ಇಂದಿನ ಜಗತ್ತಿನಲ್ಲಿ ಎಲೆಕ್ಟ್ರಿಕ್ ಕಾರು, ಯುದ್ಧ ವಿಮಾನ, ರಕ್ಷಣಾ ಉಪಕರಣ ಅಥವಾ ವೈಮಾನಿಕ ತಂತ್ರಜ್ಞಾನ—ಯಾವುದೇ ಆಧುನಿಕ ವಲಯವನ್ನು ತೆಗೆದುಕೊಂಡರೂ ಅಲ್ಲಿ ಅಪರೂಪದ ಭೂ ಖನಿಜಗಳು (Rare-Earth Minerals) ಅತ್ಯಂತ ನಿರ್ಣಾಯಕ. ಆದರೆ, ಜಾಗತಿಕ ಪೂರೈಕೆ ಸರಪಳಿಯ ಶೇ.90ಕ್ಕೂ ಹೆಚ್ಚು ಭಾಗವನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡಿರುವ ಚೀನಾ, ಈ ಖನಿಜಗಳನ್ನೇ ಅಸ್ತ್ರವಾಗಿಸಿಕೊಂಡು ಇಡೀ ವಿಶ್ವವನ್ನು ತನ್ನ ಬೆರಳ ತುದಿಯಲ್ಲಿ ಆಟವಾಡಿಸುತ್ತಿದೆ.
ಚೀನಾ ಸಣ್ಣದೊಂದು ರಫ್ತು ತಡೆ ನೀಡಿದರೂ ಜಾಗತಿಕ ಎಲೆಕ್ಟ್ರಿಕ್ ವಾಹನ (EV) ಮಾರುಕಟ್ಟೆ ಮತ್ತು ರಕ್ಷಣಾ ವಲಯಗಳು ಸ್ತಬ್ಧವಾಗುವ ಭೀತಿ ಎದುರಾಗಿದೆ. ಇಂತಹ ಕ್ಲಿಷ್ಟಕರ ಹಾಗೂ ಜಾಗತಿಕ ಆತಂಕದ ನಡುವೆಯೇ, ಬೆಂಗಳೂರಿನ ದೀಪ್‌ಟೆಕ್ ಸ್ಟಾರ್ಟಪ್ ವಿಮ್ಯಾಗ್ ಲ್ಯಾಬ್ಸ್ (Vimag Labs) ಅಭಿವೃದ್ಧಿಪಡಿಸಿರುವ ‘ವರ್ಚುವಲ್ ಮ್ಯಾಗ್ನೆಟ್’ (Virtual Magnet) ತಂತ್ರಜ್ಞಾನವು ಚೀನಾದ ಈ ಖನಿಜ ರಾಜಕೀಯಕ್ಕೆ ಬಲವಾದ ಚಾಟಿ ಬೀಸಿದೆ. ಹಾಗಾದರೆ ಏನಿದು ವರ್ಚುವಲ್ ಮ್ಯಾಗ್ನೆಟ್? ಚೀನಾದ ಈ ಖನಿಜ ಏಕಸ್ವಾಮ್ಯಕ್ಕೆ ಭಾರತದ ಈ ನವೋದ್ಯಮ ಹೇಗೆ ಸವಾಲೆಸೆಯುತ್ತಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ.
ಏನಿದು ‘ವರ್ಚುವಲ್ ಮ್ಯಾಗ್ನೆಟ್’ ತಂತ್ರಜ್ಞಾನ?
