Friday, 17th August 2018

Recent News

11 ಸಾವಿರ ಜನರ ಬಲಿ ಪಡೆದಿದ್ದ ಎಬೋಲಾ ಮತ್ತೆ ಬಂತು – ಈ ತಿಂಗಳಲ್ಲಿ ಸತ್ತಿದ್ದು 27 ಮಂದಿ!

ಕಾಂಗೋ/ಬೆಂಗಳೂರು: ಕೇರಳದಲ್ಲಿ ನಿಪಾ ವೈರಸ್ ಪತ್ತೆಯಾದ ಬೆನ್ನಲ್ಲೇ, 2014ರಲ್ಲಿ ವಿಶ್ವವನ್ನೇ ಬೆಚ್ಚಿಬೀಳಿಸಿದ್ದ ಎಬೋಲಾ ಆಫ್ರಿಕಾದಲ್ಲಿ ಮತ್ತೆ ಕಾಣಿಸಿಕೊಂಡಿದೆ. ಮಧ್ಯ ಆಫ್ರಿಕಾದ ಕಾಂಗೋದಲ್ಲಿ ಈ ತಿಂಗಳಲ್ಲೇ ಒಟ್ಟು 27 ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ. 2014ರಲ್ಲಿ ಎಬೋಲಾ ವೈರಸ್‍ನಿಂದಾಗಿ 11310 ಜನರು ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಎಬೋಲಾವನ್ನು ಜಾಗತಿಕ ಮಹಾಮಾರಿ ಎಂದು ಘೋಷಿಸಿತ್ತು.

ಈ ಬಾರಿ ಈಗಾಗಲೇ 58 ಎಬೋಲಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ನಡುವೆ ಎಬೋಲಾ ಪತ್ತೆಯಾಗಿ ಎಂಬಂಡ್ಕ ನಗರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಆಸ್ಪತ್ರೆಯಿಂದ ಪರಾರಿಯಾಗಿದ್ದರು. ಇವರನ್ನು ಪತ್ತೆ ಹಚ್ಚಿ ಹಿಡಿದರೂ ಇವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಆರೋಗ್ಯ ಇಲಾಖೆಯ ಪ್ರತ್ಯೇಕ ತಂಡ ಇವರ ಅಂತ್ಯಸಂಸ್ಕಾರ ನಡೆಸಿದೆ. 15 ಲಕ್ಷ ಜನಸಂಖ್ಯೆ ಇರುವ ಎಂಬಂಡ್ಕ ನಗರದಲ್ಲಿ ರೋಗ ಇನ್ನಷ್ಟು ಉಲ್ಬಣವಾಗುವ ಸಾಧ್ಯತೆಯಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಎಬೋಲಾ ಎಂದರೇನು?: 1976ರಲ್ಲಿ ಕಾಂಗೋದ ಎಬೋಲಾ ನದಿ ತೀರದ ಪ್ರದೇಶದಲ್ಲಿ ಪತ್ತೆಯಾದ ವೈರಾಣು. ಹೀಗಾಗಿ ಇದಕ್ಕೆ ಎಬೋಲಾ ಎಂಬ ಹೆಸರು ಬಂತು. ಪೀಟರ್ ಪೈಯೋಟ್ ಎಂಬವರು ಎಬೋಲಾ ವೈರಸನ್ನು ಪತ್ತೆ ಹಚ್ಚಿದ್ದರು. ಈವರೆಗಿನ ವೈರಾಣುಗಳ ಪೈಕಿ ಅತ್ಯಂತ ಅಪಾಯಕಾರಿಯಾಗಿರುವ ವೈರಸ್. 1976ರಲ್ಲಿ ಈ ಮಹಾಮಾರಿ 400ಕ್ಕೂ ಹೆಚ್ಚು ಜನರನ್ನು ಬಲಿ ಪಡೆಯಿತು. ಇದು ಕೋತಿ, ಗೊರಿಲ್ಲಾ, ಚಿಂಪಾಂಜಿ, ಬಾವಲಿಗಳ ಮೂಲಕ ಹರಡುವ ರೋಗ.

