– ಗ್ರಾಮೀಣ ಕುಡಿಯುವ ನೀರಿನ ಯೋಜನೆಗೂ ಅರಣ್ಯ ಅನುಮತಿ
– ಬೆಂಗಳೂರು ದಕ್ಷಿಣ, ಹಾಸನ, ಚಿಕ್ಕಮಗಳೂರು, ಧಾರವಾಡ, ಬಾಗಲಕೋಟೆ ಜಿಲ್ಲೆಗಳಲ್ಲಿ ಯೋಜನೆ ಅನುಷ್ಠಾನ
ಬೆಂಗಳೂರು: ರಾಜ್ಯದ 101 ತಾಲೂಕುಗಳಲ್ಲಿ ಬರ ಪರಿಸ್ಥಿತಿ (Drought Situation) ಇರುವ ಹಿನ್ನೆಲೆಯಲ್ಲಿ ಗ್ರಾಮೀಣ ಜನರಿಗೆ ವಿಬಿಜಿ ರಾಮ್ ಜಿ ಯೋಜನೆಯಡಿ ಹೆಚ್ಚಿನ ಉದ್ಯೋಗ ನೀಡಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅಧಿಕಾರಿಗಳಿಗೆ (Eshwar Khandre) ಸೂಚಿಸಿದ್ದಾರೆ.
ಬೆಂಗಳೂರು ದಕ್ಷಿಣ, ಹಾಸನ, ಚಿಕ್ಕಮಗಳೂರು, ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ವಿಬಿಜಿ ರಾಮ್ ಜಿ ಯೋಜನೆಯ ಅನುಷ್ಠಾನದ ಬಗ್ಗೆ ಸಚಿವರು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಗತಿ ಪರಿಶೀಲನೆ ನಡೆಸಿದರು.
ಗ್ರಾಮೀಣ ಜನರಿಗೆ ಅವರ ಬೇಡಿಕೆಗೆ ಅನುಗುಣವಾಗಿ ಕೆಲಸ ನೀಡಬೇಕು. ಕೆಲಸ ಮಾಡಿದ 15 ದಿನಗಳ ಒಳಗಾಗಿ ಕೂಲಿ ಹಣ ಪಾವತಿಯಾಗಬೇಕು ಎಂದು ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಬೆಂಗಳೂರು ಸುತ್ತಮುತ್ತ 382 ರೂಪಾಯಿ ಕೂಲಿಗೆ ಕಾರ್ಮಿಕರು ಸಿಗುತ್ತಿಲ್ಲ ಎನ್ನುವುದು ಸರಿಯಲ್ಲ ಎಂದು ಸಚಿವರು ಹೇಳಿದರು. ಗ್ರಾಮದಲ್ಲೇ ಕೆರೆ ಹೂಳು ತೆಗೆಯುವುದು, ರಸ್ತೆ ಅಭಿವೃದ್ಧಿ, ಕೊಳವೆ ಬಾವಿಗಳ ಮರುಪೂರಣ ಹಾಗೂ ಅಂತರ್ಜಲ ಹೆಚ್ಚಿಸುವಂತಹ ಕೆಲಸಗಳು ನಡೆಯುತ್ತವೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿದರೆ ಅವರು ಕೆಲಸಕ್ಕೆ ಬರುತ್ತಾರೆ ಎಂದು ತಿಳಿಸಿದರು.
ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಕಳೆದ ವರ್ಷ ನರೇಗಾ ಯೋಜನೆಯಡಿ ನೀಡಲಾಗಿದ್ದ ಉದ್ಯೋಗಕ್ಕೆ ಹೋಲಿಸಿದರೆ ವಿಬಿಜಿ ರಾಮ್ ಜಿಯಲ್ಲಿ ಶೇ.80ರಷ್ಟು ಉದ್ಯೋಗ ಕಡಿಮೆಯಾಗಿದೆ. ಜಿಲ್ಲೆಯಲ್ಲಿ 120 ಗ್ರಾಮ ಪಂಚಾಯತಿಗಳಿದ್ದು, ಪ್ರತಿ ಪಂಚಾಯತಿ ವ್ಯಾಪ್ತಿಯಲ್ಲಿ ದಿನಕ್ಕೆ ಕನಿಷ್ಠ 50 ಜನರಿಗೆ ಕೆಲಸ ನೀಡಿದರೂ 6 ಸಾವಿರ ಜನರಿಗೆ ಉದ್ಯೋಗ ಕಲ್ಪಿಸಬಹುದು ಎಂದು ಖಂಡ್ರೆ ಹೇಳಿದರು.