ಪ್ರಸ್ತುತ ಮಾರುಕಟ್ಟೆಯಲ್ಲಿರುವ ಅತ್ಯಂತ ದಕ್ಷತೆಯ ಇವಿ ಮೋಟಾರ್‌ಗಳು ರೇರ್-ಎರ್ತ್ ವಸ್ತುಗಳಿಂದ ಮಾಡಿದ ಶಾಶ್ವತ ಕಾಂತಗಳನ್ನು (Permanent Magnets) ಬಳಸುತ್ತವೆ. ಆದರೆ ವಿಮ್ಯಾಗ್ ಲ್ಯಾಬ್ಸ್ ರೂಪಿಸಿರುವ ‘ವರ್ಚುವಲ್ ಮ್ಯಾಗ್ನೆಟ್’ ತಂತ್ರಜ್ಞಾನದಲ್ಲಿ ತಾಮ್ರ ಮತ್ತು ಉಕ್ಕನ್ನು ಮಾತ್ರ ಬಳಸಿ ಮೋಟಾರ್‌ಗಳನ್ನು ತಯಾರಿಸಲಾಗುತ್ತದೆ. ವೈರ್‌ಲೆಸ್ ಪವರ್ ಟ್ರಾನ್ಸ್‌ಫರ್ ಮತ್ತು ಸುಧಾರಿತ ಸಾಫ್ಟ್‌ವೇರ್ ಆಲ್ಗರಿದಮ್‌ಗಳ ಸಹಾಯದಿಂದ ಮೋಟಾರ್ ಒಳಗಡೆ ಶಾಶ್ವತ ಕಾಂತದಂತೆಯೇ ಕೆಲಸ ಮಾಡುವ ವಿದ್ಯುತ್ ಕ್ಷೇತ್ರವನ್ನು (Electric Field) ನಿರ್ಮಿಸಲಾಗುತ್ತದೆ. ಇದರಿಂದಾಗಿ ರೇರ್-ಎರ್ತ್ ಕಾಂತಗಳ ಅಗತ್ಯವೇ ಸಂಪೂರ್ಣವಾಗಿ ಇಲ್ಲವಾಗುತ್ತದೆ.

ವೆಚ್ಚ ಕಡಿಮೆ, ಕಾರ್ಯಕ್ಷಮತೆ ಹೆಚ್ಚು
ಕಾರ್ಯಕ್ಷಮತೆ, ಗುಣಮಟ್ಟ ಮತ್ತು ವೆಚ್ಚ—ಈ ಮೂರನ್ನು ಗಮನದಲ್ಲಿಟ್ಟುಕೊಂಡು ಈ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮೋಟಾರ್‌ಗಳ ಬೆಲೆಗೇ ಅತ್ಯಂತ ಸ್ಪರ್ಧಾತ್ಮಕವಾಗಿ ಇದನ್ನು ನೀಡಲಾಗುವುದು. ರೇರ್-ಎರ್ತ್ ವಸ್ತುಗಳನ್ನು ಬಳಸದಿರುವುದರಿಂದ ಖನಿಜಗಳ ಬೆಲೆ ಏರಿಳಿತದ ಸಮಸ್ಯೆಯೂ ಇರುವುದಿಲ್ಲ. “ಸಾಂಪ್ರದಾಯಿಕ ಮೋಟಾರ್‌ಗಳಿಗೆ ಹೋಲಿಸಿದರೆ ಈ ವರ್ಚುವಲ್ ಮ್ಯಾಗ್ನೆಟ್ ಮೋಟಾರ್‌ಗಳು ವೇಗವರ್ಧನೆ (Acceleration), ರೇಂಜ್ (Range) ಮತ್ತು ತೂಕದ ವಿಷಯದಲ್ಲಿ ಉತ್ತಮ ಕಾರ್ಯಕ್ಷಮತೆ ನೀಡಲಿವೆ,” ಎಂದು ಸಂಸ್ಥೆಯ ಸಿಇಒ ಮನೀಷ್ ಸೇಥ್ ತಿಳಿಸಿದ್ದಾರೆ.
ಕಾರ್ಯನಿರ್ವಹಣೆ ಹೇಗೆ?
