿಕ್ ಸಿಸ್ಟಮ್ ಮತ್ತು ಮೋಟಾರ್‌ಗಳ ಮೂಲಕ ಕಾರ್ಯನಿರ್ವಹಿಸುತ್ತವೆ. ಕಾರುಗಳು ಭೀಕರ ಅಪಘಾತಕ್ಕೀಡಾದಾಗ ಅಥವಾ ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ಆದಾಗ ಇಡೀ ಕಾರಿನ ವಿದ್ಯುತ್ ಸಂಪರ್ಕ (Power Supply) ಕಡಿತಗೊಳ್ಳುತ್ತದೆ. ಇಂತಹ ಸಮಯದಲ್ಲಿ ಹ್ಯಾಂಡಲ್‌ಗಳು ಹೊರಗಡೆ ಬರುವುದೇ ಇಲ್ಲ. ಅಪಘಾತದ ನಂತರ ಕಾರಿನ ಒಳಗೆ ಇರುವವರು ಹೊರಬರಲು ಸಾಧ್ಯವಾಗದೆ ಅಥವಾ ಹೊರಗಿನ ರಕ್ಷಣಾ ಸಿಬ್ಬಂದಿ (Rescuers) ಬಾಗಿಲನ್ನು ತೆರೆಯಲು ಹ್ಯಾಂಡಲ್ ಸಿಗದೆ ಪರದಾಡಬೇಕಾಗುತ್ತದೆ.
ಪ್ರತಿಯೊಂದು ಕಾರಿನ ಒಳಗೂ ಎಲೆಕ್ಟ್ರಾನಿಕ್ ಬಟನ್ ಕೆಲಸ ಮಾಡದಿದ್ದಾಗ ತೆರೆಯಲು ‘ಮೆಕ್ಯಾನಿಕಲ್ ಓವರ್‌ರೈಡ್’ ಇರುತ್ತದೆಯಾದರೂ ಅದನ್ನು ಸೀಟಿನ ಕೆಳಗೋ, ಕಾರ್ಪೆಟ್ ಒಳಗೋ ಅಥವಾ ಪ್ಲಾಸ್ಟಿಕ್ ಕವರ್‌ಗಳ ಹಿಂದೆಯೋ ಅಡಗಿಸಿಡಲಾಗಿರುತ್ತದೆ. ಅಪಘಾತದ ಗಾಬರಿಯಲ್ಲಿ ಅಥವಾ ಕಾರಿನೊಳಗೆ ಹೊಗೆ ತುಂಬಿಕೊಂಡಾಗ ಪ್ರಯಾಣಿಕರಿಗೆ ಅದನ್ನು ಹುಡುಕಿ ಬಾಗಿಲು ತೆರೆಯುವುದು ಅಸಾಧ್ಯ.
ಚೀನಾದಲ್ಲಿ Xiaomi ಸೇರಿದಂತೆ ಕೆಲವು ಕಂಪನಿಗಳ ಇವಿ ಕಾರುಗಳು ಅಪಘಾತಕ್ಕೀಡಾದಾಗ ಪವರ್ ಫೇಲ್ಯೂರ್‌ನಿಂದಾಗಿ ಬಾಗಿಲುಗಳು ಲಾಕ್ ಆಗಿದ್ದವು. ಹೊರಗಿದ್ದ ರಕ್ಷಣಾ ಸಿಬ್ಬಂದಿಗೆ ಬಾಗಿಲು ತೆರೆಯಲು ಸಾಧ್ಯವಾಗದೆ ಪ್ರಯಾಣಿಕರು ಕಾರಿನ ಒಳಗೇ ಪ್ರಾಣ ಕಳೆದುಕೊಂಡ ಕೆಲವು ಘಟನೆಗಳ ವಿಡಿಯೋಗಳು ವೈರಲ್ ಆಗಿದ್ದವು. ಅಮೆರಿಕದಲ್ಲೂ ಟೆಸ್ಲಾ ಕಾರುಗಳಲ್ಲಿ ಇಂತಹದ್ದೇ ಕೆಲವು ಗಂಭೀರ ಘಟನೆಗಳು ನಡೆದಿವೆ.