ಎಬೋಲಾ ಲಕ್ಷಣಗಳೇನು?: ತಲೆನೋವು, ಗಂಟಲು ಕೆರೆತ, ಸ್ನಾಯುಗಳಲ್ಲಿ ನೋವು, ಜ್ವರ, ಹೊಟ್ಟೆನೋವು, ದೇಹದಲ್ಲಿ ಗುಳ್ಳೆಗಳು ಕಾಣಿಸುತ್ತದೆ. ಮುಂದಿನ ಹಂತದಲ್ಲಿ ದೇಹದ ಒಳಭಾಗ ಸೇರಿ ಕಿವಿ, ಮೂಗಿನ ಮೂಲಕ ರಕ್ತ ಸೋರಿಕೆಯಾಗುತ್ತದೆ. ಕಾಯಿಲೆ ಪೀಡಿತರ ನೇರಸಂಪರ್ಕದಿಂದ ಇದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ರೋಗಿಯ ರಕ್ತ, ಬೆವರು, ವಾಂತಿ, ಮೂತ್ರ, ವೀರ್ಯದ ಸಂಪರ್ಕದಿಂದ ಕಾಯಿಲೆ ಹರಡುತ್ತದೆ.

ಎಬೋಲಾ ಹರಡಿದ 10 ಜನರಲ್ಲಿ 9 ಜನರ ಸಾವು ಬಹುತೇಕ ಖಚಿತ ಎಂಬ ಕಾರಣಕ್ಕೆ ಎಬೋಲಾ ಅಪಾಯಕಾರಿ ವೈರಸ್ ಎಂದೇ ಕುಖ್ಯಾತಿ. ಈ ವೈರಸ್ ರೋಗಿಯ ಶರೀರ ಪ್ರವೇಶಿಸಿದ 2ರಿಂದ 21 ದಿನದ ಒಳಗಡೆ ರೋಗಲಕ್ಷಣಗಳು ಕಾಣಿಸುತ್ತವೆ. ಇದಾಗಿ 16 ದಿನದೊಳಗೆ ಸಾವು ಸಂಭವಿಸುವ ಸಾಧ್ಯತೆಯೂ ಇದೆ. ಒಂದು ಬಾರಿ ಈ ವೈರಸ್ ಪತ್ತೆಯಾದರೆ ರೋಗಿಯನ್ನು ಬೇರೆಯವರ ಸಂಪರ್ಕಕ್ಕೆ ಬಿಡದಿರುವುದೇ ಈ ವೈರಸ್ ಹರಡದಿರುವಂತೆ ಮಾಡುವ ಸುಲಭೋಪಾಯ.

ರೋಗಿ ಸತ್ತರೂ ಸಾಯಲ್ಲ ವೈರಾಣು!: ಎಬೋಲಾ ರೋಗದಿಂದ ಸಾವನ್ನಪ್ಪಿದ ವ್ಯಕ್ತಿಯ ದೇಹದಲ್ಲಿ ಎಬೋಲಾ ವೈರಸ್ ಸುಮಾರು 7 ದಿನಗಳ ಕಾಲ ಜೀವಂತವಾಗಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಯನ ವರದಿಯೇ ಹೇಳಿದೆ. ಸತ್ತ ವ್ಯಕ್ತಿಯನ್ನು ಮುಟ್ಟುವುದರಿಂದಲೂ ಈ ರೋಗ ಹರಡುವ ಸಾಧ್ಯತೆಯಿದೆ. ಎಬೋಲಾದಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹ ಭಾರೀ ಅಪಾಯಕಾರಿ. ಮೃತದೇಹವನ್ನು ಸುಟ್ಟರೂ ಎಬೋಲಾ ಇತರರಿಗೆ ಹರಡುವ ಸಾಧ್ಯತೆ ಇರುತ್ತದೆ.