ಆಂತರಿಕ ಪರೀಕ್ಷೆಗಳು ಮತ್ತು ಗ್ರಾಹಕರ ಟ್ರಯಲ್‌ಗಳಲ್ಲಿ ತಮ್ಮ ಮೋಟಾರ್‌ಗಳು ಸಾಂಪ್ರದಾಯಿಕ ಕಾಂತೀಯ ಮೋಟಾರ್‌ಗಳಿಗಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸಿವೆ ಎಂದು ಕಂಪನಿ ಹೇಳಿದೆ. ಮೋಟಾರ್ ಹಾರ್ಡ್‌ವೇರ್‌ನಲ್ಲಿದ್ದ ತೊಡಕನ್ನು ಸಾಫ್ಟ್‌ವೇರ್ ಮತ್ತು ಎಲೆಕ್ಟ್ರಾನಿಕ್ಸ್‌ಗೆ ವರ್ಗಾಯಿಸಿರುವುದರಿಂದ, ಮುಂದಿನ ದಿನಗಳಲ್ಲಿ ಸಾಫ್ಟ್‌ವೇರ್ ಅಪ್‌ಡೇಟ್‌ಗಳ ಮೂಲಕ ಕಾರ್ಯಕ್ಷಮತೆಯನ್ನು ನಿರಂತರವಾಗಿ ಸುಧಾರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದೆ.
ವಾಣಿಜ್ಯ ಉತ್ಪಾದನೆ ಯಾವಾಗ?
ಈ ಮೋಟಾರ್‌ಗಳನ್ನು ಈಗಾಗಲೇ ಪರೀಕ್ಷಾರ್ಥ ವಾಹನಗಳಲ್ಲಿ ಅಳವಡಿಸಲಾಗಿದ್ದು, ನಿಯಂತ್ರಣ ಮಂಡಳಿಗಳಿಂದ (Regulatory Authority) ಅಗತ್ಯ ಅನುಮೋದನೆಗಳನ್ನು ಪಡೆಯಲಾಗುತ್ತಿದೆ. ಈ ವರ್ಷದ (2026) ಕೊನೆಯ ವೇಳೆಗೆ 1,000 ದಿಂದ 10,000 ಮೋಟಾರ್‌ಗಳ ಪೈಲಟ್ ಬ್ಯಾಚ್ ಬಿಡುಗಡೆ ಮಾಡಿ, ಮುಂದಿನ ವರ್ಷದಿಂದ ಬೃಹತ್ ಮಟ್ಟದ ಉತ್ಪಾದನೆ (Mass Production) ಆರಂಭಿಸಲಾಗುತ್ತದೆ. ಮೊದಲ ಹಂತದಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಗುರಿಯಾಗಿಸಿಕೊಂಡು ಮೋಟಾರ್ ತಯಾರಿಸಲಾಗುತ್ತದೆ; ನಂತರ ಕಾರುಗಳು, ಬಸ್ಸುಗಳು ಮತ್ತು ಹೆವಿ ಟ್ರಕ್‌ಗಳಿಗೆ ವಿಸ್ತರಿಸುವ ಗುರಿಯನ್ನು ಕಂಪನಿ ಹೊಂದಿದೆ.

ಸ್ಟಾರ್ಟಪ್ ಹಿನ್ನೆಲೆ ಏನು?
ಬೆಂಗಳೂರಿನಲ್ಲಿ ಹುಟ್ಟಿಕೊಂಡ ಈ ಸಂಸ್ಥೆಯು ಕಳೆದ ಡಿಸೆಂಬರ್‌ನಲ್ಲಿ $5 ಮಿಲಿಯನ್ (ಸುಮಾರು 48.22 ಕೋಟಿ ರೂ.) ಸೀರೀಸ್-ಎ ಫಂಡಿಂಗ್ ಸಂಗ್ರಹಿಸಿದೆ. ಪ್ರಸ್ತುತ ಭಾರತದ ಬೆಂಗಳೂರಿನ ಜೊತೆಗೆ ಜರ್ಮನಿ, ಪೋಲೆಂಡ್ ಮತ್ತು ಅಮೆರಿಕಗಳಲ್ಲಿ ತನ್ನ ಸಂಶೋಧನೆ ಹಾಗೂ ಕಾರ್ಯಾಚರಣೆ ತಂಡಗಳನ್ನು ಹೊಂದಿದೆ.
