ದೇಶದಲ್ಲಿ ಮಹಿಳಾ ಸಬಲೀಕರಣಕ್ಕೆ ಸರ್ಕಾರಗಳು ಒತ್ತುಕೊಟ್ಟರೂ, ಇಂದಿಗೂ ವರದಕ್ಷಿಣೆಯಂತಹ (Dowry) ಪಿಡುಗುಗಳಿಗೆ ಮಹಿಳೆಯರು ಬಲಿಯಾಗುತ್ತಲೇ ಇದ್ದಾರೆ. ಈ ಭೂತಕ್ಕೆ ಬಲಿಯಾದವರು ಸಾಮಾನ್ಯ ಹೆಣ್ಣುಮಕ್ಕಳು ಮಾತ್ರ ಅಲ್ಲ, ನಟಿಯರು, ಉದ್ಯಮಿಗಳು ಸಹ ಸೇರಿದ್ದಾರೆ. ಅಷ್ಟರ ಮಟ್ಟಿಗೆ ವರದಕ್ಷಿಣೆ ಎಂಬ ಪೆಡಂಭೂತ ತನ್ನ ಜಾಲವನ್ನು ಸೃಷ್ಟಿಸಿದೆ.
ವರದಕ್ಷಿಣೆ ಕಿರುಕುಳಕ್ಕೆ ಇತ್ತೀಚೆಗೆ ಇಬ್ಬರು ಮಹಿಳೆಯರು ಬಲಿಯಾಗಿದ್ದು, ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ದೆಹಲಿ, ಬೆಂಗಳೂರಿನಂತಹ ಮಹಾನಗರಗಳಲ್ಲಿಯೇ ವರದಕ್ಷಿಣೆ ಪಿಡುಗು ಹೆಚ್ಚುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಮೇ 6ರಂದು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ದೇಶದಲ್ಲಿ 2024ರಲ್ಲಿ 5,737 ಮಹಿಳೆಯರು ವರದಕ್ಷಿಣೆ ಕಿರುಕುಳದಿಂದ ಸಾವಿಗೀಡಾಗಿದ್ದಾರೆ. ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯದಿಂದ ಪ್ರತಿದಿನ ಸುಮಾರು 16 ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ವಿಚಾರವನ್ನು ಈ ಮಾಹಿತಿ ಬಹಿರಂಗಪಡಿಸಿದೆ. 2017 ಮತ್ತು 2022 ರ ನಡುವೆ ವಾರ್ಷಿಕವಾಗಿ ಸರಾಸರಿ ಭಾರತದಾದ್ಯಂತ 7,000 ವರದಕ್ಷಿಣೆ ಸಾವಿನ ಪ್ರಕರಣಗಳು ವರದಿಯಾಗಿವೆ.
ಎನ್‌ಸಿಆರ್‌ಬಿ ವರದಿ
ಕ್ರೈಮ್ ಇನ್ ಇಂಡಿಯಾ – 2024ರ ವರದಿಯ ಪ್ರಕಾರ, ಜನಸಂಖ್ಯೆ ಹೆಚ್ಚಿರುವ ಹಿಂದುಳಿದ ರಾಜ್ಯಗಳಲ್ಲಿ ವಿವಾಹಿತ ಮಹಿಳೆಯರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಉತ್ತರ ಪ್ರದೇಶ(2,038) ಮತ್ತು ಬಿಹಾರದಲ್ಲಿ(1078) ಅತಿ ಹೆಚ್ಚು ಮಹಿಳೆಯರು ವರದಕ್ಷಿಣೆ ಕಿರುಕುಳದಿಂದ ಸಾವನ್ನಪ್ಪಿದ್ದಾರೆ. ಉಳಿದಂತೆ, ಮಧ್ಯಪ್ರದೇಶದಲ್ಲಿ 450, ಪಶ್ಚಿಮ ಬಂಗಾಳದಲ್ಲಿ 337, ರಾಜಸ್ಥಾನದಲ್ಲಿ 386, ಜಾರ್ಖಂಡ್ 206, ಒಡಿಶಾ 200, ಹರಿಯಾಣ 177, ತೆಲಂಗಾಣ 144, ಮಹಾರಾಷ್ಟ್ರ 143, ಕರ್ನಾಟಕ 112, ದೆಹಲಿ 109, ಅಸ್ಸಾಂ 94, ಆಂಧ್ರ ಪ್ರದೇಶ 72, ಛತ್ತೀಸಗಢ 54, ಉತ್ತರಖಂಡ 41, ಪಂಜಾಬ್ 39, ತ್ರಿಪುರಾ 20, ಗುಜರಾತ್ 16, ತಮಿಳುನಾಡು ಮತ್ತು ಕಾಶ್ಮೀರದಲ್ಲಿ 7, ಚಂಡೀಗಢ 3, ಗೋವಾ 2, ಅರುಣಾಚಲ ಪ್ರದೇಶ ಮತ್ತು ಕೇರಳದಲ್ಲಿ ಒಬ್ಬರು ಪ್ರಾಣ ಬಿಟ್ಟಿದ್ದಾರೆ.