ಕೆಲವು ಗ್ರಾಮ ಪಂಚಾಯತಿಗಳಲ್ಲಿ ಕೂಲಿ ಹಣ ಪಿಡಿಓಗಳ ಲಾಗಿನ್‌ನಲ್ಲೇ ಉಳಿದಿರುವುದಕ್ಕೆ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು. ವೇತನ ಪಾವತಿಯಲ್ಲಿ ವಿಳಂಬ ಮಾಡಿದರೆ ದಂಡ ವಿಧಿಸಲು ಅವಕಾಶವಿದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿ ಪಿಡಿಓಗಳು ವೇತನ ಪಾವತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು. ವಾರದಲ್ಲಿ ಎರಡು ದಿನ ಖಜಾನೆಗೆ ತೆರಳಿ ಹಣ ಪಾವತಿಯಾಗುವಂತೆ ನೋಡಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಕೂಲಿ ಸಿಕ್ಕರೆ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಕೆಲಸಕ್ಕೆ ಬರುತ್ತಾರೆ ಎಂದು ಸಚಿವರು ಹೇಳಿದರು.
ಜಿಲ್ಲೆಗೆ ಈಗಾಗಲೇ 20 ಕೋಟಿ ರೂಪಾಯಿ ಹಣ ಬಿಡುಗಡೆಯಾಗಿದೆ. 1.86 ಕೋಟಿ ರೂಪಾಯಿ ಕೂಲಿ ಪಾವತಿಯಾಗಬೇಕಿದ್ದು, ಈವರೆಗೆ 40 ಲಕ್ಷ ರೂಪಾಯಿ ಮಾತ್ರ ಪಾವತಿಯಾಗಿದೆ. ಇನ್ನೂ 1.46 ಕೋಟಿ ರೂಪಾಯಿ ಕೂಲಿ ಪಾವತಿಯಾಗಬೇಕಿದೆ. ಈ ಹಣವನ್ನು ವಿಳಂಬ ಮಾಡದೆ ಪಾವತಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಸೂಚನೆ ನೀಡಿದರು.
ಗ್ರಾಮೀಣ ಕುಡಿಯುವ ನೀರಿನ ಯೋಜನೆಗೂ ಅರಣ್ಯ ಅನುಮತಿ
ರಾಜ್ಯದ ಹಲವು ಜಿಲ್ಲೆಗಳಲ್ಲಿ ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳಿಗೆ ಅರಣ್ಯ ಅನುಮತಿ ಸಿಗದೆ ಕಾಮಗಾರಿ ವಿಳಂಬವಾಗುತ್ತಿದೆ. ಕೆರೆ, ಸರೋವರ ಮತ್ತು ನದಿಗಳಿಂದ ನೀರು ತರಲು ಕೊಳವೆ ಅಳವಡಿಸುವ ಕಾಮಗಾರಿಗಳಿಗೆ ಅನುಮತಿ ಅಗತ್ಯವಿದೆ.
ಈ ಕುರಿತು ಅರಣ್ಯ ಇಲಾಖೆ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗುವುದು. ಪರಿವೇಶ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಿ ನಿಯಮಾನುಸಾರ ಶೀಘ್ರ ಅನುಮತಿ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.
ಧಾರವಾಡ, ಚಿಕ್ಕಮಗಳೂರು, ಹಾಸನ ಹಾಗೂ ಬಾಗಲಕೋಟೆ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಕೂಡ ಸಚಿವರು ಪ್ರಗತಿ ಪರಿಶೀಲನೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು.