ಭಾರೀ ಮಳೆ ಬಂದಾಗ ಅಥವಾ ಕಾರು ನೀರಿನಲ್ಲಿ ಮುಳುಗಿದಾಗ ನೀರು ಸೀಪೇಜ್ ಆಗಿ ಇವುಗಳ ಎಲೆಕ್ಟ್ರಾನಿಕ್ ಸರ್ಕ್ಯೂಟ್ ಶಾರ್ಟ್ ಆಗಬಹುದು. ಹಿಮ ಬೀಳುವ ಪ್ರದೇಶಗಳಲ್ಲಿ ಇವುಗಳ ಮೇಲೆ ಮಂಜುಗಡ್ಡೆ ಹೆಪ್ಪುಗಟ್ಟಿದರೆ, ಹ್ಯಾಂಡಲ್‌ಗಳು ಹೊರಬರಲು ಸಾಧ್ಯವಾಗದೆ ಲಾಕ್ ಆಗಿಬಿಡುತ್ತವೆ.
ಅಪಘಾತದಲ್ಲಿ ಕಾರಿನ ಪಾರ್ಶ್ವಕ್ಕೆ (Side impact) ಪೆಟ್ಟಾದಾಗ ಈ ಸೂಕ್ಷ್ಮ ಹ್ಯಾಂಡಲ್‌ಗಳು ತಕ್ಷಣವೇ ಡ್ಯಾಮೇಜ್ ಆಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತವೆ. ಸಾಂಪ್ರದಾಯಿಕ (ಮೆಕ್ಯಾನಿಕಲ್) ಹ್ಯಾಂಡಲ್‌ಗಳಿಗೆ ಹೋಲಿಸಿದರೆ ಈ ಫ್ಲಶ್ ಹ್ಯಾಂಡಲ್‌ಗಳನ್ನು ತಯಾರಿಸಲು ಮತ್ತು ಅವು ಹಾಳಾದರೆ ರಿಪೇರಿ ಮಾಡಲು ಮೂರು ಪಟ್ಟು ಹೆಚ್ಚು ವೆಚ್ಚವಾಗುತ್ತದೆ.
43 ಲಕ್ಷ ಕಾರು ರೀಕಾಲ್
ಚೀನಾದಲ್ಲಿ ಎಲೆಕ್ಟ್ರಿಕ್ ಕಾರುಗಳ (EV) ಹಿಡನ್ ಡೋರ್ ಹ್ಯಾಂಡಲ್ (Flush Door Handles) ಅಥವಾ ಕಾರಿನ ಒಳಗಿನ ಎಲೆಕ್ಟ್ರಾನಿಕ್ ಬಾಗಿಲುಗಳ ಸುರಕ್ಷತೆಯ ಸಮಸ್ಯೆಗೆ ಸಂಬಂಧಿಸಿದಂತೆ 43 ಲಕ್ಷಕ್ಕೂ ಹೆಚ್ಚು ಕಾರುಗಳನ್ನು ಹಿಂಪಡೆಯಲಾಗಿದೆ. ಜೀವಕ್ಕೆ ಕಂಟಕವಾಗುತ್ತಿರುವುದರಿಂದ ಚೀನಾ ಸರ್ಕಾರವು ಜನವರಿ 1, 2027 ರಿಂದ ಇವುಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಚೀನಾದ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಕಾರು ರಿಕಾಲ್ ಪ್ರಕ್ರಿಯೆಯಾಗಿದೆ. ಈ ಪೈಕಿ ಟೆಸ್ಲಾ (Tesla) ಅತಿ ಹೆಚ್ಚು ಅಂದರೆ ಸುಮಾರು 29.8 ಲಕ್ಷ ಕಾರುಗಳನ್ನು ರಿಕಾಲ್ ಮಾಡಿದೆ.
ಪರಿಹಾರ ಏನು?
ರಿಕಾಲ್ ಮಾಡಿದ ಕಾರುಗಳಿಗೆ ಕಂಪನಿಗಳು ಉಚಿತವಾಗಿ ಮ್ಯಾನುಯಲ್ ಎಮರ್ಜೆನ್ಸಿ ಹ್ಯಾಂಡಲ್ ಎಲ್ಲಿದೆ ಎಂದು ತಿಳಿಸುವ ಸ್ಪಷ್ಟ ಸ್ಟಿಕ್ಕರ್‌ಗಳನ್ನು ಒದಗಿಸುತ್ತಿವೆ ಮತ್ತು ಅಪಘಾತದ ಸಮಯದಲ್ಲಿ ಕಿಟಕಿಗಳು ತಾನಾಗಿಯೇ ಕೆಳಗಿಳಿಯುವಂತೆ (Windows Roll Down) ಸಾಫ್ಟ್‌ವೇರ್ ಅಪ್‌ಡೇಟ್ ಮಾಡುತ್ತಿವೆ.