ಚೀನಾಗೆ ಸೆಡ್ಡು ಹೇಗೆ?
ಪ್ರಸ್ತುತ ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳ ಮೋಟಾರ್‌ಗಳಿಗೆ ಬಳಸುವ ರೇರ್-ಎರ್ತ್ ಖನಿಜಗಳ ಶೇ.90 ರಿಂದ 95 ರಷ್ಟು ಪೂರೈಕೆ ಮತ್ತು ಸಂಸ್ಕರಣೆಯನ್ನು ಚೀನಾ ಒಂದೇ ನಿಯಂತ್ರಿಸುತ್ತಿದೆ. ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳು ಇವಿ ಮೋಟಾರ್‌ಗಳಿಗಾಗಿ ಚೀನಾದ ಮೇಲೆಯೇ ಅವಲಂಬಿತವಾಗಿವೆ. ವಿಮ್ಯಾಗ್ ಲ್ಯಾಬ್ಸ್‌ನ ಈ ತಂತ್ರಜ್ಞಾನವು ಈ ಪೂರೈಕೆ ಸರಪಳಿಯ ಅವಲಂಬನೆಯನ್ನು ತಪ್ಪಿಸಲು ದೊಡ್ಡ ಪರಿಹಾರವಾಗಲಿದೆ.
ಏನಿದು ಅಪರೂಪದ ಭೂ ಖನಿಜ?
ರಸಾಯನಶಾಸ್ತ್ರದ ಆವರ್ತಕ ಕೋಷ್ಟಕವನ್ನು (Periodic Table) ಗಮನಿಸಿದರೆ, ಭೂಮಿಯ ಮೇಲೆ ಲಭ್ಯವಿರುವ 118 ಮೂಲವಸ್ತುಗಳಲ್ಲಿ 17 ಲೋಹಗಳ ಗುಂಪನ್ನು’ಅಪರೂಪದ ಭೂ ಖನಿಜಗಳು ಎಂದು ಕರೆಯಲಾಗುತ್ತದೆ. ಇವು ವಿಶ್ವದ ಕೆಲವೇ ದೇಶಗಳಲ್ಲಿ ಲಭ್ಯವಿವೆ. ಈ ಖನಿಜಗಳು ವಿಶಿಷ್ಟ ಕಾಂತೀಯ ಮತ್ತು ವಿದ್ಯುತ್ ವಾಹಕ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಅತ್ಯಂತ ಮೌಲ್ಯಯುತವಾಗಿವೆ.

ಚೀನಾವೇ ಸೂಪರ್ ಪವರ್!
ಅಮೆರಿಕದ ಜಿಯೋಲಾಜಿಕಲ್ ಸರ್ವೆ (USGS) ಪ್ರಕಾರ, 2024ರಲ್ಲಿ ಜಾಗತಿಕವಾಗಿ 3.90 ಲಕ್ಷ ಮೆಟ್ರಿಕ್ ಟನ್ ಅಪರೂಪದ ಭೂ ಖನಿಜವನ್ನು ಉತ್ಪಾದಿಸಲಾಗಿತ್ತು. ಈ ಪೈಕಿ ಚೀನಾ ಒಂದೇ 2.70 ಲಕ್ಷ ಮೆಟ್ರಿಕ್ ಟನ್ (ಶೇ. 70ರಷ್ಟು) ಉತ್ಪಾದನೆ ಮಾಡಿದೆ. ಭಾರತದ ಪಾಲು ಕೇವಲ 2,900 ಟನ್. ಇಲ್ಲಿ ಬರಿ ಉತ್ಪಾದನೆ ಮಾತ್ರ ಮುಖ್ಯವಲ್ಲ; ಉತ್ಪಾದನೆಯ ನಂತರ ಅದನ್ನು ಸಂಸ್ಕರಣೆ (Refine) ಮಾಡುವುದು ಅತ್ಯಂತ ನಿರ್ಣಾಯಕ. ಸಂಸ್ಕರಿಸಿದ ಖನಿಜದ ಮಾರುಕಟ್ಟೆಯಲ್ಲಿ ಚೀನಾದ ಪಾಲು ಶೇ. 90ರಷ್ಟಿದೆ. ಹೀಗಾಗಿ ಇಡೀ ವಿಶ್ವವೇ ಚೀನಾವನ್ನು ಅವಲಂಬಿಸುವಂತಾಗಿದೆ. ಇದನ್ನೂ ಓದಿ: Explainer| ಅಪರೂಪದ ಭೂ ಖನಿಜ ರಫ್ತಿಗೆ ಚೀನಾ ನಿಷೇಧ: ಭಾರತದ ಮೇಲೆ ಪರಿಣಾಮ ಏನು?
