– ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕಾಮಗಾರಿ ನಡೆಸಿದ್ದ ಗುತ್ತಿಗೆದಾರರಿಗೆ ಇನ್ನೂ ಸಿಗದ ಹಣ
– ಜಿಲ್ಲಾಡಳಿತದ ವಿರುದ್ಧ ಆಕ್ರೋಶ; ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡುವಂತೆ ಆಗ್ರಹ
ಮಡಿಕೇರಿ: ಕೊಡಗಿನಲ್ಲಿ (Kodagu) 2019ರಲ್ಲಿ ಸಂಭವಿಸಿದ ಪ್ರವಾಹ ಹಾಗೂ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಕಾಮಗಾರಿ ನಡೆಸಿದ್ದ ಗುತ್ತಿಗೆದಾರರಿಗೆ ಇನ್ನೂ ಬಾಕಿ ಹಣ (Pending Bill) ಪಾವತಿಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಸುಮಾರು 8 ಕೋಟಿ ರೂ. ಮೊತ್ತದ ಬಿಲ್ 7 ವರ್ಷಗಳಿಂದ ಬಾಕಿ ಉಳಿದಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಇಂದು ಮಡಿಕೇರಿ ನಗರದ (Madikeri City) ಪಂಚಾಯತ್ ರಾಜ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಸ್ಥಳೀಯ ಗುತ್ತಿಗೆದಾರರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಹಾಗೂ ಬಾಕಿ ಇರುವ ಹಣವನ್ನ ಶೀಘ್ರ ಪಾವತಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
2019ರಲ್ಲಿ ಕೊಡಗಿನಲ್ಲಿ ಪ್ರವಾಹ ಹಾಗೂ ಪ್ರಕೃತಿ ವಿಕೋಪದ ಪರಿಸ್ಥಿತಿ ಉಂಟಾದ ಸಂದರ್ಭದಲ್ಲಿ ಹಗಲಿರುಳು ಕೆಲಸ ಮಾಡಿದ್ದರೂ, ವರ್ಷಗಳು ಕಳೆದರೂ ಕಾಮಗಾರಿಗಳ ಬಿಲ್ ಪಾವತಿಯಾಗಿಲ್ಲ ಎಂದು ಗುತ್ತಿಗೆದಾರರು ಅಸಮಾಧಾನ ವ್ಯಕ್ತಪಡಿಸಿದರು. ಸುಮಾರು 8 ಕೋಟಿ ರೂ. ಮೊತ್ತದ ಬಿಲ್ ಬಾಕಿ ಇದೆ ಎಂದು ಕೊಡಗು ಜಿಲ್ಲಾ ಗುತ್ತಿಗೆದಾರರ ಸಂಘ ಆರೋಪಿಸಿದ್ದು, 7 ವರ್ಷಗಳಿಂದ ಹಣಕ್ಕಾಗಿ ಕಾಯುತ್ತಿದ್ದೇವೆ ಎಂದು ಅಳಲು ತೋಡಿಕೊಂಡರು.

ಜಿಲ್ಲಾಧಿಕಾರಿಗಳು ಬದಲಾಗುತ್ತಲೇ ಇದ್ದಾರೆ, ಅಧಿಕಾರಿಗಳು ಬದಲಾಗಿದ್ದಾರೆ. ಆದ್ರೆ ತಮ್ಮ ಬಾಕಿ ಹಣ ಮಾತ್ರ ಪಾವತಿಯಾಗಿಲ್ಲ ಎಂಬುದು ಗುತ್ತಿಗೆದಾರರ ಅಸಮಾಧಾನವಾಗಿದೆ. ತುರ್ತು ಸಂದರ್ಭದಲ್ಲಿ ಕಾಮಗಾರಿ ನಡೆಸುವುದು ತಮ್ಮ ಜವಾಬ್ದಾರಿಯಾದ್ರೆ, ಕಾಮಗಾರಿಗೆ ಅನುಮೋದನೆ ನೀಡಿ ಬಿಲ್ ಪಾವತಿಸುವುದು ಜಿಲ್ಲಾಡಳಿತದ ಜವಾಬ್ದಾರಿ ಎಂದು ಗುತ್ತಿಗೆದಾರರು ಹೇಳಿದ್ದಾರೆ.
ಈ ಸಂಬಂಧ ಇಂದು ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಜನಪ್ರತಿನಿಧಿಗಳ ಗಮನಕ್ಕೂ ಸಮಸ್ಯೆಯನ್ನ ತಂದಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.
ಇನ್ನೂ, ಕೊಡಗಿನಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ಆದ್ಯತೆ ನೀಡಬೇಕು ಎಂಬುದು ಮತ್ತೊಂದು ಪ್ರಮುಖ ಒತ್ತಾಯವಾಗಿದೆ. ಕೊಡಗಿನ ಕಷ್ಟದ ಸಂದರ್ಭದಲ್ಲಿ ಸ್ಥಳೀಯ ಗುತ್ತಿಗೆದಾರರೇ ಕೆಲಸಕ್ಕೆ ಮುಂದಾಗುತ್ತಾರೆ. ಆದರೆ ಕಾಮಗಾರಿ ಹಂಚಿಕೆ ಮಾಡುವ ಸಂದರ್ಭದಲ್ಲಿ ಹೊರ ಜಿಲ್ಲೆಗಳ ಗುತ್ತಿಗೆದಾರರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಸಂಘದ ಸದಸ್ಯರು ಆರೋಪಿಸಿದ್ದಾರೆ. ಸ್ಥಳೀಯ ಗುತ್ತಿಗೆದಾರರಿಗೆ ಹೆಚ್ಚಿನ ಅವಕಾಶ ನೀಡಬೇಕು ಹಾಗೂ ಹೊರ ಜಿಲ್ಲೆಗಳ ಗುತ್ತಿಗೆದಾರರಿಗೆ ಆದ್ಯತೆ ನೀಡಬಾರದು ಎಂದು ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.
ಬಾಕಿ ಹಣ ಪಾವತಿಯಾಗದೆ ಮನೆ-ಮಠಗಳನ್ನು ಅಡಮಾನ ಇಡುವ ಪರಿಸ್ಥಿತಿ ಎದುರಾಗಿದೆ. ಕೆಲ ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ಹಂತದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸುವುದಾಗಿ ಕೊಡಗು ಜಿಲ್ಲಾ ಗುತ್ತಿಗೆದಾರರ ಸಂಘ ಎಚ್ಚರಿಕೆ ನೀಡಿದೆ.