ಹೊಸ ನಿಯಮ ಏನು?
ಚೀನಾದ ಕೈಗಾರಿಕೆ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊರಡಿಸಿರುವ ಹೊಸ ನಿಯಮಗಳ 2027 ರಿಂದ ಜಾರಿಗೆ ಬರಲಿದೆ. ಚೀನಾದಲ್ಲಿ ಮಾರಾಟವಾಗುವ ಎಲ್ಲಾ ಹೊಸ ಕಾರುಗಳ ಪ್ರತಿ ಬಾಗಿಲಿನ ಒಳಗೆ ಮತ್ತು ಹೊರಗೆ ಕಡ್ಡಾಯವಾಗಿ ಯಾಂತ್ರಿಕವಾಗಿ (Mechanical) ಕೆಲಸ ಮಾಡುವ ಹ್ಯಾಂಡಲ್ ಇರಬೇಕು. ಕರೆಂಟ್ ಅಥವಾ ಬ್ಯಾಟರಿ ಸಂಪೂರ್ಣ ಹೋದರೂ ಸಹ ಯಾವುದೇ ಅಡೆತಡೆಯಿಲ್ಲದೆ ಕೈಯಿಂದ ಬಾಗಿಲು ತೆರೆಯುವಂತಿರಬೇಕು. ಹೊರಗಿನ ಹ್ಯಾಂಡಲ್ ಹಿಡಿಯಲು ಕೈಗೆ ಕನಿಷ್ಠ ಜಾಗ ಇರಬೇಕು ಮತ್ತು ಒಳಗೆ ಮ್ಯಾನುಯಲ್ ಆಗಿ ಬಾಗಿಲು ತೆರೆಯುವ ವಿಧಾನದ ಬಗ್ಗೆ ಸ್ಪಷ್ಟ ಸೂಚನೆ ಇರಬೇಕು.

ಬೇರೆ ದೇಶಗಳಲ್ಲಿ ಹೇಗೆ?
ಚೀನಾ ದೇಶವು 2027 ರಿಂದ ಫ್ಲಶ್ ಡೋರ್ ಹ್ಯಾಂಡಲ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಲು ನಿರ್ಧರಿಸಿದ ಬೆನ್ನಲ್ಲೇ, ಅಮೆರಿಕ ಮತ್ತು ಯುರೋಪ್ ದೇಶಗಳಲ್ಲೂ ಈ ಹ್ಯಾಂಡಲ್‌ಗಳ ಸುರಕ್ಷತೆಯ ಬಗ್ಗೆ ತೀವ್ರ ಚರ್ಚೆ ಹಾಗೂ ಕಾನೂನು ಬಿಗಿಬೊಳಿಸುವ ಪ್ರಕ್ರಿಯೆಗಳು ಆರಂಭವಾಗಿವೆ.
ಅಮೆರಿಕದ ಪ್ರಮುಖ ರಸ್ತೆ ಸುರಕ್ಷತಾ ನಿಯಂತ್ರಣ ಸಂಸ್ಥೆಯಾದ NHTSA (National Highway Traffic Safety Administration) ಈಗಾಗಲೇ ಹೊಸ ಸುರಕ್ಷತಾ ನಿಯಮಗಳನ್ನು ರೂಪಿಸಲು ಮುಂದಾಗಿದೆ. ಕಾರಿನ ಎಲೆಕ್ಟ್ರಿಕ್ ಸಿಸ್ಟಮ್ ಫೇಲ್ ಆದರೂ ಬಾಗಿಲು ಸುಲಭವಾಗಿ ತೆರೆಯುವಂತೆ ಸ್ಪಷ್ಟ ಮತ್ತು ಗಟ್ಟಿಯಾದ ಮ್ಯಾನುಯಲ್ ಎಮರ್ಜೆನ್ಸಿ ರಿಲೀಸ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲು ಅದು ಯೋಜಿಸುತ್ತಿದೆ. ಇದನ್ನೂ ಓದಿ: ಚೀನಾದ ಏಕಸ್ವಾಮ್ಯಕ್ಕೆ ಬೆಂಗಳೂರು ಸ್ಟಾರ್ಟಪ್ ಮಾಸ್ಟರ್‌ಸ್ಟ್ರೋಕ್ – ಬಂದಿದೆ ವರ್ಚುವಲ್ ಮ್ಯಾಗ್ನೆಟ್ EV ತಂತ್ರಜ್ಞಾನ!
