– ಕನ್ಸೀಲ್ಡ್ ಡೋರ್ ಹ್ಯಾಂಡಲ್‌ಗೆ ನಿಷೇಧ ಹೇರಿದ ಚೀನಾ
ಬೀಜಿಂಗ್: ಅಪಘಾತ(Accident) ಅಥವಾ ತುರ್ತು ಸಂದರ್ಭಗಳಲ್ಲಿ ಕಾರಿನ ಬಾಗಿಲು ತೆರೆಯಲು ಸಾಧ್ಯವಾಗದೆ ಪ್ರಯಾಣಿಕರು ಸಿಲುಕಿಕೊಳ್ಳುವ ಆತಂಕ ಎದುರಾದ ಹಿನ್ನೆಲೆಯಲ್ಲಿ ಟೆಸ್ಲಾ ಸೇರಿದಂತೆ ಒಂಬತ್ತು ಪ್ರಮುಖ ಕಾರು ಕಂಪನಿಗಳು ಚೀನಾದ ಮಾರುಕಟ್ಟೆಯಿಂದ(China Market) ಸುಮಾರು 43 ಲಕ್ಷ ವಾಹನಗಳನ್ನು ಹಿಂಪಡೆಯಲು (ರೀಕಾಲ್) ನಿರ್ಧರಿಸಿವೆ. ಇದು ಚೀನಾದ ಆಟೋಮೊಬೈಲ್ ಇತಿಹಾಸದಲ್ಲೇ ಅತಿ ದೊಡ್ಡ ಮಟ್ಟದ ರೀಕಾಲ್(Recall) ಕಾರ್ಯಾಚರಣೆಯಾಗಿದೆ.
ಇವಿ ವಾಹನಗಳಲ್ಲಿ ಸಾಮಾನ್ಯವಾಗಿ ಬಳಸಲಾಗುವ ಮೆಕ್ಯಾನಿಕಲ್ ಎಮರ್ಜೆನ್ಸಿ ಡೋರ್-ರಿಲೀಸ್ ಹ್ಯಾಂಡಲ್‌ಗಳು ಅಪಘಾತ ಸಂಭವಿಸಿದಾಗ ಅಥವಾ ವಿದ್ಯುತ್ ಸಂಪರ್ಕ ಕಡಿತಗೊಂಡಾಗ ಪ್ರಯಾಣಿಕರಿಗೆ ಅಥವಾ ರಕ್ಷಣಾ ಸಿಬ್ಬಂದಿಗೆ ತಕ್ಷಣಕ್ಕೆ ಗೋಚರಿಸುವುದಿಲ್ಲ ಹಾಗೂ ಸುಲಭವಾಗಿ ತೆರೆಯಲು ಸಾಧ್ಯವಾಗುವುದಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿದ್ದವು.
ಕೆಲ ತಿಂಗಳ ಹಿಂದೆ ಶಿಯೋಮಿ (Xiaomi SU7) ಕಾರು ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡಾಗ, ಸಾರ್ವಜನಿಕರಿಗೆ ಬಾಗಿಲು ತೆರೆಯಲು ಸಾಧ್ಯವಾಗದೆ ಚಾಲಕ ಸಾವನ್ನಪ್ಪಿದ್ದ ಘಟನೆ ದೇಶಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇಂತಹ ಘಟನೆಗಳ ಬೆನ್ನಲ್ಲೇ ಚೀನಾ ಸರ್ಕಾರ ವಾಹನ ಸುರಕ್ಷತಾ ನಿಯಮಗಳನ್ನು ಮತ್ತಷ್ಟು ಕಟ್ಟುನಿಟ್ಟುಗೊಳಿಸಿದೆ.

ಯಾವ ಕಂಪನಿಗಳ ಎಷ್ಟು ಕಾರು ರೀಕಾಲ್?
ಟೆಸ್ಲಾದ(Tesla) ಸುಮಾರು 30 ಲಕ್ಷ (ಇಂಪೋರ್ಟೆಡ್ ಹಾಗೂ ಚೀನಾ ನಿರ್ಮಿತ ಮಾಡೆಲ್ 3, ಮಾಡೆಲ್ ವೈ, ಮಾಡೆಲ್ ಎಸ್, ಮಾಡೆಲ್ ಎಕ್ಸ್) ಕಾರುಗಳನ್ನು ಹಿಂಪಡೆಯುತ್ತಿದೆ. ಸೆಪ್ಟೆಂಬರ್ 25 ರಿಂದ ಈ ಪ್ರಕ್ರಿಯೆ ಆರಂಭವಾಗಲಿದೆ.