ಚೀನಾ ಮಾತ್ರ ಸಂಸ್ಕರಣೆ ಮಾಡುವುದೇಕೆ?
ಖನಿಜ ಸಂಸ್ಕರಣೆಗೆ ಬೃಹತ್ ಪ್ರಮಾಣದಲ್ಲಿ ವಿಷಕಾರಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ಅತ್ಯಂತ ಜಟಿಲವಾದ ಮತ್ತು ಪರಿಸರಕ್ಕೆ ತೀವ್ರ ಹಾನಿ ಉಂಟುಮಾಡುವ ಪ್ರಕ್ರಿಯೆ. ಕಠಿಣ ಪರಿಸರ ಕಾನೂನುಗಳಿಂದಾಗಿ ಇತರ ಪಾಶ್ಚಿಮಾತ್ಯ ದೇಶಗಳು ಈ ಸಂಸ್ಕರಣಾ ಉದ್ಯಮಕ್ಕೆ ಕೈಹಾಕಲಿಲ್ಲ. ಆದರೆ ಚೀನಾ ಪರಿಸರ ಕಾನೂನುಗಳನ್ನು ಬದಿಗಿಟ್ಟು ಇದರಲ್ಲಿ ಭಾರಿ ಹೂಡಿಕೆ ಮಾಡಿ ಏಕಸ್ವಾಮ್ಯ ಸಾಧಿಸಿತು.

ಯಾಕೆ ಇಷ್ಟೊಂದು ಮಹತ್ವ?
ತೈಲ ಉತ್ಪಾದಿಸುವ ದೇಶಗಳು ಇಂಧನವನ್ನು ಹೇಗೆ ಜಾಗತಿಕ ಶಸ್ತ್ರಾಸ್ತ್ರವನ್ನಾಗಿ ಬಳಸಿಕೊಂಡವೋ, ಅದೇ ರೀತಿ ಈಗ ಚೀನಾ ‘ರೇರ್ ಅರ್ಥ್ ಮಿನರಲ್ಸ್’ ಅನ್ನು ತನ್ನ ಅಸ್ತ್ರವನ್ನಾಗಿ ಮಾಡಿಕೊಂಡಿದೆ. ಇವಿ ಮಾತ್ರವಲ್ಲದೆ ಮಿಲಿಟರಿ ಉಪಕರಣಗಳು, ಡ್ರೋನ್‌ಗಳು, ಲೇಸರ್‌ಗಳು, ಗಾಜು, ಕಂಪ್ಯೂಟರ್/ಲ್ಯಾಪ್‌ಟಾಪ್‌ಗಳ ಹಾರ್ಡ್ ಡಿಸ್ಕ್, ಎಂಆರ್‌ಐ ಸ್ಕ್ಯಾನರ್‌ಗಳು, ಆಡಿಯೋ ಡಿವೈಸ್‌ಗಳು ಹಾಗೂ ವಿಂಡ್ ಟರ್ಬೈನ್ ಜನರೇಟರ್‌ಗಳು ಸೇರಿದಂತೆ ಪ್ರತಿಯೊಂದು ಹೈಟೆಕ್ ವಸ್ತುವಿನಲ್ಲೂ ಇವುಗಳನ್ನು ಬಳಸಲಾಗುತ್ತದೆ. ಅದಕ್ಕಾಗಿಯೇ ಇವುಗಳನ್ನು ನ್ಯೂ ಆಯಿಲ್ (New Oil) ಎಂದೇ ಕರೆಯಲಾಗುತ್ತದೆ.
ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿದ್ದಾಗ ಚೀನಾದ ಮೇಲೆ ಸುಂಕ ಸಮರ (Tariff War) ಆರಂಭಿಸಿದ್ದರು. ಇದಕ್ಕೆ ಪ್ರತಿಯಾಗಿ ಚೀನಾ ಈ ಖನಿಜಗಳ ರಫ್ತನ್ನು ನಿಷೇಧಿಸಿತ್ತು. ಬಳಿಕ ರಫ್ತಿಗೆ ಕಠಿಣ ಷರತ್ತುಗಳನ್ನು ವಿಧಿಸಿತು. ಪ್ರತಿ ಕಂಪನಿಯೂ ತಾವು ಎಷ್ಟು ಪ್ರಮಾಣದ ಮ್ಯಾಗ್ನೆಟ್ ಬಳಸುತ್ತೇವೆ ಎಂದು ವಿವರ ನೀಡಬೇಕು ಹಾಗೂ ಶಿಪ್‌ಮೆಂಟ್‌ಗಳು ಚೀನಿ ರಾಯಭಾರ ಕಚೇರಿಯಿಂದಲೇ ಕ್ಲಿಯರ್ ಆಗಬೇಕು ಎಂಬ ನಿಯಮ ತಂದಿತು. ಚೀನಾದ ಈ ನಿರ್ಧಾರದಿಂದ ಭಾರತ ಸೇರಿದಂತೆ ವಿಶ್ವಾದ್ಯಂತ ಆಟೋಮೊಬೈಲ್ ಕಂಪನಿಗಳು ತೀವ್ರ ಸಂಕಷ್ಟ ಎದುರಿಸುವಂತಾಯಿತು.
ಚೀನಾದ ರೇರ್-ಎರ್ತ್ ಖನಿಜಗಳ ಮೇಲಿನ ಏಕಸ್ವಾಮ್ಯವು ಜಾಗತಿಕ ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ದೊಡ್ಡ ಅಡಚಣೆಯಾಗಿತ್ತು. ಆದರೆ ಬೆಂಗಳೂರಿನ ‘ವಿಮ್ಯಾಗ್ ಲ್ಯಾಬ್ಸ್’ ಅಭಿವೃದ್ಧಿಪಡಿಸಿರುವ ಈ ‘ವರ್ಚುವಲ್ ಮ್ಯಾಗ್ನೆಟ್’ ತಂತ್ರಜ್ಞಾನವು ಭಾರತೀಯ ಆವಿಷ್ಕಾರದ ಶಕ್ತಿಯನ್ನು ಜಗತ್ತಿಗೆ ಸಾರಿದೆ. ಕಡಿಮೆ ವೆಚ್ಚ, ಪರಿಸರ ಸ್ನೇಹಿ ವಿನ್ಯಾಸ ಮತ್ತು ಗರಿಷ್ಠ ಕಾರ್ಯಕ್ಷಮತೆಯೊಂದಿಗೆ ಮೂಡಿಬಂದಿರುವ ಈ ತಂತ್ರಜ್ಞಾನವು, ಭವಿಷ್ಯದಲ್ಲಿ ಜಾಗತಿಕ EV ಪೂರೈಕೆ ಸರಪಳಿಯಲ್ಲಿ ಭಾರತವನ್ನು ಪ್ರಮುಖ ನಾಯಕನನ್ನಾಗಿ ರೂಪಿಸುವ ಭರವಸೆ ಮೂಡಿಸಿದೆ.
