ಶಿವಮೊಗ್ಗ: ಬೆದರಿಕೆ ಪತ್ರವೊಂದು ಬಂದಿದ್ದು, ಅದರಲ್ಲಿ ನಾಲಿಗೆ ಕಟ್ ಮಾಡುತ್ತೇನೆ ಅಂತಾ ಬರೆಯಲಾಗಿದೆ. ಈ ರೀತಿಯ ಗೊಡ್ಡು ಬೆದರಿಕೆಗಳಿಗೆ, ಹೇಡಿಗಳಿಗೆ ನಾನು ಹೆದರಲ್ಲ, ಬಗ್ಗಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಅನಾಮಧೇಯ ಬೆದರಿಕೆ ಪತ್ರ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು, ಯಾರೋ ಹೇಡಿಗಳು ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದಾರೆ. ಟಿಪ್ಪು ಸುಲ್ತಾನ್ ಗೆ ಮುಸ್ಲಿಂ ಗೂಂಡಾ ಅಂತಾ ಕರೆದಿದ್ದೇನೆ ಅಂತಾ ಉಲ್ಲೇಖ ಮಾಡಿದ್ದಾರೆ. ಈ ಹೇಡಿ ಬಗ್ಗೆ ತನಿಖೆ ಮಾಡುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದೇನೆ ಎಂದರು.
ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂಬ ಭರವಸೆ, ವಿಶ್ವಾಸ ಇದೆ. ಈ ಪತ್ರ ನಮ್ಮ ರಾಜ್ಯದಿಂದಲೇ ಬಂದಿರೋದು. ಹೆಚ್ಚಿನ ಭದ್ರತೆ ಅವಶ್ಯಕತೆ ಏನಿಲ್ಲ. ಗೂಂಡಾಗಳಿಗೆ ಗೂಂಡಾ ಅಂತಾ ಕರೆಯದೇ ಬೇರೆ ಪದ ಬಳಸಲು ಆಗುತ್ತದಾ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಾಲಿಗೆ ಕಟ್ ಮಾಡ್ತೀವಿ ಹುಷಾರ್ ಮಗನೇ ಬಾಲ ಬಿಚ್ಬೇಡ- ಈಶ್ವರಪ್ಪಗೆ ಬೆದರಿಕೆ ಪತ್ರ
ಬೆದರಿಕೆ ಪತ್ರದಲ್ಲೇನಿದೆ..?: ಸ್ವಾತಂತ್ರ್ಯ ಸೇನಾನಿಯಾದ ನಮ್ಮ ಸಮಾಜದ ಟಿಪ್ಪು ಸುಲ್ತಾನ್ ಬಗ್ಗೆ ನಿನ್ನ ಬಾಯಿಂದ ”ಮುಸ್ಲಿಂ ಗೂಂಡಾ” ಅಂತಾ ಹೇಳಿದ್ದೀಯಲ್ಲ, ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರಿನ ಕಾಲೇಜಿಗೆ ಕಟ್ಟಡ ಕಟ್ಟಲು ನಮ್ಮ ಮುಸ್ಲಿಂ ಸಿಮೆಂಟ್ ಬ್ರಿಕ್ಸ್ ಬೇಕು ನಿನಗೆ. ಆದರೆ ಮುಸ್ಲಿಮರು ಮಾತ್ರ ಬೇಡ ಮಗನೆ ನಾಚಿಕೆಯಾಗಬೇಕು. ನಾಲಿಗೆ ಕಟ್ ಮಾಡುತ್ತೇವೆ ಹುಷಾರ್ ಮಗನೆ ಬಾಲ ಬಿಚ್ಚಬೇಡ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಬೆದರಿಕೆ ಪತ್ರ ಬಂದ ಬೆನ್ನಲ್ಲೇ ಈಶ್ವರಪ್ಪ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಅವರಿಗೆ ದೂರು ನೀಡಿದ್ದಾರೆ.