ಶಿಯೋಮಿ ಸುಮಾರು 3.90 ಲಕ್ಷ, ಲೀಪ್‌ಮೋಟರ್ (Leapmotor) ಸುಮಾರು 3.71 ಲಕ್ಷ, ಎಕ್ಸ್‌ಪೆಂಗ್ (Xpeng) ಸುಮಾರು 2.64 ಲಕ್ಷ, ಉಳಿದಂತೆ ಗೀಲಿ (Geely) ಸೇರಿದಂತೆ ಇತರ ಕಂಪನಿಗಳು ಕಡಿಮೆ ಪ್ರಮಾಣದ ಕಾರುಗಳನ್ನು ಹಿಂಪಡೆಯುತ್ತಿವೆ. ಇದನ್ನೂ ಓದಿ: ಟೋಲ್ ಪ್ಲಾಜಾದ 20 ಕಿಮೀ ವ್ಯಾಪ್ತಿಯಲ್ಲಿದ್ದೀರಾ? – ಹಣ, ಸಮಯ ಉಳಿತಾಯಕ್ಕೆ ಬಂದಿದೆ ʻಲೋಕಲ್ ಟೋಲ್ ಪಾಸ್ʼ
ಟೆಸ್ಲಾ ಸಂಸ್ಥೆಯು ಅಪಘಾತ ಸಂಭವಿಸಿದ ತಕ್ಷಣ ವಾಹನದ ಕಿಟಕಿಗಳು ಸ್ವಯಂಚಾಲಿತವಾಗಿ ಕೆಳಗಿಳಿಯುವಂತೆ (Auto-lowering windows) ಸಾಫ್ಟ್‌ವೇರ್ ಅಪ್‌ಡೇಟ್ ನೀಡಲಿದೆ. ಇದರೊಂದಿಗೆ ತುರ್ತು ಬಾಗಿಲು ಹ್ಯಾಂಡಲ್‌ಗಳನ್ನು ಗುರುತಿಸಲು ಸ್ಪಷ್ಟವಾದ ಎಚ್ಚರಿಕೆ ಲೇಬಲ್‌ಗಳು ಮತ್ತು ಗುರುತುಗಳನ್ನು ಅಳವಡಿಸಲು ಕಂಪನಿಗಳು ಮುಂದಾಗಿವೆ. ಇವು ರಿಮೋಟ್ ಓವರ್-ದಿ-ಏರ್ (OTA) ಅಪ್‌ಡೇಟ್‌ಗಳಾಗಿರುವುದರಿಂದ ಕಂಪನಿಗಳಿಗೆ ವೆಚ್ಚ ಮತ್ತು ಸಮಯದ ಹೊರೆ ಕಡಿಮೆಯಾಗಲಿದೆ.
2027 ರಿಂದ ನಿಷೇಧ
ಟೆಸ್ಲಾ ಜನಪ್ರಿಯಗೊಳಿಸಿದ್ದ ಬಾಡಿ ಒಳಗೆ ಹುದುಗಿರುವ ‘ಹಿಡನ್ ಅಥವಾ ಕನ್ಸೀಲ್ಡ್ ಡೋರ್ ಹ್ಯಾಂಡಲ್’ ವಿನ್ಯಾಸವನ್ನು 2027 ರಿಂದ ಸಂಪೂರ್ಣವಾಗಿ ನಿಷೇಧಿಸಲು ಚೀನಾ ಸರ್ಕಾರ ಯೋಜಿಸಿದ್ದು, ಈ ನಿರ್ಧಾರ ಕೈಗೊಂಡ ವಿಶ್ವದ ಮೊದಲ ದೇಶವಾಗಲಿದೆ. ಇತ್ತ ಅಮೆರಿಕದ ಎನ್‌ಎಚ್‌ಟಿಎಸ್‌ಎ (NHTSA) ಸಂಸ್ಥೆ ಕೂಡ ಇಂತಹ ಎಲೆಕ್ಟ್ರಾನಿಕ್ ಹ್ಯಾಂಡಲ್‌ಗಳ ಸುರಕ್ಷತೆಯ ಕುರಿತು ಹೊಸ ಮಾನದಂಡಗಳನ್ನು ರೂಪಿಸಲು ಚಿಂತನೆ ನಡೆಸಿದೆ.
