– ಕುಟುಂಬಗಳು ಕೈಚಾಚಬಾರದು.. ಕೈ ಎತ್ತಿ ಕೊಡುವಂತಿರಬೇಕು
– ನನಗೆ 5 ವರ್ಷ ಸರ್ಕಾರ ಕೊಟ್ಟರೆ ಎಲ್ಲಾ ಕೆಲಸವನ್ನು ಮಾಡಬಹುದು ಎಂದ ಕುಮಾರಸ್ವಾಮಿ
ಹಾಸನ: ದಯಮಾಡಿ ಮಹಿಳೆಯರು 2,000 ರೂ.ಗೆ ಮರುಳಾಗಬೇಡಿ. ನಾನು ತಿಂಗಳಿಗೆ 5,000 ರೂ. ಬರುವಂತೆ ಮಾಡಬಲ್ಲೆ ಎಂದು ‘ಗೃಹಲಕ್ಷ್ಮಿ’ಯರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಮನವಿ ಮಾಡಿದರು.
ಹಾಸನ ತಾಲೂಕಿನ, ಬೊಮ್ಮನಹಳ್ಳಿ ಗ್ರಾಮದಲ್ಲಿ ಶ್ರೀವೀರಾಂಜನೇಯ ದೇವಾಲಯ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಚ್ಡಿಕೆ, ರೇವಣ್ಣ ದೈವ ಭಕ್ತ, ಸ್ವಲ್ಪ ಕೋಪಿಷ್ಠ. ಬೆಳಗ್ಗೆ ಎದ್ದರೆ ಯಾರಿಗೂ ಮುಖ ತೋರ್ಸಲ್ಲ, ಯಾರ ಮುಖ ನೋಡಲ್ಲ. ಮೊದಲು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ ಬರ್ತಾನೆ. ಕೆಲಸ ಮಾಡುವುದರಲ್ಲಿ ಅವನ ಮುಂದೆ ನಾನು ಇಲ್ಲ ಎಂದು ಸಹೋದರನನ್ನು ಬಣ್ಣಿಸಿದರು.
ದಯಮಾಡಿ ಮಹಿಳೆಯರು ಎರಡು ಸಾವಿರಕ್ಕೆ ಮರಳಾಗಬೇಡಿ. ನಾನು ತಿಂಗಳಿಗೆ ಐದು ಸಾವಿರ ಬರುವಂತೆ ಮಾಡಬಲ್ಲೆ. ಇವತ್ತು ಕಾಯಿಲೆ, ಮಕ್ಕಳ ಶಿಕ್ಷಣಕ್ಕಾಗಿ ಮನೆ, ಮಠ ಕಳೆದುಕೊಳ್ತಾರೆ. ಎರಡು ಸಾವಿರ ರೂಪಾಯಿ ಧರ್ಮಕ್ಕೆ ಕೊಡಲ್ಲ. ಬಹಳ ದಾರಾಳತನದಿಂದ ಕೊಡ್ತಾ ಇಲ್ಲ. ನೀವು ಕಟ್ಟುವ ಟ್ಯಾಕ್ಸ್ನಲ್ಲೇ ನಿಮಗೆ ಎರಡು ಸಾವಿರ ಹಣ ಕೊಡುತ್ತಿದ್ದಾರೆ ಎಂದು ಜನತೆಗೆ ತಿಳಿಸಿದರು. ಇದನ್ನೂ ಓದಿ: ಮೇಕೆದಾಟು ನಮ್ಮ ಹಕ್ಕು, ಅಣೆಕಟ್ಟು ಕಟ್ಟಿ ತಮಿಳುನಾಡಿಗೂ ನೀರು ಕೊಡುತ್ತೇವೆ: ಡಿಕೆಶಿ
ಸರ್ಕಾರದವರು ಎರಡೂವರೆ ಸಾವಿರ ರೂಪಾಯಿಯನ್ನು ಬರಗಾಲದ ಪರಿಹಾರದ ಹಣವಾಗಿ ಕೊಡ್ತೀವಿ ಅಂತಾರೆ. ಯಾದಗಿರಿ ಭಾಗದಲ್ಲಿ ಎರಡೂವರೆ ಸಾವಿರಕ್ಕಿಂತ ಕಡಿಮೆ ಹಣವನ್ನು ಭಿಕ್ಷೆ ಕೊಟ್ಟ ರೀತಿ ಕೊಟ್ಟಿದ್ದಾರೆ. ಆ ಹಣ ವಾಪಸ್ ಕೊಡ್ತೀವಿ ಅಂತ ಆ ಭಾಗದ ರೈತರು ಹೇಳ್ತಾರೆ. ನನ್ನ ಹತ್ತಿರ ಶ್ರೀಮಂತರು ಬರಲ್ಲ, ನೋವನ್ನು ಅನುಭವಿಸುವ ಬಡವರೇ ಬರೋದು. ಇಡೀ ರಾಜ್ಯದ ಪ್ರತಿಯೊಂದು ಕುಟುಂಬಗಳು ಕೈಚಾಚಬಾರದು. ಕೈ ಎತ್ತಿ ಕೊಡುವಂತೆ ಬದುಕಬೇಕು. ನನಗೆ ಐದು ವರ್ಷ ಸರ್ಕಾರ ಕೊಟ್ಟರೆ ಎಲ್ಲಾ ಕೆಲಸವನ್ನು ಮಾಡಬಹುದು. ರಾಜ್ಯದ ಖಜಾನೆಯನ್ನು ನೀವು ತುಂಬಿಸಿದ್ದೀರಿ. ನಾನು ಹಲವಾರು ಸಮಸ್ಯೆಗಳನ್ನು ಎದುರಿಸಿ, ನಿಮ್ಮ ಮುಂದೆ ಮಾತನಾಡುತ್ತಿದ್ದೇನೆ ಎಂದರೆ ನಿಮ್ಮೆಲ್ಲರ ಆಶೀರ್ವಾದ ಎಂದರು.