ಮಹಾನಗರಗಳ ಪೈಕಿ ದೆಹಲಿ ಮೊದಲನೇ ಸ್ಥಾನದಲ್ಲಿದೆ. 2024ರಲ್ಲಿ ಸುಮಾರು 109 ಮಹಿಳೆಯರು ದೌರ್ಜನ್ಯ ಸಹಿಸಲಾರದೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೆಹಲಿಯ ನಂತರ ಕಾನ್ಪುರ ಎರಡನೇ ಸ್ಥಾನದಲ್ಲಿದ್ದು, 54 ವರದಕ್ಷಿಣೆ ಸಾವು ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ 25 ಮಹಿಳೆಯರು ಈ ಪಿಡುಗಿಗೆ ಬಲಿಯಾಗಿದ್ದಾರೆ. ಚೆನ್ನೈ, ಕೊಚ್ಚಿ ಸೇರಿದಂತೆ ಹಲವು ದಕ್ಷಿಣ ಭಾರತದ ಮಹಾನಗರಗಳಲ್ಲಿ 2024ರಲ್ಲಿ ವರದಕ್ಷಿಣೆ ಕಿರುಕುಳದ ಸಾವುಗಳು ಸಂಭವಿಸಿಲ್ಲ.
ಉತ್ತರ ಪ್ರದೇಶ, ಬಿಹಾರದ ಸ್ಥಿತಿ
2023ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯಡಿ ದೇಶದಲ್ಲಿ 15 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 14 ರಷ್ಟು ಹೆಚ್ಚಾಗಿದೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಅಂದರೆ 7,151 ವರದಕ್ಷಿಣೆ ಪ್ರಕರಣಗಳು ವರದಿಯಾಗಿದ್ದು, ಬಿಹಾರ 3,665 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ 2,322 ಪ್ರಕರಣಗಳನ್ನು ದಾಖಲಾಗಿವೆ. 2023ರಲ್ಲಿ ವರದಕ್ಷಿಣೆ ಕಿರುಕುಳದಿಂದ 6,156 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿಯೇ ಅತಿ ಹೆಚ್ಚು ಸಾವುಗಳು ಸಂಭವಿಸಿವೆ.
ವರದಕ್ಷಿಣೆ
ಮದುವೆ ವೇಳೆ ವಧುವಿನ ಕುಟುಂಬ ವರನ ಕುಟುಂಬಕ್ಕೆ ಹಣ, ಆಸ್ತಿ, ಅಮೂಲ್ಯ ವಸ್ತುಗಳನ್ನು ಕೊಡುವುದನ್ನು ವರದಕ್ಷಿಣೆ ಎಂದು ಪರಿಗಣಿಸಲಾಗುತ್ತದೆ. ಭಾರತದಲ್ಲಿ ಇದು ಅಪರಾಧವಾಗಿದೆ. ವರದಕ್ಷಿಣೆ ನಿಷೇಧ ಕಾಯ್ದೆ 1961ರ ಪ್ರಕಾರ ಶಿಕ್ಷೆಗೂ ಒಳಪಡಿಸಲಾಗುತ್ತದೆ.

ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 80ರ ಅಡಿಯಲ್ಲಿ, ಮದುವೆಯಾದ ಏಳು ವರ್ಷದೊಳಗೆ ಮಹಿಳೆಯು ಅನುಮಾನಸ್ಪದವಾಗಿ ಸಾವಿಗೀಡಾದರೆ, ಆ ಸಾವಿಗೆ ಮೊದಲು ವರದಕ್ಷಿಣೆಗೆ ಸಂಬಂಧಿಸಿದಂತೆ ಮಹಿಳೆಯ ಮೇಲೆ ಕಿರುಕುಳ ನೀಡಿದ್ದ ಸಾಕ್ಷಿಗಳಿದ್ದರೆ ಅದನ್ನು ವರದಕ್ಷಿಣೆ ಸಾವು ಎಂದು ಪರಿಗಣಿಸಲಾಗುತ್ತದೆ.
ತುರ್ತು ಸಹಾಯ
ವರದಕ್ಷಿಣೆ ಕಿರುಕುಳ ಅನುಭವಿಸುತ್ತಿರುವವರು ತುರ್ತು ಸಂದರ್ಭದಲ್ಲಿ ಪೊಲೀಸರನ್ನು ಸಂಪರ್ಕಿಸಲು 112 ಸಹಾಯವಾಣಿಗೆ ಕರೆ ಮಾಡಬಹುದು. ಹತ್ತಿರದ ಪೊಲೀಸ್ ಠಾಣೆ ಅಥವಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದು.