ಕಾರುಗಳ ಸುರಕ್ಷತೆಗೆ ರೇಟಿಂಗ್ ನೀಡುವ ಪ್ರಮುಖ ಸಂಸ್ಥೆಯಾದ Euro NCAP, ತನ್ನ 2026ರ ಹೊಸ ನಿಯಮಾವಳಿಗಳಲ್ಲಿ ಎಲೆಕ್ಟ್ರಾನಿಕ್ ಮತ್ತು ಫ್ಲಶ್ ಹ್ಯಾಂಡಲ್‌ಗಳ ಟೆಸ್ಟಿಂಗ್ ಅನ್ನು ಕಡ್ಡಾಯಗೊಳಿಸಿದೆ. ಕ್ರ್ಯಾಶ್ ಟೆಸ್ಟ್ (ಅಪಘಾತ) ಆದ ತಕ್ಷಣವೇ ಕಾರಿನ ಬ್ಯಾಟರಿ ಸಂಪೂರ್ಣ ಕೈಕೊಟ್ಟರೂ, ಹೊರಗಿನ ಹ್ಯಾಂಡಲ್‌ಗಳು ಆಟೋಮ್ಯಾಟಿಕ್ ಆಗಿ ಹೊರಗೆ ಬಂದು ಕೆಲಸ ಮಾಡಬೇಕು (Operable after impact) ಎಂದು ಯುರೋ ಎನ್‌ಸಿಎಪಿ ಕಡ್ಡಾಯ ಮಾಡಿದೆ. ಇಲ್ಲದಿದ್ದರೆ ಅಂತಹ ಕಾರುಗಳ ಸೇಫ್ಟಿ ರೇಟಿಂಗ್‌ಗೆ ಭಾರಿ ಪೆಟ್ಟು ಬೀಳಲಿದೆ.

ದೊಡ್ಡ ಟಚ್ ಸ್ಕ್ರೀನ್‌ಗಳಿಗೆ ಬ್ರೇಕ್
ಫ್ಲಶ್ ಡೋರ್ ಹ್ಯಾಂಡಲ್‌ಗಳಂತೆ, ಇನ್ಫೋಟೈನ್‌ಮೆಂಟ್ ಸ್ಕ್ರೀನ್‌ಗಳು ಕೂಡ ಚಾಲಕರ ಗಮನವನ್ನು ಬೇರೆಡೆಗೆ ಸೆಳೆದು ಅಪಘಾತಗಳಿಗೆ ಕಾರಣವಾಗುತ್ತಿವೆ ಎಂದು ಯುರೋಪ್ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾರುಗಳಲ್ಲಿನ ದೊಡ್ಡ ದೊಡ್ಡ ಟಚ್‌ಸ್ಕ್ರೀನ್‌ಗಳ ಹಾವಳಿಗೆ ಬ್ರೇಕ್ ಹಾಕಿ ಮತ್ತೆ ಭೌತಿಕ ಬಟನ್‌ಗಳನ್ನು (Physical Buttons) ಕಡ್ಡಾಯವಾಗಿ ವಾಪಸ್ ತರಬೇಕೆಂದು Euro NCAP ಈಗಾಗಲೇ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ. ಇದರ ಪ್ರಕಾರ, ಒಂದು ಕಾರು ಗರಿಷ್ಠ ‘5-ಸ್ಟಾರ್ ಸೇಫ್ಟಿ ರೇಟಿಂಗ್’ ಪಡೆಯಬೇಕಾದರೆ, ಕನಿಷ್ಠ 5 ಅಗತ್ಯ ಕಾರ್ಯಗಳಿಗೆ ಕಡ್ಡಾಯವಾಗಿ ಹಳೆಯ ಮಾದರಿಯ ಬಟನ್‌ಗಳು ಅಥವಾ ಲಿವರ್‌ಗಳನ್ನೇ ಬಳಸಬೇಕು.