ಕುಮಾರಸ್ವಾಮಿ ಅಂದರೆ ದೇವೇಗೌಡರ ಮಗ ಅಂತ ಈಗ ಹೇಳಲ್ಲ. ನಿಮ್ಮ ಪ್ರೀತಿ, ವಿಶ್ವಾಸದಿಂದ ಕುಮಾರಸ್ವಾಮಿ ಎಂದು ರಾಜ್ಯದ ಜನ ಗುರುತಿಸುತ್ತಾರೆ. ಅವನ್ಯಾರೋ ಮಹಾನುಭಾವ ಅವರ ಕುಟುಂಬದ ಏಳು ಜನರನ್ನು ಹೊಳಕಲ್ಲಿನಿಂದ ಜಜ್ಜಿ ಸಾಯಿಸಿದ್ದಾನೆ. ನಿಮ್ಮ ಕುಟುಂಬದಲ್ಲಿ ಏನೇ ಸಮಸ್ಯೆ ಬಂದರೂ ಉದ್ರೇಕಕ್ಕೆ ಒಳಗಾಗಬಾರದು. ನಿಮ್ಮ ಕುಟುಂಬದಲ್ಲಿ ಆ ರೀತಿ ಘಟನೆಗಳು ಆಗಬಾರದು ಎಂದು ಕಿವಿಮಾತು ಹೇಳಿದರು. ಇದನ್ನೂ ಓದಿ: ದೇವಾಲಯ ಸಮಾಜದ ಆಸ್ತಿ, ಬೀಗ ಹಾಕಿದ್ದು ಖಂಡನೀಯ: ಹೆಚ್.ಸಿ.ಬಾಲಕೃಷ್ಣ
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಮಾತನಾಡುವಾಗ, ಪಾನಮತ್ತ ವ್ಯಕ್ತಿಯೊಬ್ಬ ಮಧ್ಯಪ್ರವೇಶಿಸಿ ‘ರೋಡ್ ಆಗಬೇಕು ರೋಡು’ ಎಂದು ಕೇಳಿದ. ಅದಕ್ಕೆ ರೇವಣ್ಣ, ‘ತಡಿಯೋ ಮಾಡೋಣ, ನೋಡಿ ಅವನು ಈಗ್ಲೇ ಚಾರ್ಜ್ ಆಗವ್ನೆ’ ಎಂದರು. ಕುಮಾರಣ್ಣರಿಗೆ ಮಹಿಳೆಯರು ಪಾಕೆಟ್ ಸಾರಾಯಿ ನಿಷೇಧ ಮಾಡಿ ಅಂದ್ರಿ. ಕುಮಾರಣ್ಣ ಸಾರಾಯಿ, ಲಾಟರಿ ನಿಷೇಧ ಮಾಡಿದ್ರು. ಹನ್ನೆರಡು ರೂಪಾಯಿಗೆ ಒಂದು ಪ್ಯಾಕೇಟ್ ಸಿಗೋದು ಎರಡು ಕಾಯಿ ಕದಿಯಬೇಕಿತ್ತು. ಈಗ ಒಂದು ಕ್ವಾಟರ್ ತಗೊಬೇಕಾದ್ರೆ ಎಷ್ಟು ಬೆಲೆ? 130 ರೂಪಾಯಿ ಆಗಿದೆ ಕ್ವಾಟರ್ ಬೆಲೆ ಎಂದರು. ಅದಕ್ಕೆ ಗ್ರಾಮಸ್ಥರು ನಗೆಗಡಲಲ್ಲಿ ತೇಲಿದರು.
