ಶಿವಮೊಗ್ಗ: ನಗರದಲ್ಲಿ ನಡೆದ ಕೋಮು ಸಂಘರ್ಷವನ್ನು ತನ್ನ ವೈಯಕ್ತಿಕ ತೆವಲಿಗೆ ಬಳಸಿಕೊಳ್ಳಲು ಹೋಗಿ ಇಲ್ಲೊಬ್ಬ ಸಿಕ್ಕಿಹಾಕಿಕೊಂಡಿದ್ದಾನೆ. ಶಿವಮೊಗ್ಗದಲ್ಲಿ ಮತ್ತೆ ಮೂವರನ್ನು ಕೊಲೆ ಮಾಡಬೇಕು. ಶಿವಮೊಗ್ಗದಲ್ಲಿ ಗಣಪತಿ ಹಬ್ಬ ಮಾಡಲು ಬಿಡಬಾರದು. ಮತ್ತೆ ನೆತ್ತರು ಹರಿಯಬೇಕು ಎಂದು ಹೇಳಿ ಮತ್ತೆ ಕೋಮು ದಳ್ಳುರಿ ನಡೆಯುವ ಕಪೋಲಕಲ್ಪಿತ ಕಥೆ ಕಟ್ಟಿ ಪತ್ರ ಬರೆದಿದ್ದ ಕಿಡಿಗೇಡಿಯ ಪತ್ರದ ಹಿಂದಿನ ಕಹಾನಿ ಇದೀಗ ಬಯಲಾಗಿದೆ.
ಹೇಳಿ ಕೇಳಿ ಶಿವಮೊಗ್ಗ ಸೂಕ್ಷ್ಮ ಜಿಲ್ಲೆ. ಕಳೆದ ಹಲವಾರು ವರ್ಷಗಳಿಂದಲೂ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿ ಕೋಮು ದಳ್ಳುರಿ, ಆಗಿದ್ದಾಗೆ ಹೊತ್ತಿಕೊಳ್ಳುತ್ತಲೇ ಇರುತ್ತದೆ. ಕೋಮು ಸಂಘರ್ಷ ಉಂಟಾದಾಗಲೆಲ್ಲಾ ಶಿವಮೊಗ್ಗದಲ್ಲಿ ಅಶಾಂತಿ ಸೃಷ್ಟಿಯಾಗಿ, ಜನಜೀವನ ಅಸ್ತವ್ಯಸ್ತಗೊಳ್ಳುವುದು ಸಹಜ. ಅಂದಹಾಗೆ, ಇತ್ತೀಚಿಗಷ್ಟೇ, ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಮತ್ತು ಆ. 15 ರಂದು ವೀರ ಸಾವರ್ಕರ್ ಅವರ ಭಾವಚಿತ್ರ ಅಳವಡಿಕೆ ವೇಳೆಯೂ ಕೋಮು ಸಂಘರ್ಷ ಉಂಟಾಗಿ, ಇದರ ಕರಿ ನೆರಳು ಇದೀಗ ಗಣಪತಿ ಹಬ್ಬದ ಮೇಲೂ ಬಿದ್ದಿದೆ. ಇದೇ ಅವಕಾಶವನ್ನು ಕೆಲವು ಕಿಡಿಗೇಡಿಗಳು ಬಳಸಿಕೊಳ್ಳುತ್ತಿದ್ದು, ಶಿವಮೊಗ್ಗದಲ್ಲಿ ಮತ್ತೆ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ಅನಾಮಧೇಯ ಪತ್ರವೊಂದನ್ನು ಬರೆದು, ಶಿವಮೊಗ್ಗದ ಗಾಂಧಿ ಬಜಾರ್‌ನ ಗಂಗಾ ಪರಮೇಶ್ವರಿ ದೇವಾಲಯದೊಳಗಿನ ನವಗ್ರಹಗಳ ಪಕ್ಕದಲ್ಲಿ ಎಸೆದು ಹೋಗಿದ್ದಾರೆ. ಈ ಪತ್ರ ಸಿಕ್ಕವರು ಕೂಡಲೇ ಪೊಲೀಸರಿಗೆ ತಿಳಿಸಿ ಎಂದು ಕೂಡ ಪತ್ರದ ಕವರ್ ಮೇಲೆ ಬರೆದಿದ್ದರಂತೆ. ಈ ಪತ್ರ ಸಿಕ್ಕಿದ ಕೂಡಲೇ, ದೇವಾಲಯದ ಪಕ್ಕದ ನಿವಾಸಿಯೊಬ್ಬರು ಕೂಡಲೇ ಅನಾಮಧೇಯ ಬೆದರಿಕೆ ಪತ್ರವನ್ನು ಪೊಲೀಸರಿಗೆ ಮುಟ್ಟಿಸಿದ್ದಾರೆ. ಶಿವಮೊಗ್ಗದಲ್ಲಿ ಗಣಪತಿ ಹಬ್ಬ ಮಾಡಲು ಬಿಡಬಾರದು. ಮಂಗಳೂರಿನಿಂದ ಜನರನ್ನು ಕರೆಸಿ ಗಲಾಟೆ ಮಾಡಿಸಬೇಕು. ಮೂವರ ಕೊಲೆಯಾಗಬೇಕು. ಮೊನ್ನೆ ಪ್ರೇಮ್ ಸಿಂಗ್ ಮೇಲೆ ನಡೆದ ಹಲ್ಲೆ ಅರ್ಧಂಬರ್ಧ ಆಗಿದೆ. ಎಂದು ಬೆದರಿಕೆಯುಳ್ಳ ಪತ್ರವನ್ನು ಬರೆದಿದ್ದರು. ಇದನ್ನು ಪ್ರಶಾಂತ್ ಎಂಬುವವರು ಕೋಟೆ ಠಾಣೆ ಪೊಲೀಸರಿಗೆ ನೀಡಿ, ಕೇಸು ಕೂಡ ದಾಖಲಾಗಿತ್ತು. ಇದನ್ನೂ ಓದಿ: ಗೊಡ್ಡು ಬೆದರಿಕೆಗಳಿಗೆ, ಹೇಡಿಗಳಿಗೆ ಹೆದರಲ್ಲ: ಬೆದರಿಕೆ ಪತ್ರಕ್ಕೆ ಈಶ್ವರಪ್ಪ ರಿಯಾಕ್ಟ್
