ನ್ಯೂ ಚಂಡೀಗಡ: ಐಪಿಎಲ್ ಕ್ವಾಲಿಫೈಯರ್-2 ಪಂದ್ಯದಲ್ಲಿ ಗೆದ್ದು ಗುಜರಾತ್ ಟೈಟಾನ್ಸ್ ಫೈನಲ್ ಪ್ರವೇಶಿಸಿದೆ. ಭಾನುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಐಪಿಎಲ್ ಟ್ರೋಫಿಗಾಗಿ ಸೆಣಸಲಿದೆ.
ನಾಯಕ ಶುಭಮನ್ ಗಿಲ್ ಸ್ಫೋಟಕ ಶತಕ ಸಿಡಿಸಿ ತಂಡವನ್ನು ಫೈನಲ್‌ಗೆ ಕರೆದೊಯ್ದಿದ್ದಾರೆ. ಪಂದ್ಯ ಸೋಲಿನೊಂದಿಗೆ ರಾಜಸ್ಥಾನ್ ರಾಯಲ್ಸ್ ಮನೆಗೆ ಮರಳಿದೆ.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ಗುಜರಾತ್ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ 7 ವಿಕೆಟ್‌ಗಳ ಗೆಲುವು ದಾಖಲಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಆರ್‌ಆರ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಓಪನರ್ ಯಶಸ್ವಿ ಜೈಸ್ವಾಲ್ ಕೇವಲ 1 ರನ್‌ಗೆ ಔಟಾದರು. ನಂತರ ಬಂದ ಧ್ರುವ ಜುರೇಲ್ ಕೂಡ ಕೇವಲ 7 ರನ್ ಗಳಿಸಿ ಹೊರನಡೆದರು. ಅಚ್ಚರಿ ಎಂಬಂತೆ ಮೂರನೇ ಕ್ರಮಾಂಕದಲ್ಲಿ ಬಂದ ರವೀಂದ್ರ ಜಡೇಜಾ ಬ್ಯಾಟಿಂಗ್ ಕೈಚಳಕ ತೋರಿದರು. ವೈಭವ್ ಮತ್ತು ಜಡೇಜಾ ಜೋಡಿ ಆರ್‌ಆರ್ ಸವಾಲಿನ ಮೊತ್ತ ಪೇರಿಸಲು ರನ್ ಕೊಡುಗೆ ನೀಡಿತು.
ಇಬ್ಬರ ಜೊತೆಯಾಟದಿಂದ ತಂಡ 65 ಬಾಲ್‌ಗೆ 127 ರನ್ ಕಲೆಹಾಕಿತು. ಈ ನಡುವೆ ಜಡೇಜಾ ಗಾಯದ ಸಮಸ್ಯೆಯಿಂದ ಕೆಲಹೊತ್ತು ಹೊರನಡೆಯಬೇಕಾಯಿತು. ಆಗ ಬಂದ ರಿಯಾನ್ ಪರಾಗ್ ಕೂಡ ಅಲ್ಪಮೊತ್ತಕ್ಕೆ ಪೆವಿಲಿಯನ್ ಕಡೆ ನಡೆದರು.
ನಿರೀಕ್ಷೆಯೆಂಬಂತೆ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ವೈಭವ್ 47 ಬಾಲ್‌ಗೆ 96 ರನ್ ಬಾರಿಸಿದರು. ಹೈದರಾಬಾದ್ ವಿರುದ್ಧ ಆದಂತೆಯೇ ಮತ್ತೊಮ್ಮೆ ಶತಕ ವಂಚಿತರಾದರು. ಮತ್ತೆ ಕ್ರೀಸ್‌ಗೆ ಬಂದ ಜಡೇಜಾ, ಡೊನೊವನ್ ಫೆರಾರಿಯಾ ಜೊತೆಗೂಡಿ 16 ಎಸೆತಗಳಲ್ಲೇ 42 ರನ್ ಕಲೆಹಾಕಿದರು. ಕೊನೆಯಲ್ಲಿ ಅಬ್ಬರಿಸಿದ ಡೊನೊವಲ್ 11 ಎಸೆತಕ್ಕೆ 38 ರನ್ ಸಿಡಿಸಿದರು. ಕೊನೆ ಓವರ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಸಿಕ್ಸರ್ ಸಿಡಿಸಿ ಮಿಂಚಿದರು.
215 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಜಿಟಿ ನಾಯಕ ಗಿಲ್ 53 ಎಸೆತಗಳಲ್ಲಿ 15 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳ ಸಹಾಯದಿಂದ 104 ರನ್ ಗಳಿಸಿದರು. ಸಾಯಿ ಸುದರ್ಶನ್ 32 ಎಸೆತಗಳಲ್ಲಿ 58 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಸಹಾಯ ಮಾಡಿದರು. ಈ ಜೋಡಿ ಮೊದಲ ವಿಕೆಟ್‌ಗೆ 167 ರನ್‌ಗಳ ಜೊತೆಯಾಟ ನೀಡಿತು. ಅಂತಿಮವಾಗಿ ರಾಜಸ್ಥಾನ್ ವಿರುದ್ಧ ಗುಜರಾತ್ 7 ವಿಕೆಟ್‌ಗಳ ಗೆಲುವು ದಾಖಲಿಸಿ ಫೈನಲ್‌ಗೆ ಲಗ್ಗೆಯಿಟ್ಟಿತು.
440 ಬಾಲ್‌ಗಳಿಗೆ ವೈಭವ್ 1,000 ರನ್ ದಾಖಲೆ
ಸ್ಫೋಟಕ ಬ್ಯಾಟರ್ ಸೂರ್ಯವಂಶಿ 1,000 ಐಪಿಎಲ್ ರನ್ ಗಳಿಸಿದ ಅತ್ಯಂತ ವೇಗದ ಬ್ಯಾಟ್ಸ್‌ಮನ್ ಆಗಿ ದಾಖಲೆ ಬರೆದಿದ್ದಾರೆ. ಹದಿಹರೆಯದ ಬ್ಯಾಟರ್ 440 ಎಸೆತಗಳಲ್ಲಿ ಈ ದಾಖಲೆಯನ್ನು ತಲುಪಿದ್ದಾರೆ. ಆಂಡ್ರೆ ರಸೆಲ್ 545 ಎಸೆತಗಳಲ್ಲಿ 1,000 ರನ್ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಐಪಿಎಲ್‌ನ ಒಂದೇ ಋತುವಿನಲ್ಲಿ ಪವರ್‌ಪ್ಲೇನಲ್ಲಿ 500 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ವೈಭವ್ ಪಾತ್ರರಾಗಿದ್ದಾರೆ.
