ಮಡಿಕೇರಿ: ಕಸ್ತೂರಿರಂಗನ್ ವರದಿ ವಿರೋಧಿಸಿ ಕೊಡಗು ಜಿಲ್ಲೆಯ ರೈತರ (Farmers) ಆಕ್ರೋಶ ಮತ್ತೆ ಸ್ಫೋಟಗೊಂಡಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದ್ದು, ಪ್ರತಿಭಟನೆಯ ಕಾವು ಜನರಲ್ ತಿಮ್ಮಯ್ಯ ಸರ್ಕಲ್‌ವರೆಗೂ ವ್ಯಾಪಿಸಿತ್ತು.
ಏಕಾಏಕಿ ರಸ್ತೆ ತಡೆ ನಡೆಸಿದ ಪರಿಣಾಮ, ಮಂಗಳೂರು, ಮೈಸೂರು ಹಾಗೂ ಹಾಸನ ಭಾಗಗಳಿಗೆ ತೆರಳಬೇಕಿದ್ದ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸುಮಾರು ಎರಡು ಗಂಟೆಗಳ ಕಾಲ ವಾಹನ ಸವಾರರು ಹಾಗೂ ಪ್ರಯಾಣಿಕರು ಪರದಾಡುವಂತಾಯಿತು. ಕೊನೆಗೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಪ್ರತಿಭಟನೆ ಅಂತ್ಯಗೊಂಡಿದೆ.

ಕಸ್ತೂರಿರಂಗನ್ ವರದಿ (Kasturirangan Report) ವಿರೋಧಿಸಿ ಕೊಡಗು ಜಿಲ್ಲೆಯ ರೈತರ ಆಕ್ರೋಶದ ಕಿಚ್ಚು ಮಡಿಕೇರಿಯಲ್ಲಿ ಭುಗಿಲೆದ್ದಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ರೈತರು ಜಿಲ್ಲಾ ಕೇಂದ್ರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಕಸ್ತೂರಿರಂಗನ್ ವರದಿ ಜಾರಿಯಾದ್ರೆ ಕೊಡಗಿನ ರೈತರು, ಕಾಫಿ ಬೆಳೆಗಾರರು ಹಾಗೂ ಗ್ರಾಮೀಣ ಭಾಗದ ಜನರಿಗೆ ತೊಂದರೆಯಾಗಲಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ರೈತರು, ಕಸ್ತೂರಿರಂಗನ್ ವರದಿ ಜಾರಿಗೊಳಿಸಬಾರದು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಪ್ರತಿಭಟನೆಯ ಕಾವು ಮತ್ತಷ್ಟು ಹೆಚ್ಚಾದಂತೆ ರೈತರು ಜನರಲ್ ತಿಮ್ಮಯ್ಯ ಸರ್ಕಲ್‌ನಲ್ಲಿ ವಾಹನ ಸಂಚಾರ ತಡೆದರು. ಇದರಿಂದ ಮಂಗಳೂರು, ಮೈಸೂರು ಹಾಗೂ ಹಾಸನ ಭಾಗಗಳಿಗೆ ತೆರಳಬೇಕಿದ್ದ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಸುಮಾರು 2 ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡ ಪರಿಣಾಮ, ರಸ್ತೆಯಲ್ಲಿ ವಾಹನಗಳ ಸಾಲು ಕಂಡುಬಂತು. ಪ್ರಯಾಣಿಕರು ಹಾಗೂ ವಾಹನ ಸವಾರರು ತಮ್ಮ ವಾಹನಗಳಲ್ಲೇ ಕುಳಿತು ಸಂಚಾರ ಆರಂಭವಾಗುವುದಕ್ಕಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಏಕಾಏಕಿ ರಸ್ತೆ ತಡೆ ನಡೆದ ಹಿನ್ನೆಲೆ ಆರಂಭದಲ್ಲಿ ಪೊಲೀಸರು ಕೂಡ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟರು. ಬಳಿಕ ಜಿಲ್ಲಾಧಿಕಾರಿ ಸೋಮಶೇಖರ್, ಕೊಡಗು ಎಸ್‌ಪಿ ಬಿಂದುಮಣಿ, ಶಾಸಕ ಮಂಥರ್ ಗೌಡ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು. ರೈತರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಲಾಯಿತು. ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸುತ್ತಿದ್ದಂತೆ, ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಕಸ್ತೂರಿರಂಗನ್ ವರದಿ ಜಾರಿಯಾದ್ರೆ ಕೊಡಗಿನ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ನಿರ್ಬಂಧ ಎದುರಾಗಬಹುದು ಎಂಬ ಆತಂಕವನ್ನು ರೈತರು ವ್ಯಕ್ತಪಡಿಸಿದರು. ಕೊಡಗಿನ ನೆಲ, ಜಲ, ಕೃಷಿ ಹಾಗೂ ಜನರ ಬದುಕಿಗೆ ಧಕ್ಕೆಯಾಗುವ ಯಾವುದೇ ನಿರ್ಧಾರವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸೋಮಶೇಖರ್ ಮಾತನಾಡಿ, ಇನ್ನೊಂದು ವಾರದೊಳಗೆ ಗ್ರಾಮೀಣ ಭಾಗದಲ್ಲಿ ವಿಶೇಷ ಸಭೆಗಳನ್ನು ನಡೆಸಿ, ಕಸ್ತೂರಿರಂಗನ್ ವರದಿ ಕುರಿತು ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲಾಧಿಕಾರಿಗಳ ಭರವಸೆ ಬಳಿಕ ಪ್ರತಿಭಟನೆಯನ್ನು ಅಂತ್ಯಗೊಳಿಸಲಾಯಿತು.