ಬಳಿಕ ಈ ಅನಾಮಧೇಯ ಪತ್ರದ ಜಾಡು ಹಿಡಿದು ಹೊರಟ ಪೊಲೀಸರಿಗೆ ಆಘಾತಕಾರಿ ಸುದ್ದಿಯೊಂದು ಹೊರಬೀಳಬಹುದೆಂಬ ಗುಮಾನಿ ಇತ್ತು. ಆದರೆ, ಹಾಗಾಗಲಿಲ್ಲ. ಪತ್ರದ ಜಾಡು ಹಿಡಿದು ಪತ್ರದಲ್ಲಿ ಉಲ್ಲೇಖವಾಗಿರುವ ವ್ಯಕ್ತಿಯಾಗಿದ್ದ ಮೊಹಮ್ಮದ್ ಫೈಜಲ್‍ನ ವಿಚಾರಣೆ ನಡೆಸಿದ ಬಳಿಕ, ನಾನೆಲ್ಲೂ ಶಿವಮೊಗ್ಗದಲ್ಲಿ ಗಲಾಟೆ ಮಾಡಿಸಬೇಕೆಂದು ಮಾತನಾಡಿಯೇ ಇಲ್ಲ. ಇದು ಬೇರೆ ಯಾರದೋ ಕೈವಾಡ ಇರಬಹುದೆಂದು ಪೊಲೀಸರಿಗೆ ತಿಳಿಸಿದ್ದಾನೆ. ಅಷ್ಟೇ ಅಲ್ಲ. ಇತ್ತೀಚಿಗಷ್ಟೇ ಅಯೂಬ್ ಖಾನ್ ಎಂಬುವವನು ನನ್ನ ವಿರುದ್ಧ ಜಿದ್ದು ಸಾಧಿಸುತ್ತೆನೆಂದು ಹೇಳಿದ್ದ ಎಂದು ಕೂಡ ಪೊಲೀಸರ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಅದಷ್ಟೇ ಸಾಕಿತ್ತು, ಅಯೂಬ್ ಖಾನ್‍ನ್ನು ಹುಡುಕಿ ತಂದ ಪೊಲೀಸರಿಗೆ ಆಶ್ಚರ್ಯದ ಜೊತೆಗೆ ಟ್ವಿಸ್ಟ್ ಕೂಡ ಕಾದಿತ್ತು. ಇಡೀ ಸ್ಟೋರಿಯೇ ಬದಲಾಗಿ ಹೋಗಿತ್ತು. ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ ಅಯೂಬ್ ಖಾನ್, ಇಡೀ ಸ್ಟೋರಿಗೆ ಟ್ವಿಸ್ಟ್ ನೀಡಿ, ನನಗೆ ಫೈಜಲ್ ಪತ್ನಿ ಮೇಲೆ ವ್ಯಾಮೋಹ ಇತ್ತು. ಹೀಗಾಗಿ, ಫೈಜಲ್ ಜೈಲಿಗೆ ಹೋದರೆ, ಫೈಜಲ್ ಪತ್ನಿ ಜೊತೆ ನಾನು ಇರಬಹುದೆಂದು ನಿರ್ಧರಿಸಿ, ಈ ರೀತಿ ಫೈಜಲ್ ವಿರುದ್ಧವಾಗಿ ಅನಾಮಧೇಯ ಪತ್ರ ಬರೆದಿದ್ದೆ ಎಂದು ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತಕ್ಕೆ 9 ಮಂದಿ ಬಲಿ
ಶಿವಮೊಗ್ಗದಲ್ಲಿ ಕಳೆದ ವಾರವಷ್ಟೇ, ಕೋಮು ಸಂಘರ್ಷದಿಂದ, ಜನರು ಪರಿತಪಿಸುವಂತಾಗಿದ್ದರೆ, ಇತ್ತ ತಮ್ಮ ಖಾಸಗಿ ತೆವಲಿಗಾಗಿ, ಮತ್ತೆ ಶಿವಮೊಗ್ಗದಲ್ಲಿ ಕೋಮು ಸಂಘರ್ಷವನ್ನುಂಟು ಮಾಡುವ ಬೆದರಿಕೆ ಪತ್ರ ಬರೆದ ಅಯೂಬ್ ಖಾನ್ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಅನಾಮಧೇಯ ಪತ್ರದಿಂದಾಗಿ ಮತ್ತೆ ಆತಂಕಕ್ಕೆ ಕಾರಣವಾಗಿದ್ದ ಶಿವಮೊಗ್ಗ ಜನರು ಇದು ಫೇಕ್ ಪತ್ರ ಎಂದುಕೊಂಡು ನಿಟ್ಟುಸಿರು ಬಿಟ್ಟಿದ್ದಾರೆ.