ಎಬೋಲಾ ಹರಡುವಿಕೆ ಹೇಗೆ?: ಐದು ಬೇರೆ ಬೇರೆ ವಿಧದ ವೈರಸ್‍ಗಳು ಈ ಕಾಯಿಲೆಯನ್ನು ಹರಡುತ್ತವೆ. ಈ ಎಲ್ಲಾ ವಿಧದ ವೈರಸ್‍ಗಳು ಮನುಷ್ಯರಲ್ಲಿಯೂ ಈ ಕಾಯಿಲೆಯನ್ನು ಹರಡಲು ಸಮರ್ಥವಾಗಿವೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ ಬಾಧಿತ ಪ್ರಾಣಿಯ ರಕ್ತ, ದೇಹದ ಸ್ರಾವಗಳು, ಅಂಗಾಂಗಗಳು ಅಥವಾ ದೇಹದ ಇತರ ದ್ರವಾಂಶಗಳ ಮೂಲಕ ಆರೋಗ್ಯವಂತ ವ್ಯಕ್ತಿಗೆ ಸೋಂಕು ಬಾಧಿಸಬಹುದು.

ಮನುಷ್ಯರಲ್ಲಿ ಹರಡುವಿಕೆ ಹೇಗೆ?
– ಬಾಧಿತ ವ್ಯಕ್ತಿಯ ರಕ್ತ, ದೇಹದ – ಸ್ರಾವಗಳು, ಅಂಗಾಂಗಗಳು ಅಥವಾ ದೇಹದ ಇತರ ದ್ರವಾಂಶಗಳ ಸಂಪರ್ಕದ ಮೂಲಕ ಹರಡಬಹುದು.
– ಸೋಂಕು ಬಾಧಿತರ ದೇಹ ದ್ರವಾಂಶಗಳ ಸಂಪರ್ಕದಿಂದ ಆರೋಗ್ಯ ಕಾರ್ಯಕರ್ತರಿಗೆ ಈ ಕಾಯಿಲೆಯು ಹರಡಬಹುದು.
– ಸೋಂಕು ಬಾಧಿತ ಪ್ರಾಣಿಯ ಮಾಂಸದ ನಿರ್ವಹಣೆಯ ಮೂಲಕ ಕಾಯಿಲೆಯು ಹರಡಬಹುದು.
– ಸೋಂಕಿನಿಂದ ಮರಣ ಹೊಂದಿದ ವ್ಯಕ್ತಿಯ ದೇಹ ದ್ರವದ ಸಂಪರ್ಕದಿಂದ ಕಾಯಿಲೆಯು ಹರಡಬಹುದು.

ಯಾರಿಗೆ ಅಪಾಯಕಾರಿ?: ಇದು ಸೋಂಕು ಕಾಯಿಲೆ ಆಗಿರುವ ಕಾರಣ, ಅಲೆಮಾರಿಗಳಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳುವ ಮತ್ತು ಅವರ ಮೂಲಕ ಹರಡುವ ಸಾಧ್ಯತೆಗಳು ಹೆಚ್ಚು. ಇದು ಆಸ್ಪತ್ರೆಯ ಮೂಲಕವೂ ಹರಡಬಹುದಾದ ಸೋಂಕು ಎನ್ನುವುದು ಕುತೂಹಲದ ವಿಚಾರ. ಹಾಗಾಗಿ, ಈ ಕಾಯಿಲೆಯು ಸಾಮಾನ್ಯವಾಗಿ ಆಸ್ಪತ್ರೆಯ ಸಿಬ್ಬಂದಿಗೂ ಹರಡುವ ಸಾಧ್ಯತೆಗಳು ಇವೆ. ಇಷ್ಟೇ ಅಲ್ಲದೆ, ಈ ಸೋಂಕು ಬಾಧಿಸಬಹುದಾದ ಇನ್ನಿತರ ವರ್ಗದ ವ್ಯಕ್ತಿಗಳು ಅಂದರೆ, ಮಧುಮೇಹ ಕಾಯಿಲೆ ಇರುವವರು, ರೋಗ ಪ್ರತಿರೋಧಕ ಶಕ್ತಿ ಕಡಿಮೆ ಇರುವ ಜನರು, ಮೂತ್ರಪಿಂಡ ಮತ್ತು ಪಿತ್ತಜನಕಾಂಗ ವೈಫಲ್ಯ ಇರುವ ರೋಗಿಗಳು, ಮತ್ತು ಎಚ್‍ಐವಿ ಬಾಧಿತ ರೋಗಿಗಳು.

Leave a Reply

Your email address will not be published. Required fields are marked *