ಇತ್ತೀಚಿನ ಪ್ರಕರಣಗಳು
ತ್ವಿಶಾ ಪ್ರಕರಣ: ನೋಯ್ದಾದ ನಿವಾಸಿಯಾಗಿದ್ದ ಟ್ವಿಶಾ ಶರ್ಮಾ (33) ಅವರು ಕಳೆದ ವರ್ಷ ಡಿಸೆಂಬರ್‌ನಲ್ಲಿ ಭೋಪಾಲ್‌ನ ನಿವಾಸಿ ಸಮರ್ಥ್ ಸಿಂಗ್ ಅವರನ್ನು ವಿವಾಹವಾಗಿದ್ದರು. ಮದುವೆಯಾದ ಐದೇ ತಿಂಗಳಿಗೆ ಪತಿಯ ನಿವಾಸದಲ್ಲಿ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆಕೆಯ ಪತಿ ಮತ್ತು ಅತ್ತೆ-ಮಾವ ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆ ಎಂದು ಆಕೆಯ ಕುಟುಂಬ ಆರೋಪಿಸಿದೆ.
ಆಕೆ ತನ್ನ ತಾಯಿಯೊಂದಿಗೆ ನಡೆಸಿದ್ದ ವಾಟ್ಸಪ್ ಸಂವಹನ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಈ ಪ್ರಕರಣವು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ನಿವೃತ್ತ ನ್ಯಾಯಾಧೀಶೆ ಸೊಸೆ ತ್ವಿಶಾ ಶರ್ಮಾ (Twisha Sharma) ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court) ಪ್ರಕರಣದ ತನಿಖೆ ನ್ಯಾಯಸಮ್ಮತ, ಸ್ವತಂತ್ರ ಹಾಗೂ ನಿಷ್ಪಕ್ಷಪಾತವಾಗಿ ನಡೆಯಬೇಕು ಎಂದು ಮಹತ್ವದ ಸೂಚನೆ ನೀಡಿದೆ. ಜೊತೆಗೆ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆ ಮತ್ತು ಊಹಾಪೋಹಗಳ ಬಗ್ಗೆ ಕೂಡ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ದೀಪಿಕಾ ಪ್ರಕರಣ: ಟ್ವಿಶಾ ಸಾವಿನ ಕೆಲವೇ ದಿನಗಳ ನಂತರ, ಗ್ರೇಟರ್ ನೋಯ್ದಾದ ಮತ್ತೊಂದು ಪ್ರಕರಣ ದೇಶವನ್ನು ಬೆಚ್ಚಿಬೀಳಿಸಿತು. ಇಪ್ಪತ್ತನಾಲ್ಕು ವರ್ಷದ ದೀಪಿಕಾ ನಗರ್, ಮದುವೆಯಾದ ಕೆಲವೇ ತಿಂಗಳಲ್ಲಿ ಮನೆಯ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ.
ಮಗಳ ಮದುವೆ ಸುಮಾರು 1 ಕೋಟಿ ಖರ್ಚು ಮಾಡಿದ್ದು, ಮದುವೆ ನಂತರವೂ ಹಣ ಕೊಡುವಂತೆ ಮಗಳಿಗೆ ಕಿರುಕುಳ ಕೊಡುತ್ತಿದ್ದರು ಎಂದು ದೀಪಿಕಾ ಪೋಷಕರು ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆಕೆಯ ಪತಿ ಹಾಗೂ ಮಾವನನ್ನು ಬಂಧಿಸಿದ್ದಾರೆ.
ಕಾಜಲ್ ಚೌಧರಿ ಪ್ರಕರಣ: ದೆಹಲಿ ಪೊಲೀಸ್ ಸ್ವಾಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಮಹಿಳಾ ಕಮಾಂಡೋ ಕಾಜಲ್ ಚೌಧರಿ ಅವರು ವರದಕ್ಷಿಣೆ ಕಾರಣಕ್ಕೆ ತಮ್ಮ ಪತಿಯಿಂದಲೇ ಹತ್ಯೆಯಾಗಿದ್ದರು.
ಸುಮಾರು 20 ಲಕ್ಷ ಖರ್ಚು ಮಾಡಿ ಮಗಳ ಮದುವೆ ಮಾಡಿದ್ದು, ಮದುವೆಯ ವೇಳೆ ವರದಕ್ಷಿಣೆ ರೂಪದಲ್ಲಿ ಬೈಕ್ ಮತ್ತು ಹಣ ನೀಡಲಾಗಿತ್ತು. ಮತ್ತಷ್ಟೂ ಹಣ ನೀಡುವಂತೆ ಮಗಳಿಗೆ ಕಿರುಕುಳ ನೀಡಿದ್ದನು ಎಂದು ಕಾಜಲ್ ಪೋಷಕರು ಆರೋಪಿಸಿದ್ದಾರೆ.