ಟರ್ನ್ ಸಿಗ್ನಲ್‌ಗಳು (ಇಂಡಿಕೇಟರ್ಸ್), ಹಾಜಾರ್ಡ್ ಲೈಟ್ಸ್ (ಅಪಾಯದ ದೀಪಗಳು),ವೈಪರ್ ಕಂಟ್ರೋಲ್ (Wipers), ಹಾರ್ನ್ (Horn) SOS ಎಮರ್ಜೆನ್ಸಿ ಕಾಲ್ ಬಟನ್ ಕಡ್ಡಾಯ ಮಾಡಲಾಗಿದೆ. ಯಾವ ಕಾರುಗಳಲ್ಲಿ ಇವುಗಳನ್ನು ಟಚ್‌ಸ್ಕ್ರೀನ್ ಒಳಗೆ ನೀಡಲಾಗುತ್ತದೆಯೋ, ಆ ಕಾರುಗಳಿಗೆ ಪಾಯಿಂಟ್‌ಗಳನ್ನು ಕಡಿತಗೊಳಿಸಲಾಗುತ್ತದೆ.

ಯಾಕೆ ಈ ಬದಲಾವಣೆ?
ಟಚ್‌ಸ್ಕ್ರೀನ್‌ನಲ್ಲಿ ಎಸಿ ತಾಪಮಾನ ಬದಲಾಯಿಸಲು ಅಥವಾ ಹಾಡು ಬದಲಾಯಿಸಲು ಡ್ರೈವರ್ ಕನಿಷ್ಠ 5 ರಿಂದ 40 ಸೆಕೆಂಡುಗಳ ಕಾಲ ರಸ್ತೆಯಿಂದ ಕಣ್ಣು ತೆಗೆಯಬೇಕಾಗುತ್ತದೆ. ಆದರೆ ಭೌತಿಕ ಬಟನ್‌ಗಳನ್ನು ರಸ್ತೆ ನೋಡುತ್ತಲೇ ಕೇವಲ ಸ್ಪರ್ಶದ ಮೂಲಕ (Muscle Memory) ಆಪರೇಟ್ ಮಾಡಬಹುದು. ಇದನ್ನೂ ಓದಿ: ಟ್ರಕ್ ಚಾಲಕರ ನಿದ್ದೆ, ಅಪಘಾತ ತಡೆಯಲು ಬಂತು ಹೈ-ಟೆಕ್ ಸುರಕ್ಷತಾ ವ್ಯವಸ್ಥೆ!
ತಂತ್ರಜ್ಞಾನ ಎಷ್ಟು ಮುಂದುವರಿದರೂ ಜೀವ ರಕ್ಷಣೆಯ ವಿಚಾರದಲ್ಲಿ ಸರಳ ಮತ್ತು ಸಾಂಪ್ರದಾಯಿಕ ಯಾಂತ್ರಿಕ ವ್ಯವಸ್ಥೆಯೇ ಹೆಚ್ಚು ಸುರಕ್ಷಿತ ಎಂಬುದು ಮತ್ತೆ ಸಾಬೀತಾಗಿದೆ. ಚೀನಾದ ಕಠಿಣ ನಿಷೇಧ, ಯುರೋ ಎನ್‌ಸಿಎಪಿಯ ಹೊಸ ನಿಯಮಗಳು ಹಾಗೂ ಜಾಗತಿಕ ಮಟ್ಟದ ವಿರೋಧವು ವಾಹನ ತಯಾರಿಕಾ ಕಂಪನಿಗಳಿಗೆ ಕಣ್ಣುತೆರೆಸಿದ್ದು, ಮುಂಬರುವ ದಿನಗಳಲ್ಲಿ ‘ಸ್ಟೈಲ್’ಗಿಂತ ‘ಸುರಕ್ಷತೆ’ಗೇ ಹೆಚ್ಚಿನ ಮನ್ನಣೆ ಸಿಗುವಂತಾಗಿದೆ. ಆಟೋಮೊಬೈಲ್ ಜಗತ್ತು ಮತ್ತೆ ಹಳೆಯ ವಿಶ್ವಾಸಾರ್ಹ ಮೆಕ್ಯಾನಿಕಲ್ ಹ್ಯಾಂಡಲ್‌ಗಳು ಮತ್ತು ಭೌತಿಕ ಬಟನ್‌ಗಳ ಮೊರೆ ಹೋಗುತ್ತಿರುವುದು ಸ್ವಾಗತಾರ್ಹ ಬದಲಾವಣೆ.
